ನಿಷ್ಠೆ, ಪ್ರಾಮಾಣಿಕತೆಯೇ ಬದುಕಿನಲ್ಲಿ ಅತಿಮುಖ್ಯ: ಜಯಕುಮಾರ್ ದೋಶಿ

Chandrashekhara Kulamarva
0

ಬೆಂಗಳೂರಿನ ನಿಟ್ಟೆ ಸ್ಕೂಲ್ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ 16ನೇ ಪಿ.ಜಿ.ಡಿ.ಎಂ ಬ್ಯಾಚ್ ಉದ್ಘಾಟನೆ



ಬೆಂಗಳೂರು: 'ನಿಷ್ಠೆ ಹಾಗೂ ಪ್ರಾಮಾಣಿಕತೆ ಪ್ರತಿಯೊಬ್ಬರ ಬದುಕಿನಲ್ಲಿಯೂ ಬಹಳ ಮುಖ್ಯ. ಅವು ನಮ್ಮ ವ್ಯಕ್ತಿತ್ವವನ್ನು ನಿರೂಪಿಸುತ್ತವೆ ಹಾಗೂ ಕೈಹಿಡಿದು ನಡೆಸುತ್ತವೆ. ನಮಗೆ ನಮ್ಮ ನಿರ್ಧಾರಗಳು ಸದಾ ವಸ್ತುನಿಷ್ಠವಾಗಿರುವಂತೆ, ಎಂದೆಂದೂ ಸ್ವಂತ ಲಾಭಕ್ಕಾಗಿ ನಾವು ಈಡಾಗದಂತೆ, ವೃತ್ತಿಜೀವನವಿಡೀ ನಮ್ಮನ್ನು ಕಾಪಾಡುವುವು ನಮ್ಮಲ್ಲಿನ ಪ್ರಾಮಾಣಿಕತೆ ಹಾಗೂ ನಿಷ್ಠೆ ಎಂಬುದನ್ನು ಮರೆಯಬಾರದು. ಮ್ಯಾನೇಜ್‌ಮೆಂಟ್‌ನ ವೃತ್ತಿಪರರು ಹಾಗೂ ವಿದ್ಯಾರ್ಥಿಗಳು ತಮ್ಮ ಕಾರ್ಯಕ್ಷೇತ್ರಗಳಲ್ಲಿ ವಿಶ್ವಾಸಾರ್ಹತೆ ಗಳಿಸುವುದು ಅವರಲ್ಲಿ ಕಳಂಕರಹಿತ ನಿಷ್ಠೆ ನೆಲೆಯೂರಿದಾಗ ಮಾತ್ರ' ಎಂದು ಬ್ರಿಟಿಷ್ ಟೆಲಿಕಾಂ ಗ್ರೂಪ್‌ನ ಡಿಜಿಟಲ್ ಇಂಡಿಯಾ ವಿಭಾಗದ ನಿರ್ವಾಹಕ ನಿರ್ದೇಶಕ ದೋಶಿ ಜಯಕುಮಾರ್ ನುಡಿದರು.


ಅವರು ದೇಶದ ಪ್ರತಿಷ್ಠಿತ ಬಿ-ಸ್ಕೂಲ್‌ಗಳಲ್ಲಿ ಒಂದಾದ ಬೆಂಗಳೂರಿನ ನಿಟ್ಟೆ ಸ್ಕೂಲ್ ಆಫ್‌ ಮ್ಯಾನೇಜ್‌ಮೆಂಟ್‌ನಲ್ಲಿ 16ನೇ ಪಿ.ಜಿ.ಡಿ.ಎಂ (ಪೋಸ್ಟ್ ಗ್ರಾಜುಯೇಟ್ ಡಿಪ್ಲೊಮಾ ಇನ್ ಮ್ಯಾನೇಜ್‌ಮೆಂಟ್) ಬ್ಯಾಚ್ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.


'''ಪ್ರತಿಯೊಬ್ಬ ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಯೂ ತನ್ನನ್ನು 'ಪೆನ್ಸಿಲ್'ಗೆ ಹೋಲಿಸಿಕೊಳ್ಳಬೇಕು. 'ಪೆನ್ಸಿಲ್' ಏಕೆಂದರೆ, ಅದರ ಸೀಸ ಮುಗಿಯುತ್ತೆ ಅನ್ನುವಾಗಲೇ ಅದನ್ನು ಶಾರ್ಪ್ ಮಾಡಬೇಕಾಗುತ್ತದೆ. ಆಗ ಪೆನ್ಸಿಲ್ ನಿಜಕ್ಕೂ ಯಾತನೆಯನ್ನು ಅನುಭವಿಸಬೇಕಾಗುತ್ತದೆ. ಹಾಗೇ ನಾವೂ ಕೂಡ. ನಮ್ಮ ಕೌಶಲ್ಯ ವರ್ಧನೆಯ ಸಂದರ್ಭದಲ್ಲಿ ನಾವೂ ಯಾತನೆಯನ್ನು ಲೆಕ್ಕಿಸದೆ ನಮ್ಮನ್ನು ಚೂಪುಮಾಡಿಕೊಳ್ಳಬೇಕಾಗುತ್ತದೆ. ಪೆನ್ಸಿಲ್ ನಲ್ಲಿ ನಾವು ಬರೆದದ್ದನ್ನು ಅಳಿಸಿಹಾಕಲು ರಬ್ಬರ್ ಇದೆ. ಹಾಗೇ ನಾವೂ ನಮ್ಮ ಲೋಪಗಳನ್ನು ಆಗಾಗ್ಗೆ ಅಳಿಸಿಕೊಳ್ಳಬೇಕು. ಒಟ್ಟಾರೆಯಾಗಿ ನಾವು ಏನನ್ನು ಸಾಧಿಸಬೇಕು, ಯಾವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ನಿರ್ಧಾರ ನಮ್ಮದೇ ಆಗಿರುತ್ತದೆ' ಎಂದರು.


ಗೌರವಾನ್ವಿತ ಅಥಿತಿಗಳಾಗಿ ಪಾಲ್ಗೊಂಡಿದ್ದ ನಿಟ್ಟೆ ಶಿಕ್ಷಣ ಸಂಸ್ಥೆಯ ಅಕೆಡೆಮಿಕ್ ನಿರ್ದೇಶಕ ಪ್ರೊ. ಸಂದೀಪ್ ಶಾಸ್ತ್ರಿ ಮಾತನಾಡಿ, 'ಅಪರಿಮಿತ ಉತ್ಸಾಹ, ಸಹಾನುಭೂತಿ ಹಾಗೂ ದೃಢವಾದ ಮನೋನಿಶ್ಚಯಗಳು ನಮ್ಮ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳಾಗಿರಬೇಕು' ಎಂದರು.


ಅಧ್ಯಕ್ಷತೆ ವಹಿಸಿದ್ದವರು ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ. ತಮ್ಮ ಅಧ್ಯಕ್ಷ ಭಾಷಣದಲ್ಲಿ ಅವರು, 'ನಾವೊಂದು ತಂಡವಾಗಿ ಕೆಲಸ ಮಾಡುವುದನ್ನು ಕಲಿಯಬೇಕು. ಇದರಿಂದ ಪರಸ್ಪರರಲ್ಲಿ ಬಾಂಧವ್ಯ ಮೂಡುತ್ತದೆ ಹಾಗೂ ಎಲ್ಲರೂ ಒಗ್ಗೂಡಿ ನಿರೀಕ್ಷಿತ ಯಶಸ್ಸುಗಳಿಸಲು ಸಾಧ್ಯವಾಗುತ್ತದೆ' ಎಂದು ನುಡಿದರು.


ನಿಟ್ಟೆ ಸ್ಕೂಲ್ ಆಫ್‌ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ. ಎಂ. ವೇಣುಗೋಪಾಲ್ ಪ್ರಾರಂಭದಲ್ಲಿ ಸರ್ವರನ್ನೂ ಸ್ವಾಗತಿಸಿ ಸಂಸ್ಥೆಯ ವಿಶೇಷತೆಗಳನ್ನು ಮನದಟ್ಟು ಮಾಡಿಕೊಟ್ಟರು - 'ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಅಪರೂಪದ ಸವಲತ್ತುಗಳನ್ನು ಒದಗಿಸಲಾಗಿದೆ, ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು' ಎಂದರು.


ನೂರಕ್ಕೂ ಅಧಿಕ ಹೊಸ ವಿದ್ಯಾರ್ಥಿಗಳು, ಅವರ ಪೊಷಕರು, ಶಿಕ್ಷಕ ಸಿಬ್ಬಂದಿ ಹಾಗೂ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top