ಶ್ರೀಕೃಷ್ಣನ ಜನನ ಅದ್ಭುತ, ವೈಭವ, ವಿಸ್ಮಯ

Upayuktha
0


ಸುದೇವ ದೇವಕಿಯರ ಮದುವೆ ವಿಜೃಂಭಣೆಯಿಂದ ನಡೆದಿದೆ. ಮದುಮಕ್ಕಳನ್ನು ಸಾಲಂಕೃತ ರಥದಲ್ಲಿ ಭಾರೀ ಸಂಭ್ರಮ ಸಡಗರದಿಂದ ಮೆರವಣಿಗೆಯಲ್ಲಿ ಕರೆತರುತ್ತಿದ್ದಾರೆ. ದೇವಕಿಯ ಸೋದರ ಕಂಸನೇ ಸ್ವತಃ ಸಾರಥ್ಯ ಮಾಡುತ್ತಾ ತನ್ನ ಸೋದರಿಯ ಮೇಲಿನ ಅತೀವ ಪ್ರೀತಿಯನ್ನು ತೋರಿಸುತ್ತಿದ್ದಾನೆ. ಇದ್ದಕ್ಕಿದ್ದಂತೆಯೇ ಆಕಾಶದಿಂದ ಅಶರೀರವಾಣಿ ಮೊಳಗಿ ` ಏಯ್, ಮೂರ್ಖ, ಈ ನಿನ್ನ ಸೋದರಿ ದೇವಕಿಯ ಎಂಟನೆಯ ಮಗನೇ ನಿನಗೆ ಮೃತ್ಯುವಾಗಲಿದ್ದಾನೆ' ಎಂದು ಘೋಷಿಸಿತು. ಕೆರಳಿ ಕೆಂಡಾಮಂಡಲವಾದ ಕಂಸ ಖಡ್ಗ ಸೆಳೆದು ದೇವಕಿಯನ್ನು ಕೊಲ್ಲಲು ಸಿದ್ಧನಾದ. ಆಗ ಅಷ್ಟರಲ್ಲೇ ಜಾಗೃತನಾದ ದೇವಕಿಂಯ ಪತಿ ವಸುದೇವ `ನಿನಗೆ ಮೃತ್ಯುಭಯ ಇರುವುದು ಇವಳ ಎಂಟನೆಯ ಮಗುವಿನಿಂದ, ಇವಳಿಂದ ಅಲ್ಲವಲ್ಲ. ನಮಗೆ ಹುಟ್ಟುವ ಎಲ್ಲ  ಮಕ್ಕಳನ್ನು ತಕ್ಷಣ ನಿನಗೆ ತಂದು ಒಪ್ಪಿಸುತ್ತೇವೆ ಇವಳನ್ನು ಬಿಟ್ಟುಬಿಡು' ಎಂದು ಉಪಾಯದಿಂದ ದೇವಕಿಯನ್ನು ಬಿಡಿಸಿದ. `ಕೊಟ್ಟ ಮಾತಿಗೆ ತಪ್ಪಬಾರದು ಎಂದ ಕಂಸ ಬಿರಬಿರನೆ ಅಲ್ಲಿಂದ ಹೊರಟ. ಈಗ ಆ ದಂಪತಿಗಳಿಗೆ ಜನಿಸಿದ ಆರು ಮಕ್ಕಳನ್ನು ಕಂಸ ನಿಷ್ಕರುಣೆಯಿಂದ ಕತ್ತರಿಸಿ ಚೆಲ್ಲಿದ.


ಈಗ ದೇವಕಿಯ ಗರ್ಭದಲ್ಲಿ ಏಳನೆಯ ಮಗುವಾಗಿ ಆದಿಶೇಷನ ತೇಜಸ್ಸು ಬಂದು ಪ್ರವೇಶಿಸಿತು. ಅತ್ತ ವೈಕುಂಠದಲ್ಲಿ ಪರಮಾತ್ಮ ಯೋಗಮಾಯೆಯನ್ನು ಕರೆದು `ದುರ್ಗೆ, ಈಗ ನೀನು ದೇವಕಿಯ ಏಳನೆಯ ಗರ್ಭದ ಆದಿಶೇಷನನ್ನು ಸೆಳೆದು ಗೋಕುಲಕ್ಕೆ ಹೋಗಿ ಅಲ್ಲಿ ಅದನ್ನ ರೋಹಿಣಿಯ ಗರ್ಭದಲ್ಲಿಟ್ಟು, ಅದೇ ಗೋಕುಲದ ನಂದಪತ್ನಿ ಯಶೋದೆಯಲ್ಲಿ ನೀನು ಹೆಣ್ಣು ಮಗು ಆಗಿ ಅವತರಿಸು' ಎಂದು ಆದೇಶಿಸಿದ. ಹಾಗೆಯೇ ಆದಾದ ಮರುದಿನ ಗರ್ಭಿಣಿಯ, ಆರೋಗ್ಯ ವಿಚಾರಿಸಲು ಸೆರೆಮನೆಗೆ ಬಂದ ರಾಜ ವೈದ್ಯರು ದೇವಕಿಗೆ ಈಗ ಗರ್ಭಸ್ರಾವ ಆಗಿದೆ ಎಂದು ತಿಳಿಸಿದರು.


ಈಗ ಎಂಟನೆಯ ಮಗುವಾಗಿ ದೇವಕಿಯ ಗರ್ಭದೊಳಗೆ ಪರಮಾತ್ಮ ಪ್ರವೇಶಿಸಿದ. ದೇವತೆಗಳೆಲ್ಲ ದೇವಕಿಯ ಗರ್ಭವನ್ನು ಸ್ತುತಿಸಿದರು. ಒಂಬತ್ತು ತಿಂಗಳು ಕಳೆದದ್ದೇ ದೇವಕಿಗೆ ಗೊತ್ತಾಗಲಿಲ್ಲ. ಕಾಲ ಸನ್ನಿಹಿತವಾಯಿತು. ಕೃಷ್ಣ ಪಕ್ಷದ ಅಷ್ಟಮಿ. ನಡುರಾತ್ರಿ. ದೇವಕಿಯ ಎಂಟನೆಯ ಗರ್ಭದಲ್ಲಿ, 

ಎಂಟನೆಯ ಅಷ್ಟಮಿ ತಿಥಿಯಲ್ಲಿ, ಎಂಟನೆಯ ಸಿಂಹಮಾಸದಲ್ಲಿ, ಎಂಟನೆಯ ಅವತಾರವಾಗಿ ಭಗವಂತ ಭೂಮಿಯಲ್ಲಿ ಪ್ರಕಟವಾಗುವ ಅಮೃತಘಳಿಗೆ ಸಮೀಪಿಸಿತು. ಚಂದ್ರನ ಬೆಳದಿಂಗಳಿನ ಆಹ್ಲಾದಕಾಂತಿ ಜಗತ್ತಿಗೇ ತಂಪೆರೆಯುವಂತಿತ್ತು. ಸಮುದ್ರಗಳಲ್ಲಿ ಸ್ವಚ್ಛಜಲ ಭೋರ್ಗರೆದು ಉಕ್ಕೇರುತ್ತಿದೆ. ಆಹ್ಲಾದಕರ ಬೆಳದಿಂಗಳಲ್ಲಿ ಹಿತವಾದ ತಂಗಾಳಿ, ಮಂದಮಾರುತ ಮೃದುವಾಗಿ ಬೀಸುತ್ತಿದೆ. ಮೇಘಗಳು ಸಂಭ್ರಮದಿಂದ ಘರ್ಜಿಸುತ್ತಿವೆ.


ಎಲ್ಲ ಆಶ್ರಮಗಳಲ್ಲಿ ಋಷಿಮುನಿಗಳು ತಪೋಧ್ಯಾನ ನಿರತರಾಗಿದ್ದಾರೆ. ವಿಪ್ರರು ಅಗ್ನಿಹೋತ್ರ ನಡೆಸಿದ್ದಾರೆ. ಆಕಾಶ ಗ್ರಹಗಳಿಂದ ತಾರೆಗಳಿಂದ ತುಂಬಿ ಪ್ರಕಾಶಿಸುತ್ತಿದೆ. ಆ ಪ್ರಭೆಯಿಂದ ದಿಕ್ಕುದಿಕ್ಕುಗಳೆಲ್ಲಾ ದಿವ್ಯಕಾಂತಿಯಿಂದ ಬೆಳಗುತ್ತಿವೆ. ಸುಗಂಧಭರಿತ ಪರಿಮಳಮಾರುತ ಆನಂದ ತರುತ್ತಿದ್ದಾನೆ. ಯಜ್ಞಕುಂಡಗಳಲ್ಲಿ ಅಗ್ನಿದಿವ್ಯವಾಗಿ ಪ್ರಜ್ವಲಿಸುತ್ತಿದೆ. ಎಲ್ಲ ನದಿಗಳೂ ತುಂಬಿ ತುಂಬಿ ಹರಿಯುತ್ತವೆ. ಅರ್ಧರಾತ್ರಿಯಲ್ಲಿ ಹಕ್ಕಿಪಕ್ಷಿ ಕೋಗಿಲೆಗಳ 

ಕುಹೂರವ ಎಲ್ಲೆಲ್ಲೂ. ಕಮಲದ ಹೂವುಗಳಿಂದ, ದುಂಬಿಗಳ ಝೇಂಕಾರದಿಂದ ಸರೋವರಗಳು ಸಡಗರದಲ್ಲಿವೆ. ಜಗತ್ತಿನ ಸಜ್ಜನರೆಲ್ಲಾ ಸಂತೋಷದ ಲಹರಿಯ ಅನುಭವದಲ್ಲಿದ್ದಾರೆ. ಅರ್ಧರಾತ್ರಿಯ ದಿವ್ಯಮುಹೂರ್ತದಲ್ಲಿ ಆಕಾಶ ಹರಿದುಕೊಂಡು ದೇವಾನುದೇವತೆಗಳೆಲ್ಲಾ ಬಂದು ನೆರೆದಿದ್ದಾರೆ. ದೇವದುಂದುಭಿ ಮೊಳಗಿದೆ. ಗಂಧರ್ವರು ಹಾಡುತ್ತಿದ್ದಾರೆ. ಅಪ್ಸರೆಯರು ನರ್ತಿಸುತ್ತಿದ್ದಾರೆ. ಆಕಾಶದಿಂದ ಪುಷ್ಪವೃಷ್ಟಿ ಆಗುತ್ತಿದೆ. ಋಷಿಮುನಿಗಳು ಹಾರೈಸುತ್ತಿದ್ದಾರೆ. ಇಂತಹ ಪರಮಪವಿತ್ರ ಮಂಗಳ ಮುಹೂರ್ತದಲ್ಲಿ ಆನಂದಮಯನೂ, ಲೋಕವಿಲಕ್ಷಣನೂ, ಚತುರ್ಭುಜನೂ, ಪೀತಾಂಬರಧಾರಿಯೂ, ಶ್ರೀವತ್ಸವಕ್ಷನೂ, ಭಕ್ತಜನ ಸಂರಕ್ಷನೂ, ನೀಲಮೇಘ ಶ್ಯಾಮನೂ, ಶಂಖಚಕ್ರಗದಾಪದ್ಮಧಾರಿಯಾದ  ಶ್ರೀಕೃಷ್ಣನ ಅವತಾರವಾಯಿತು. ವಿಷ್ಣುವನ್ನು ಪ್ರಸವಿಸಿದ ದೇವಕಿ ದೇದೀಪ್ಯಮಾನವಾಗಿ ಕಂಗೊಳಿಸಿದಳು.


ಅದೇತಾನೇ ಹುಟ್ಟಿದ ಆ ಮಗುವನ್ನು ತಂದೆ ವಸುದೇವ ನೋಡಿದ. ದೇವಕಿ ಇನ್ನೂ ಕಣ್ಣು ಬಿಟ್ಟಿಲ್ಲ. ಮಗು ನಾಲ್ಕು ಕೈಗಳಲ್ಲಿ ಶಂಖ, ಚಕ್ರ, ಗದೆ, ಪದ್ಮ ಹಿಡಿದಿತ್ತು. ನೀಲಮೇಘ ವರ್ಣದ್ದಾಗಿತ್ತು. ಕಂಠದಲ್ಲಿ ಕೌಸ್ತುಭ, ಸೊಂಟದಲ್ಲಿ ಉಡಿದಾರ, ಕಂಕಣಗಳನ್ನು ತೋಳುಬಂದಿ, ಗುಂಗುರು ಕೂದಲು, ಎದೆಯ ಮೇಲೆ ಶ್ರೀವತ್ಸ ಚಿಹ್ನೆ, ಕಿವಿಗಳಲ್ಲಿ ಕುಂಡಲಗಳು, ವಜ್ರವೈಢೂರ್ಯ ಮಣಿಖಚಿತ ಭವ್ಯ ಕಿರೀಟ, ಎಲ್ಲ ನೋಡಿದ ವಸುದೇವ ತನ್ನನ್ನು ತಾನೇ ನಂಬದಾದ. ಅಷ್ಟರಲ್ಲಿ ದೇವಕಿ ಕಣ್ತೆರೆದಳು. ತನ್ನ ಮಗುವನ್ನು ಎತ್ತಿಕೊಳ್ಳಲು ಹೋದ ಅವಳ ಕೈ, ಮಗುವನ್ನು ನೋಡಿ ಹಾಗೇ ಹಿಂದಕ್ಕೆ ಬಂದು, ಈಗ ದೇವಕಿ ಕೈಮುಗಿದಿದ್ದಾಳೆ.


ಈ ಅಪೂರ್ವ ಮಗುವಿನ ರೂಪದ ಅಚ್ಚರಿಯ ಅದ್ಭುತ ಕಂಡ ತಾಯ್ತಂದೆಯರು ಕಣ್ಮುಚ್ಚಿ, ಕೈಮುಗಿಯುತ್ತಾ ಸ್ತುತಿಸುತ್ತಿದ್ದಾರೆ. “ಈ ಅಪೂರ್ವದರ್ಶನ ನಮಗೆ ನೀಡಿದೆಯಲ್ಲ ಸ್ವಾಮಿ, ಈಗ ಅರಿವಾಯಿತು, ನೀನು ಅಸಾಮಾನ್ಯ ಮಹಾಪುರುಷ ಸಾಕ್ಷಾತ್ ಶ್ರೀಮನ್ನಾರಾಯಣನೇ ನೀನು. ಜಗತ್ತಿನಲ್ಲಿ ಯಾರು ಇಲ್ಲದಾಗಲೂ ನೀನಿದ್ದೀ. ಇಡೀ ಜಗತ್ತು ನಾಶವಾದ ಮೇಲೂ ನೀನೊಬ್ಬನೇ ಉಳಿಯುತ್ತೀ. ಜಗತ್ತಿನ ಹುಟ್ಟು ನಾಶ ಉಳಿವು ಎಲ್ಲವನ್ನೂ ಅನುಗ್ರಹಿಸುವ ಸ್ವಾಮಿ ನೀನು. ಎಲ್ಲ ಶಬ್ದಗಳಿಗೂ ನೀನೇ ಅರ್ಥ. ನಿನಗೆ ನಮೋ ನಮಃ” ಎಂದರು.


ವಸುದೇವನಂತೂ “ನಾನೇ ನಿನ್ನ ತಂದೆ. ಸ್ವಾಮಿ, ನಾನ್ಯಾವ ತಂದೆ. ನೀ ತಂದೆ. ನೀನೇ ನನ್ನ ತಂದೆ. ನೀ ತಂದೆಯೆಂದು ನಾ ಬಂದೆ. ಎಲ್ಲರ ತಂದೆ ನೀ ತಂದಿದ್ದಕ್ಕೆ ನಾ ಬಂದೆ” ಎಂದ.


ದೇವಕಿ “ನೀನು ನಮ್ಮ ಮಗುವಾಗಿ ಬಂದು ತನ್ನನ್ನು ಕೊಲ್ಲಬಹುದೆಂದು, ನಿನಗಿಂತ ಮೊದಲು ಹುಟ್ಟಿದ ಆರು ಮಕ್ಕಳನ್ನು ಕಂಸ ಕೊಂದ. ಈಗ ನೀನು ಹುಟ್ಟಿದ ಸುದ್ದಿ ತಿಳಿದೊಡನೆಯೇ ಆಯುಧ ಹಿಡಿದೇ ಧಾವಿಸಿ ಬರುತ್ತಾನೆ. ಅಷ್ಟರಲ್ಲಿ ಈ ಮಹದದ್ಭುತ ರೂಪ ಉಪಸಂಹಾರ ಮಾಡು. ನಮ್ಮ ಮುದ್ದು ಮಗುವಾಗು” ಎಂದು ಪ್ರಾರ್ಥಿಸಿದಳು.


ಈಗ ಅದೇ ತಾನೇ ಹುಟ್ಟಿದ ಮಗು ಮಾತಾಡಿತು. ಈಗ ನೀವು ನಾನು ಹೇಳಿದಂತೆ ಮಾಡಿ” ಎಂದು ತಂದೆಗೆ ಅದೇ ತಾನೇ ಹುಟ್ಟಿದ ಮಗು ಆದೇಶ ನೀಡಿತು. “ನನ್ನನ್ನು ಬುಟ್ಟಿಯಲ್ಲಿಟ್ಟು ಎತ್ತಿಕೊಂಡು ಹೊರಡು. ಯಮುನಾ ನದಿ ದಾಟಿ ನಂದಗೋಕುಲಕ್ಕೆ ಹೋಗಿ. ಅಲ್ಲಿ ನಂದಗೋಪನ ಮನೆಗೆ ಹೋಗು. ದಾಸದಾಸಿಯರೆಲ್ಲ ನಿದ್ರೆಯಲ್ಲಿರುತ್ತಾರೆ. ಅಲ್ಲಿ ಒಳಗೆ ಯಶೋದೆಯ ಕೋಣೆಗೆ ಹೋಗು. ಯಶೋದೆ ಅದೇ ತಾನೆ ಒಂದು ಹೆಣ್ಣುಮಗುವನ್ನು ಹೆತ್ತಿರುತ್ತಾಳೆ. ಅವಳಿಗಿನ್ನೂ ಎಚ್ಚರ ಬಂದಿರುವುದಿಲ್ಲ. ನನ್ನನ್ನು ಅಲ್ಲಿ ಮಲಗಿಸಿ, ಆ ಹೆಣ್ಣುಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡು ಇಲ್ಲಿಗೆ ಕರೆದು ತಾ. ಕಂಸ ದೂತರಿಂದ ನಿನಗೆ ಯಾವ ತೊಂದರೆಯೂ ಆಗುವುದಿಲ್ಲ.”


ವಸುದೇವ ಮಗುವನ್ನು ಬುಟ್ಟಿಯಲ್ಲಿಟ್ಟು, ತಲೆಯ ಮೇಲೆ ಹೊತ್ತು ಹೊರಡಲು ಸಿದ್ಧನಾದ. ಕಾರಾಗೃಹದ ಬಾಗಿಲುಗಳು, ಬೀಗ ತಾನಾಗಿಯೇ ತೆರೆದುಕೊಂಡವು. ಕಾಯುತ್ತಿದ್ದ ಕಾವಲಿನ ಭಟರೆಲ್ಲಾ ಶಸ್ತ್ರಗಳನ್ನು ಮೂಲೆಯಲ್ಲಿಟ್ಟು ಗಾಢ ನಿದ್ರೆಯಲ್ಲಿದ್ದಾರೆ. ಈಗ ವಸುದೇವ ಯಮುನೆಯನ್ನು ದಾಟಲು ನದಿಗೆ ಇಳಿದ. ಇದ್ದಕ್ಕಿದ್ದಂತೆ ಕುಂಭದ್ರೋಣ ಮಳೆ. ಮಳೆಯ ಪ್ರವಾಹ. ವಸುದೇವ ಮಗುವನ್ನು ತಲೆಯ ಮೇಲೆ ಬುಟ್ಟಿಯಲ್ಲಿ ಹೊತ್ತು ತರುತ್ತಿದ್ದರೆ ಮಳೆಯ ನೀರು ಬೀಳದಂತೆ ಶೇಷ ಹೆಡೆಬಿಚ್ಚಿ ಮಗುವಿಗೆ ಛತ್ರಿಯಾಗಿ ಹಿಂದೆ ಹಿಂದೆ ಬರುತ್ತಿದ್ದ. ಭರಪೂರ ಹರಿಯುತ್ತಿದ್ದ ಯಮುನೆ ಈಗ ಪ್ರಚಂಡ ಪ್ರವಾಹವಾಗಿ ವಸುದೇವನ ಸೊಂಟ, ಎದೆಮಟ್ಟ ಪ್ರವಾಹದ ನೀರು ಹರಿದುಬಂತು. ಈಗೊಮ್ಮೆ ವಿಚಿತ್ರ ರಭಸವೇಗವಾಗಿ ಬಂದ ಯಮುನೆ ಅಪ್ಪಳಿಸಿ ಮೇಲೇರಿ ಮಗುವಿನ ಪಾದಸ್ಪರ್ಶ ಮಾಡಿ ಇಳಿಯಿತು. ಈಗ ಪ್ರವಾಹ ಕಡಿಮೆಯಾಯಿತು. ವಸುದೇವ ಯಮುನೆ ದಾಟಿ ಗೋಕುಲದ ನಂದಗೋಪನ ಮನೆಯ ಮುಂದೆ ಬಂದ. ಆಳುಕಾಳುಗಳೆಲ್ಲಾ ನಿದ್ದೆಯಲ್ಲಿದ್ದಾರೆ. ನಿಧಾನವಾಗಿ ಒಳಕೋಣೆಗೆ ಬಂದ ವಸುದೇವ. ಅಲ್ಲಿ ಯೋಗಮಾಯೆ ಅವತರಿಸಿ ಹೆಣ್ಣುಮಗುವಾಗಿ ಅದೇ ತಾನೇ ಹುಟ್ಟಿಬಂದಿದ್ದಳು. ಯಶೋದೆ ಹಾಗೂ ಪ್ರಸೂತಿಯ ದಾದಿ ಇನ್ನೂ ನಿದ್ದೆಯಲ್ಲೇ ಇದ್ದಾರೆ.


ಕಾರಾಗೃಹದಿಂದ ನಂದಗೋಕುಲಕ್ಕೆ:

ತಾನು ತಂದ ಮಗುವನ್ನು ಯಶೋದೆಯ ಪಕ್ಕ ಮಲಗಿಸಿದ ವಸುದೇವ. ಅಲ್ಲಿದ್ದ ಹೆಣ್ಣುಮಗುವನ್ನು ಬುಟ್ಟಿಯಲ್ಲಿಟ್ಟುಕೊಂಡು, ಬಂದ ದಾರಿಯಲ್ಲಿಯೇ ಹಿಂತಿರುಗಿದ ಅವನು ಕಾರಾಗೃಹದ ಒಳಗೆ ಬಂದೊಡನೆಯೇ ಮತ್ತೆ ಬಾಗಿಲು, ಬೀಗ ಯಥಾರೀತಿ ಮುಂಚಿನಂತೆಯೇ ಆದವು. ವಸುದೇವ ಮಗುವನ್ನು ದೇವಕಿಯ ಕೈಗೆ ಕೊಟ್ಟ ಕೂಡಲೇ ಮಗು ಅಳಲಾರಂಭಿಸಿತು. ಮಗುವಿನ ಅಳುವಿನ ಶಬ್ದ ಕೇಳಿದ ಕಾವಲುಭಟರು ಕ್ಷಣಾರ್ಧದಲ್ಲಿ ಕಂಸನಿಗೆ ವಿಷಯ ಮುಟ್ಟಿಸಿದರು. ಉಪ್ಪರಿಗೆಯ ಮೇಲೆ ಶತಪಥ ಕಾತುರದಿಂದ ಓಡಾಡುತ್ತಿದ್ದ ಕಂಸ ವಿಷಯ ತಿಳಿದೊಡನೆಯೇ ಶರವೇಗದ ಕುದುರೆಯೇರಿ ಸೆರೆಮನೆ ಯತ್ತ ದೌಡಾಯಿಸಿದ. ಒಳನುಗ್ಗಿ ಬಂದ ಕಂಸ ದೇವಕಿಯ ಕೈಯಿಂದ ಆ ಹೆಣ್ಣುಮಗುವನ್ನು ಕಸಿದುಕೊಂಡ. ದೇವಕಿ ದುಂಬಾಲುಬಿದ್ದು, ಗಂಡು ಮಕ್ಕಳನ್ನೆಲ್ಲಾ ಕೊಂದು ಹಾಕಿದ್ದೀ ಕಂಸ, ಈ ಹೆಣ್ಣು ಮಗುವನ್ನಾದರೂ ಉಳಿಸೋ” ಎಂದು ದೀನಳಾಗಿ ಬೇಡಿಕೊಂಡಳು.


ನಿಷ್ಕರುಣೆಯಿಂದ ವ್ಯಂಗ್ಯವಾಗಿ ನಕ್ಕ ಕಂಸ “ಈ ಎಂಟನೇ ಮಗುವಾ, ನನ್ನನ್ನು ಕೊಲ್ಲಲು ಬಂದಿರುವುದು. ನೋಡು ಈಗ ಹೇಗೆ ಇದನ್ನು ಕತ್ತರಿಸಿ ಚೆಲ್ಲುತ್ತೇನೆ” ಎಂದು ಮಗುವನ್ನು ಮೇಲಕ್ಕೆಸೆದ. ಅದು ಬೀಳುವ ರಭಸದಲ್ಲಿ ಅದರ ತಲೆಯನ್ನು ಕತ್ತರಿಸಲು ಸಿದ್ಧನಾದ. ಆದರೆ ಮೇಲಕ್ಕೆ ಚಿಮ್ಮಿದ ಆ ಹೆಣ್ಣುಮಗು ಕೈಝಾಡಿಸಿ ಆಕಾಶದತ್ತ ಚಿಮ್ಮಿಕೊಂಡು ಮೇಲೇರಿತು. ಮೇಲು ಮೇಲೆ ಹೋಗುತ್ತಲೇ ದಿವ್ಯವಾದ ಆಭರಣ ಆಯುಧ ಅಲಂಕಾರಗಳಿಂದ ಶೋಭಿಸುತ್ತಿದ್ದ ದುರ್ಗೆಯಾದಳು. “ಮೂರ್ಖ, ನನ್ನನ್ನು ಕೊಲ್ಲುವುದರಿಂದ ನಿನಗೇನು ಪ್ರಯೋಜನ. ನಿನ್ನನ್ನು ಕೊಲ್ಲುವ ದೇವಕಿಯ ಎಂಟನೆಯ ಮಗ ಈಗಾಗಲೇ ಹುಟ್ಟಿ ಬೇರೆಡೆ ಬೆಳೆಯುತ್ತಿದ್ದಾನೆ”  ಎಂದು ಹೇಳಿ ಅಂತರ್ಧಾನಳಾದಳು.




- ವಿದ್ಯಾವಾಚಸ್ಪತಿ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top