ಕಾಲನ ಕಣ್ಣಿನಿಂದ ಜೀವನ ಅರಿಯಬಹುದು: ರಾಘವೇಶ್ವರ ಶ್ರೀ

Upayuktha
0


ಗೋಕರ್ಣ: ಕಾಲವನ್ನು ಸಂಪೂರ್ಣವಾಗಿ ತಿಳಿದುಕೊಂಡರೆ ಜೀವನವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಬಹುದು. ಕಾಲದ ಕಣ್ಣಿನ ಮೂಲಕ ಜೀವನವನ್ನು ಅರಿತುಕೊಳ್ಳೋಣ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.


ಅಶೋಕೆಯ ಗುರುದೃಷ್ಟಿಯಲ್ಲಿ ಅನಾವರಣ ಚಾತುಮಾಸ್ಯ ಕೈಗೊಂಡಿರುವ ಶ್ರೀಗಳು ಮಂಗಳವಾರ 'ಕಾಲ' ಸರಣಿಯಲ್ಲಿ ಪ್ರವಚನ ನೀಡಿದರು.

 

ಗುರುಕುಲ ಜೀವನವನ್ನು ಕಲಿಯುವ, ಜೀವನ ಅರ್ಥ ಮಾಡಿಕೊಳ್ಳುವ ವಿದ್ಯಾಸ್ಥಾನ. ಮಠ ಎನ್ನುವುದು ನಮ್ಮ ಜೀವನವನ್ನು ಅರ್ಥ ಮಾಡಿಕೊಳ್ಳುವ ಜಾಗ. ಜೀವನವನ್ನು ತಿಳಿಯುವುದು ಎನ್ನುವುದು ಕಾಲವನ್ನು ತಿಳಿದುಕೊಳ್ಳುವುದು. ಕಾಲ ನಮ್ಮೆಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಅದನ್ನು ಹೊರತುಪಡಿಸಿ ಜೀವನವಿಲ್ಲ ಎಂದು ಬಣ್ಣಿಸಿದರು.


ಖಗೋಳದಲ್ಲಿ ನಮ್ಮನ್ನು ಪ್ರತಿನಿಧಿಸುವ ಗ್ರಹ, ರಾಶಿಯನ್ನು ತಿಳಿದುಕೊಂಡರೆ ನಮ್ಮ ನಮ್ಮ ಜೀವನವನ್ನು ಅರಿತುಕೊಳ್ಳಬಹುದು. ಆಗ ನಮ್ಮ ವೈಯಕ್ತಿಕ ವಿಷಯಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಹುದು. ಗ್ರಹಮಂಡಲಗಳನ್ನು ದರ್ಪಣವಾಗಿ ಬಳಸಿಕೊಂಡರೆ ಓರೆ ಕೋರೆಗಳನ್ನು ತಿಳಿದುಕೊಂಡರೆ ನಮ್ಮ ಜೀವನ ಹಸನುಗೊಳ್ಳುತ್ತದೆ ಎಂದು ತಿಳಿಸಿದರು.


ಕಾಲ ಜೀವನದ ಸೂಕ್ಷ್ಮವಾದ್ದನ್ನು, ಸ್ಥೂಲವಾದ್ದನ್ನು ಹೀಗೆ ಪ್ರತಿಯೊಂದನ್ನೂ ತಿಳಿಸುತ್ತದೆ. ಮಳೆ ಸುರಿಯುತ್ತದೆ, ನೀರು ಹರಿಯುತ್ತಿದೆ ಎಂದರೆ ಚಂದ್ರನ ಪ್ರಭಾವ ಇದೆ ಎಂಬ ಅರ್ಥ. ಬೆಂಕಿಗೆ ಕುಜ ಕಾರಣನಾದರೆ ಆಕಾಶಕಾರಕ ಗ್ರಹ ಗುರು. ವಾಯುಕಾರಕ ಶನಿ. ಹೀಗೆ ಪ್ರತಿಯೊಂದು ಘಟನೆಗಳಿಗೂ ಒಂದೊಂದು ಗ್ರಹಗಳು ಕಾರಣವಾಗುತ್ತವೆ ಎಂದು ವಿಶ್ಲೇಷಿಸಿದರು.


ಪ್ರತಿ ರಾಶಿಯ ಗುಣಲಕ್ಷಣಗಳು ಆಯಾ ರಾಶಿಯ ಬಲ ಮತ್ತು ಚಂದ್ರನ ಬಲವನ್ನು ಆಧರಿಸಿರುತ್ತದೆ. ಆದರೂ ಸಾಮಾನ್ಯವಾಗಿ ಸಿಂಹರಾಶಿಯವರು ಕೋಪಿಷ್ಟರು, ಸ್ತ್ರೀದ್ವೇಷಿಗಳು, ತ್ಯಾಗಿಗಳು, ಪರಾಕ್ರಮಿಗಳೂ ಆಗಿರುತ್ತಾರೆ. ಜತೆಗೆ ಅಹಂ ಇದ್ದರೂ, ತಾಯಿಗೆ ವಿಧೇಯರಾಗಿರುತ್ತಾರೆ ಎಂದು ವಿವರಿಸಿದರು.


ಕನ್ಯಾರಾಶಿಯವರನ್ನು ನಡಿಗೆಯಿಂದಲೇ ಗಮನಿಸಬಹುದು. ನಿಧಾನ, ಲಜ್ಜೆಯುಕ್ತ ನಡಿಗೆ, ದೃಷ್ಟಿಯೂ ಲಜ್ಜೆ ಮತ್ತು ಮಂದ ಪ್ರಧಾನ. ಸತ್ಯಶೀಲರಾಗಿದ್ದು, ಶಾಸ್ತ್ರಸೂಕ್ಷ್ಮರೂ, ಧರ್ಮಶೀಲರೂ, ಮೇಧಾವಿಗಳೂ, ವಾಚಾಳರೂ, ಪರಗ್ರಹವಾಸಿಗಳಾಗಿರುತ್ತಾರೆ. ವಿದೇಶಗಳಿಗೆ ಹೋಗುವವರಾಗಿರುತ್ತಾರೆ ಎಂದರು.


ತುಲಾರಾಶಿಯವರು ಸಾಮಾನ್ಯವಾಗಿ ದೇವ, ಬ್ರಾಹ್ಮಣ, ಸಾಧುಗಳನ್ನು ಪೂಜಿಸುತ್ತಾರೆ. ಪ್ರಾಜ್ಞರು, ಶುಚೀಭೂತರೂ, ಉನ್ನತ ನಾಸಿಕ, ಕೃಶ- ಸಡಿಲ ಶರೀರ, ಚಲನಶೀಲರು ಆಗಿದ್ದು, ಶ್ರೀಮಂತರಾಗಿರುತ್ತಾರೆ. ಒಂದು ಅಂಗ ಊನವಾಗಿರುವ ಸಾಧ್ಯತೆ ಇರುತ್ತದೆ. ವ್ಯಾಪಾರ, ವ್ಯವಹಾರ ಚತುರರೂ, ಅನಾರೋಗ್ಯವಂತರೂ, ನೆಂಟರಿಷ್ಟರಿಗೆ ಉಪಕಾರ ಮಾಡುವವರೂ ಆಗಿರುತ್ತಾರೆ ಎಂದು ವಿವರಿಸಿದರು.


ವೃಶ್ಚಿಕ ರಾಶಿಯವರಿಗೆ ದೊಡ್ಡ ಕಣ್ಣು, ವಿಶಾಲ ಹೃದಯದವರು, ಮಂಡಿ, ತೊಡೆ ಮತ್ತು ಕಡಗಾಲು ವೃತ್ತಾಕಾರವಾಗಿರುತ್ತದೆ. ಪಿತೃವಿಯೋಗ, ಚಿಕ್ಕವಯಸ್ಸಿನಲ್ಲಿ ಕಾಯಿಲೆ, ರಾಜಪೂಜತ್ವ, ಕಂದುಬಣ್ಣ, ದೋಷ, ದುಃಖ, ನೋವು ಹೊರಬರುವುದಿಲ್ಲ. ಧನುರಾಶಿಯವರಿಗೆ ಪಿತೃಧನ ಪ್ರಾಪ್ತಿ, ತ್ಯಾಗ, ಧೈರ್ಯ, ಶಿಲ್ಪಾಸಕ್ತರು, ಧರ್ಮವನ್ನು ಬಲ್ಲವರಾಗಿರುತ್ತಾರೆ. ಬಲಪ್ರಯೋಗದಿಂದ ಇವರನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಹೇಳಿದರು.


ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಚಾತುರ್ಮಾಸ್ಯ ಸೇವಾ ಸಮಿತಿ ಕೋಶಾಧ್ಯಕ್ಷ ಸುಧಾಕರ ಬಡಗಣಿ, ಶ್ರೀಕಾರ್ಯದರ್ಶಿ ಜಿ.ಕೆ.ಮಧು, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಶಾಸ್ತ್ರಿಗಳಾದ ಸುಬ್ರಾಯ ಅಗ್ನಿಹೋತ್ರಿ, ಶ್ರೀಶ ಶಾಸ್ತ್ರಿ, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಜಿ.ವಿ.ಹೆಗಡೆ, ಮೋಹನ ಭಟ್ ಹರಿಹರ ಮತ್ತಿತರರು ಉಪಸ್ಥಿತರಿದ್ದರು. ಗುಂಡಿ ಮಂಜಪ್ಪ- ಗೀತಾ ಮಂಜಪ್ಪ ದಂಪತಿಗಳು ಭಿಕ್ಷಾಸೇವೆ ನೆರವೇರಿಸಿದರು, ಎಸ್.ಜಿ.ಭಟ್ ಕಬ್ಬಿನಗದ್ದೆ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top