ಲೇಖಾ ಲೋಕ-13: ಹರಿಕಥಾ ವಿದ್ವಾಂಸರು ಶ್ರೀ ಭದ್ರಗಿರಿ ಅಚ್ಯುತದಾಸರು

Upayuktha
0


ರಿಕಥೆಯ ವಾಚನ, ಪುರಾಣಗಳ ಹಿನ್ನೆಲೆ, ಸಂಗೀತ, ದಾಸಸಾಹಿತ್ಯದ ಸೊಗಸು ಕೇಳಬೇಕೆಂದರೆ, ಹರಿಕಥಾ ವಿದ್ವಾಂಸರಲ್ಲಿ ಒಬ್ಬರಾಗಿ ಮೊದಲು  ಬರುವರು ಶ್ರೀ ಭದ್ರಗಿರಿ ಅಚ್ಯುತದಾಸರು! ಲೌಕಿಕ ವಿಷಯಗಳೊಂದಿಗೆ, ರಾಮಾಯಣ, ಮಹಾಭಾರತ, ದಾಸರ ಪದ್ಯಗಳನ್ನು ಕೀರ್ತನೆಗಳನ್ನು ಪುರಾಣ ಗಳನ್ನು ಸಮನ್ವಯಗೊಳಿಸಿ, ಭಕ್ತರನ್ನು ತನ್ಮಯ ಮಾಡಿದ ಮಹಾನುಭಾವರು. ಶ್ರೀ ಮಧ್ವರ ಉಡುಪಿ ಜಿಲ್ಲೆಯಾಗಿರುವ ತಾಣ ಭದ್ರಗಿರಿಯಲ್ಲಿ, ತಾ॥ 23-10-1939 ರಂದು ಜನಿಸಿದರು. ಹರಿಕಥೆ ಇವರ  ಜೀವನದ ಗಮನಾರ್ಹ ಕಾಯಕವಾಗಿತ್ತು!


ಭದ್ರಗಿರಿ ಅಚ್ಯುತದಾಸರ ಪೂರ್ವಜರೆಲ್ಲಾ ಯಕ್ಷಗಾನ, ಮತ್ತು ಹರಿಕಥೆಯನ್ನು ಹೇಳುವ ವಿದ್ವಾಂಸರಾಗಿದ್ದುದು ವಿಶೇಷ! ವೆಂಕಟರಮಣ ಪೈ ಮತ್ತು ರುಕ್ಮಿಣಿ ಅಮ್ಮನವರ ಪುತ್ರನಾಗಿ ಜನಿಸಿದರು. ಇವರ ಸಹೋದರರಾದ ಭದ್ರಗಿರಿ ಕೇಶವದಾಸರು ವಿಶ್ವಾದ್ಯಂತ ಅನೇಕ ಶಿಷ್ಯರನ್ನು ಪಡೆದು ಭಾರತದ ಕೀರ್ತನೆ ಕಲೆಯನ್ನು ಪ್ರಚಾರ ಮಾಡಿದ ಮಹನೀಯರು. ಭದ್ರಗಿರಿಯ ಶ್ರೀ ವೀರ ವಿಠಲನೇ ಇವರ  ಕುಟುಂಬದ ಅಧಿದೇವತೆ ಹೀಗಾಗಿ, ದೇವರ ಸನ್ನಿಧಿಯಲ್ಲಿ, ಗ್ರಾಮದ ಜನರ ಮುಂದೆ, ಭಜನೆ, ಹರಿಕಥೆ, ನರ್ತನ ಮಾಡುತ್ತಾ, ಆಧ್ಯಾತ್ಮದ ತಿರುಳನ್ನು ಹಂಚಿದ ಮಹಾನುಭಾವರು. ಇವರ  ಗುರುಗಳಾದ ಕಾಶಿಮಠ ಸಂಸ್ಥಾನದ ಶ್ರೀ ಶ್ರೀ ಸುಧೀಂದ್ರ ತೀಥ೯ರು, ಇವರ ದಾಸಸಾಹಿತ್ಯದ ಪ್ರತಿಭೆ, ಸಂಗೀತ ಕಂಡು ಸಂತೋಷಪಟ್ಟು ದಾಸದೀಕ್ಷೆಯನ್ನು 1953ರಲ್ಲಿ ನೀಡಿದರು.


ಶ್ರೀ ಅಚ್ಯುತದಾಸರು ಹಲವಾರು ಸಲ ಹಿಮಾಲಯ ದರ್ಶನ ಮಾಡಿ, ಆಧ್ಯಾತ್ಮದ ಭಕ್ತಿಯನ್ನು ಹಂಚಿ ಪುನೀತರಾದವರು. ಪ್ರಥಮ ಬಾರಿಗೆ 1951ರಲ್ಲಿ 19 ವಷ೯ದ  ಅಚ್ಯುತದಾಸರು ಶಿವರಾತ್ರಿಯಂದು ಹರಿಕಥೆ ಮಾಡಿ ವಿದ್ವಾಂಸರ ಪ್ರಶಂಸೆಗೆ ಪಾತ್ರರಾದರು. ತದನಂತರ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ  ಪ್ರವಾಸ ಮಾಡಿ ಹರಿಕಥಾ ಸೌರಭ ಉಣಬಡಿಸಿದ  ಮಹಾನ್ ದಾಸರು! ಕನ್ನಡ, ಮರಾಠಿ, ತುಳು, ಕೊಂಕಣಿ, ಹಿಂದಿ ಭಾಷೆಯಲ್ಲಿ ನುರಿತವರಾಗಿ, ಕೀತ೯ನೆ ಮಾಡಿ, ಪ್ರಸಿದ್ಧರಾದ ಶ್ರೀ ಅಚ್ಯುತದಾಸರು ನಾಡಿಗೆ ದೊರೆತ ಅಪರೂಪದ ಕಲಾವಿದರು!

ಆಕಾಶವಾಣಿ, ದೂರದರ್ಶನದಲ್ಲಿ ಕಾರ್ಯಕ್ರಮ ನೀಡಿ ಪ್ರಖ್ಯಾತರಾದವರು. ಶ್ರೀ ಸುಧೀಂದ್ರ ತೀರ್ಥರ ಅನುಗ್ರಹ ಮತ್ತು ತಪ್ತ ಮುದ್ರಾಂಕಿತದೊಂದಿಗೆ, "ಮೂಲನಾರಾಯಣ" ಎಂಬ ಅಂಕಿತ ಪಡೆದು, ಸಹಸ್ರಾರು ಕೀರ್ತನೆಗಳನ್ನು ರಚಿಸಿದರು. ಹರಿಕಥಾ ಪೂರ್ವರಂಗ, ಗೀತಾರ್ಥಚಿಂತನೆ, ಗುರುಚರಿತ್ರೆ, ಶ್ರೀನಿವಾಸ ಕಲ್ಯಾಣ, ಮುಂತಾದ 25 ಕ್ಕೂ ಹೆಚ್ಚು ಗ್ರಂಥ ರಚಿಸಿ, ಪ್ರಸಿದ್ಧರಾದರು. ಇದಲ್ಲದೇ ಆರು ಸಂಪುಟಗಳ "ಹರಿಕಥಾಮೃತ ಸಿಂಧು" ರಚಿಸಿ, ಕೀರ್ತನ ಕಲಾವಿದ್ಯಾರ್ಥಿಗಳಿಗೆ ವಿಶ್ವಕೋಶದಂತಹ ಈ ಕೃತಿ ನೀಡಿ, ಹರಿಕಥೆ ಕೀರ್ತನೆ ನಿಂತ ನೀರಾಗಬಾರದೆಂದು ಶ್ರಮವಹಿಸಿದರು.


ಶ್ರೀ ಅಚ್ಯುತದಾಸರು ಬೆಂಗಳೂರು ಹತ್ತಿರ ನೆಲಮಂಗಲದ ಬಳಿ, ವಿಜಯವಿಠಲ ದೇವಾಲಯ, ದಾಸಾಶ್ರಮ ಅಂತರರಾಷ್ಟ್ರೀಯ ಕೇಂದ್ರ ಕೀರ್ತನ ಮಹಾವಿದ್ಯಾಲಯ, ಸಹೋದರರಾದ ಶ್ರೀ ಕೇಶವದಾಸರೊಂದಿಗೆ ಸ್ಥಾಪಿಸಿದರು. ಈ ಎಲ್ಲಾ ಸಂಸ್ಥೆಗಳಿಗೆ ಗೌರವ ಅದ್ಯಕ್ಷರಾಗಿದ್ದುದು ವಿಶೇಷ!

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅನೇಕ ಧಾರ್ಮಿಕ ಗ್ರಂಥಗಳನ್ನು "ಭಾರತ ಜ್ಯೋತಿ ಪ್ರಕಾಶನದ" ಮೂಲಕ ಪ್ರಕಟಿಸಿದರು. ದಾಸವಾಣಿ ಮಾಸಪತ್ರಿಕೆಯ ಸಂಪಾದಕರಾಗಿ, ಅನೇಕ ಆಧ್ಯಾತ್ಮಿಕ ವಿಷಯಗಳನ್ನು ಪ್ರಚಾರ ಮಾಡಿದರು. ಮಾಸ್ಟರ್ ರೆಕಾರ್ಡಿಂಗ್ ಕಂಪನಿ ಮೂಲಕ ಅನೇಕ ಧ್ವನಿ ಮುದ್ರಿಕಾ ಸಂಗೀತಾ ಕ್ಯಾಸೆಟ್ "ಮೂಲಕ ಹರಿಕಥೆಯ ಪ್ರಸಂಗಗಳನ್ನು ಹೊರತಂದರು. ಇವರಿಗೆ ಕೀರ್ತನಾಚಾರ್ಯ, ಕೀರ್ತನಾಗ್ರೇಸರ, ಕೀರ್ತನ ಕೇಸರೀ ಬಿರುದುಗಳನ್ನು ಭಕ್ತ ಜನರು ನೀಡಿ ಗೌರವಿಸಿದರು.


ಕರ್ನಾಟಕ ಗಾನ ಕಲಾ ಪರಿಷತ್ತಿನ ವಿದ್ವತ್ ಸಭೆಯಲ್ಲಿ ಸನ್ಮಾನ ಜರುಗಿದುದಲ್ಲದೇ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನಕ-ಪುರಂದರ ಪ್ರಶಸ್ತಿ,  ನಾಡೋಜ ಪ್ರಶಸ್ತಿ ಲಭಿಸಿದೆ. ಕರ್ನಾಟಕ ಕಲಾ ತಿಲಕ ಎಂಬ ಪ್ರಶಸ್ತಿಯನ್ನು, ಕರ್ನಾಟಕ ಸಂಗೀತ, ನೃತ್ಯ ಅಕಾಡೆಮಿ ನೀಡಿ ಗೌರವಿಸಿತು. ಇವರ ಸಾಧನೆಯ ಸಾಕ್ಷ್ಯ ಚಿತ್ರ ಸಹ ಬಿಡುಗಡೆಯಾಗಿದೆ.


ಅತ್ಯಂತ ಸ್ವಾರಸ್ಯವಾಗಿ, ಅನೇಕ ಲೌಕಿಕ ಉದಾಹರಣೆಗಳೊಂದಿಗೆ, ಮಹಾಭಾರತ, ರಾಮಾಯಣ, ಪುರಾಣಗಳು, ಹರಿದಾಸರ ಚರಿತ್ರೆಯನ್ನು ಸಭಾಜನರಿಗೆ ಸಂಗೀತದೊಂದಿಗೆ ಹೇಳಿ ಮಂತ್ರಮುಗ್ಧರನ್ನಾಗಿ ಮಾಡಿ ತಾ॥23-10-2013 ರಂದು ಹರಿಪಾದ ಸೇರಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top