ತಿಮ್ಮಾಪುರ (ಹುನಗುಂದ): ಗ್ರಾಮದ ಆರಾಧ್ಯ ದೇವ ಪತ್ರಿಗಿಡದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವವು ಇತ್ತೀಚೆಗೆ ಸಡಗರ ಸಂಭ್ರಮದೊ೦ದಿಗೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ನೆರವೇರಿತು.
ಈ ಜಾತ್ರಾ ಮಹೋತ್ಸವದಲ್ಲಿ ಮತ-ಬೇಧವಿಲ್ಲದೆ ಎಲ್ಲ ಸಮುದಾಯದವರು ಜಾತ್ರಾ ಮಹೋತ್ಸವ ದಲ್ಲಿ ಪಾಲ್ಗೊಂಡು ದೇವರ ದರುಶನ ಪಡೆದು ಪುನೀತರಾದರು. ಕಳೆದ ಭಾನುವಾರ ರಾತ್ರಿ ಗ್ರಾಮದ ಬಸಯ್ಯ ಹೊರಗಿನಮಠರವರ ಮನೆಯಿಂದ ವಾದ್ಯ ಮೇಳಗಳೊಂದಿಗೆ ಕಳಸ ಮೆರವಣಿಗೆ ನಡೆಯಿತು. ಸೋಮವಾರ ಮುಂಜಾನೆ ಬೆಳಗಿನ ಜಾವ ಕಳಸವನ್ನು ಶಿಖರಕ್ಕೆ ಏರಿಸಲಾಯಿತು. ಅಂದು ಶ್ರೀ ಬಸವೇಶ್ವರನಿಗೆ ರುದ್ರಾಭಿಷೇಕ, ಮಂಗಳಾರತಿ, ಜಂಗಮ ಪ್ರಸಾದ, ಅನ್ನಸಂತರ್ಪಣೆ ಜರುಗಿತು. ಈ ಪ್ರಸಾದ ಕಾರ್ಯಕ್ರಮದಲ್ಲಿ ತಿಮ್ಮಾಪೂರ ಸೇರಿದಂತೆ ಗಂಗೂರ, ಕಿರಸೂರ, ಹಡಗಲಿ, ಚಿತ್ತರಗಿ, ಮೇದಿನಾಪೂರ, ಬೆಳಗಲ್ಲ ಗ್ರಾಮಗಳಲ್ಲದೆ ಹುನಗುಂದ ಸುತ್ತಮುತ್ತಲಿನ ಗ್ರಾಮಸ್ಥರು ಪಾಲ್ಗೊಂಡಿದ್ದರು.
ಮಂಗಳವಾರದ೦ದು ಶ್ರೀ ಬಸವೇಶ್ವರನಿಗೆ ಅಭಿಷೇಕ, ಮರಿಪ್ರಸ್ಥ ನಡೆಯಿತು. ನಂತರ ಕಳಸವನ್ನು ಇಳಿಸಲಾಯಿತು. ಸಕಲ ವಾದ್ಯಮೇಳದೊಂದಿಗೆ ಕಳಸವನ್ನು ದೇವಸ್ಥಾನದಿಂದ ಗ್ರಾಮಕ್ಕೆ ತಂದು ಗ್ರಾಮದ ಶ್ರೀ ಮಾರುತೇಶ್ವರ, ಶ್ರೀ ಬಸವೇಶ್ವರ, ಶ್ರೀ ದುರಗವ್ವ, ಶ್ರೀ ಹುಡೇದ ಲಕ್ಷ್ಮಿ ದೇವಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ, ಶರಣಯ್ಯ ಹೊರಗಿನಮಠರವರ ಮನೆಯಲ್ಲಿ ಆ ಕಳಸವನ್ನು ಇಡಲಾಯಿತು. ಹೊರಗಿನಮಠ ಮನೆಯವರು ವರ್ಷ ಪೂರ್ತಿ ಪೂಜೆ ಸಲ್ಲಿಸುತ್ತಿದ್ದಾರೆ.
ಜಾತ್ರೆ ನಿಮಿತ್ತ ಗ್ರಾಮದಲ್ಲಿ ಎರಡು ದಿವಸ ಬೀಸುವುದು, ಕುಟ್ಟುವದು, ರೊಟ್ಟಿ ಬಡೆಯುವದು, ಎತ್ತು ಹೂಡುವುದು ಹಾಗೂ ಹೊಸ ಕಾರ್ಯ ಮಾಡುವುದರ ಮೇಲೆ ಹೇರಲಾಗಿದ್ದ ಬಂಧಕ್ಕೆ ತೆರೆ ಎಳೆಯಲಾಯಿತು. ಜಾತ್ರೆ ನಿಮಿತ್ಯ ರವಿವಾರ ನಡೆದ ಭಜನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶ್ರೀ ಮಾರುತೇಶ್ವರ ಹಾಗೂ ಶ್ರೀ ಬಸವೇಶ್ವರ ಭಜನಾ ಮಂಡಳಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾತ್ರಿಯಿಡೀ ಭಜನಾ ಸೇವೆ ಮಾಡಲಾಯಿತು. ಇದರೊಂದಿಗೆ ಪತ್ರಿಗಿಡದ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ