ಮಂಗಳೂರು: ದೇಶದಲ್ಲಿ ಸಾಕಷ್ಟು ಮೂಢನಂಬಿಕೆ ಇಂದಿಗೂ ಬೇರೂರಿದೆ. ಜಾತಿ, ಧರ್ಮ ವಿಚಾರಗಳಿಂದಾಗಿ ದೇಶ ಹಿಂದುಳಿದಿದೆ. ಶಿಕ್ಷಣ ಕೇವಲ ಉದ್ಯೋಗಕ್ಕೆ ಮಾತ್ರ ಸೀಮಿತವೆಂದು ಪರಿಗಣಿಸಲಾಗುತ್ತಿರುವುದು ವಿಷಾದನೀಯ. ಇಂದು ಮಾನವೀಯ ಮೌಲ್ಯ ಭರಿತ ಶಿಕ್ಷಣ ನೀಡದಿದ್ದರೆ ಸಮಾಜ ಸುಧಾರಣೆ ಆಗಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಶಾಸಕ ಬಿ. ಕೆ. ಹರಿಪ್ರಸಾದ್ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ವತಿಯಿಂದ ನಡೆದ ನಾರಾಯಣ ಗುರು ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬುದ್ಧ, ಬಸವಣ್ಣನವರ ನಂತರ ಜನ್ಮತಾಳಿದ ಮಹಾನ್ ದಾರ್ಶನಿಕ ಬ್ರಹ್ಮರ್ಷಿ ನಾರಾಯಣ ಗುರು. ಮಹಿಳಾ ಶಿಕ್ಷಣಕ್ಕೆ ಬುನಾದಿ ಹಾಕಿದವರು ಸಾವಿತ್ರಿ ಬಾಯಿ ಫುಲೆ. ಇದನ್ನು ಮುಂದಿನ ಜನಾಂಗಕ್ಕೆ ಕೊಂಡೊಯ್ದವರು ಬ್ರಹ್ಮರ್ಷಿಯವರು. ಜಾತಿ, ಧರ್ಮ ಭೇದಭಾವ ಇಲ್ಲದೇ ಶಿಕ್ಷಣಕ್ಕೆ ಎಲ್ಲರೂ ಅರ್ಹರೆಂದು ಸಮಾಜವನ್ನು ಒಗ್ಗೂಡಿಸಿದರು. ಗುರುಗಳ ತತ್ತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಮಾದರಿ ಪ್ರಜೆಗಳಾಗೋಣ, ಎಂದರು.
ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಪಿ. ಎಲ್. ಧರ್ಮ, ಬದುಕಿನ ಬಗೆಗೆ ವಿದ್ಯಾರ್ಥಿಯಾಗಿದ್ದಾಗಲೇ ನಾರಾಯಣಗುರು ಅವರು ಅರಿತುಕೊಂಡಿದ್ದರು. ಮಗುವಿನಿಂದ ವೃದ್ಧರವರೆಗಿನ ಎಲ್ಲರ ಮನಸನ್ನು ಅರ್ಥೈಸಿಕೊಂಡು ಎಲ್ಲರನ್ನು ಸಂತೈಸಿದ ಶ್ರೇಷ್ಠ ವ್ಯಕ್ತಿ. ಜಾತಿ ವ್ಯವಸ್ಥೆಯಿಂದ ದೇಶ ಹೊಡೆದಾಡಲಿದೆ, ಎಂಬ ವಿಚಾರ ಮೊದಲೇ ಆರಿತಿದ್ದವರು. ಅದೇ ಕಾರಣಕ್ಕಾಗಿ ಒಂದೇ ಜಾತಿ ಇರಬೇಕು ಎಂದು ಸಾರಿದವರು ನಾರಾಯಣ ಗುರು. ಅಂತಹ ಮಹನೀಯರ ಕುರಿತು ಅಧ್ಯಯನ ಮತ್ತು ಸಂಶೋಧನೆ ನಡೆಸಬೇಕಿದೆ. ಆಗ ಮಾತ್ರ ಸಮಾಜಕ್ಕೆ ಸಂಪೂರ್ಣ ವ್ಯಕ್ತಿತ್ವ ಪರಿಚಯಿಸಲು ಸಾಧ್ಯ ಎಂದು ತಿಳಿಸಿದರು.
ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ನಾರಾಯಣ ಗುರು ಪೀಠದ ಸಲಹಾ ಸಮಿತಿಯ ಸದಸ್ಯರು ಮತ್ತು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಮತ್ತು ವಿದ್ಯಾರ್ಥಿಗಳು ಉಪಸ್ಥಿತದಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ