|| ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ದನಮ್ ||
|| ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ ||
ನಮ್ಮ ಸನಾತನ ಧರ್ಮದಲ್ಲಿ ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯು ಒಂದು. ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು "ಗೋಕುಲಾಷ್ಟಮಿ" ಅಥವಾ "ಕೃಷ್ಣಷ್ಟಾಮಿ" ಎಂದು ಕರೆಯುತ್ತಾರೆ. ಶ್ರೀ ಕೃಷ್ಣ ಜನ್ಮಾಷ್ಟಮಿಯು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯ ರೋಹಿಣಿ ನಕ್ಷತ್ರದಂದು ಎಂದರೆ ಈ ದಿನದಂದು ಬರುತ್ತದೆ. ಈ ದಿನ ಶ್ರೀ ಕೃಷ್ಣನನ್ನು ಪೂಜಿಸಿ, ಆರಾಧಿಸುವ ದಿನವಾಗಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ:
ಶ್ರೀ ಕೃಷ್ಣ ಜನ್ಮಾಷ್ಟಮಿಯು ಬಹಳ ಪವಿತ್ರವಾದ ಹಬ್ಬವಾಗಿದ್ದು, ತನ್ನದೇ ಆದ ಮಹತ್ವವನ್ನು ಕೂಡಾ ಹೊಂದಿದೆ. ಭಗವಾನ್ ಶ್ರೀ ಮಹಾವಿಷ್ಣು ವಿನ 8ನೇ ಅವತಾರವೇ ಭಗವಾನ್ ಶ್ರೀ ಕೃಷ್ಣ. ಶ್ರೀ ಕೃಷ್ಣನು ಮಹಾಭಾರತದ ಸಮರ ಭೂಮಿಯಲ್ಲಿ ಅರ್ಜುನನಿಗೆ ಬೋಧಿಸಿದ ಜೀವನ ಪಾಠವೇ ಇಂದಿಗೂ ನಮ್ಮ ಕಲಿಯುಗದ ಜನತೆಗೆ ಸ್ಪೂರ್ತಿದಾಯಕ. ದ್ವಾಪರಯುಗದಲ್ಲಿ ಶ್ರೀ ಕೃಷ್ಣನು ಉಪದೇಶಿಸಿದ ಪ್ರತಿಯೊಂದು ವಿಚಾರವು ಪ್ರಸ್ತುತವಾಗಿ ನಮ್ಮ ಈ ಕಾಲಘಟ್ಟಕ್ಕೆ ಅಕ್ಷರಶಃ ನಿಜ ಎಂಬಂತೆ ಹೋಲಿಕೆಯಾಗುತ್ತದೆ. ಆದ್ದರಿಂದ ಶ್ರೀ ಕೃಷ್ಣನು ಈ ಕಲಿಯುಗದ "ಮಾರ್ಗದರ್ಶಕ" ಎಂಬ ಸತ್ಯದಲ್ಲಿ ಎರಡು ಮಾತಿಲ್ಲ.
ಶ್ರೀ ಕೃಷ್ಣನ ಜನನವು ಒಂದು ಅದ್ಭುತವಾದ ಪವಾಡವಾಗಿದೆ. ಕಂಸನು ಮಥುರಾದ ಮಹಾರಾಜ ನಾಗಿರುತ್ತಾನೆ. ವಸುದೇವ ಮತ್ತು ದೇವಕಿಯ ವಿವಾಹವಾದ ನಂತರ ದೇವಕಿಯನ್ನು ಕರೆತರುವಾಗ ದೇವಕಿಯ ಅಣ್ಣನಾದ ಕಂಸನಿಗೆ ತನ್ನ ತಂಗಿಯ 8ನೇ ಮಗುವಿನಿಂದ ಸಾವು ಎಂದು ಒಂದು ಅಶರೀರವಾಣಿ ಕೇಳುತ್ತದೆ. ಇದರಿಂದ ಭಯಭೀತನಾಗಿ ಕುಪಿತಗೊಂಡ ಕಂಸ ವಸುದೇವನನ್ನು ಮತ್ತ ದೇವಕಿಯನ್ನು ಕೊಲ್ಲಲು ಮುಂದಾಗುತ್ತಾನೆ. ದೇವಕಿ ಕಂಸನನ್ನು ತಡೆದು ತನಗೆ ಹುಟ್ಟುವ ಎಲ್ಲಾ ಮಗುವನ್ನು ಹುಟ್ಟಿದ ತಕ್ಷಣ ನಿನ್ನ ಕೈಗೆ ಒಪ್ಪಿಸುತ್ತೇನೆ ಎಂದು ಹೇಳಿ ತನ್ನ ಗಂಡನಾದ ವಸುದೇವನನ್ನು ಕಂಸನಿಂದ ರಕ್ಷಿಸುತ್ತಾಳೆ. ನಂತರ ವಸುದೇವ ಮತ್ತು ದೇವಕಿಯನ್ನು ಕಂಸ ಮಥುರಾದ ಕಾರಾಗೃಹದಲ್ಲಿರಿಸುತ್ತಾನೆ.
ನೀಡಿದ ಮಾತಿನಂತೆ ದೇವಕಿಯು ತನ್ನ ಪ್ರತಿಯೊಂದು ಶಿಶುವನ್ನು ಎಂದರೆ 7ಮಕ್ಕಳನ್ನು ಹುಟ್ಟಿದ ತಕ್ಷಣ ದೇವಕಿ ಕಂಸನ ಕೈಗೆ ಕೊಡುತ್ತಾಳೆ. ಕಂಸ ಹುಟ್ಟಿದ 7 ಶಿಶುಗಳನ್ನು ಕೂಡಾ ಕೊಲ್ಲುತ್ತಾನೆ. ಆದರೆ 8ನೇ ಮಗುವನ್ನು ಮಾತ್ರ ವಸುದೇವ ಉಳಿಸಲು ಪ್ರಯತ್ನಿಸುತ್ತಾನೆ. ಶ್ರೀ ಕೃಷ್ಣನು ಹುಟ್ಟಿದ ತಕ್ಷಣ ವಸುದೇವ ಮಥುರಾದ ಕಾರಾಗೃಹದಿಂದ ತಪ್ಪಿಸಿ ಹೊರಬರುತ್ತಾನೆ. ವಸುದೇವ ಕೃಷ್ಣನನ್ನು ಉಳಿಸುವ ಸಲುವಾಗಿ ಯಮುನಾ ನದಿಯನ್ನು ದಾಟಲು ಪ್ರಯತ್ನಿಸುತ್ತಾನೆ. ಆಗ ಯಮುನಾ ನದಿಯು ತನ್ನಲ್ಲಿದ್ದ ನೀರನ್ನು ಪಕ್ಕಕ್ಕೆ ಸರಿಸುವ ಮೂಲಕ ವಸುದೇವನಿಗೆ ದಾರಿ ಮಾಡಿಕೊಡುತ್ತದೆ. ಸರ್ಪವು ಕೊಡೆಯಂತೆ ನಿಂತು ಕೃಷ್ಣನನ್ನು ಮಳೆಯಿಂದ ಕಾಪಾಡುತ್ತದೆ.
ವಸುದೇವನ ಈ ಸತ್ಕಾರ್ಯದಲ್ಲಿ ಪ್ರಕೃತಿಯು ಕೂಡಾ ಆತನಿಗೆ ನೆರವಾಗುತ್ತದೆ. ನಂತರ ವಸುದೇವನು ಗೋಕುಲದಲ್ಲಿದ್ದ ನಂದರಾಜನ ಮನೆಗೆ ಪ್ರವೇಶಿಸಿ ಆಗ ತಾನೇ ಯಶೋದೆಗೆ ಜನಿಸಿದ ಹೆಣ್ಣುಮಗುವನ್ನು ಕಾಣುತ್ತಾನೆ. ವಸುದೇವ ಕೃಷ್ಣನನ್ನು ಯಶೋದೆ ಪಕ್ಕದಲ್ಲಿ ಮಲಗಿಸಿ, ಯಶೋದೆಗೆ ಹುಟ್ಟಿದ ಹೆಣ್ಣುಮಗುವನ್ನು ಎತ್ತಿಕೊಂಡು ಮಥುರಾದ ಕಾರಾಗೃಹಕ್ಕೆ ಬಂದು ದೇವಕಿಯ ಬಳಿ ಮಲಗಿಸುತ್ತಾನೆ. ದೇವಕಿಗೆ ಮಗು ಹುಟ್ಟಿದ ವಿಷಯ ಕಂಸನಿಗೆ ತಿಳಿಯುತ್ತದೆ. ಕಂಸನು ಮಗುವನ್ನು ಕೊಲ್ಲಲು ಕಾರಾಗೃಹಕ್ಕೆ ಬರುತ್ತಾನೆ. ಮಗುವನ್ನು ಬಂಡೆಗೆ ಅಪ್ಪಳಿಸಿ ಇನ್ನೇನು ಕೊಲ್ಲಬೇಕು ಎನ್ನುವಷ್ಟರಲ್ಲಿ ಮಗು ಆಕಾಶದಡೆಗೆ ಸಾಗಿ ಭಗವಾನ್ ಮಹಾವಿಷ್ಣುವಿನ ಸಹಾಯಕಿಯಾದ ಯೋಗಮಾಯಿ ರೂಪವನ್ನು ಅವತರಿಸುತ್ತದೆ. "ನಿನ್ನನ್ನು ವಧಿಸುವ ಶಿಶು ಈಗಾಗಲೇ ಗೋಕುಲದಲ್ಲಿ ಸುರಕ್ಷಿತವಾಗಿ ಬೆಳೆಯುತ್ತಿದೆ. ಮುಂದೊಂದಿನ ನಿನ್ನ ಮರ್ಧಿಸಲು ಮಥುರೆಗೆ ಬರುತ್ತಾನೆ" ಎಂದು ಹೇಳಿ ಯೋಗಮಾಯಿ ಮಾಯಾವಾಗುತ್ತಾರೆ.
ನಂತರ ಶ್ರೀ ಕೃಷ್ಣ ಬೃಂದಾವನದಲ್ಲಿ ಬೆಳೆದು ದೊಡ್ಡವನಾಗಿ ಮಥುರಾಗೆ ಬಂದು ಕಂಸ ಮತ್ತು ಚಾಣೂರನನ್ನು ವಧಿಸುತ್ತಾನೆ. ಬಂಧನದಲ್ಲಿದ್ದ ವಸುದೇವ, ದೇವಕಿ ಮತ್ತು ಕಂಸನ ತಂದೆಯಾದ ಉಗ್ರಸೇನ ಮಹಾರಾಜನನ್ನು ಬಂಧಮುಕ್ತಗೊಳಿಸುತ್ತಾನೆ. ಕೃಷ್ಣನಿಗೆ ದೇವಕಿ ಹೆತ್ತ ತಾಯಿಯಾದರೂ ಪ್ರೀತಿ, ಮಮತೆ ತೋರಿ ಬೆಳೆಸಿದ ತಾಯಿ ಯಶೋದೆ. ಬೃಂದಾವನದಲ್ಲಿ ಆಡಿ ಬೆಳೆದ ಶ್ರೀ ಕೃಷ್ಣನಿಗೆ ಬೃಂದಾವನದ ಜನತೆ ತೋರಿದ ಕಾಳಜಿ ಬೆಲೆಕಟ್ಟಲಾಗದ ಆಸ್ತಿಯಾಗಿದೆ.
ಶ್ರೀ ಕೃಷ್ಣನು ಹುಟ್ಟಿದ ಈ ದಿನ ಜನರು ಬಹಳ ಸಂತಸದಿಂದ ಕಾಲ ಕಳೆಯುತ್ತಾರೆ. ಈ ದಿನ ಭಕ್ತರು ದೇವಾಲಯವನ್ನು ಮತ್ತು ಮನೆಯನ್ನು ಅಲಂಕಾರ ಮಾಡುತ್ತಾರೆ. ಅಂದ ಚಂದದ ಸುವಾಸನೆಭರಿತ ಹೂವುಗಳಿಂದ ಶ್ರೀ ಕೃಷ್ಣನನ್ನು ಸಿಂಗರಿಸುತ್ತಾರೆ. ತಮ್ಮ ಮನೆಯಲ್ಲಿ ರಂಗೋಲಿಯ ಮೂಲಕ ತುಂಟ ಕೃಷ್ಣನ ಪುಟ್ಟ ಪಾದವನ್ನು ಮೂಡಿಸುತ್ತಾರೆ. ಬಾಲಕೃಷ್ಣನಿಗೆ ಇಷ್ಟವಾಗುವಂತಹ ಎಲ್ಲಾ ಬಗೆಯ ವಿಶೇಷ ತಿಂಡಿಗಳನ್ನು ಮಾಡಿ ನೈವೇದ್ಯದ ರೂಪದಲ್ಲಿಟ್ಟು ಮುಕುಂದನಿಗೆ ಅರ್ಪಿಸುತ್ತಾರೆ. ವಿಶೇಷವಾದ ಪೂಜೆ ಪುನಸ್ಕಾರಗಳ ಮೂಲಕ ಶ್ರೀ ಕೃಷ್ಣನನ್ನು ಇಂದು ಆರಾಧಿಸುತ್ತಾರೆ. ಶ್ರೀ ಕೃಷ್ಣನ ಭಜನೆ, ಕೀರ್ತನೆಯನ್ನು ಹಾಡುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ. ಕೆಲವೊಂದು ಕಡೆಗಳಲ್ಲಿ ತಮ್ಮ ಮನೆಯಲ್ಲಿರುವ ಪುಟ್ಟ ಪುಟ್ಟ ಮಕ್ಕಳಿಗೆ ರಾಧಾ ಕೃಷ್ಣನ ವೇಷ ತೊಡಿಸುತ್ತಾರೆ. ಮಾತ್ರವಲ್ಲದೆ, ಇನ್ನು ಹಲವೆಡೆಗಳಲ್ಲಿ ಮೊಸರು ಕುಡಿಕೆ ಉತ್ಸವ, ವಿವಿಧ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ, ಬಣ್ಣ ಬಣ್ಣದ ರಂಗಿನ ಪುಡಿಯನ್ನೂ, ನೀರನ್ನು ಎರಚುವ ಮೂಲಕ ಸಂಭ್ರಮದಿಂದ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ.
ನಾವೆಲ್ಲರೂ ಇಂದು ಶ್ರೀ ಕೃಷ್ಣನನ್ನು ಪೂಜಿಸಿ ಆರಾಧಿಸೋಣ. ಶ್ರೀ ಕೃಷ್ಣನು ಉಪದೇಶಿಸಿದ ಜೀವನ ಪಾಠವನ್ನು ನಮ್ಮ ಜೀವನದಲ್ಲಿ ಅಳವಡಿಸುವ ಮೂಲಕ ಸನ್ಮಾರ್ಗದಲ್ಲಿ ನಡೆಯೋಣ. ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಬ್ಬದ ಶುಭಾಶಯಗಳು.
- ವಿದ್ಯಾಪ್ರಸಾದ್
ಪತ್ರಿಕೋದ್ಯಮ ವಿದ್ಯಾರ್ಥಿನಿ
ವಿವೇಕಾನಂದ ಕಾಲೇಜು (ಸ್ವಾಯತ್ತ) ಪುತ್ತೂರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ