ಪಿಎಂ ಸೂರ್ಯಘರ್ ಯೋಜನೆಯಿಂದ ಕುಟುಂಬಗಳಿಗೆ ವಿದ್ಯುತ್ ಸ್ವಾವಲಂಬನೆ: ಸಂಸದ ಕ್ಯಾ.ಚೌಟ

Upayuktha
0

ವಿದ್ಯುತ್ ಉತ್ಪಾದಿಸಿ, ಮಾರಾಟ ಮಾಡುವ ಮೂಲಕ ಹಣ ಸಂಪಾದಿಸುವ ಯೋಜನೆ



ಮಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆಯಾದ  'ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ ' ( ಪಿಎಂ ಸೂರ್ಯ ಗೃಹ- ಉಚಿತ ವಿದ್ಯುತ್) ಯೋಜನೆಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಅನುಷ್ಟಾನಗೊಂಡಿದ್ದು, ಈ ಯೋಜನೆಯ  ಫಲಾನುಭವಿಗೆ ಮಂಗಳೂರಿನಲ್ಲಿ ಇಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಸಬ್ಸಿಡಿ ಪತ್ರವನ್ನು ವಿತರಿಸಿದರು. 


'ಎನರ್ಜಿಯ ಸೋಲಾರ್ ಕಂಪನಿ' ಯ ಸಹಯೋಗದಲ್ಲಿ ಅನುಷ್ಟಾನಗೊಂಡಿರುವ 'ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ' ಯೋಜನೆಯ 100ನೇ ಫಲಾನುಭವಿಯಾದ ಶಕ್ತಿನಗರದ ಡಾ. ಸುಧಾಕರ್ ಕುಟುಂಬಕ್ಕೆ 78000 ರೂ. ಸಬ್ಸಿಡಿ ಪತ್ರವನ್ನು ಹಸ್ತಾಂತರ ಮಾಡಿದರು. 


ಈ ವೇಳೆ ಮಾತನಾಡಿದ ಸಂಸದರು "ಸೂರ್ಯನಿಂದ ಉತ್ಪತ್ತಿಯಾಗುವ ಸೌರಶಕ್ತಿ ಬಳಸಿ ವಿದ್ಯುತ್ ಉತ್ಪಾದಿಸುವ ಮೂಲಕ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಯಲ್ಲಿ ಭಾರತ ಕಾಂತ್ರಿ ಸೃಷ್ಟಿಸಿದ ದೇಶವಾಗಿದೆ.  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 'ಪಿಎಂ ಸೂರ್ಯ ಘರ್ ಮುಫ್ತ್ ಬಿಜ್ಲಿ' ಯೋಜನೆ ಒಂದು ಕುಟುಂಬವನ್ನು ವಿದ್ಯುತ್ ಬಳಕೆ ಹಾಗೂ ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡುತ್ತದೆ. ಈ ಯೋಜನೆ ಮೂಲಕ ಅಗತ್ಯವಿರುವ ವಿದ್ಯುತ್ ನ್ನು ಉತ್ಪಾದಿಸಿ ಬಳಸುವ ಜೊತೆಗೆ ಉಳಿದ ಯುನಿಟ್ ಗಳನ್ನು ಮಾರಾಟ ಮಾಡಬಹುದಾಗಿದೆ. ಇದು ಕರ್ನಾಟಕದಲ್ಲಿ ಇರುವಂತೆ ಹಣ ಕೊಟ್ಟು ಪಡೆಯುವ ಗ್ಯಾರಂಟಿಯಲ್ಲ. ಇದು ಹಣ ಸಂಪಾದನೆ ಮಾಡಿ ತಮ್ಮ ಬದುಕಿಗೆ ಗ್ಯಾರಂಟಿ ಪಡೆಯುವಂಥ ಯೋಜನೆಯಾಗಿದೆ ಎಂದು ಹೇಳಿದರು. 


"ಪ್ರಧಾನಿಗಳ ಇಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ಮೊದಲು ಒಂದು ಗ್ರಾಮ ವಾರ್ಡ್ ಅಥವಾ ಬೂತ್ ಮಟ್ಟದಲ್ಲಿ ಮಾದರಿಯಾಗಿ ಅನುಷ್ಟಾನಗೊಳಿಸಬೇಕು.  ಸಣ್ಣ- ಸಣ್ಣ ಪ್ರದೇಶದಲ್ಲಿ ಅನುಷ್ಠಾನ ಪ್ರಕ್ರಿಯೆ ಸುಲಭವಾಗುತ್ತದೆ. ಇದರಿಂದ ಮುಂದೆ ದೊಡ್ಡ ಮಟ್ಟದಲ್ಲಿ ವಿಸ್ತರಿಸಲು ಅನುಕೂಲವಾಗುವ ಜೊತೆಗೆ ಪ್ರೇರಣೆ ನೀಡುತ್ತದೆ.  ಈ ನಿಟ್ಟಿನಲ್ಲಿ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ತಮ್ಮ ಒಂದು ಬೂತ್ ಅಥವಾ ವಾರ್ಡ್ ನಲ್ಲಿ ಈ ಯೋಜನೆಗಳನ್ನು ಅನುಷ್ಟಾನಗೊಳಿಸಿ ಮಾದರಿಯನ್ನಾಗಿ ರೂಪಿಸುವುದಕ್ಕೆ ಕಾರ್ಯಪ್ರವೃತ್ತರಾಗಬೇಕು" ಎಂದು ಸಲಹೆ ನೀಡಿದರು. 


ಇದೇ ವೇಳೆ ಶಾಸಕ ವೇದವ್ಯಾಸ್ ಕಾಮತ್, ಪಾಲಿಕೆ ಸದಸ್ಯೆ ವನಿತಾ ಪ್ರಸಾದ್, ಎನರ್ಜಿಯ ಕಂಪನಿಯ ಅರವಿಂದ್, ಸೂರಜ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. 



ಏನಿದು ಪಿಎಂ ಸೂರ್ಯ ಘರ್ ಯೋಜನೆ?

ದೇಶದ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವ ಗುರಿಯನ್ನು ಹೊಂದಿರುವ ಪ್ರಧಾನಿ ಮೋದಿಯವರ ಕನಸಿನ ಯೋಜನೆ ಇದಾಗಿದೆ. ಈ ಯೋಜನೆಯಡಿಯಲ್ಲಿ, ಜನರಿಗೆ ತಮ್ಮ ಮನೆಯ ಛಾವಣಿಯ ಮೇಲೆ ಸೌರ ಫಲಕಗಳನ್ನು ಅಳವಡಿಸಲು 78,000 ರೂ. ಗಳವರೆಗೆ ಸಬ್ಸಿಡಿಯನ್ನು ನೀಡಲಾಗುತ್ತದೆ. ಇದರ ಫಲಾನುಭವಿಗಳು ಉತ್ಪತ್ತಿಯಾದ ವಿದ್ಯುತ್ ನ್ನು ಬಳಕೆ ಮಾಡಿಕೊಂಡು ಉಳಿದ ಯೂನಿಟ್ ಗಳನ್ನು ವಿತರಣಾ ಸಂಸ್ಥೆಗೆ ಮಾರಾಟ ಮಾಡುವ ಮೂಲಕ ಲಾಭ ಗಳಿಸಬಹುದಾಗಿದೆ.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top