ಚಿತ್ತ-ಭಿತ್ತಿ: ಮರೆಯಲಾಗದ ದುರ್ಗಿ ಪಾತ್ರದ ಮಂಜುಳಾ

Upayuktha
0


ಯಾವೋನೋ ಅವ್ನು, ಅಂತ ಗ್ರಾಮೀಣ ಭಾಷೆಯಲ್ಲಿ ಬುಸುಗುಡುತ್ತಾ ಕುಡುಗೋಲು ಹಿಡಿದು, ಜಡೆ ಹಿಂದೆ ತಳ್ಳಿಕೊಂಡು ಗಂಡುಬೀರಿಯಾಗಿ, ನಾಯಕ ವೀರಭದ್ರನನ್ನೇ ಹಲವಾರು ಬಾರಿ ಎದುರಿಸುವ ದಿಟ್ಟ ಪಾತ್ರ ದುರ್ಗಿಯದು. ರಾಜಕುಮಾರ್ ಅವರಂತಹ ಅನುಭವಿ, ಪರಕಾಯ ಪ್ರವೇಶ ಮಾಡುವ ಕಲಾವಿದರೆದುರು, ಗುಟುರು ಹಾಕಿ ಜೋರಾಗಿ, ಉತ್ತರ ಕರ್ನಾಟಕದ ಗಂಡು ಭಾಷೆಯಲ್ಲಿ ಒದರಿ ಮಾತಾಡಿದ ದಿಟ್ಟ ನಟಿ ಮಂಜುಳಾ.


ಪಿ.ಬಿ. ಧುತ್ತರಗಿ ಬರೆದ ಉತ್ತರ ಕರ್ನಾಟಕದ ಎಲ್ಲ ವೃತ್ತಿರಂಗಭೂಮಿ ಕಂಪನಿಗಳ ಅಚ್ಚು ಮೆಚ್ಚಿನ ಹಾಗೂ ಸೋಲಿರದ ನಾಟಕ 'ಸಂಪತ್ತಿಗೆ ಸವಾಲ್', ಎ.ವಿ.ಶೇಷಗಿರಾವ್ ನಿರ್ದೇಶನದಲ್ಲಿ, 1974ರಲ್ಲಿ ತೆರೆಗೆ ಬಂದಾಗ ಆ ಭಾಷೆಯ ಸೊಗಡು, ಅಭಿನಯದ ಧಿಮಾಕು, ಸುಂದರ ಮೋಹಕ ನಾಯಕಿಯ ಬಿನ್ನಾಣ, ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿತ್ತು. 'ಮಯೂರ' ಚಿತ್ರದಲ್ಲಿ ಪಲ್ಲವ ರಾಜಕುಮಾರಿಯಾಗಿ, ಈ ಮೌನವ ತಾಳೆನು ಹಾಡುತ್ತ ರಥದಲ್ಲಿ ಹೊರಟ ಮಂಜುಳಾ ಪಾತ್ರ, ಪ್ರೀತಿಸಿ ಪ್ರಿಯಕರನಿಂದ ದೂರವಾದ ಲಲಿತಾ ಪಾತ್ರದಲ್ಲಿ ಮಂಜುಳಾ ಹಾಗೂ ರಾಜ್ ಉತ್ತಮ ಅಭಿನಯ ಹಾಗೂ ಜನಪ್ರಿಯ ಹಾಡುಗಳಿದ್ದ 'ಎರಡು ಕನಸು' ಚಿತ್ರ ಹಾಗೂ ಚಮಕ್ ಹುಡುಗಿಯಾಗಿ ಹುಡುಗಾಟದ ಹುಡುಗಿ ಚಿತ್ರ, ದುರಂತ ನಾಯಕಿಯಾಗಿ ಮರೆಯದ ಹಾಡು ಚಿತ್ರದ ಪಾತ್ರ ಇವೆಲ್ಲ ಅವಿಸ್ಮರಣೀಯ.


ಕನ್ನಡ ಚಿತ್ರರಂಗ ಕಂಡ ಮುದ್ದು ಮುದ್ದಾದ, ಚುರುಕಿನ, ಉತ್ಸಾಹದ ಚಿಲುಮೆಯಾಗಿದ್ದ ನಟಿ ಮಂಜುಳಾ, 80ರ ದಶಕದ ಜನಪ್ರಿಯ ಯಶಸ್ವಿ, ನಾಯಕಿಯಾಗಿ, ಕನ್ನಡ ಚಿತ್ರರಂಗದಲ್ಲಾದ ನಾಲ್ಕು ಆಘಾತಕಾರಿ ಸಾವು ಹೊಂದಿದವರಲ್ಲೂ ಒಬ್ಬಳಾಗಿದ್ದಾಳೆ. 1951ರ ಏಪ್ರಿಲ್ 5ರಂದು, ತುಮಕೂರು ಜಿಲ್ಲೆಯ ಹೊನ್ನೇನಹಳ್ಳಿಯಲ್ಲಿ, ಪೋಲಿಸ್ ಸಬ್ ಇನ್ಸ್ಪೆಕ್ಟರ್ ಎಂ.ಎಚ್.ಶಿವಣ್ಣ ಹಾಗೂ ದೇವೇರಮ್ಮ ಅವರ ಮಗಳಾಗಿ ಜನಿಸಿದಳು. ಬೆಂಗಳೂರಿನ ಪ್ರಭಾತ್ ಕಲಾವಿದರು ತಂಡದೊಂದಿಗೆ ರಂಗಪ್ರವೇಶ ಮಾಡಿದ ಈಕೆ 1966ರಲ್ಲಿ ಸಿ.ವಿ.ಶಿವಶಂಕರ್ ನಿರ್ದೇಶನದ 'ಮನೆಕಟ್ಟಿ ನೋಡು' ಚಿತ್ರದಿಂದ, ಬಾಲಕಲಾವಿದೆಯಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿ, 1967ರಲ್ಲಿ 'ಪದವೀಧರ' ಹಾಗೂ 1969ರಲ್ಲಿ 'ಎರಡು ಮುಖ' ಚಿತ್ರಗಳಲ್ಲಿ ಮುಂದುವರೆದರು.


1972ರಲ್ಲಿ ಎಂ.ಆರ್.ವಿಠ್ಠಲ್ ನಿರ್ದೇಶನದ 'ಯಾರ ಸಾಕ್ಷಿ' ಚಿತ್ರದಲ್ಲಿ ನಾಯಕಿಯಾದಳು. 1973ರಲ್ಲಿ ಡಾ. ರಾಜಕುಮಾರ್ ಅವರೊಂದಿಗೆ 'ಮೂರುವರೆ ವಜ್ರಗಳು' ಚಿತ್ರದಲ್ಲಿ ಉಪನಾಯಕಿಯಾಗಿ, 1974ರಲ್ಲಿ 'ಎರಡು ಕನಸು' ಚಿತ್ರದ ನಾಯಕಿ ಲಲಿತಾಳಾಗಿ, 'ಸಂಪತ್ತಿಗೆ ಸವಾಲ್' ಚಿತ್ರದ ದುರ್ಗಿಯಾಗಿ, ಡಾ. ರಾಜ್ ಜೊತೆಗೆ ಸರಿಸಾಟಿ ಅಭಿನಯಿಸಿ ಸೈ ಅನಿಸಿಕೊಂಡರು.


'ಭಕ್ತ ಕುಂಬಾರ' ಚಿತ್ರದಲ್ಲಿ 2ನೇ ಹೆಂಡತಿ ಮಂಜುವಾಗಿ, ಶ್ರೀನಿವಾಸ ಕಲ್ಯಾಣದಲ್ಲಿ ಪದ್ಮಾವತಿಯಾಗಿ, 1975ರಲ್ಲಿ 'ಮಯೂರ' ಚಿತ್ರದಲ್ಲಿ ಪಲ್ಲವ ರಾಜಕುಮಾರಿಯಾಗಿ ದಾರಿತಪ್ಪಿದ ಮಗ ಚಿತ್ರದಲ್ಲಿ ನಾಯಕಿಯಲ್ಲಿ ಒಬ್ಬಳಾಗಿ, 1981ರಲ್ಲಿ 'ನೀ ನನ್ನ ಗೆಲ್ಲಲಾರೆ' ಚಿತ್ರದಲ್ಲಿ ಸವಾಲಿನ ಅಭಿನಯ ನೀಡಿದ್ದಾರೆ. 1974ರಲ್ಲೇ ವಿಷ್ಣುವರ್ಧನ್ ಜೊತೆ ನಾಯಕಿಯಾಗಿ, 'ಪ್ರೊ.ಹುಚ್ಚುರಾಯ' ಚಿತ್ರದಲ್ಲಿ, "ದೂರ ದೂರ ಅಲ್ಲೇ ನಿಲ್ಲು" ಹಾಡುತ್ತಾ, 1976ರಲ್ಲಿ ಬಂಗಾರದ ಗುಡಿ, 1977ರಲ್ಲಿ ಬಯಸದೇ ಬಂದ ಭಾಗ್ಯ, ಗಲಾಟೆ ಸಂಸಾರ, ಕಿಟ್ಟು ಪುಟ್ಟು, ಸೊಸೆ ತಂದ ಸೌಭಾಗ್ಯ, 78ರಲ್ಲಿ ವಸಂತಲಕ್ಷ್ಮಿ, ಸಿಂಗಾಪೂರಿನಲ್ಲಿ ರಾಜಾಕುಳ್ಳ, 81ರಲ್ಲಿ ಗುರುಶಿಷ್ಯರು, ಸ್ನೇಹಿತರ ಸವಾಲ್ ಚಿತ್ರಗಳಲ್ಲಿ ಅಭಿನಯಿಸಿ ಅತ್ಯಂತ ಅನುರೂಪದ ಯಶಸ್ವೀ ಜೋಡಿ ಎನಿಸಿದರು.



ಶ್ರೀನಾಥ್ ಅವರ ಜೊತೆ 35 ಚಿತ್ರಗಳಲ್ಲಿ ಅಭಿನಯಿಸಿ ಅತ್ಯಂತ ಯಶಸ್ವಿ ಶೃಂಗಾರದ ಜೋಡಿ ಎನಿಸಿದ್ದಾರೆ. ಆ ಚಿತ್ರಗಳು 1975ರಲ್ಲಿ 'ಹೆಣ್ಣು ಸಂಸಾರದ ಕಣ್ಣು', 1976ರಲ್ಲಿ ಹುಡುಗಾಟದ ಹುಡುಗಿ, ಬದುಕು ಬಂಗಾರವಾಯ್ತು, ಬೆಸುಗೆ, ಕನಸು ನನಸು, 78ರಲ್ಲಿ ಗಂಡ-ಹೆಂಡತಿ, ಹಳ್ಳಿ ಹೈದ, ವಸಂತಲಕ್ಷಿ, 79ರಲ್ಲಿ ಪ್ರೀತಿ ಮಾಡು ತಮಾಷೆ ನೋಡು, 80ರಲ್ಲಿ ಪಾಯಿಂಟ್ ಪರಿಮಳ, 'ಪಟ್ಟಣಕ್ಕೆ ಬಂದ ಪತ್ನಿಯರು' ಮುಂತಾದವು. ಶಂಕರ್‌ನಾಗ್ ಜೊತೆಗೆ 79ರಲ್ಲಿ ಸೀತಾರಾಮು, 80ರಲ್ಲಿ 'ಮೂಗನ ಸೇಡು' ಚಿತ್ರಗಳಲ್ಲಿ ಸಾಹಸಗಳನ್ನೂ ಪ್ರದರ್ಶಿಸಿದ ನಾಯಕಿಯಾಗಿದ್ದಾರೆ.


1986ರಲ್ಲಿ ಇವರು ಅಭಿನಯಸಿದ ಕೊನೆಯ ಚಿತ್ರ 'ಅಪರಾಧಿ ನಾನಲ್ಲ'. ಒಟ್ಟೂ 100ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದ ಮೊದಲ ಸಿನಿಮಾ ಸ್ಕೋಪ್ ಚಿತ್ರ ಸೊಸೆ ತಂದ ಸೌಭಾಗ್ಯ, ವಿದೇಶಗಳಲ್ಲಿ ಚಿತ್ರಣಗೊಂಡ ಮೊದಲ ಚಿತ್ರ ಸಿಂಗಾಪೂರಿನಲ್ಲಿ ರಾಜಾಕುಳ್ಳ. ಉತ್ತರ ಕರ್ನಾಟಕದ ಜನಪ್ರಿಯ ರಂಗನಾಟಕಗಳಾದ ಸೊಸೆ ತಂದ ಸೌಭಾಗ್ಯ, 'ಬದುಕು ಬಂಗಾರವಾಯ್ತು' 'ಪಟ್ಟಣಕ್ಕೆ ಬಂದ ಪತ್ನಿಯರು' ಹಾಗೂ 'ಗುಣ ನೋಡಿ ಹೆಣ್ಣು ಕೊಡಿ' ಚಿತ್ರಗಳ ನಾಯಕಿ ಇವರೇ. "ದಾರಿ ಕಾಣದಾಗಿದೆ ರಾಘವೇಂದ್ರನೇ" ಎಂಬ ಜನಪ್ರಿಯ ಗೀತೆ ಇದ್ದ 'ದೀಪಾ' ಚಿತ್ರದ ಉತ್ತಮ ಅಭಿನಯಕ್ಕಾಗಿ ಫಿಲಂಫೇರ್ ಪ್ರಶಸ್ತಿ ಪಡೆದಿದ್ದಾರೆ. 1975ರಲ್ಲಿ ತಮಿಳಿನ 'ಮಾಲೈ ಸೂಡವಾ', 'ಎಡುಪ್ಪರ ಕೈ ಪಿಳೈ' ಹಾಗೂ 'ಪುದು ವೆಳ್ಳಂ' ಎಂಬ 3 ಚಿತ್ರಗಳಲ್ಲಿ, 75ರಲ್ಲಿ 'ತೋಟ ರಾಮುಡು' ಹಾಗೂ ಪೂಜ, 80ರಲ್ಲಿ 'ಆಡಾಡಿ ಗಡಪ ದತಿಥೆ' ಎಂಬ 3 ತೆಲುಗು ಚಿತ್ರಗಳಲ್ಲೂ, ರಾಮಕೃಷ್ಣ, ರಜನೀಕಾಂತ್ ಹಾಗೂ ಕಮಲ ಹಾಸನ್ ಜೊತೆ ಅಭಿನಯಿಸಿದ್ದಾರೆ.


ನಿರ್ದೇಶಕ ಅಮೃತಂ ಅವರನ್ನು ಮದುವೆಯಾಗಿ ಅಭಿಷೇಕ ಎಂಬ ಮಗನನ್ನು ಪಡೆದರೂ, ಅವಕಾಶಗಳು ಕಡಿಮೆಯಾಗಿ, ಹಣಕಾಸಿನ ತೊಂದರೆಯಿAದ ಮಾನಸಿಕ ಖಿನ್ನತೆಗೆ ಒಳಗಾಗಿ, ಆತ್ಮಹತ್ಯೆ ಎಂದು ಬಿಂಬಿಸಲಾಗಿರುವ, ಮನೆಯಲ್ಲಿಯ ಸ್ಟವ್ ಸಿಡಿತದಿಂದ ದುರ್ಮರಣ ಹೊಂದಿದಾಗ, ಈ ಖ್ಯಾತ ನಟಿಯ ವಯಸ್ಸು ಕೇವಲ 35 ವರ್ಷ 5 ತಿಂಗಳು 7 ದಿನ ಮಾತ್ರ. ಈಕೆಯು ಕನ್ನಡ ರಸಿಕರನ್ನಗಲಿ 35 ವರ್ಷ ದಾಟಿವೆ. 1981-82ರಲ್ಲಿ ಬೆಂಗಳೂರಿನಲ್ಲಿ ಇವರ ಮನೆಗೆ ನಾನು, ನನ್ನ ತಂದೆ ಎನ್.ಎಸ್.ವಾಮನ್, ನನ್ನ ಪತ್ನಿ ಉಮಾ ರಮೇಶ್, ನನ್ನ ಮೈದುನ ಎನ್.ವಿ.ಬಾಲಚಂದ್ರ ಅವರೊಂದಿಗೆ ಹೋಗಿ ಮಂಜುಳಾ ಅವರೊಂದಿಗೆ ಹಲವಾರು ಗಂಟೆಗಳ ಕಾಲ ಮಾತನಾಡಿ, ಅವರ ಸಂದರ್ಶನ ಧ್ವನಿಮುದ್ರಿಸಿಕೊಂಡಿದ್ದ ಆ ನೆನಪು ನನಗೆ ಮರೆಯಲಾಗದ್ದು. ಅಂದಿನ ಆ ಧ್ವನಿಮುದ್ರಿತ ಕ್ಯಾಸೆಟ್ ಸಹ ಈಗ ದುರ್ಬಲವಾಗಿ ಅಂಟಿಕೊಳ್ಳುತ್ತಾ, ಧ್ವನಿ ಸ್ವಷ್ಟತೆ ಕಳೆದುಕೊಂಡಿದೆ. 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top