ಮಂತ್ರಾಲಯ ಗುರುರಾಯರ ಮಹಿಮೆ ಅಪಾರ. ಜಗತ್ತಿನ ಎಲ್ಲ ಕಡೆಗಳಲ್ಲಿ ಅವರ ಭಕ್ತರಿದ್ದಾರೆ. ಅವರ ಮೇಲೆ ಅಚಲ ಭಕ್ತಿ ಶ್ರದ್ದೆ ಇಟ್ಟರೆ ಅಸಾಧ್ಯವೂ ಕೂಡ ಸಾಧ್ಯ ಎಂಬುದು ಜನಜನಿತ. ಇದೊಂದು ಅಪರೂಪದ ಘಟನೆ ನಡೆದದ್ದು ಡಾಕ್ಟರ್ ರೇ ಬರೆದ ಲೇಖನ ಇದು, ಬಹಳ ಹಳೆಯ ಕಥೆ ಓದಿದ್ದನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ.
ಅದು ಬಹಳ ವರ್ಷಗಳ ಹಿಂದಿನ ಮಾತು. ಒಬ್ಬ ಡಾಕ್ಟರ್ ದೈವೋಪಾಸಕರಾಗಿದ್ದರು. ಅವರು ಪ್ರತಿ ವರ್ಷ ಡಿಸೆಂಬರ್ ಅಥವಾ ಜನೆವರಿ ತಿಂಗಳಲ್ಲಿ ಮಂತ್ರಾಲಯಕ್ಕೆ ಶ್ರೀ ಗುರುರಾಯರ ದರ್ಶನ ಮಾಡಿ, ಮೂರು ದಿನ ಅಲ್ಲಿದ್ದು ಅಷ್ಟೋತ್ತರ ಪ್ರದಕ್ಷಿಣೆ, ನಮಸ್ಕಾರ ಎಲ್ಲಾ ಸೇವೆಗಳನ್ನೂ ಪೂರೈಸಿದ ನಂತರ ಊರಿಗೆ ವಾಪಾಸ್ ಬರುತ್ತಿದ್ದರು.
ಪ್ರತಿವರ್ಷದಂತೆ ಆ ವರ್ಷ ಕೂಡ ಗುರುರಾಯರ ದರ್ಶನಕ್ಕೆ ಮಂತ್ರಾಲಯಕ್ಕೆ ಹೋಗಿ ಬೆಳಿಗ್ಗೆ ಸ್ನಾನ ಸಂಧ್ಯಾವಂದನೆ, ಪ್ರದಕ್ಷಿಣೆ, ನಮಸ್ಕಾರ ಎಲ್ಲವೂ ಮುಗಿಸಿ ಮಧ್ಯಾಹ್ನ ಪ್ರಸಾದ ಸ್ವೀಕರಿಸಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು ಮತ್ತೆ ಸಂಜೆಗೆ ತುಂಗಭದ್ರಾ ನದಿ ತೀರದಲ್ಲಿ ಬಂದು ಸಂಧ್ಯಾವಂದನೆ ಮಾಡುತ್ತಿದ್ದರು. ಮತ್ತೆ ರಾತ್ರಿ ರಾಯರ ರಥೋತ್ಸವ, ತೊಟ್ಟಿಲು ಸೇವೆಯ ಬಳಿಕ ತಮ್ಮ ರೂಮ್ ಗೆ ಹೋಗಿ ಮಲಗು ತ್ತಿದ್ದರು. ಅವತ್ತೊಂದು ದಿನ ಸಂಜೆ ಸಂಧ್ಯಾವಂದನೆ ಮಾಡಿ ಮುಗಿಸುವಾಗ, ಒಬ್ಬ ವಯಸ್ಸಾದ ದಂಪತಿಗಳು ಮಂತ್ರಾಲಯಕ್ಕೆ ಬಂದಿದ್ದರು. ಚಿಕ್ಕ ವಯಸ್ಸಿನ ಸುಮಾರು 10 ವರ್ಷದ ಮೊಮ್ಮಗನನ್ನು ಕರೆದುಕೊಂಡು ಬಂದಿದ್ದರು.ಆ ಮಗು ತುಂಬಾ ನಿಸ್ತೇಜವಾಗಿ, ಕೈ ಕಾಲುಗಳು ಅಡ್ಡಾಡಲು ಶಕ್ತಿಯಿಲ್ಲದಂತೆ ಕಾಣುತ್ತಿದ್ದನು. ಆ ವೃದ್ಧರು ಹೇಳಿದಂತೆ ಅವನಿಗೆ ಪೋಲಿಯೋ ಅಟ್ಯಾಕ್ ಆಗಿ ಪೂರ್ತಿಯಾಗಿ ಶಕ್ತಿಹೀನನಾಗಿದ್ದ. ಡಾಕ್ಟರ್ ಈ ಮಗುವಿನದದೇ ಚಿಂತೆಯಾಗಿದೆ. ಇವನಿಗೆ ಎಂದು ಅರಾಮ್ ಆಗಿ ಎಲ್ಲ ಮಕ್ಕಳಂತಾಗುತ್ತಾನೋ ಎಂದರು.
ಡಾಕ್ಟರ್ ಹೇಳಿದರು, ಪೋಲಿಯೋ ಆದ್ರೆ ಮುಗೀತು ತುಂಬಾ ಕಠಿಣ ಅವನಿಗೆ ಪುನಃ ಮೊದಲಿನ ಹಾಗೇ ಆಗೋದು ಎಂದರು. ಆದರೂ ಆ ವೃದ್ಧರು ರಾಯರ ಮೇಲೆ ನಂಬಿಕೆ ಇಟ್ಟು ಪ್ರದಕ್ಷಿಣೆ, ನಮಸ್ಕಾರ ಹಾಕಿ ಪ್ರಾರ್ಥನೆ ಮಾಡುತ್ತಿದ್ದರು. ಎರಡು ದಿನವೂ ಸಂಜೆ ಡಾಕ್ಟರ್ ಗೆ ಭೇಟಿಯಾದರು. ಡಾಕ್ಟರ್ ಮೂರನೇ ದಿನ ತಮ್ಮ ಸೇವೆ ಮುಗಿಸಿ ಮರುದಿನ ತಮ್ಮ ಊರಿಗೆ ಹೊರಡುವವರಿದ್ದರು. ಅಂದು ರಾತ್ರಿ ಫಲಹಾರ ಸೇವಿಸಿ ಇನ್ನೇನು ಮಲಗಬೇಕು ಎನ್ನುವಷ್ಟ್ರಲ್ಲಿ ಆ ವೃದ್ಧರು ಓಡೋಡುತ್ತ ಡಾಕ್ಟರ್ ಬಳಿ ಬಂದರು ಡಾಕ್ಟರ್ ದಯವಿಟ್ಟು ಬನ್ನಿ ನನ್ನ ಮೊಮ್ಮಗ ಹೇಗ್ ಹೇಗೋ ಮಾಡ್ತಿದ್ದಾನೆ. ಮಗ ಬೇಡವೆಂದರೂ ಕೇಳದೆ ಇಬ್ಬರೂ ಕೊನೆಯ ಪ್ರಯತ್ನ ಎಂದು ರಾಯರನ್ನು ನಂಬಿ ಬಂದಿದ್ದೇವೆ.. ನಮಗೆ ಈಗ ನೀವೇ ದಾರಿ ತೋರಿಸಬೇಕು ಎಂದರು.
ಡಾಕ್ಟರ್ ಹೇಳಿದರು, ಸರ್ ಕ್ಷಮಿಸಿ, ನಾನು ಸಾದಾ ಜ್ವರ, ನೆಗಡಿ ಕೆಮ್ಮಿನ ಮಾತ್ರೆಗಳನ್ನು ಮಾತ್ರ ಇಲ್ಲಿ ತಂದಿದ್ದೇನೆ, ನಿಮ್ಮ ಮಗುವನ್ನು ಪರೀಕ್ಷಿಸಿ ಹೇಳಲು ನನ್ನ ಬಳಿ ಯಾವುದೇ ಸಲಕರಣೆಗಳಿಲ್ಲ ಎಂದರು. ಈಗ ನೀವೇ ನಮಗೆ ದಿಕ್ಕು ನೀವು ಯಾವ ಮಾತ್ರೆ ಕೊಡ್ತಿರೋ ಕೊಡ್ರಿ, ನಾನು ಅದನ್ನು ರಾಯರ ಮೃತ್ತಿಕೆ ಮತ್ತು ಪಾದೋದಕ ಸೇರಿಸಿ ಕೊಡುತ್ತೇನೆ, ನಮಗೆ ಇರುವುದು ಇದೊಂದೇ ದಾರಿ ಎಂದರು ದೀನರಾಗಿ.
ಡಾಕ್ಟರ್ ಕೂಡ ಅವರ ಕಳಕಳಿಯ ಮಾತುಗಳನ್ನು ಕೇಳಿ, ತಮ್ಮ ಬಳಿ ಇರುವ ನಾರ್ಮಲ್ ಜ್ವರದ, ನೆಗಡಿ ಕೆಮ್ಮಿನ ಮಾತ್ರೆ ಕೊಟ್ಟು, ರಾಯರೇ ನೀವೇ ನಮಗೆ ದಿಕ್ಕು. ನೀವೇ ಕಾಪಾಡಬೇಕು ಎಂದು ಮನದಲ್ಲಿ ಪ್ರಾರ್ಥನೆ ಮಾಡಿ ಅವರಿಗೆ ಕೊಟ್ಟರು. ತಾವೂ ಅವರೊಂದಿಗೆ ಅವರಿದ್ದ ರೂಮ್ ಗೆ ಹೋದರು. ಮಗು ತುಂಬಾ ಒದ್ದಾಡುತ್ತಿತ್ತು. ಹೇಗೋ ಅವನನ್ನು ಗಟ್ಟಿಯಾಗಿ ಹಿಡಿದು, ಮಾತ್ರೆ, ಮೃತ್ತಿಕೆ ಮತ್ತು ಪಾದೋದಕ ಸೇರಿಸಿ ಮಗುವಿನ ಗಂಟಲಲ್ಲಿ ಹಾಕಿದರು. ಇಬ್ಬರೂ ವೃದ್ಧರ ಕಣ್ಣಲ್ಲಿ ನೀರು ಸುರಿಯಿತು. ಮಗ ರಿಸ್ಕ್ ತಗೋಳೋದು ಬೇಡ, ಹೋಗಬೇಡಿ ಎಂದರೂ ಕೇಳದೇ ಬಂದೆವು. ಈಗ ಏನಾಗುತ್ತೋ ಎಂದು ಕಣ್ಣೀರಿಡುತ್ತ ಹೇಳಿದರು. ಇದನ್ನು ನೋಡಿದ ಡಾಕ್ಟರ್ ಗೂ ದುಃಖವಾಯಿತು. ಏನಾದರೂ ಆಗಲಿ ಆದರೆ ಮಗು ಮೊದಲಿನ ಹಾಗೇ ಆಗಲಿ ಎಂದು ರಾಯರಲ್ಲೇ ಮೊರೆಯಿಟ್ಟರು. ಸ್ವಲ್ಪ ಸಮಯದಲ್ಲಿ ಮಗು ಆರಾಮಾಗಿ ಮಲಗಿತು.
ಡಾಕ್ಟರ್ ಕೂಡ ರೂಮ್ ಗೆ ಹೋಗಿ ಮಲಗಿದರು.
ಮರುದಿನ ಬೆಳಿಗ್ಗೆ ಸ್ನಾನ ಮುಗಿಸಿ ಊರಿಗೆ ಹೊರಡಲು ತಯಾರಾಗಿ ನಿಂತರು. ಅಷ್ಟ್ರಲ್ಲಿ ಆ ವೃದ್ಧರು ಓಡುತ್ತ ಬಂದು ಆನಂದಭಾಷ್ಪ ಸುರಿಸುತ್ತ ಹೇಳಿದರು ರಾಯರ ಮಹಿಮೆ ನೋಡಿದಿರಾ ಡಾಕ್ಟರ್ ನಮ್ಮ ಮೊಮ್ಮಗ ಮೊದಲು ಇದ್ದಂತೆ ಆಗಿದ್ದಾನೆ..ಕೈ ಕಾಲುಗಳು ಸರಿಯಾಗಿವೆ ಈಗ. ಎದ್ದು ನಿಲ್ಲುತ್ತಿದ್ದಾನೆ, ನಡೀತಾನೇ ಎಂದರು. ಡಾಕ್ಟರ್ ಗೆ ಪರಮಾಶ್ಚರ್ಯ ಆಯಿತು. ಅದು ಹೇಗೆ ಸಾಧ್ಯ ಸಾದಾ ಜ್ವರ, ನೆಗಡಿ ಕೆಮ್ಮಿನ ಗುಳಿಗೆ ಕೊಟ್ಟಿದ್ದೆ. ಇದು ಹೇಗೆ ಸಾಧ್ಯ ಎಂದುಕೊಂಡು ಅವರ ಜೊತೆಗೆ ಅವರಿದ್ದ ರೂಮ್ ಗೆ ಹೋಗಿ ಪರೀಕ್ಷಿಸಿದರು. ನಿಜಕ್ಕೂ ಮಗುವಿಗೆ ಅರಾಮ್ ಆಗಿತ್ತು ಕಾಲುಗಳಲ್ಲಿನ ವಕ್ರತೆ ಹೋಗಿ ಚೆನ್ನಾಗಿ ಆಗಿದ್ದವು. ಮಗು ಒಂದೆರಡು ಹೆಜ್ಜೆ ನಡೆದಾಡಿತು.
ಡಾಕ್ಟರ್‌ಗೆ ನಂಬಲಸಾಧ್ಯವಾಯ್ತು.. ಕೊನೆಗೂ ರಾಯರು ನಂಬಿದವರನ್ನು ಕೈ ಬಿಡೋದಿಲ್ಲ ಎಂಬುದು ಅತ್ಯಂತ ಸತ್ಯ ಎಂದು ಅರಿತುಕೊಂಡರು.
ಅಂದಿನಿಂದ ಅವರು ವರ್ಷದಲ್ಲಿ ಎರಡು ಬಾರಿ ಮಂತ್ರಾಲಯಕ್ಕೆ ಬಂದು ಹೋಗತೊಡಗಿದರು. ಅವರಿಗೆ ರಾಯರಲ್ಲಿ ಪೂರ್ತಿ ವಿಶ್ವಾಸ ಬಂದಿತು.
-ರೇಖಾ ಮುತಾಲಿಕ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ