ಶ್ರೀ ಸತ್ಯಾತ್ಮವಾಣಿ-22: ರಾಘವೇಂದ್ರ ಸ್ವಾಮಿಗಳ ಜ್ಞಾನದ ಸ್ಮರಣೆ

Upayuktha
0

 

ರಾಯರ ಅದ್ಭುತ ಜ್ಞಾನವನ್ನು ನಾವು ತಿಳಿಯಬೇಕು. ಅವರ ಲೋಕೋದ್ಧಾರ ಮಾಡಲು ಅವರು ಎಷ್ಟೆಲ್ಲ ಸೇವೆಯನ್ನು ತಪಸ್ಸನ್ನು ಮಾಡಿದ್ದಾರೆ ಎಂದು ತಿಳಿಯಲು ನಾವು ಸಮರ್ಥರಿಲ್ಲ ಆದರೆ ಅವರ ಗ್ರಂಥಗಳು ವ್ಯಾಖ್ಯಾನಗಳನ್ನು ತಿಳಿದರೆ ಅವರ ಮಹಿಮೆಯ ಅರಿವು ಅವರ ತಪಸ್ಸಿನ ಮಹತ್ವ ನಮಗೆ ತಿಳಿಯುತ್ತದೆ. 


ಶ್ರೀಮದಾಚಾರ್ಯರ ಅಣುಭಾಷ್ಯದ ಬಗೆಗೆ ನಾರಾಯಣ ಪಂಡಿತಾಚಾರ್ಯರು ಹೇಳುತ್ತಾರೆ, ಹೇಗೆ ಶ್ರೀ ಕೃಷ್ಣ ಪರಮಾತ್ನನು ತನ್ನ ಪುಟ್ಟ ಬಾಯಲ್ಲಿ ಪ್ರಪಂಚವನ್ನು ತೋರಿದ್ದರು ಅದೇ ರೀತಿಯಲ್ಲಿ ಆಚಾರ್ಯರು ತಮ್ಮ ಅಣು ಭಾಷ್ಯದಲ್ಲಿ ಅಣಕ ಮಾಡಿ ಹೇಳಿದ್ದಾರೆ. ರಾಯರ ಅದ್ಭುತ ಕೊಡುಗೆ ಎಂದರೆ ಅಪೌರುಷೇಯವಾದ ವೇದಗಳಿಂದ ಹಿಡಿದು ಬ್ರಹ್ಮಸೂತ್ರ ಭಾಷ್ಯಗಳಿಗೆ ಗೀತೆಗೆ ಆಚಾರ್ಯರ ಗ್ರಂಧಗಳಿಗೆ ತಮ್ಮ ವ್ಯಾಖ್ಯೆಯನ್ನು ಬಹಳ ಸೊಗಸಾಗಿ ಸರಳವಾಗಿ ಮಾಡಿದ್ದಾರೆ. ಬ್ರಹ್ಮಸೂತ್ರ ಭಾಷ್ಯಕ್ಕೆ ತಂತ್ರದೀಪಿಕಾ, ಅಣು ಭಾಷ್ಯಕ್ಕೆ ತತ್ವ ಮಂಜರಿ, ತತ್ವ ಪ್ರಕಾಶಿಕೆಗೆ ಭಾವದೀಪ, ಅನುವ್ಯಾಖ್ಯಾನಕ್ಕೆ ಜಯತೀರ್ಥರು ಬರೆದ ಶ್ರೀಮನ್‌ ನ್ಯಾಯಸುಧಾಕ್ಕೆ  ಪರಿಮಳಾ ಗ್ರಂಥ, ವ್ಯಾಸರ ಚಂದ್ರಿಕಾ ಗ್ರಂಥಕ್ಕೆ ಕೂಡ ವ್ಯಾಖ್ಯಾನವನ್ನು ಬರೆದಿದ್ದಾರೆ ಇಂತಹ ಮಹಾನ್‌ ಗ್ರಂಥಗಳ ರಚನೆಯನ್ನು ಮಾಡಿ ನಮಗೆ ಮಹದೋಪಕಾರವನ್ನು ಮಾಡಿದ್ದಾರೆ. ಭಗವದ್ಗೀತೆಗೆ ವ್ಯಾಖ್ಯಾನ ರೂಪದಲ್ಲಿ ಜಯತೀರ್ಥರು ಬರೆದ ಪ್ರಮೇಯ ದೀಪಿಕಾಗೆ, ಹಾಗೂ ನ್ಯಾಯ ದೀಪಿಕಾಗಳಿಗೆ ಕೂಡ ರಾಯರ ವ್ಯಾಖ್ಯಾನ ದೊರೆಯುತ್ತದೆ. ಗೀತಾ ವಿವೃತಿಗೆ ಗೀತಾ ಸಂಗ್ರಹ ಎಂಬ ಗ್ರಂಥವನ್ನು ಬರೆದಿದ್ದಾರೆ. ಅನೇಕ ಶ್ಲೋಕಗಳನ್ನು ಗ್ರಂಥಗಳನ್ನು ನಮಗೆನೀಡಿ ಉಪಕಾರ ಮಾಡಿದ್ದಾರೆ.


ಅಣುಭಾಷ್ಯಕ್ಕೆ ರಾಯರು ಬರೆದು ವ್ಯಾಖೆಯ ಗ್ರಂಥ ತತ್ವ ಮಂಜರಿ ಎಂಬ ಗ್ರಂಥ ಅದರಲ್ಲಿ ಭಗವಂತ ಆನಂದಮಯನಾಗಿದ್ದಾನೆ ಎಂದು ಸೂತ್ರಕಾರರು ಹೇಳುತ್ತಾರೆ. ಸಾಮಾನ್ಯವಾದ  ಮಾತಿನಲ್ಲಿ ಆನಂದ ಮಯ ಎಂದರೆ ಇವನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆನಂದವಿದೆ ಎಂದು ಅರ್ಥ, ಈ ವಾಕ್ಯ ತಪ್ಪಾಗಿ ಅರ್ಥೈಸಲು ಸಾಧ್ಯವಿದೆ ಹೆಚ್ಚು ಇದೆ ಅಂದರೆ ಸ್ವಲ್ಪ ದುಃಖವಿದೆ ಎಂದಲ್ಲ, ಹೆಚ್ಚು ಎಂದರೆ ಬೇರೆಲ್ಲರಿಗಿಂತ ಹೆಚ್ಚು ಆನಂದ ಇರುವವನು ಎಂದು ರಾಯರು ಹೇಳುತ್ತಾರೆ. ಇದಕ್ಕೆ ಉದಾಹರಣೆ ಸೂರ್ಯನಲ್ಲಿ ಪ್ರಕಾಶ ಹೆಚ್ಚು ಇದೆ ಎಂದರೆ ಅವನಲ್ಲಿ ಕತ್ತಲು ಕೂಡ ಇದೆ ಎಂದು ಹೇಗೆ ಅರ್ಥ ಮಾಡಿಕೊಳ್ಳುವುದಿಲ್ಲವೂ ಹಾಗೆ ಭಗವಂತ ಆನಂದಮಯ ಎಂದರೆ ಪ್ರಪಂಚದಲ್ಲಿ ಎಲ್ಲರಿಗಿಂತ ಹೆಚ್ಚು ಆನಂದ ಮಯನಾದನು ಭಗವಂತ ಎಂದು ಅರ್ಥವಾಗುತ್ತದೆ ಎಂದು ರಾಯರು ನಮಗೆ ತಿಳಿಸಿಕೊಡುತ್ತಾರೆ.



ಪೂರ್ಣಾನಂದಮಯ ಎಂದರೆ ಯಾರು ಪರಿಪೂರ್ಣವಾದ ಆನಂದವನ್ನು ಹೊಂದಿರುವನೋ ಅವನು ಆನಂದಮಯ ಎಂದು ಅರ್ಥ. ಆಗಾಗ ಭಗವಂತ ಆನಂದಮಯ ಎಂದು ಸ್ಮರಣೆ ಮಾಡುತ್ತಿದ್ದರೆ ಭಗವಂತ ನಮ್ಮ ದುಃಖವನ್ನು ದೂರ ಮಾಡುತ್ತಾನೆ ಎಂದು ಹೇಳುತ್ತಾರೆ. ತೈತರೀಯ ಉಪನಿಷತ್ತಿನಲ್ಲಿ ಆನಂದಮಯ ಎನ್ನುತ್ತಾರೆ ಅದೇ ಗ್ರಂಥದಲ್ಲಿ ಆನಂದಮಯವಾದ ಪುಚ್ಛ (ಪಾದ) ಎಂಬ ಮಾತು ಬರುತ್ತದೆ. ಆಚಾರ್ಯರು ಆನಂದಮಯ ಎಂದು ಏಕ ವಾಕ್ಯದಲ್ಲಿ ಹೇಳಿದ್ದಾರೆ, ರಾಯರು ಅದೇ ವಾಕ್ಯವನ್ನು ದೂರವಾಗಿರುವ ಭಕ್ತರನ್ನು ಹತ್ತಿರ ಕರೆದು ಆಶೀರ್ವದಿಸುವಂತೆ ಆನಂದಮಯ ಎಂಬ ವರ್ಣನೆಯನ್ನು ಚಮತ್ಕಾರ ರೂಪದಲ್ಲಿ ಮಾಡುತ್ತಾರೆ. ದೇವರು ಬೇರೆ ಅಲ್ಲ ಅವನ ಅವಯಮಗಳು ಬೇರೆ ಅಲ್ಲ ಎಂದು ಹೇಳುತ್ತಾರೆ. ಪರಮಾತ್ಮನ ಮೂಲ ರೂಪ, ಅಂಶ ರೂಪಗಳಿಗೆ ಮಾತ್ರ ಏಕೆ ಅವನ ಅವಯವಗಳಿಗೂ  ಸಮನಾದ ಶಕ್ತಿ ಇದೆ ಎಂದು ಹೇಳುತ್ತಾ ಪರಮಾತ್ಮನ ಮೂಲ ರೂಪದ ಒಂದು ಕೃಷ್ಣ ಕೇಶದ ರೂಪದಲ್ಲಿ ಶ್ರೀ ಕೃಷ್ಣ ಪರಮಾತ್ನನ ಅವತಾರ ರೂಪಕ್ಕೆ ಸಮನಾದ ಶಕ್ತಿ ಇದೆ, ನಾನಾ ವಿಧ ಅದ್ಭುತ ಮಹಾತ್ಮೆ ತೋರುವ ಭಗವಂಥನಿಗೂ ಅವನ ಅವಯವಗಳಿಗೂ ಒಂದೇ ರೀತಿಯ ಶಕ್ತಿ ಇದೆ ಎಂದು ರಾಯರು ತಿಳಿಸುತ್ತಾರೆ.



ಭಗವಂತ ಆನಂದಮಯ ಎಂದು ತಿಳಿಯಬೇಕಾದರೆ, ಪ್ರಸಂಗ ಪರಿಸ್ಥಿತಿಗೆ ಶಬ್ದಗಳ ಅರ್ಥವನ್ನು ಮಾಡಿಕೊಳ್ಳುವಂತೆ ಹಿಂದೆ ಮುಂದಿನ ಮಾತನ್ನು ತಿಳಿದು ಅರ್ಥ ಮಾಡಿಕೊಳ್ಲಬೇಕು. ದೇವರು ಅನಾದಿಕಾಲದಿಂದಲೂ ಅನಂತ ಕಾಲದವರಿಗೂ ಏಕ ರೂಪನಾಗಿ ಇರುತ್ತಾನೆ ಅವನಿಗೆ ಹುಟ್ಟು, ಸಾವು, ಮುಪ್ಪು, ಶ್ರಮ, ರೋಗ ರುಜಿನಗಳು ಇರುವುದಿಲ್ಲ, ದೇವರು ಯಾವುದೇ ಅನ್ನ ಅಥವಾ ಅಮೃತ ಕುಡಿದು / ತಿಂದು ದೇವರಾಗಿಲ್ಲ. ದೇವರ ಗುಣಗಳನ್ನು ಹೇಳುವ ಶಬ್ದಗಳಿಂದ ಅವನನ್ನು ವರ್ಣಿಸಬೇಕು ಶ್ರೀಮದಾಚಾರ್ಯರು, ಟೀಕಾಚಾರ್ಯರು ಹಗೂ ರಾಯರು ಉತ್ತರವಾಗಿ ಹೇಳಿದ್ದಾರೆ. ದೇವರು ದೋಷಗಳು ಇರುವುದೇ ಇದ್ದ ಕಾರಣ ಅವನ ಗುಣಗಳಿಗೆ ಪ್ರಸಿದ್ಧನಾಗಿದ್ದಾನೆ ಎಂದು ಆಚಾರ್ಯರು ಹೇಳುತ್ತಾರೆ.



ಅನ್ನಕ್ಕೆ ಅನ್ನ ಎನ್ನುವದಕ್ಕೆ ಅರ್ಥ ಯಾರಿಗೂ ಗೊತ್ತಿಲ್ಲ ಯಾವುದರನ್ನು ಸೇವಿಸದೇ ನಾವು ಬದುಕುವ ಸಾಧ್ಯವಿಲ್ಲವೋ ಅದು ಅನ್ನವೆನಿಸುತ್ತದೆ. ಭಗವಂತ ಹೇಗೆ ಅನ್ನಮಯ ಎಂದರೆ ಭಗವಂತನು ಇಲ್ಲದೇ ನಾವು ಬದುಕುವದೇ ಸಾಧ್ಯವಿಲ್ಲ ಹೀಗಾಗಿ ಅವನು ಅನ್ನಮಯ ಎನ್ನುತ್ತಾರೆ.  ಅನ್ನ ಇಲ್ಲದೇ ಬದುಕುವ ಯೋಗಿಗಳು ಋಷಿ ಮುನಿಗಳು ಕೂಡ ಇರುತ್ತಾರೆ. ಆದರೆ ಭಗವಂತ ಇಲ್ಲದೇ ಪ್ರಪಂಚದಲ್ಲಿ ಯಾರೋಬ್ಬರೂ ಉಳಿಯುವುದಿಲ್ಲ ಎಂದು ರಾಯರು ಇಲ್ಲಿ ತಿಳಿಸಿಕೊಡುತ್ತಾರೆ. ಭಗವಂತ ಪ್ರಾಣಮಯನೂ ಆಗಿದ್ದಾನೆ ಏಕೆಂದರೆ ಎಲ್ಲರಲ್ಲೂ ನಿಂತು ಎಲ್ಲರ ಮನದಲ್ಲಿ ಪ್ರೇರಣೆ ನೀಡಿ ಧರ್ಮಕಾರ್ಯಗಳನ್ನು ಮಾಡಿಸುತ್ತಾನೆ. ಪ್ರೇರಕ ಕಾರ್ಯ ಮಾಡಿದ್ದರಿಂದ ಪ್ರಾಣಮಯ. ಇದೇ ರೀತಿ ಪರಮಾತ್ಮ ಜ್ಞಾನ ಮಯ, ವಿಜ್ಞಾನಮಯ, ಮನೋಮಯ.



ದೇವರು ಎಲ್ಲ ಶಬ್ದಗಳಿಂದಲೂ ಪ್ರತಿಪಾದ್ಯನು ಆದರೆ ಗುಣಗಳು ಮಾತ್ರ ದೇವರು ಪ್ರತಿಪಾದಿಸುತ್ತಾನೆ ಎಂದು ರಾಯರು ಹೇಳುತ್ತಾರೆ. ರಾಯರಿಗೆ ಪರಮಾತ್ಮನ ಗುಣ ವಿಶೇಷಗಳನ್ನು ಎಷ್ಟು ಹೇಳಿದರೂ ತೃಪ್ತಿಯಾಗುವುದಿಲ್ಲ. ಶ್ರೀಮದಾಚಾರ್ಯರು ಆನಂದಮಯ ಎಂದು ಏಕ ವಾಕ್ಯದಲ್ಲಿ ಹೇಳುತ್ತಾರೆ ಇದು ಸೂತ್ರರೂಪದಲ್ಲಿ ವೇದವ್ಯಾಸರು ಹೇಳಿದ್ದು. ರಾಯರು ಆನಂದಮಯ ಎನ್ನುವುದು ಸರ್ವಗುಣತ್ವವನ್ನು ಹೇಳಿದ್ದಾರೆ ಎಂಬುದನ್ನು ಬಿಡಿಸಿ ಹೇಳುತ್ತಾರೆ. ಕಡಿಮೆ ಅಕ್ಷರಗಳಲ್ಲಿ ಬರೆಯುವುದು ಸೂತ್ರಗಳನ್ನು ವೇದವ್ಯಾಸ ದೇವರು ಸೂತ್ರದಲ್ಲಿ ಬರೆದಿದ್ದಾರೆ ಎಂಬ ಅವರ ಮಾತನ್ನು ರಾಯರು ನಮಗೆ ತಿಳಿಸಿಕೊಡುತ್ತಾರೆ. ನಮಗೆಲ್ಲರಿಗೂ ಆನಂದವನ್ನು ಕೊಡಲು ಪರಮಾತ್ಮ ಆನಂದಮಯ ಎಂದು ರಾಯರು ಹೇಳುತ್ತಾರೆ. ದೇವರು ಒಬ್ಬನೇ ಅವನಿಗೆ ಅನೇಕ ಅದ್ಭುತಗುಣಗಳಿವೆ ಒಬ್ಬನೇ ದೇವರು ಅನೇಕ ಗುಣಗಳಿಂದ ಪ್ರತಿಪಾದ್ಯ ಎಂದು ರಾಯರು ಹೇಳುತ್ತಾರೆ.  ಪರಮಾತ್ಮನ ಬಗ್ಗೆ ತಿಳಿದರೆ ಮಾತ್ರ ಮೋಕ್ಷ ಎಂದು ಶಾಸ್ತ್ರಗಳು ಹೇಳುತ್ತವೆ. ಅನ್ನದಿಂದ ಆಗಿರುವ ನಮ್ಮ ಶರೀರದ ಬಗೆಗೆ ತಿಳಿದರೆ ಮೋಕ್ಷವಾಗುವುದಿಲ್ಲ. ಆದ್ದರಿಂದ ಭಗವಂತ ಅನ್ನಮಯನಾದ ಪರಮಾತ್ಮನ ಅನಂತ ಗುಣಗಳನ್ನು ತಿಳಿದು ಅನಂತ ಗುಣಗಳನ್ನು ಪರಿಪೂರ್ಣತ್ವ ತಿಳಿದರೆ ಮೋಕ್ಷ ಎಂದು ಸಕಲ ವೇದಗಳೂ ತಿಳಿಸುತ್ತಾರೆ. ವೇದವ್ಯಾಸ ದೇವರ ಆಶಯವನ್ನು ಶ್ರೀಮದಾಚಾರ್ಯರು ಅಣು ಭಾಷ್ಯದಲ್ಲಿ ಬರೆದು ತೋರಿಸಿದಂತೆ, ರಾಘವೇಂದ್ರ ಸ್ವಾಮಿಗಳು ತಮ್ಮ ತತ್ವ ಮಂಜರಿಯಲ್ಲಿ ತಿಳಿಸಿ ನಮಗೆಲ್ಲಾ ಉಪಕಾರ ಮಾಡಿದ್ದಾರೆ.


ಅಕ್ಷರ ರೂಪ: ಶ್ರೀ ಮಾಧುರಿ ದೇಶಪಾಂಡೆ, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top