NMIT: ‘ಅಂತರ್ಜಾಲ, ಬಹುಮಾಧ್ಯಮ ಹಾಗೂ ಮಾಹಿತಿ ತಂತ್ರಜ್ಞಾನ’ ಅಂತಾರಾಷ್ಟ್ರೀಯ ಸಮ್ಮೇಳನ

Upayuktha
0


ಬೆಂಗಳೂರು:
‘ಜನರ ಬದುಕು ಎಲ್ಲಾ ಹಂತಗಳಲ್ಲೂ ಸುಧಾರಣೆಯಾಗಲು ತಂತ್ರಜ್ಞಾನ ಅತ್ಯವಶ್ಯ. ಕೃತಕ ಬುದ್ದಿಮತ್ತೆ ಹಾಗೂ ಮಾಹಿತಿ ತಂತ್ರಜ್ಞಾನಗಳ ನೆರವಿನಿಂದ ಜನಸಾಮಾನ್ಯರು, ಅದರಲ್ಲೂ ಕೃಷಿಕರು, ಕಾರ್ಮಿಕರು ಹಾಗೂ ಶಿಕ್ಷಣ ತಜ್ಞರು ತಮ್ಮ ಕ್ಷೇತ್ರಗಳಲ್ಲಿ ಆಧುನಿಕ ವಿಧಿವಿಧಾನಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿದೆ. ನಮ್ಮೆಲ್ಲರ ಬದುಕು ಇನ್ನಷ್ಟು ಸುಧಾರಿಸಬೇಕೆಂದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅನ್ವೇಷಣೆಗಳ ನಿರಂತರ ವಿನಿಮಯ ನಡೆಯಬೇಕು. ಈ ತೆರೆನ ಸಮ್ಮೇಳನಗಳು ಪ್ರಸ್ತುತ ಸಂದರ್ಭದಲ್ಲಿ ಅತ್ಯಂತ ಅಗತ್ಯವಾದ ಸಂಶೋಧನೆಗಳ ಪರಸ್ಪರ ವಿನಿಮಯಕ್ಕೆ, ಪರಸ್ಪರ ಮೌಲ್ಯಮಾಪನಕ್ಕೆ ವೇದಿಕೆ ಕಲ್ಪಿಸುತ್ತವೆ’, ಎಂದು ಸಮಾರಂಭದ ಮುಖ್ಯ ಅತಿಥಿ ಸ್ಪೇನ್ ದೇಶದ ಸಾಲಮನ್ಕಾ ವಿಶ್ವವಿದ್ಯಾಲಯದ ರೆಕ್ಟರ್ ಡಾ. ಜುವಾನ್ ಕಾರ್ಚೊಡೊ ನುಡಿದರು.


ಅವರು ಯಲಹಂಕದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ, ಐ.ಇ.ಇ.ಇ ಬೆಂಗಳೂರು ಘಟಕದ ಸಹಯೋಗದೊಂದಿಗೆ ಆಯೋಜಿಸಿದ್ದ ‘ಅಂತರ್ಜಾಲ, ಬಹುಮಾಧ್ಯಮ ಹಾಗೂ ಮಾಹಿತಿ ತಂತ್ರಜ್ಞಾನ’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಮುಂದುವರಿದು ಶ್ರೀಯುತರು- ‘ನಮ್ಮ ಯುವ ತಂತ್ರಜ್ಞರು ಹಾಗೂ ವಿಜ್ಞಾನಿಗಳು ನಡೆಸುವ ಸಂಶೋಧನೆಗಳು ಇಂಕ್ಯುಬೇಶನ್ ಸೆಂಟರ್‌ಗಳಲ್ಲಿ ಮತ್ತಷ್ಟು ಪರಿಪಕ್ವಗೊಳ್ಳಬೇಕು ಮತ್ತು ಕೈಗಾರಿಕೆಗಳಿಗೆ ಹಾಗೂ ಉದ್ಯಮ ಕ್ಷೇತ್ರಗಳಿಗೆ ರವಾನೆಯಾಗಬೇಕು. ಆಗ ಮಾತ್ರ ಸಿದ್ಧವಸ್ತು ಹಾಗೂ ಉತ್ಪನ್ನಗಳು ಸಮಾಜದ ಸರ್ವರ ಏಳಿಗೆಗೆ ಲಭ್ಯವಾಗುತ್ತವೆ. 


ಮಾತ್ರವಲ್ಲದೆ ಅನೇಕ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿದಂತಾಗುತ್ತದೆ. ಇದರಿಂದ ಇಡೀ ವಿಶ್ವದ ಎಲ್ಲಪ್ರಜೆಗಳು ನಿಜವಾದ ಅರ್ಥದಲ್ಲಿ ಫಲಾನುಭವಿಗಳಾಗುತ್ತಾರೆ’ ಎಂದು ವಿಶ್ಲೇಷಿಸಿದರು.ಜಪಾನಿನ ವಸೇಡ ವಿಶ್ವವಿದ್ಯಾಲಯದ ಡಾ. ಹಿರೊನೋರಿ , ಮಾರಿಶಸ್‌ನ ತಾಂತ್ರಿಕ ವಿಶ್ವವಿದ್ಯಾಲದ ಮಹಾ ನಿರ್ದೇಶಕ ಡಾ. ದಿನೇಶ್ ಕುಮಾರ್ ಹರಿರಾಂ, ಇಟಲಿಯ ರೋಮ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅಲೆಕ್ಸಾಂಡ್ರೊವಿ ಹಾಗೂ ಇಸ್ರೋ ಸಂಸ್ಥೆಯ ಯು.ಆರ್. ರಾವ್ ಉಪಗ್ರಹ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಹಿಮಾನಿ ಸೈನಿ ಗೌರವಾನ್ವಿತ ಅತಿಥಿಗಳಾಗಿ ಪಾಲ್ಗೊಂಡು ಆಯಾಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಹೊಸ ಹೊಸ ಅನ್ವೇಷಣೆಗಳ ಬಗ್ಗೆ ಬೆಳಕು ಚೆಲ್ಲಿದರು.


ಪ್ರಾರಂಭದಲ್ಲಿ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಶೈಕ್ಷಣಿಕ ಮುಖ್ಯಸ್ಥ ಡಾ. ವಿ. ಶ್ರೀಧರ್ ಮಾತನಾಡಿ, ‘ಸಂಶೋಧನೆಗಳ ಪರಸ್ಪರ ವಿನಿಮಯಕ್ಕೆ ನಾವು ನಿರ್ಮಿಸಿಕೊಂಡಿರುವ ಭೌಗೋಳಿಕ ಗಡಿಗಳು ಅಡ್ಡಿಯಾಗಬಾರದು ಎಂಬ ಎಂಬ ಸದುದ್ದೇಶದಿಂದ ಸಾಕಷ್ಟು ಅಂತರಾಷ್ಟ್ರೀಯ ತಂತ್ರಜ್ಞಾನ ಸಮ್ಮೇಳನಗಳನ್ನು ಆಯೋಜಿಸುತ್ತಿದ್ದೇವೆ’ ಎಂದರು.


ನಿಟ್ಟೆ ಶಿಕ್ಷಣ ಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ. ಸಂದೀಪ್ ಶಾಸ್ತ್ರೀ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ.ನಾಗರಾಜ್, ಸಮ್ಮೇಳನದ ಉಸ್ತುವಾರಿ ವಹಿಸಿದ್ದ ಡಾ. ಪರಮೇಶಾಚಾರಿ ಹಾಗೂ ಡಾ. ರಾಮಚಂದ್ರ ಉಪಸ್ಥಿತರಿದ್ದರು.


ಎರಡು ದಿನಗಳ ಅವಧಿಯಲ್ಲಿ ಸಮಾನಾಂತರವಾಗಿ ಭಿನ್ನ ವೇದಿಕೆಗಳಲ್ಲಿ ಗುಣಮಟ್ಟದ ತೀವ್ರ ಪರಿಶೀಲನೆಯ ನಂತರ ಆಯ್ಕೆಮಾಡಿದ ಸಂಶೋಧನಾ ಪ್ರಬಂಧಗಳು ಮಂಡನೆಯಾಗಲಿವೆ. ಇವುಗಳಲ್ಲಿ ಸಾವಿರಕ್ಕೂ ಹೆಚ್ಚು ಪ್ರಬಂಧಗಳು ಅಮೆರಿಕಾ, ಜರ್ಮನಿ, ಸ್ಪೇನ್, ಇಟಲಿ, ಆಸ್ಟ್ರೇಲಿಯ ಇತ್ಯಾದಿ ದೇಶಗಳ ಯುವ ಸಂಶೋಧಕರಿಗೆ ಸೇರಿರುವಂಥವು. ಒಟ್ಟಾರೆಯಾಗಿ ಸ್ವೀಕೃತವಾದ ಎರಡು ಸಾವಿರ ಪ್ರಬಂಧ ಗಳನ್ನು ಗುಣಮಟ್ಟದ ಮಾರ್ಗಸೂಚಿಯ ಪ್ರಕಾರ ಕಟ್ಟುನಿಟ್ಟಾದ ಪರಾಮರ್ಶೆಗೆ ಒಳಪಡಿಸಿ ಒಟ್ಟು 290 ಪ್ರಬಂದಗಳ ಮಂಡನೆಗೆ ಅನುವು ಮಾಡಿಕೊಡಲಾಗಿದೆ. ಇಲ್ಲಿ ಮಂಡಿಸಲ್ಪಟ್ಟ ಪ್ರಬಂಧಗಳು ಜಾಗತಿಕ ಮಟ್ಟದಲ್ಲಿ ಅಂಗೀಕಾರವಾಗಿರುವ ತಂತ್ರಜ್ಞಾನ ಕುರಿತಾದ ಹೊತ್ತಗೆಗಳಲ್ಲಿ ಪ್ರಕಟಗೊಳ್ಳಲಿವೆ.


ಇದೇ ಸಂದರ್ಭದಲ್ಲಿ ತಂತ್ರಜ್ಞಾನದ ಸಂಶೋಧನೆ ಹಾಗೂ ಹೊಸ ಹೊಸ ಅನ್ವೇಷಣೆಗಳ ನಿರಂತರ ವಿನಿಮಯಕ್ಕಾಗಿ ಒಪ್ಪಂದ ಪತ್ರಕ್ಕೆ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ಸ್ಪೇನ್‌ನ ಸಾಲಮನ್ಕಾ ವಿಶ್ವವಿದ್ಯಾಲಯದ ರೆಕ್ಟರ್ ಅಧಿಕೃತವಾಗಿ ಸಹಿ ಹಾಕಿದರು. ಒಪ್ಪಂದ ಪತ್ರದ ಪರಸ್ಪರ ವಿನಿಮಯ ಕೂಡ ಇದೇ ವೇದಿಕೆಯಲ್ಲಿ ಜರುಗಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top