'ಕರ್ನಾಟಕ ಮಹಿಳಾ ಯಕ್ಷಗಾನ'ದಿಂದ ಯಶಸ್ವಿ ಯಕ್ಷಗಾನ ಉತ್ಸವ

Upayuktha
0

ಈಚಿನ ವರ್ಷಗಳಲ್ಲಿ ಮಹಿಳೆಯರು ಹೆಚ್ಚಿನ ಉತ್ಸಾಹದಿಂದ ಯಕ್ಷಗಾನದಲ್ಲಿ ಪಾಲ್ಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಬೆಂಗಳೂರಿನಲ್ಲಿ ಅನೇಕ ಮಹಿಳಾತಂಡಗಳು ಯಕ್ಷಗಾನ ಕಲಿತು ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಇಂತಹ ತಂಡ ಗಳಲ್ಲಿ ಇಪ್ಪತ್ತಾರು ವರ್ಷಗಳ ಹಿಂದೆ ಸ್ಥಾಪನೆಗೊಂಡ "ಕರ್ನಾಟಕ ಮಹಿಳಾ ಯಕ್ಷಗಾನ (ರಿ) ಸಂಸ್ಥೆಗೆ ವಿಶಿಷ್ಟವಾದ ಸ್ಥಾನವಿದೆ. ಮಹಿಳೆಯರಿಗೆ, ಮಕ್ಕಳಿಗೆ ಯಕ್ಷಗಾನವನ್ನು ಕಲಿಸುತ್ತಾ ಅವರಲ್ಲಿರುವ ಪ್ರತಿಭೆಗಳನ್ನು ಪ್ರದರ್ಶನಗಳ ಮೂಲಕ ಹೊರಹೊಮ್ಮಿಸುತ್ತಿರುವ ಅವರ ಪ್ರಯತ್ನ ಶ್ಲಾಘನೀಯ. ಈಚೆಗೆ ಬೆಂಗಳೂರಿನ ನಯನ ಸಭಾಂಗಣದಲ್ಲಿ 'ಯಕ್ಷಗಾನ ಉತ್ಸವ 2024' ಎಂಬ ವೈವಿಧ್ಯಮಯ ಕಾರ್ಯಕ್ರಮವನ್ನು ನಡೆಸಿಕೊಟ್ಟರು.  


ಅಂದು ಪೂರ್ವಾಹ್ನ ವೇಷಭೂಷಣ ಹಾಗೂ ಮುಖವರ್ಣಿಕೆಗೆ ಸಂಬಂಧಿಸಿದ ಕಮ್ಮಟ ಏರ್ಪಡಿಸಿದ್ದು ಕಲಿಕಾರ್ಥಿಗಳಿಗೆ ಅನುಕೂಲಕರವಾಗಿತ್ತು. ತುಳುವರೆಂಕುಲು ನ ಕಾರ್ಯದರ್ಶಿ ಮಟ್ಟಿ ರಾಮಚಂದ್ರ ರಾವ್ ಉದ್ಘಾಟಿಸಿದ ಕಮ್ಮಟ ಕ್ಕೆ ಖ್ಯಾತ ಯಕ್ಷಗಾನ ಕಲಾವಿದೆ ಶೀಮತಿ ಅಶ್ವಿನಿ ಕೊಂಡದಕುಳಿ ಅತಿಥಿಗಳಾಗಿದ್ದರು. ಪ್ರಸಿದ್ಧ ಪ್ರಸಾಧನ ತಜ್ಞರಾದ ರಾಜೇಶ್ ಆಚಾರ್ ರ ನಿರ್ದೇಶನದಲ್ಲಿ ಖ್ಯಾತ ಪ್ರಸಾದನ ತಜ್ಞರುಗಳಾದ ಶ್ರೀ ಶಂಕರ  ಹೊಸೂರು ಮತ್ತು ಶ್ರೀ ಉಮೇಶ್ ರಾಜ್ ಕಮ್ಮಟ ವನ್ನು ನಿರ್ವಹಿಸಿದರು. ಇಡೀ ಕಾರ್ಯಕ್ರಮ ಬೊಧಪ್ರದವಾಗಿದ್ದು ಯಕ್ಷಗಾನ ಕಲಿಯುವವರಿಗೆ ಉಪಯುಕ್ತವಾಗಿತ್ತು. ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಣಾರ್ಥಿಗಳಿಗೆ ನಡೆದ ಮಖವರ್ಣಿಕೆ ಸ್ಪರ್ಧೆಯಲ್ಲಿ ಶ್ರೀಮತಿ ಚೈತ್ರ ರಾಜೇಶ್ ಕೋಟ ಪ್ರಥಮ ಸ್ಥಾನವನ್ನು, ಶ್ರೀಮತಿ ಸುಮಾ ಅನಿಲ್ ಕುಮಾರ್ ದ್ವಿತೀಯ ಹಾಗೂ ಶ್ರೀಮತಿ ಅನ್ನಪೂರ್ಣೇಶ್ವರಿ ಕಟೀಲು ತೃತೀಯ ಸ್ಥಾನ ಗಳಿಸಿದರು.  


ಅಪರಾಹ್ನದ ಮೊದಲ ಕಾರ್ಯಕ್ರಮವಾಗಿ ಪೂರ್ವರಂಗ ಪ್ರದರ್ಶನವಿದ್ದು, ಪ್ರೇಕ್ಷಕರಿಗೆ ಪಾರಂಪರಿಕ ಯಕ್ಷಗಾನದ ಸ್ವರೂಪವನ್ನು ಪರಿಚಯಿಸುವ ಈ ಕಾರ್ಯಕ್ರಮ ಮೆಚ್ಚಬೇಕಾದ್ದು. ಕೋಡಂಗಿ, ಬಾಲ ಗೋಪಾಲ, ಸ್ತ್ರೀವೇಷಗಳ ನೃತ್ಯ ಪ್ರಸ್ತುತಿ ಚೇತೋಹಾರಿಯಾಗಿತ್ತು.


ಪೂರ್ವರಂಗ ದಲ್ಲಿರುವ ಧೀರ ವಯ್ಯಾರದಲ್ಲಿ ಗಗನ ಅನಿಲ್ ಕುಮಾರ್, ಕೃತಿ ಅಮ್ಮೆಂಬಳ, ಲಕ್ಷ್ಮೀರಾವ್ ರಕ್ಷಾ ಅನಂತ್, ಸಹನಾ ಅನಿಲ್ ಕುಮಾರ್ ಭಾಗವಹಿಸಿದ್ದು ಲವಲವಿಕೆಯಿಂದ ಅಭಿನಯಿಸಿದರು. ಮುಂದೆ ಬಾಲ ಗೋಪಾಲರಾಗಿ ಸುಮಾ ಅನಿಲ್ ಕುಮಾರ್ ಹಾಗೂ ಧೃತಿ ಅಮ್ಮೆಂಬಳ ರವರ ಭಾವಪೂರ್ಣ ನರ್ತನ ಪ್ರೇಕ್ಷಕರನ್ನು ರಂಜಿಸಿತು. ಪೀಠಿಕಾ ಸ್ತ್ರೀ ವೇಷಧಾರಿಗಳಾದ ಚೈತ್ರ ಭಟ್ ಮತ್ತು ಸೌಜನ್ಯ ನಾವುಡರು ಭಾಗವತರಾದ ವಿಶ್ವನಾಥ ಶೆಟ್ಟರ ಹಾಡಿಗೆ ಲಾಸ್ಯಪೂರ್ಣವಾಗಿ ನರ್ತಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿದರು.


ಮುಂದೆ ಗುರುಗಳಾದ ಶ್ರೀಮತಿ ಕೆ. ಗೌರಿಯವರ ನಿರ್ದೇಶನ ದಲ್ಲಿ ಕುಶಲವರ ಕಾಳಗ ಎಂಬ ಆಖ್ಯಾನ ಜರುಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಶ್ರೀ ಸುಬ್ರಹ್ಮಣ್ಯ ನಾವಡ, ಮದ್ದಲೆಯಲ್ಲಿ ನರಸಿಂಹ ಆಚಾರ್, ಗೌತಮ್ ಸಾಸ್ತಾನ  ಹಾಗೂ ಚಂಡೆಯಲ್ಲಿ  ಐರೋಡಿ ಸುಬ್ರಹ್ಮಣ್ಯ ಗಾಣಿಗರಿದ್ದರು. ಶತ್ರುಘ್ನನ(ಅನ್ನಪೂರ್ಣೇಶ್ವರಿ ಕಟೀಲು) ಒಡ್ಡೋಲಗದೊಂದಿಗೆ ಪ್ರಸಂಗ ಪ್ರಾರಂಭವಾಯಿತು.  ಪುಷ್ಕರನಾಗಿ ಸಹನಾ ಅನಿಲ್ ಕುಮಾರ್, ದಮನನಾಗಿ ರಕ್ಷಾ ಅನಂತ್, ಶೂರಸೇನನಾಗಿ ಸಾನ್ವಿ ಚಂದ್ರ ಕೇತುವಾಗಿ ಯಾದ್ವಿಯುತಿಯರ ಆಕರ್ಷಕ ನೃತ್ಯದಿಂದಾಗಿ ಒಡ್ಡೋಲಗ ಯಶಸ್ವಿಯಾಯಿತು. ವಾಲ್ಮೀಕಿ ಆಶ್ರಮದಲ್ಲಿ ಲವನೊಂದಿಗೆ (ಧೃತಿ ಅಮ್ಮೆಂಬಳ) ಸೇರಿಕೊಂಡ ಮಾಣಿಗಳು ಕುದುರೆಯನ್ನು ಕಟ್ಟಿಹಾಕುವ ಸಂದರ್ಭ ಸ್ವಾರಸ್ಯಕರವಾಗಿತ್ತು. ಮಾಣಿಗಳಾಗಿ ಕಾಣಿಸಿಕೊಂಡ ಚೈತ್ರ ರಾಜೇಶ ಕೋಟ, ಗಗನ ಅನಿಲ ಕುಮಾರ್ ಕೃತಿ ಅಮ್ಮೆಂಬಳ  ಅವರುಗಳ ಅಭಿನಯ ಹಾಸ್ಯಮಯ ವಾಗಿದ್ದು ಪ್ರೇಕ್ಷಕರಲ್ಲಿ ನಗೆ ಉಕ್ಕಿಸಿತು. ಸೀತೆಗೆ (ಶ್ವೇತಾ ನವಿನ್) ಲವ ಸೆರೆಯಾದ ಸುದ್ದಿ ತಿಳಿದು ಗೋಳಾಡುತ್ತಾಳೆ. ಆಗ ಬಂದ ಕುಶ (ಸುಮಾ ಅನಿಲ್ ಕುಮಾರ್) ವೀರಗತಿ ಯ ನೃತ್ಯದಿಂದ ಮನಸೆಳೆಯುತ್ತಾನೆ. ಕುಶನೊಂದಿಗೆ ಹೋರಾಡಿದ ರಾಮನ ಕಡೆಯವರೆಲ್ಲ ಗತಿಸುತ್ತಾರೆ. ಲವ ಬಂಧ ಮುಕ್ತನಾಗುತ್ತಾನೆ) ಶ್ರೀರಾಮನ (ದೀಕ್ಷಾ ಭಟ್) ಪ್ರವೇಶ ವಾಗುತ್ತದೆ. ರಾಮ ಹಾಗೂ ಲವಕುಶರೊಂದಿಗಿನ ಸಂಭಾಷಣೆಯಲ್ಲಿ ಕರುಳಿನ ಸೆಳೆತವಿತ್ತು. ಮುಂದೆ ನಡೆಯುವ ಯುದ್ಧವನ್ನು ವಾಲ್ಮೀಕಿ (ಲಕ್ಷ್ಮೀರಾವ್) ತಡೆದು, ಕುಶಲವರ ಜನ್ಮ ರಹಸ್ಯ ತಿಳಿಸಿ, ಅಶ್ವಮೇಧಯಾಗಕ್ಕೆ ಸೀತೆ ಮತ್ತು ಮಕ್ಕಳೊಂದಿಗೆ ಬರುವ ವಿಚಾರ ತಿಳಿಸುವುದರೊಂದಿಗೆ ಪ್ರಸಂಗ ಮುಕ್ತಾಯ ವಾಗುತ್ತದೆ. ಗೌರಿಯವರು ಕಲಾವಿದ ರಿಗೆ ಸಾಕಷ್ಟು ತರಬೇತಿ ನೀಡಿರುವುದು ಎದ್ದು ಕಾಣುತ್ತದೆ. ಬಹು ಚುರುಕಿನಿಂದ ನಡೆದ ಪ್ರದರ್ಶನ ಎಲ್ಲೂ ಸೋಲುವುದಿಲ್ಲ.

 


ಮಹಿಳಾ ತಾಳಮದ್ದಲೆಯು ಯಕ್ಷಗಾನ ಉತ್ಸವದ ಇನ್ನೊಂದು ವಿಶೇಷವಾಗಿತ್ತು. ಭಾಗವತರಾಗಿ ಕುಮಾರಿ ಅನರ್ಘ್ಯ ಟಿ.ಪಿ. ಯವರಿದ್ದು ಪೃಥ್ವಿ ಬಡೆಕ್ಕಿಲ ಹಾಗೂ ಶಿಖಿನ್ ಶರ್ಮ ಹಿಮ್ಮೇಳದಲ್ಲಿ ಸಹಕರಿಸಿದರು. 'ಶರಸೇತು ಬಂಧ' ಪ್ರಸಂಗವನ್ನು  ಮೂವರು ಅರ್ಥಧಾರಿಗಳು ಬಹುಸೊಗಸಾಗಿ ನಿರೂಪಿಸಿದರು. ಅರ್ಜುನನಾಗಿ ಶ್ರೀಮತಿ ಅಶ್ವಿನಿ ಆಚಾರ್, ಹನುಮಂತ ನಾಗಿ ಡಾ.ಧಾರಿಣಿದೇವಿ ಮಾಲಗತ್ತಿ, ಕೃಷ್ಣನಾಗಿ ಶ್ರೀಮತಿ ಸಾವಿತ್ರಿ ಶಾಸ್ತ್ರಿ ಭಾಗವಹಿಸಿದ್ದರು. ತಾಳಮದ್ದಲೆಯ ಇನ್ನೊಂದು ವಿಶೇಷವೆಂದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಡಾ. ಧಾರಿಣಿ ದೇವಿ ಮಾಲಗತ್ತಿಯವರು ಮೊತ್ತಮೊದಲ ಬಾರಿಗೆ ಅರ್ಥಧಾರಿಗಳಾಗಿ ಭಾಗವಹಿಸಿದ್ದು ಬಹು ಸಮರ್ಥವಾಗಿ ಅರ್ಥ ಹೇಳಿದರು.  


ಇದಾದ ನಂತರ ಸಂಕ್ಷಿಪ್ತವಾದ ಸಭಾ ಕಾರ್ಯಕ್ರಮ ನಡೆಯಿತು. ಅತಿಥಿಗಳಾಗಿದ್ದ ಶ್ರೀಮತಿ ಪ್ರೇಮ ಉಪಾಧ್ಯ ರು ಗೌರಿ ಸಾಸ್ತಾನ ಅವರ ಕಾರ್ಯ ಚಟುವಟಿಕೆಗಳನ್ನು ಹಾಗೂ ಸಾಧನೆಗಳನ್ನು ಸಭೆಗೆ ತಿಳಿಸಿದರು. ಗೌರಿ ಹಾಗೂ ಶ್ರೀನಿವಾಸ ಸಾಸ್ತಾನ ಅವರು ಯಕ್ಷಗಾನ ರಂಗಕ್ಕೆ ಮಾಡುತ್ತಿರುವ ಸೇವೆ  ಶ್ಲಾಘನೀಯ ಎಂದರು. ಇನ್ನೋರ್ವ ಅತಿಥಿಗಳಾಗಿದ್ದ ಶ್ರೀಮತಿ ನಿರ್ಮಲ ಕಾರಂತರು ಯಕ್ಷಗಾನ ರಂಗದಲ್ಲಿ ಮಹಿಳೆಯರು ಇಂದು ಬಹಳಷ್ಟು ಭಾಗವಹಿಸುತ್ತಿದ್ದಾರೆ.  ಅದರಲ್ಲಿ ಕರ್ನಾಟಕ ಮಹಿಳಾ  ಯಕ್ಷಗಾನ ಸಂಸ್ಥೆಯ ಪಾತ್ರ ಹಿರಿದು ಎಂದು ಸಾಸ್ತಾನ ದಂಪತಿಗಳ ಕುರಿತಾದ ಕವನ ವಾಚಿಸಿದರು.  ಅಧ್ಯಕ್ಷತೆವಹಿಸಿದ್ದ ಧರಣಿದೇವಿಯವರು ತಾವು ಇಂದು ನೋಡಿದ ಮಹಿಳೆಯರ ಯಕ್ಷಗಾನ  ಯಾವ ವೃತ್ತಿಪರ ಮೇಳಕ್ಕೂ ಕಡಿಮೆ ಇಲ್ಲದ್ದು ಎಂದರು.  ಶ್ರೀಮತಿ ಗೌರಿಯವರ ನಿರ್ದೇಶನ ಅಚ್ಚುಕಟ್ಟಾಗಿತ್ತು.  ಪಾತ್ರಧಾರಿಗಳಾಗಿಯೂ ಗೌರಿಯವರು ಹೆಸರು ಮಾಡಿದ್ದಾರೆ, ಅವರಿಂದ ಯಕ್ಷಗಾನ ರಂಗಕ್ಕೆ ಇನ್ನಷ್ಟು ಕೊಡುಗೆಗಳು ಬರಲಿ ಎಂದರು.  ಶ್ರೀಮತಿ ಸುಪ್ರೀತ ಗೌತಮ್ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.  ಶ್ರೀಮತಿ ಮಾಲಾ ವೆಂಕಟೇಶ್ ಹಾಗೂ ಗೌತಮ್ ಸಹಕರಿಸಿದರು.


ಯಕ್ಷಗಾನ ಉತ್ಸವದ ಕೊನೆಯಲ್ಲಿ 'ಜಾಂಬವತಿ ಕಲ್ಯಾಣ 'ಎಂಬ ಪ್ರಸಂಗ ಪ್ರಸ್ತುತಿಯು ಶ್ರೀಮತಿ ಗೌರಿಯವರ ನಿರ್ದೇಶನದಲ್ಲಿ ಬಹು ಆಕರ್ಷಕವಾಗಿ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ವಿಶ್ವನಾಥ ಶೆಟ್ಟಿ ಹಾಗೂ ವಿನಯ ರಾಜೀವ ಶೆಟ್ಟಿಯವರಿದ್ದರು.  ಮದ್ದಲೆಯಲ್ಲಿ ಸಂಪತ್ ಆಚಾರ್ಯ, ಚಂಡೆಯಲ್ಲಿ ಕಾರ್ತಿಕ ಧಾರೇಶ್ವರಿದ್ದರು. ಸತ್ರಾರ್ಜಿತನ (ಅನ್ನಪೂರ್ಣೇಶ್ವರಿ  ಕಟೀಲು)ಒಡ್ಡೋಲಗದೊಂದಿಗೆ ಪ್ರಸಂಗ ಪ್ರಾರಂಭವಾಯಿತು. ಪ್ರಸೇನನಾಗಿ ಚೈತ್ರ ರಾಜೇಶ್ ಕೋಟ, ವನಪಾಲಕರಾಗಿ ಆಶಾ ರಾಘವೇಂದ್ರ ಮತ್ತು ಕೃತಿ ಅಮ್ಮೆಂಬಳ ರಿದ್ದು ಬೇಟೆಯ ದೃಶ್ಯ ಸೊಗಸಾಗಿ ನಿರೂಪಿತವಾಯಿತು. ಬಲರಾಮ (ಮನಸ್ವಿ)ನ ಒಡ್ಡೋಲಗ ,ಅಲ್ಲಿಗೆ ನಾರದ(ಶಶಿಕಲಾ) ನ ಪ್ರವೇಶವಾಗುತ್ತದೆ. ಇವರಿಬ್ಬರ ಸಂಭಾಷಣೆ ಹಿತಮಿತವಾಗಿತ್ತು. ಮೊದಲನೇ ಕೃಷ್ಣನಾಗಿ ರಂಗಕ್ಕೆ ಬಂದ ಚೈತ್ರ ಭಟ್ ರ ವೇಷಗಾರಿಕೆ, ಕುಣಿತ, ಹಾವಭಾವಗಳೆಲ್ಲ ಪ್ರೇಕ್ಷಕರನ್ನು ರಂಜಿಸಿತು.  ಮುಂದೆ ಎರಡನೇ ಕೃಷ್ಣನಾಗಿ ಬಂದ ಸೌಜನ್ಯ ನಾವುಡ ರ ಪ್ರಸ್ತುತಿಯು ಕೂಡ ಅಷ್ಟೇ ಸಮರ್ಥವಾಗಿ ಮೂಡಿಬಂತು.  ಇವರಿಬ್ಬರಿಂದ ಇಡೀ ಪ್ರದರ್ಶನ ಕಳೆಕಟ್ಟಿತು. ಜಾಂಬವತಿಯಾಗಿ ಸಹನ್ಯ  ಚಿನ್ಮಯಿ ತಮ್ಮ ಲಾಸ್ಯಪೂರ್ಣ ನರ್ತನದಿಂದ ವೀಕ್ಷಕರ ಗಮನ ಸೆಳೆದರು.  ಜೋಗುಳದ ಹಾಡಿಗೆ ಮಾಡಿದ ಹಾವಭಾವ ಮೆಚ್ಚುಗೆಯನ್ನು ಗಳಿಸಿತು. ಸ್ವತ: ಶ್ರೀಮತಿ ಗೌರಿಯವರೇ ಜಾಂಬವನಾಗಿ ರಂಗ ಪ್ರವೇಶಿಸಿದ ನಂತರ ಇನ್ನಷ್ಟು ಕರತಾಡನಗಳು ಪ್ರೇಕ್ಷಕರ ಕಡೆಯಿಂದ ಬಂದು ಪ್ರದರ್ಶನ ರಂಗೇರಿತು. ಗೌರಿಯವರ ವೇಷಗಾರಿಕೆ, ಕುಣಿತ, ಮಾತುಗಾರಿಕೆ, ಅಭಿನಯಗಳೆಲ್ಲ ಅವರೊಬ್ಬ ಸಮರ್ಥ ಕಲಾವಿದರೆಂಬುದನ್ನು ರುಜುವಾತುಪಡಿಸಿತು.  


ಅಚ್ಚುಕಟ್ಟಾದ ಕಾರ್ಯಕ್ರಮಗಳ ಸಂಯೋಜನೆಯಿಂದಾಗಿ ಇಡೀ 'ಯಕ್ಷಗಾನ ಉತ್ಸವ 2024' ಸಾರ್ಥಕ ವಾದ ಉತ್ಸವ ಎಂಬ ಹೆಗ್ಗಳಿಕೆ ಪಡೆಯಿತು. ಗುರುಗಳಾದ ಶ್ರೀ ಶ್ರೀನಿವಾಸ ಸಾಸ್ತಾನ ಅವರ ಮಾರ್ಗದರ್ಶನ ಮತ್ತು ಗೌರಿ ಸಾಸ್ತಾನರ ಸಮರ್ಥ ನಿರ್ದೇಶನ ಈ ಹೆಗ್ಗಳಿಕೆಗೆ ಕಾರಣವಾಗಿದೆ. ಸಂಸ್ಥೆಯ ಎಲ್ಲ ಕಲಿಕಾರ್ಥಿಗಳು, ಪೋಷಕರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮಾರಂಭ ಅದ್ದೂರಿಯಾಗುವಂತೆ ನೋಡಿಕೊಂಡರು.  ಕಳೆದ ವರ್ಷ ಬೆಳ್ಳಿಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ 'ಕರ್ನಾಟಕ ಮಹಿಳಾ ಯಕ್ಷಗಾನ' ಸಂಸ್ಥೆಯು ಇನ್ನಷ್ಟು ಯಶಸ್ಸಿನ ಉತ್ತುಂಗಕ್ಕೇರಲಿ ಎಂಬುದೇ ಯಕ್ಷಗಾನ ಅಭಿಮಾನಿಗಳ ಹಾರೈಕೆಯಾಗಿದೆ. 



ಡಾ. ಆನಂದರಾಮ ಉಪಾಧ್ಯ, 

ಯಕ್ಷಗಾನ ವಿದ್ವಾಂಸರು 

ಬೆಂಗಳೂರು . 

9880032560


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top