ಅಧ್ಯಾತ್ಮ ರಾಮಾಯಣ-30: ರಾವಣನ ಅಂತ್ಯೇಷ್ಟಿ; ರಾಮ-ಸೀತೆಯರ ಸಮಾಗಮ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ 


ಚಿತ್ರಗಳು: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


ರಾವಣನು ಶ್ರೀರಾಮನನ್ನು ದ್ವೇಷಿಸುತ್ತಾ, ಅವನನ್ನೇ ನೆನೆಯುತ್ತಾ ಅವನಿಂದಲೇ ಜೀವನ್ಮುಕ್ತನಾದನು. ತನ್ನೊಡನಿದ್ದ ವಿಭೀಷಣ ಸುಗ್ರೀವ, ಹನುಮಂತ, ಅಂಗದ ಲಕ್ಷ್ಮಣ ಜಾಂಬವಂತ ಹಾಗೂ ಇತರ ವೀರರನ್ನು ನೋಡಿ ಶ್ರೀರಾಮನು- "ನಿಮ್ಮೆಲ್ಲರ ಭುಜಪರಾಕ್ರಮದಿಂದ ಇಂದು ನಾನು ರಾವಣನನ್ನು ಸಂಹಾರ ಮಾಡಿದೆನು. ಸೂರ್ಯ- ಚಂದ್ರರುವವರೆವಿಗೂ ನಿಮ್ಮ ಪುಣ್ಯತಮವಾದ ಕೀರ್ತಿಯು ಸ್ಥಿರವಾಗಿರುವುದು. ನನ್ನ ಕಥೆಯೊಂದಿಗೆ ನಿಮ್ಮ ಪುಣ್ಯತಮವಾದ ಕಥೆಯನ್ನೂ ಕೀರ್ತಿಸುವವ ಸತ್ಪುರುಷರು ಪರಮಪದವನ್ನು ಪಡೆದುಕೊಳ್ಳುವರು"- ಎಂದನು.


ಸತ್ತುಬಿದ್ದ ರಾವಣನನ್ನು ಕಂಡು ಮಂಡೋದರಿಯೂ ಸೇರಿದಂತೆ ಅವನ ಆಶ್ರಯದಲ್ಲಿದ್ದ ಸ್ತ್ರೀಯರು ಗೋಳಾಡಿದರು. ಅಣ್ಣನ ಶವವನ್ನು ಕಂಡ ವಿಭೀಷಣನು ತಮ್ಮನಾದ; ಅತ್ತ. ಶ್ರೀರಾಮನು 'ವಿಭೀಷಣನನ್ನು ಸಾಂತ್ವನಗೊಳಿಸಿ, ಮುಂದಿನ ಕರ್ತವ್ಯದತ್ತ  ಎಚ್ಚರಿಸಿ ರಾವಣನ ಔರ್ಧ್ವದೈಹಿಕ ಕ್ರಿಯೆಗಳನ್ನು ಮಾಡಲು ಹೇಳು' ಎಂದು ತಮ್ಮ ಲಕ್ಷ್ಮಣನಲ್ಲಿ ಹೇಳಿದ. ಲಕ್ಷ್ಮಣನು ವಿಭೀಷಣನನ್ನು ಸಾಂತ್ವನಗೊಳಿಸಿ ಅವನನ್ನು ಶೋಕ- ಮೋಹಗಳಿಂದ ಮುಕ್ತನಾಗುವಂತೆ ಮಾಡಿದ. ವಿಭೀಷಣನು ಕರ್ತವ್ಯ ನಿರ್ವಹಣೆಗೆ ಸಜ್ಜಾದನು. ಅತ್ತಿಗೆ ಮಂಡೋದರಿಯನ್ನು ಸಂತೈಸಿದನು. ಅಣ್ಣ ರಾವಣನ ಅಂತ್ಯಕ್ರಿಯೆಗಳನ್ನು ಶಾಸ್ತ್ರೋಕ್ತ ರೀತಿಯಲ್ಲಿ ಮಾಡಿದನು. ಎಲ್ಲ ಹೆಂಗಸರನ್ನು ನಗರಕ್ಕೆ ಕಳುಹಿಸಿ, ವಿನೀತನಾಗಿ ರಾಮನ ಬಳಿಗೆ ಬಂದು ನಿಂತನು. ರಾಮನು ವಿಭೀಷಣನನ್ನು ಕೊಂಡಾಡಿದನು. ಬಳಿಕ ಲಕ್ಷ್ಮಣನಲ್ಲಿ ಲಂಕಾನಗರಕ್ಕೆ ಹೋಗಿ ವಿಭೀಷಣನಿಗೆ ಲಂಕಾರಾಜ್ಯದ ಪಟ್ಟಾಭಿಷೇಕವನ್ನು ಮಾಡಿಸಲು ಹೇಳಿದನು. ರಾಮಾಜ್ಞೆಯು ವೈಭವದಿಂದ ಕಾರ್ಯರೂಪಕ್ಕೆ ಬಂತು. ವಿಭೀಷಣನು ಲಂಕೆಗೆ ಒಡೆಯನಾದ. ಅರಮನೆಯಲ್ಲಿದ್ದ ಹೇರಳವಾದ ಅಮೂಲ್ಯ ವಸ್ತುಗಳನ್ನು ಕಪ್ಪ-ಕಾಣಿಕೆಗಳ ರೂಪದಲ್ಲಿ ರಾಮನ ಪಾದದಲ್ಲಿಟ್ಟು ಸಾಷ್ಟಾಂಗ ನಮಸ್ಕಾರವನ್ನು ಮಾಡಿದ. 



ರಾಮನು ಹನುಮನಲ್ಲಿ "ಎಲೈ ಮಾರುತಿ! ನೀನು ವಿಭೀಷಣನ ಅನುಮತಿಯನ್ನು ಪಡೆದುಕೊಂಡು ಅರಮನೆಗೆ ಹೋಗಿ, ಅಶೋಕಾವನದಲ್ಲಿರುವ ಸೀತೆಯನ್ನು ದರ್ಶಿಸಿ ಆಕೆಗೆ ನಡೆದುದೆಲ್ಲವನ್ನೂ ಹೇಳಿ, ಅವಳ ಉತ್ತರವನ್ನು ಕೇಳಿ ಬಾ" ಎಂದನು. ಹನುಮನು ಸೀತೆಯನ್ನು ಕಂಡನು. ಆಕೆಯನ್ನು; ತಾನು ಕಳೆದ ಬಾರಿ ಕಂಡು ಹೋದ ಬಳಿಕ ಈ ಕ್ಷಣದ ವರೆಗೆ ನಡೆದ ಘಟನಾವಳಿಗಳೆಲ್ಲವನ್ನೂ ಹೇಳಿದ. ಸೀತೆಯ ಉತ್ತರವನ್ನು ಅಪೇಕ್ಷಿಸಿದ. ಆಗ ಸೀತೆಯು ತಾನು ಆದಷ್ಟು ಬೇಗನೆ ರಾಮನನ್ನು ಕಾಣಲು ಬಯಸುವುದಾಗಿ ಹೇಳಿದಳು. ರಾಮದೂತ, ಸೀತಾಸೇವಕ ಹನುಮನು ರಾಮನ ಬಳಿಗೆ ಬಂದು ಸೀತೆಯ ಇಂಗಿತವನ್ನು ತಿಳಿಸಿದನು. ರಾಮನು ಮಾಯಾಸೀತೆಯನ್ನು ಕೈಬಿಟ್ಟು ಅಗ್ನಿಯಲ್ಲಿದ್ದ ನಿಜ ಸೀತೆಯನ್ನು ಸ್ವೀಕರಿಸಲು ನಿಶ್ಚಯಿಸಿ ತನ್ನದೇ ಯೋಜನೆ (ನಾಟಕ) ಯನ್ನು ಮಾಡಿದನು. ಬಳಿಕ ರಾಮನು ವಿಭೀಷಣನಲ್ಲಿ ಸೀತೆಯನ್ನು ಶುಚಿರ್ಭೂತೆಯನ್ನಾಗಿಸಿ, ಸರ್ವಾಲಂಕಾರದೊಡನೆ ತನ್ನ ಬಳಿಗೆ ಕರೆದುಕೊಂಡು ಬರಲು ಹೇಳಿದ. ವಿಭೀಷಣನು ದಾಸಿಯರ ಮೂಲಕ ರಾಮನ ಬಯಕೆಯನ್ನು ಈಡೇರಿಸಿ, ಪಲ್ಲಕಿಯಲ್ಲಿ ಸೀತೆಯನ್ನು ಕರೆದುಕೊಂಡು ಬಂದ. 


ಸೀತಾಮಾತೆಯನ್ನು ನೋಡಲು ಹೆಣಗಾಡುತ್ತಿದ್ದ ಕುತೂಹಲಿ ವಾನರರಿಗೆ ಸೀತೆಯನ್ನು ಕಾಣಿಸಲು ರಾಮನು ಸೀತೆಯನ್ನು ಪಲ್ಲಕಿಯಿಂದಿಳಿದು ಕಾಲ್ನಡಿಗೆಯಲ್ಲಿ ಕರೆತರಲು ಹೇಳಿದ. ಸೀತೆಯು ನಡೆದುಕೊಂಡು ಬಂದು ರಾಮನೆದುರು ಬಂದು ನಿಂತಳು. ರಾವಣ ವಧೆಗಾಗಿ ನಿರ್ಮಿತಳಾಗಿದ್ದ ಮಾಯಾಸೀತೆಯ ಕುರಿತು ನಿಂದನೀಯ ಮಾತುಗಳನ್ನಾಡಿ ಆಕೆಯ ಮನಸ್ಸನ್ನು ನೋಯಿಸಿದನು. ಇದರಿಂದ ನೊಂದ-ಬೆಂದ ಸೀತೆಯು ಲಕ್ಷ್ಮಣನಲ್ಲಿ "ಲಕ್ಷ್ಮಣಾ! ಭಗವಾನ್ ಶ್ರೀರಾಮನಿಗೆ ವಿಶ್ವಾಸವುಂಟಾಗಲು  ಮತ್ತು ಲೋಕದ ಜನರಿಗೆ ನಂಬಿಕೆಯುಂಟಾಗಲು ನೀನು ಬೇಗನೇ ನನಗಾಗಿ ಚಿತೆಯನ್ನು ಸಿದ್ಧಪಡಿಸು" ಎಂದಳು. ಅಣ್ಣನ ಇಂಗಿತವನ್ನೂ ಅತ್ತಿಗೆಯ ಆಣತಿಯನ್ನೂ ಲಕ್ಷ್ಮಣನು ಕೂಡಲೇ ಕಾರ್ಯರೂಪಕ್ಕೆ ತಂದನು. ಸೀತೆಯು ರಾಮನಿಗೆ ಪ್ರದಕ್ಷಿಣೆ ಬಂದಳು. ನೆಲದಲ್ಲಿ- ಬಾನಲ್ಲಿ ನೆರೆದ ಎಲ್ಲರಿಗೂ ಕೈಜೋಡಿಸಿ ನಮಸ್ಕರಿಸಿ ಅಗ್ನಿಯ ಸಮೀಪಕ್ಕೆ ಬಂದು ಕೈಮುಗಿದು "ನನ್ನ ಹೃದಯವು ಶ್ರೀರಾಮನನ್ನು ಬಿಟ್ಟು ಎಂದೂ ಬೇರೆಡೆಗೆ ಹೋಗಿರದಿದ್ದರೆ, ಸರ್ವಲೋಕಗಳಿಗೂ ಸಾಕ್ಷಿಯೆನಿಸಿರುವ ಅಗ್ನಿದೇವನು ನನ್ನನ್ನು ಕಾಪಾಡಲಿ" ಎನ್ನುತ್ತ ಅಗ್ನಿಪ್ರವೇಶ ಮಾಡಿದಳು! ರಾಮನನ್ನು ಬಿಟ್ಟುಳಿದವರೆಲ್ಲರೂ ಸೀತೆಗಾಗಿ ಶೋಕಿಸಿದರು.


ಆಗ ಬ್ರಹ್ಮ- ಮಹೇಶ್ವರರು, ಇಂದ್ರಾದಿದೇವತೆಗಳು, ಋಷಿ- ಮುನಿಗಳು ರಾಮನಲ್ಲಿಗೆ ಬಂದರು. ರಾಮನಿಗೆ ಬ್ರಹ್ಮನು; ರಾಮನ ವಿರಾಟ್ ರೂಪವನ್ನು ವರ್ಣಿಸಿ ನಮಸ್ಕರಿಸುತ್ತಾ ಸ್ತೋತ್ರದೊಂದಿಗೆ ಸ್ತುತಿಸಿದನು. ಆಗ ಅಗ್ನಿದೇವನು ಪುನೀತೆಯಾದ ಸೀತೆಯನ್ನು ತನ್ನ ಮಡಿಲಿನಲ್ಲಿರಿಸಿಕೊಂಡು ಪ್ರತ್ಯಕ್ಷನಾಗಿ ರಾಮನಲ್ಲಿ-" ಹೇ ರಘುವೀರಾ! ಹಿಂದೆ ನೀನು ತಪೋವನದಲ್ಲಿ ನನ್ನಲ್ಲಿ ಮುಡಿಪಾಗಿಟ್ಟ ಸೀತಾದೇವಿಯನ್ನು ಸ್ವೀಕರಿಸು. ರಾವಣನ ವಧೆಗಾಗಿ ನೀನು ಸೃಷ್ಟಿಸಿದ ರಾವಣನು ಕದ್ದುತಂದ ಮಾಯಾಸೀತೆಯು ಕೃತಕೃತ್ಯಭಾವದೊಂದಿಗೆ ಅದೃಶ್ಯಳಾಗಿರುವಳು" ಎಂದು ಹೇಳಿದನು.


ಶ್ರೀರಾಮನು ಅಗ್ನಿದೇವನ ಮಡಿಲಿನಲ್ಲಿದ್ದ ಸೀತೆಯನ್ನು ಸ್ವೀಕರಿಸಿ ತನ್ನ ತೊಡೆಯಲ್ಲಿ ಕುಳ್ಳಿರಿಸಿಕೊಂಡನು. ನಿಜವನ್ನರಿತು ಸಂತಸಪಟ್ಟ ಎಲ್ಲರೂ ಶ್ರೀರಾಮನಿಗೆ- ಸೀತೆಗೆ ಜಯ ಜಯವೆಂದರು. ದೇವೇಂದ್ರನು ಆನಂದದ ಕಣ್ಣೀರಿನೊಂದಿಗೆ ರಾಮನ ಬಳಿಗೆ ಬಂದು ಸ್ತೋತ್ರದ ಮೂಲಕ ಸ್ತುತಿಸಿದನು. ಆಗಸದಲ್ಲಿ ಉಮಾಸಹಿತವಿದ್ದ ಮಹೇಶ್ವರನು ತಾನು ಉಮೆಯೊಂದಿಗೆ ನಿನ್ನ ಪಟ್ಟಾಭಿಷೇಕವನ್ನು ನೋಡಲು ಅಯೋಧ್ಯೆಗೆ ಬರುವುದಾಗಿ ಹೇಳುತ್ತಾ ತನ್ನೊಡನೆ ಇದ್ದ ದಶರಥನನ್ನು ನೋಡಲು ಹೇಳಿದನು. ವಿಮಾನದಲ್ಲಿದ್ದ ದಶರಥನನ್ನು ಕಂಡು ಸೀತಾರಾಮನು ತಮ್ಮ ಲಕ್ಷ್ಮಣನೊಂದಿಗೆ ಹೋಗಿ ಅವನ ಪಾದಗಳಿಗೆ ತಲೆಯಿಟ್ಟು ವಂದಿಸಿದನು. ದಶರಥನು ರಾಮನನ್ನು ಅಪ್ಪಿ, ಮುದ್ದಿಟ್ಟು "ಮಗು! ನೀನಿಂದು ನನ್ನನ್ನು ಸಂಸಾರರೂಪೀ ಶೋಕಸಾಗರದಿಂದ ಪಾರುಮಾಡಿದೆ" ಎಂದು ಹೇಳಿ ಹರಸಿ ಸ್ವರ್ಗಕ್ಕೆ ಮರಳಿದನು. ತನಗೆ ಕೈಮುಗಿದು ನಿಂತಿರುವ ಇಂದ್ರನಲ್ಲಿ ರಾಮನು ತನಗಾಗಿ ಯುದ್ಧಮಾಡಿ ಮಡಿದ ಕಪಿಗಳೆಲ್ಲರನ್ನು ಬದುಕಿಸಲು ಹೇಳಿದನು. ಇಂದ್ರನು ಅಮೃತವನ್ನು ಸುರಿಸಿ ಅವರೆಲ್ಲರನ್ನು ಬದುಕಿಸಿದನು.


ವಿಭೀಷಣನು ಭಕ್ತಿಯಿಂದ ರಾಮನಲ್ಲಿ-"ಹೇ ರಾಮಾ! ಮಂಗಲ ಸ್ನಾನಮಾಡಿ ಎಲ್ಲರೊಂದಿಗೆ ಲಂಕೆಗೆ ಬರಬೇಕು"- ಎಂದು ಆಮಂತ್ರಿಸಿದಾಗ ರಾಮನು ತನಗಾಗಿ ತಪಸ್ವಿಯಂತೆ ಅಯೋಧ್ಯೆಯಲ್ಲಿ ಕಾಯುತ್ತಿರುವ ಭರತನನ್ನು ನೆನಪಿಸಿದನು. ಶೀಘ್ರವಾಗಿ ಅವನನ್ನು ಸೇರಬೇಕೆಂದು ಹೇಳಿ ವಿಭೀಷಣನ ಆಮಂತ್ರಣವನ್ನು ನಯವಾಗಿ ತಿರಸ್ಕರಿಸಿ  ತನ್ನವರಾದ ಸುಗ್ರೀವನೇ ಮೊದಲಾದ ವೀರರನ್ನು ಸತ್ಕರಿಸಲು ಹೇಳಿದನು. ವಿಭೀಷಣನು ಎಲ್ಲ ವಾನರ ವೀರರನ್ನು ಸಂಮಾನಿಸಿದನು. ತನ್ನವರೆಲ್ಲರನ್ನು ಲಂಕೆಯಿಂದಲೇ ಬೀಳ್ಕೊಟ್ಟು ಅವರವರ ಪ್ರದೇಶಗಳಿಗೆ ಕಳುಹಿಸಲು ನಿರ್ಧರಿಸಿದಾಗ ವಿಭೀಷಣನೂ ಸೇರಿದಂತೆ ಅವರೆಲ್ಲರೂ, 'ಅಯೋಧ್ಯೆಗೆ ಎಲ್ಲರೂ ಬಂದು ರಾಮನ ಪಟ್ಟಾಭಿಷೇಕವನ್ನೂ, ತಾಯಿ ಕೌಸಲ್ಯೆಯನ್ನೂ ಕಾಣುವ ಇಚ್ಛೆಯನ್ನು' ಹೇಳಿದರು- ರಾಮನೊಪ್ಪಿದ. ಪುಷ್ಪಕ ವಿಮಾನವು ರಾಮನ ಬಳಿಗೆ ಬಂತು. ವಿಮಾನವನ್ನೇರಿ ಸೀತೆಯನ್ನು ತನ್ನ ತೊಡೆಯಲ್ಲಿ ಕಳ್ಳಿರಿಸಿದನು. ತಮ್ಮ ಲಕ್ಷ್ಮಣನನ್ನು ತನ್ನ ಬಳಿಯೇ ಕುಳ್ಳರಿಸಿ ತನ್ನೊಡನೆ ಬರಲಿಚ್ಛಿಸಿದ ಎಲ್ಲರನ್ನು ಕರೆದುಕೊಂಡು ಅಯೋಧ್ಯೆಯತ್ತ ಪಯಣಿಸಿದನು.


ಮುಂದುವರಿಯುವುದು....

- ವಿಶ್ವೇಶ್ವರ ಭಟ್ಟ ಉಂಡೆಮನೆ, ಬೆಳ್ತಂಗಡಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top