ಅಧ್ಯಾತ್ಮ ರಾಮಾಯಣ-29: ರಾವಣನಿಗೆ ಮುಕ್ತಿ, ಯುದ್ಧ ಸಮಾಪ್ತಿ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ 



ಚಿತ್ರಗಳು: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


ವಿಭೀಷಣನು ರಾಮನಿಗೆ ಹೋಮದ ಹೊಗೆಯನ್ನು ತೋರಿಸಿ ಹಗೆಯ ಹೊಸಹೂಟದ ಬಗೆಗೆ ಎಚ್ಚರಿಸಿದ. ಈ ಹೋಮವು ಪೂರ್ಣವಾಗಿ ರಾವಣನು ಹೊಸರಥ- ಆಯುಧಗಳೊಂದಿಗೆ ಯುದ್ಧಮಾಡಿದರೆ ಅವನನ್ನು ಗೆಲ್ಲುವುದು ಸಾಧ್ಯವಿಲ್ಲ. ತತ್ಕ್ಷಣವೇ ಹೋಮಕ್ಕೆ ವಿಘ್ನವನ್ನೊಡ್ಡಬೇಕೆಂದು ಹೇಳಿದ. ಅಂಗದನ ನೇತೃತ್ವದಲ್ಲಿ ವಾನರರು ಮಹಾಸಾಹಸಕ್ಕೆ ಕೈಹಾಕಿದರು. ರಕ್ಷಣೆ ಮಾಡುತ್ತಿದ್ದ ರಾಕ್ಷಸರನ್ನು ಕೊಂದರು. ವಿಭೀಷಣನ ಪತ್ನಿ ಸುರಮೆಯು ಹೋಮದ ಜಾಗವನ್ನು ಸನ್ನೆಯ ಮೂಲಕ ತೋರಿಸಿದಳು. ವಾನರರು ಅಲ್ಲಿಗೆ ಹೋಗಿ ವಿಘ್ನಗಳನ್ನೊಡ್ಡಿದರು. ರಾವಣನು ಕಣ್ತೆರೆಯಲಿಲ್ಲ. ಅವನ ಮೈಯನ್ನು ತರಚಿದರು, ಕಚ್ಚಿದರು. ಆದರೂ ಊಂ ಹೂಂ. ಕೊನೆಗೆ ಅಂಗದನು ಬೇರೆ ದಾರಿ ಕಾಣದೆ ಅರಮನೆಗೆ ಹೊಕ್ಕು ಅಂತಃಪುರವನ್ನು ಪ್ರವೇಶಿಸಿದನು. ಮಂಡೋದರಿಯ ಮುಡಿಗೆ ಕೈಯಿಕ್ಕಿದನು. ಅವಳನ್ನು ರಾವಣನು ಹೋಮ ಮಾಡುತ್ತಿದ್ದ ಗುಪ್ತಪ್ರದೇಶಕ್ಕೆ ಎಳೆದುಕೊಂಡು ಬಂದನು. ಮೌನಸಾಧನೆಯಲ್ಲಿ ನಿರತನಾಗಿದ್ದ ರಾವಣನ ಮೌನವನ್ನು ಮುರಿಯಲು ಮಂಡೋದರಿಯನ್ನು ಅಸ್ತ್ರವನ್ನಾಗಿ ಬಳಸಿದನು. ಅವಳು ಕಣ್ಣೀರಿಡುತ್ತಾ ಅತ್ತು ಕರೆದಾಗ ಕಣ್ತೆರೆದನು, ಬಾಯ್ಬಿಟ್ಟನು. ಹೋಮಕ್ಕೆ ಭಂಗವುಂಟಾಯಿತು. ಇಷ್ಟು ಹೊತ್ತಿನಲ್ಲಿ ಕಪಿವೀರರು ಇಡೀ ಯಜ್ಞ ಪ್ರದೇಶವನ್ನು ಧ್ವಂಸಮಾಡಿದ್ದರು. ಅಸಂಖ್ಯ ಮುನಿಗಳ- ಋಷಿಗಳ ಯಜ್ಞವನ್ನು ಧ್ವಂಸಮಾಡಿ, ತಪಸ್ವಿಗಳನ್ನು ಕೊಂದ ರಾವಣನಿಗೆ ಅವನ ಯಜ್ಞವನ್ನು ರಕ್ಷಿಸಿಕೊಳ್ಳಲಾಗಲಿಲ್ಲ! ಲೆಕ್ಕಕ್ಕೆ ಸಿಗದಷ್ಟು ಸ್ತ್ರೀಯರನ್ನು ಬಲಾತ್ಕರಿಸಿ ಅತ್ಯಾಚಾರ ಮಾಡಿ, ಅಪಹರಿಸಿ ತನ್ನಲ್ಲಿ ಸೆರೆಯಾಗಿಟ್ಚ ರಾವಣನಿಗೆ ಇಂದು ತನ್ನ ಅಂತಃಪುರಕ್ಕೆ ಕಪಿಗಳು ನುಗ್ಗಿ ಮಂಡೋದರಿಯ ಮುಡಿ ಹಿಡಿದು, ಎಳೆದು ತನ್ನಲ್ಲಿಗೆ ಕರೆದುಕೊಂಡು ಬಂದಾಗ ರಕ್ಷಿಸಲಾಗಲಿಲ್ಲ!! ತಲೆಗೆರದ ನೀರು ಕಾಲಿಗೆ ಇಳಿಯಿತು! ತಲೆಗೇರಿದ ಮದವನ್ನು ಕಾಲವು ಅಳಿಸಿತು! ಮಾಡಿದ್ದುಣ್ಣೋ ಮಾರಾಯ! ತಮ್ಮ ಕೆಲಸವಾದ ಕೂಡಲೇ ಕಪಿವೀರರು ರಾಮನತ್ತ ಹಾರಿದರು!


ಅಳುತ್ತಿದ್ದ ಮಂಡೋದರಿಯನ್ನು ಸಂತೈಸಿದನು. ಅವಳಲ್ಲಿ "ಎಲೈ ಅನಿಂದಿತಳೇ! ಆತ್ಮನ ಸ್ವರೂಪವನ್ನು ತಿಳಿದು ಶೋಕರಹಿತಳಾಗು. ನಾನು ಈಗಲೇ ಹೊರಡುತ್ತೇನೆ. ಒಂದೋ ರಾಮ- ಲಕ್ಷ್ಮಣರನ್ನು ಕೊಂದು ಬರುತ್ತೇನೆ, ಇಲ್ಲವೇ ರಾಮನ ವಜ್ರಸಮಾನ ಬಾಣಕ್ಕೆ ತುತ್ತಾಗಿ ಪರಮಪದವನ್ನು ಹೊಂದುತ್ತೇನೆ. ನಾನು ಅಳಿದರೆ,  ನೀನು ಸೀತೆಯನ್ನು ಕೊಂದುಹಾಕಿ ನನ್ನೊಡನೆ ಅಗ್ನಿಪ್ರವೇಶ ಮಾಡು" ಎಂದನು. ಕಟ್ಟಕಡೆಯ ಬಾರಿಗೆ ಮಂಡೋದರಿಯು ರಾವಣನಲ್ಲಿ "ಸೀತೆಯನ್ನು ರಾಮನಿಗೆ ಒಪ್ಪಿಸಿ. ವಿಭೀಷಣನಿಗೆ ಪಟ್ಟಕಟ್ಟಿ. ನಾವಿಬ್ಬರೂ ವನವಾಸಿಗಳಾಗಿ ತಪಸ್ಸುಮಾಡಿ ಪರಮಪದವನ್ನು ಸೇರೋಣ" ಎಂದಳು. ಆಗ ರಾವಣನು "ಯುದ್ಧದಲ್ಲಿ ಎಲ್ಲರನ್ನೂ ಎಲ್ಲವನ್ನೂ ಕಳೆದುಕೊಂಡ ಮೇಲೆ ತಪಸ್ವಿಯಾಗಿ ಹೇಗೆ ಬದುಕಿರಲಿ? ರಾಮ- ಸೀತೆಯರ ನಿಜರೂಪವನ್ನು ತಿಳಿದೇ ಸೀತೆಯನ್ನು ಅಪಹರಿಸಿ ತಂದೆ. ಸೀತೆಯ ಬಿಡುಗಡೆಗೆ ರಾಮನು ಬಂದೇ ಬರುವನು. ಯುದ್ಧಮಾಡುವನು. ನನ್ನನ್ನು ಕೊಲ್ಲುವನು. ನಾನು ಮುಕ್ತನಾಗುವೆನು" ಎನ್ನುತ್ತಾ ಮುಂದೆ ಮಾತು ಬೆಳೆಸದೆ ಯುದ್ಧರಂಗಕ್ಕೆ ಹೊರಟನು.



ಯುದ್ಧದ ಅಂತಿಮ ಸುತ್ತು. ರಾವಣನ ಆಗಮನವನ್ನು ಕಂಡು ವಾನರರು ಹೆದರಿದರು. ಹನುಮನು ಧುತ್ತೆಂದು ರಾವಣನ ಎದುರಲ್ಲಿ ನಿಂತು ರಾವಣನ ಎದೆಗೆ ಬಲವಾಗಿ ಗುದ್ದಿದನು. ರಾವಣನು ಒಂದಷ್ಟು ಕಾಲ ಎಚ್ಚರದಪ್ಪಿದನು. ಅವನು ಎಚ್ಚೆತ್ತ ಬಳಿಕ ತನ್ನೆದುರು ಎದೆಯೊಡ್ಡಿ ನಿಂತ ಹನುಮನ ಎದೆಗೆ ಬಲವಾಗಿ ಗುದ್ದಿದನು. ಹನುಮನು ಒಮ್ಮೆ ವಿಚಲಿತನಾದನು. ಬಳಿಕ ಸಿಟ್ಟಿನಿಂದ ರಾವಣನನ್ನು ಕೊಲ್ಲಲೆಂದು ಮುನ್ನುಗ್ಗಿದಾಗ ರಾವಣನು ಹೆದರಿ ರಾಮನತ್ತ ನಡೆದನು. ರಾಮನ ವಾನರಪ್ರಮುಖರಾದ ಅಂಗದ, ನೀಲ, ನಳರು ಅದಾಗಲೇ ರಾವಣನ ಮಂತ್ರಿಗಳನ್ನು ಹೊಡೆದು ಕೊಂದಿದ್ದರು. ಇದು ಅವನಲ್ಲಿ ಕೋಪವು ಕೆರಳುವಂತೆ ಮಾಡಿತು. ರಾಮನ ಮೇಲೆ ಬಾಣಗಳ ಮಳೆಯನ್ನು ಸುರಿಸಿದ. ನೆಲದ ಮೇಲಿದ್ದ ರಾಮನು ರಥದ ಮೇಲಿದ್ದ ರಾವಣನನ್ನು ಸಮರ್ಥವಾಗಿ ಬಾಣಗಳ ಮೂಲಕವೇ ಎದುರಿಸಿದ. ಆಗ ದೇವೇಂದ್ರನು ಮಾತಲಿಯನ್ನು ಸಾರಥಿಯನ್ನಾಗಿಸಿ ತನ್ನ ರಥವನ್ನು ರಾಮನಿಗೆ ಕಳಿಸಿದನು. ಮಾತಲಿಯ ಕೋರಿಕೆಯ ಮೇರೆಗೆ ರಾಮನು ರಥವನ್ನೇರಿ ಯುದ್ಧಮಾಡತೊಡಗಿದನು.


ಆಗ್ನೇಯಾಸ್ತ್ರ, ದೇವಾಸ್ತ್ರ, ಗರುಡಾಸ್ತ್ರ... ಹೀಗೆ ನಾನಾ ಅಸ್ತ್ರಗಳ ಪ್ರಯೋಗವಾಯಿತು. ರಾಮನ ಕೋಪ ಏರುತ್ತಲೇ ಹೋಯಿತು! ಯುದ್ಧವನ್ನು ನೋಡುತ್ತಿರುವವರೆಲ್ಲರೂ ಭಯಭೀತರಾದರು. ರಾಮನು ಐಂದ್ರಾಸ್ತ್ರದಿಂದ ರಾವಣನ ತಲೆಗಳನ್ನು, ಹೆಚ್ಚುವರಿ ಕೈಗಳನ್ನು ಕತ್ತರಿಸಿದನು. ತಲೆಗಳು ಬೀಳುತ್ತಿದ್ದವಷ್ಟೆ! ರಾವಣನು ಸಾಯದಿರುವುದನ್ನು ಕಂಡು ರಾಮನು ಚಿಂತಿತನಾದನು. ಆಗ ವಿಭೀಷಣನು ರಾವಣನ ಹೊಕ್ಕುಳದ ಸ್ಥಳದಲ್ಲಿದ್ದ ಕುಂಡಲಾಕಾರದ ಅಮೃತವನ್ನು ಬಾಣದ ಮೂಲಕ ಒಣಗಿಸಲು ಹೇಳಿದ. ರಾಮನು ಅಲ್ಲಿಗೆ ಬಾಣ ಬಿಟ್ಟು ಅಮೃತವನ್ನು ಒಣಗಿಸಿದನು. ಮತ್ತೆ ತಲೆಗಳು ಚಿಗುರಲಿಲ್ಲ! ಎರಡು ಕೈಗಳು ಒಂದು ತಲೆ ಮಾತ್ರ ಉಳಿಯಿತು.


ಯುದ್ಧ ಮತ್ತಷ್ಟು ಭೀಕರವಾದಾಗ ಮಾತಲಿಯು ರಾಮನಿಗೆ "ಇವನು ತಲೆಯನ್ನು ಕತ್ತರಿಸಿದರೆ ಸಾಯನು. ಹೃದಯಕ್ಕೆ ಬ್ರಹ್ಮಾಸ್ತ್ರವನ್ನು ಪ್ರಯೋಗಿಸು" ಎಂದನು. ರಾಮನು ಲೋಕದ ಶೋಕನಾಶಕ್ಕಾಗಿ ಬ್ರಹ್ಮಾಸ್ತ್ರವನ್ನು ವಿಧಿವತ್ತಾಗಿ ಅಭಿಮಂತ್ರಿಸಿ ರಾವಣನ ಎದೆಗೆ ಪ್ರಯೋಗಿಸಿದನು. ರಾಮಬಾಣ! ರಾವಣನ ಎದೆಯನ್ನು ಸೀಳಿ, ಪ್ರಾಣಹರಣ ಮಾಡಿ, ಪಾತಾಳವನ್ನು ಹೊಕ್ಕು ಮರಳಿ ರಾಮನ ಬತ್ತಳಿಕೆಯನ್ನು ಸೇರಿತು!


ಪ್ರಾಣಕಳೆದುಕೊಂಡ ರಾವಣನು ರಥದಿಂದ ಉರುಳಿ ನೆಲಕ್ಕೆ ಬಿದ್ದನು. ಲೋಕಕ್ಕೊದಗಿದ ಮಹಾಕಂಟಕವು ದೂರವಾಯಿತು. ಆಗಸದಲ್ಲಿದ್ದವರು ಜಯಜಯವೆನ್ನುತ್ತಾ ಹೂಮಳೆಗರೆದು ಹರ್ಷ ವ್ಯಕ್ತಪಡಿಸಿದರು. ವಾನರರು- ನರರು ನಲಿದಾಡಿದರು! ಅಳಿದುಳಿದ ರಕ್ಕಸರು ಲಂಕೆಯ ಮೂಲೆಗಳನ್ನು ಸೇರಿದರು. ಮಹಾಪಾಪಿಯಾದ ರಾವಣನು ಶ್ರೀರಾಮನ ಕೈಯಿಂದ ಮರಣವನ್ನು ಹೊಂದಿದನು. ಅವನಿಂದ ಹೊರಟ ದಿವ್ಯವಾದ ತೇಜಸ್ಸು ರಾಮನ ದೇಹದಲ್ಲಿ ಎಲ್ಲರೂ ನೋಡನೋಡುತ್ತಿದ್ದಂತೆಯೇ ಲೀನವಾಯಿತು! ರಾವಣನು ವಿಷ್ಣು ಸಾಯುಜ್ಯವನ್ನು ಪಡೆದನು. ಇದು ಎಲ್ಲರನ್ನು ಅಚ್ಚರಿಗೆ ದೂಡಿತು! 


ಆಗ ನಾರದರು ರಾವಣನು ರಾಮನ ಮೇಲಿನ ವೈರದಿಂದ ಸದಾ ರಾಮನನ್ನು ದ್ವೇಷದಿಂದ ನೆನೆಯುತ್ತಿದ್ದ. ಅನವರತ ರಾಮಧ್ಯಾನವೇ ರಾವಣನ ಮುಕ್ತಿಗೆ ಕಾರಣವಾಯಿತು ಎಂದರು!


"ಮೂರು ಲೋಕಗಳಿಗೂ ಕಂಟಕನಾಗಿದ್ದ ರಾವಣನನ್ನು ಯುದ್ಧದಲ್ಲಿ ಕೊಂದಿರುವ, ಎಡಗೈಯಿಂದ ಧನುಸ್ಸನ್ನು ನೆಲಕ್ಕೆ ಊರಿ ನಿಂತಿರುವ, ಬಲಗೈಯಲ್ಲಿ ಬಾಣವನ್ನು ತಿರುಗಿಸುತ್ತಾ ಇರುವ, ಕೆಂಪಾದ ಕಣ್ಣುಗಳಿರುವ, ಬಾಣಗಳಿಂದ ಗಾಯಗೊಂಡ ದೇಹವುಳ್ಳ, ಕೋಟಿಸೂರ್ಯ ತೇಜಸ್ಸುಳ್ಳವನೂ, ವಿಜಯಲಕ್ಷ್ಮಿಯಿಂದ ಅಲಂಕೃತನೂ, ಸುಂದರಾಂಗನೂ, ದೇವೇಂದ್ರ ಪೂಜಿತನೂ ಆದ ವೀರರಾಮನು ನನ್ನನ್ನು ಕಾಪಾಡಲಿ".


ಮುಂದುವರಿಯುವುದು....

- ವಿಶ್ವೇಶ್ವರ ಭಟ್ಟ ಉಂಡೆಮನೆ, ಬೆಳ್ತಂಗಡಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top