ಅಧ್ಯಾತ್ಮ ರಾಮಾಯಣ-22: ಹನುಮನಿಂದ ಸೀತೆಯ ಭೇಟಿ, ಮುದ್ರೆಯುಂಗುರ ಹಸ್ತಾಂತರ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ 


ಚಿತ್ರಗಳು: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


ಗುಬ್ಬಚ್ಚಿ ಗಾತ್ರದ, ಕೆಂಪಾದ ಮುಖದ, ಹಳದಿ ಬಣ್ಣದ ವಾನರ ಹನುಮ ಮರದಿಂದಿಳಿದು ಬಂದು ಸೀತೆಯ ಎದುರು ಕೈಜೋಡಿಸಿ ನಿಂದು ವಂದಿಸಿದ. ಸೀತೆಗೆ ಸಂಶಯ. ಕಪಿವೇಷದ ರಾಕ್ಷಸನಿರಬಹುದೇ? ಎಂದು. ಆಗ ಹನುಮನು ಸೀತೆಯ ಸಂಶಯ ನಿವಾರಣೆಗಾಗಿ- "ಸಚಿವೋsಹಂ ಹರೀಂದ್ರಸ್ಯ ಸುಗ್ರೀವಸ್ಯ ಶುಭಪ್ರದೇ। ದಾಸೋsಹಂ ಕೋಸಲೇಂದ್ರಸ್ಯ ರಾಮಸ್ಯ ಪರಮಾತ್ಮನಃ॥- ಹೇ, ಶುಭಪ್ರದಳೇ! ನಾನು ಕಪಿರಾಜನಾದ ಸುಗ್ರೀವನ ಮಂತ್ರಿಯು. ಕೋಸಲೇಂದ್ರನಾದ ಪರಮಾತ್ಮ ರಾಮನ ದಾಸನು" ಎಂದು ತನ್ನನ್ನು ಪರಿಚಯಿಸಿದನು.


ಸೀತೆಯಲ್ಲಿ ಹುಟ್ಟಿದ ಕಪಿ- ನರರ ಸ್ನೇಹದ ವಿಷಯದ ಕುರಿತ ಸಂಶಯವನ್ನು ನಿವಾರಿಸಲು ಶಬರಿದರ್ಶನದ ಘಟನೆಯಿಂದ ತೊಡಗಿ ಶಿಂಶುಪಾವೃಕ್ಷ ವನ್ನೇರಿದ ವರೆಗಿನ ಘಟನಾವಳಿಯನ್ನು ಹೇಳಿದ. ಇದಕ್ಕೆ ಪೂರಕವಾಗಿ ರಾಮನು ಹನುಮನಲ್ಲಿ ಸೀತೆಗೆ ಕೊಡಲು ಕೊಟ್ಟ ಮುದ್ರೆಯುಂಗುರವನ್ನು ಅವಳಿಗೆ ಕೊಟ್ಟು ಕೈಮುಗಿದನು. ಸೀತೆಯ ಸಂಶಯವು ದೂರವಾಗಿ ಮುದ್ರೆಯುಂಗುರವನ್ನು ಸಂತಸದ ಕಣ್ಣೀರು ಹರಿಸುತ್ತಾ ತಲೆಯ ಮೇಲಿಟ್ಟುಕೊಂಡಳು.


ಸೀತೆಯು ಹನುಮನಲ್ಲಿ ತಾನಿಲ್ಲಿ ಅನುಭವಿಸುತ್ತಿರುವ ಕಷ್ಟಗಳನ್ನು ರಾಮನಿಗೆ ಹೇಳಲು ಹೇಳಿದಳು. ಹಾಗೆಯೇ, ಇನ್ನೆರಡು ತಿಂಗಳೊಳಗೆ ತನ್ನನ್ನು ಈ ರಾಕ್ಷಸನಿಂದ ಬಿಡುಗಡೆ ಮಾಡದಿದ್ದಲ್ಲಿ ಜೀವಸಹಿತ ಉಳಿಯಲಾರೆ ಎಂಬುದನ್ನೂ ಹೇಳಲು ಹೇಳಿದಳು. ಇದರೊಂದಿಗೆ ಸೀತೆಗೆ ರಾಮನು ಸಾಗರೋಲ್ಲಂಘನೆ ಮಾಡಿ ಬರುವ ಬಗೆಗೆ ಸಂಶಯವುಂಟಾಯಿತು. ಹನುಮನಲ್ಲಿ ಈ ಕುರಿತು ಸಂದೇಹ ವ್ಯಕ್ತಪಡಿಸಿದಾಗ ಅವನು -" ಸಾಗರವನ್ನು ಹಾರಿ ಇಲ್ಲಿಗೆ ಬರುವ, ಬಂದು ರಾಕ್ಷಸರನ್ನು ಸದೆಬಡಿಯುವ ಅಸಾಮಾನ್ಯ ಶಕ್ತಿ- ಸಾಮರ್ಥ್ಯಗಳುಳ್ಳ ಅಸಂಖ್ಯ ವಾನರರು ನಮ್ಮ ಕಪಿಸೇನೆಯಲ್ಲಿದ್ದಾರೆಂದು ಹೇಳಿದ. ಸೀತೆಗೆ ಹನುಮನ ಬಗೆಗೆ, ತನ್ನ ಬಿಡುಗಡೆಯ ಬಗೆಗೆ ವಿಶ್ವಾಸ ಮೂಡಿತು. 




ಹನುಮನು ಹೊರಡಲು ಸೀತೆಯ ಅಪ್ಪಣೆಯನ್ನು ಕೇಳಿದ. ಅದರೊಂದಿಗೆ ನಿನ್ನನ್ನು ಭೇಟಿಯಾದುದಕ್ಕೆ ಸಾಕ್ಷಿಯಾಗಿ ನೀಡಲು ಏನಾದರೊಂದು ಗುರುತನ್ನು ನೀಡಲೂ ವಿನಂತಿಸಿದ. ಆಗ ಸೀತೆಯು ತನ್ನ ಮುಡಿಯಲ್ಲಿದ್ದ  ಚೂಡಾಮಣಿಯನ್ನು ತೆಗೆದು ಹನುಮನಿಗೆ ಕೊಟ್ಟಳು. ನಂಬಿಕೆಗೆ ಇಂಬುಕೊಡಲು ಚಿತ್ರಕೂಟದಲ್ಲಿದ್ದಾಗ ನಡೆದ "ಕಾಕಾಸುರ"ನ ಪ್ರಸಂಗವನ್ನು ಹೇಳಿ, ಅದನ್ನು ಹೇಳಲು ಹೇಳಿದಳು. ಹನುಮನು ಸೀತೆಯಲ್ಲಿ ಮರಳಿ ಹೋಗಲು ಅನುಮತಿಯನ್ನು ಕೇಳಿದಾಗ ಸೀತೆಗೆ ಅವನ ಕುರಿತು ಸಂಶಯ ಬಂದು-" ಮಗೂ! ಇಷ್ಟೊಂದು ಸಣ್ಣ ಶರೀರದ ನೀನು ರಾಕ್ಷಸರೊಂದಿಗೆ ಹೇಗೆ ಯುದ್ಧ ಮಾಡಬಲ್ಲೆ? ನಿನ್ನಂತೆಯೇ ಇತರ ವಾನರರೂ ಇರಬಹುದಲ್ಲ!"- ಎಂದಳು. ಸೀತೆಯ ಸಂಶಯವನ್ನು ದೂರ ಮಾಡಲು ಹನುಮನು ತನ್ನ ಪರ್ವತಾಕಾರದ ಶರೀರವನ್ನು ತೋರಿಸಿದನು. ಸೀತೆಯ ಸಂದೇಹ ದೂರವಾಗಿ ಸಂತೋಷದಿಂದ ಹನುಮನಿಗೆ ಶುಭಪ್ರಯಾಣವನ್ನು ಕೋರಿದಳು. ತಾನು ಬಂದ ಕೆಲಸ ಪೂರೈಸಿದಾಗ ಹನುಮನಿಗೆ ಹಸಿವಿನ ನೆನಪಾಯಿತು. ಸೀತೆಯ ಅನುಮತಿಯೊಂದಿಗೆ ಅವಳೆದುರಿದ್ದ ಹಣ್ಣುಗಳನ್ನು ತಿಂದನು, ತಿಂದು ಬೀಳ್ಕೊಟ್ಟನು.


ಯಜಮಾನನ ಕಾರ್ಯಸಾಧನೆಗೆ ಬಂದ ಸೇವಕನು ಹೇಳಿದಷ್ಟು ಮಾತ್ರ ಮಾಡಿದರೆ ಆಳು ಕೀಳಾಗುವನು. ಹಾಗಾಗಬಾರದು. ಅದಕ್ಕೆ ಪೂರಕವಾದ ಇತರ ಕೆಲಸಗಳನ್ನು ಮಾಡಬೇಕು ಎಂದು ನಿರ್ಧರಿಸಿ ಮರಳಿ ಸೀತೆಯಲ್ಲಿಗೆ ಬಂದು ರಾವಣನನ್ನು ಭೇಟಿಯಾಗುವಂತೆ ಮಾಡುವ ಯಾವುದಾದರೂ ಕೆಲಸವನ್ನು ಮಾಡಲು  ಅವಳ ಅನುಮತಿಯನ್ನು ಕೇಳಿದ. ಸೀತೆಯು ಒಪ್ಪಿದಳು. ಕೂಡಲೇ ಹನುಮನು ಅಶೋಕಾವನದಲ್ಲಿದ್ದ ಶಿಂಶುಪಾವೃಕ್ಷವನ್ನು ಬಿಟ್ಟು ಉಳಿದ ಎಲ್ಲ ಮರಗಳನ್ನು ಬೇರುಸಹಿತ ಕಿತ್ತೆಸೆದ. ರಾಕ್ಷಸಿಯರು ಸೀತೆಯಲ್ಲಿ ವಾನರನ ಕುರಿತು ಕೇಳಲು ಅವಳು ಬಲು ಸೊಗಸಾಗಿ ಅಮಾಯಕತ್ವವನ್ನು ನಟಿಸಿ- "ನಿಮ್ಮ ಮಾಯೆ ನಿಮಗೇ ಗೊತ್ತು!" ಎಂದು ಹೇಳಿ ಬಿಟ್ಟಳು!


ಅಶೋಕಾವನ ರಾವಣನ ಅತ್ಯಂತ ಪ್ರೀತಿಯ ತಾಣ. ರಾಕ್ಷಸಿಯರು ರಾವಣನಿಗೆ ಕಪಿಯು ಮಾಡಿದ ಅಶೋಕಾವನದ ನಾಶದ ಕುರಿತು ದೂರುಕೊಟ್ಟರು. ಕೂಡಲೇ ರಾವಣನು ಬಹುದೊಡ್ಡ ಸಂಖ್ಯೆಯಲ್ಲಿ ಕಿಂಕರರೆಂಬ ರಾಕ್ಷಸರನ್ನು ಕಳಿಸಿದನು. ಹನುಮನು ಸಿಂಹನಾದ ಮಾಡುತ್ತಾ ಅಲ್ಲಿಯೇ ಇದ್ದ ಮುದ್ಗರದಿಂದ ಅವರೆಲ್ಲರನ್ನು ಹೊಡೆದು ಕೊಂದ! ಇವರ ಬಳಿಕ ರಾವಣನು ಕಳಿಸಿದ ಐವರು ಸೇನಾಪತಿಗಳನ್ನು, ಏಳು ಜನ ಮಂತ್ರಿಪುತ್ರರನ್ನೂ ಲೋಹದ ಅಗಳಿಯಲ್ಲೇ ಹೊಡೆದು ಕೊಂದನು. ಈ ಕಪಿಯು ಅಸಾಮಾನ್ಯನೆಂದು ಅರಿತ ರಾವಣನು ತನ್ನ ಮಗ ಅಕ್ಷಕುಮಾರನನ್ನೇ ಹನುಮನೊಂದಿಗೆ ಹೋರಾಡಲು ಕಳಿಸಿದನು. ಅಕ್ಷಕುಮಾರನು ಮರಳಿ ತಂದೆಯ ಬಳಿಗೆ ಹೋಗಲೇ ಇಲ್ಲ. ಅವನೊಂದಿಗೆ ಅವನ ಸೇನೆಯನ್ನೂ ಹನುಮನು ನಾಶ ಮಾಡಿದನು. ರಾವಣನು ತನ್ನ ವೀರ ಸುಪುತ್ರ ಇಂದ್ರಜಿತುವನ್ನೇ ಕಳಿಸಲು ನಿರ್ಧರಿಸಿದನು.


ಮುಂದುವರಿಯುವುದು....

- ವಿಶ್ವೇಶ್ವರ ಭಟ್ಟ ಉಂಡೆಮನೆ, ಬೆಳ್ತಂಗಡಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top