ಅಧ್ಯಾತ್ಮ ರಾಮಾಯಣ-19: ಸಂಪಾತಿಯ ದರ್ಶನ; ಸಾಗರೋಲ್ಲಂಘನಕ್ಕೆ ಅಣಿಯಾದ ಹನುಮ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ 


ಚಿತ್ರಗಳು: ನೀರ್ನಳ್ಳಿ ಗಣಪತಿ; ಕೃಪೆ: ಅಯೋಧ್ಯಾ ಫೌಂಡೇಶನ್ ಪ್ರಕಟಿತ ಸಚಿತ್ರ ರಾಮಾಯಣ


ಗುಹೆಯಿಂದ ಹೊರಬಂದ ಕಪಿವೀರರು ಸೀತೆಯನ್ನು ಹುಡುಕುತ್ತಾ, ಅಲೆಯುತ್ತಾ ಬಳಲಿದರು. ಸುಗ್ರೀವನು ಕೊಟ್ಟ ಅವಧಿಯು ಮುಗಿಯುತ್ತಾ ಬಂದಿತ್ತು. ಸುಗ್ರೀವನ ಆಜ್ಞೆಯು ನೆರವೇರದಿದ್ದರೆ ಸಾವೇ ಗತಿ! ಯುವರಾಜ ಅಂಗದ ಹತಾಶನಾದ. ತನ್ನ ನಿರಾಶೆಯನ್ನು, ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯನ್ನು ಇತರರೊಂದಿಗೆ ಹಂಚಿದಾಗ ಕೆಲವರು ಸಹಮತ ವ್ಯಕ್ತಪಡಿಸಿದರು. ಆಗ ಹನುಮನು ಅವರಿಗೆ- " ರಾವಣವಧೆಗಾಗಿ ಬ್ರಹ್ಮನ ಕೋರಿಕೆಯಂತೆ ಮಹಾವಿಷ್ಣುವೇ ರಾಮನಾಗಿ ಅವತರಿಸಿದನು. ಮಹಾಲಕ್ಷ್ಮಿಯು ಸೀತೆಯಾಗಿ ಬಂದಳು. ಆದಿಶೇಷನು ಲಕ್ಷ್ಮಣನಾಗಿ ಜನಿಸಿದನು. ಭರತ- ಶತ್ರುಘ್ನರಾಗಿ ಮಹಾವಿಷ್ಣುವಿನ ಗದೆ- ಚಕ್ರಗಳು ಅವತರಿಸಿದವು. ನಾವೆಲ್ಲರೂ ವೈಕುಂಠದಲ್ಲಿ ಅವನ ಪಾರ್ಷದ (ಒಡನಾಡಿ/ಸೇವಕ) ರಾಗಿದ್ದವರು. ಅವನ ಸೇವೆಗಾಗಿ ಕಪಿ-ಕರಡಿಗಳಾಗಿ ಹುಟ್ಟಿದೆವು. ಅವನ ಅವತಾರದ ಉದ್ದೇಶವನ್ನು ಈಡೇರಿಸಿ ಅವನೊಂದಿಗೆ ಪುನಃ ವೈಕುಂಠವನ್ನು ಸೇರಬೇಕೆಂದಾದರೆ ಸೀತಾನ್ವೇಷಣೆ ಯಲ್ಲಿ ನಾವು ಯಶಸ್ವಿಯಾಗಬೇಕು, ರಾಮನ ಒಲವನ್ನು ಗಳಿಸಬೇಕು. ಅದಕ್ಕಾಗಿ ಪ್ರಯತ್ನ ಮುಂದುವರಿಸೋಣ" ಎಂದನು. ಹನುಮನ ಪ್ರೇರಣಾತ್ಮಕ ಮಾತುಗಳಿಂದ ಕಪಿವೀರರು ಮತ್ತೆ ಕಾರ್ಯೋನ್ಮುಖರಾದರು.


ಕಾಡು-ಗುಹೆಗಳನ್ನು ಸುತ್ತಿ ಸುತ್ತಿ ಸೀತೆಯನ್ನು ಹುಡುಕಿದ ಕಪಿವೀರರು ಸಮುದ್ರದ ತೀರದ ತನಕ ಬಂದರು. ವಿಸ್ತಾರವಾದ ಘನಗಂಭೀರ ಸಮುದ್ರವನ್ನು ನೋಡಿ ಮುಂಗಾಣದಾದರು. ಮತ್ತೊಮ್ಮೆ ನಿರಾಶೆ- ಹತಾಶೆಗಳ ಮೋಡಗಳು ಕವಿದವು. ಈಗಂತೂ ಸುಗ್ರೀವನ ಶಿಕ್ಷೆಗೊಳಗಾಗಿ ಪ್ರಾಣ ಬಿಡುವ ಬದಲು ಪ್ರಾಯೋಪವೇಶವೇ ಮೇಲು ಎಂದು ನಿರ್ಧರಿಸಿದರು. ಇದು ಎಲ್ಲರ ನಿರ್ಧಾರವಾಗಿತ್ತು. ಕಡಲಿನ ತೀರದಲ್ಲಿ ದರ್ಭೆಯನ್ನು ಹಾಸಿ ಮಲಗಿದರು. 


ಅಲ್ಲಿಯೇ ಹತ್ತಿರದ ಬೆಟ್ಟದಲ್ಲಿದ್ದ ರೆಕ್ಕೆಗಳಿಲ್ಲದ ಒಂದು ಹದ್ದು ಇವರನ್ನು ನೋಡಿ- " ನನಗಿಂದು ಸುಲಭದಲ್ಲಿ ಆಹಾರ ಸಿಕ್ಕಿತು" ಎಂದು ಸಂತಸಪಡುತ್ತಾ ಇವರನ್ನು ತಿನ್ನಲೆಂದು ಹತ್ತಿರಕ್ಕೆ ಬಂತು. ಸಾಯಲು ಹೊರಟವರಿಗೆ ಸಾವಿನ ಭಯವುಂಟಾಯಿತು! ಕಳೆದ ದಿನಗಳು- ಘಟನೆಗಳು ನೆನಪಿಗೆ ಬಂದು ಮಾತಾಡತೊಡಗಿದರು. ಹದ್ದಿನ ಬಾಯಿಗೆ ಸಿಕ್ಕಿ ವ್ಯರ್ಥವಾಗಿ ಸಾಯುವುದರಿಂದ ಸಾಧಿಸುವುದೇನೂ ಇಲ್ಲ. ಅತ್ತ ಸುಗ್ರೀವನ ಆಜ್ಞೆಯನ್ನು ನೆರವೇರಿಸಿದಂತಾಗಲಿಲ್ಲ, ಇತ್ತ ರಾಮನ ಸೇವೆಯನ್ನೂ ಮಾಡಿದಂತಾಗಲಿಲ್ಲ. ನಮಗಿಂತ ಜಟಾಯುವೇ ಮೇಲು! ಸೀತಾಪಹರಣವನ್ನು ತಡೆಯಲು ಹೋಗಿ ಹುತಾತ್ಮನಾದ ಜಟಾಯುವು ರಾಮನ ಕೈಯಿಂದ ಮೋಕ್ಷವನ್ನು ಗಳಿಸಿದ ಪುಣ್ಯಾತ್ಮ."- ಎನ್ನುತ್ತಿರುವಾಗ ಹದ್ದಿನ ಕಿವಿಯು ನೆಟ್ಟಗಾಯಿತು. ಆ ಹದ್ದು ಜಟಾಯುವಿನ ಅಣ್ಣ ಸಂಪಾತಿ. ಸಂಪಾತಿಯು ಕಪಿಗಳ ಸಮೀಪಕ್ಕೆ ಬಂದು ತನ್ನ ಪರಿಚಯವನ್ನು ಹೇಳಿ ಜಟಾಯುವಿನ ಕುರಿತು ಕೇಳಿದ. ಕಪಿಗಳು ಜಟಾಯುವಿನ ಮರಣದ ವಿಷಯವನ್ನು ಹೇಳಿದರು. ಜಟಾಯುವಿನ ಸಾರ್ಥಕ ಜೀವನವನ್ನು ನೆನಪಿಸಿದ ವೃದ್ಧ ಸಂಪಾತಿಯು ಜಟಾಯುವಿಗೆ ತರ್ಪಣವನ್ನು ನೀಡಿದನು.



ಸಂಪಾತಿಯು ತನ್ನ ಈಗಿನ ಅವಸ್ಥೆಯ ಹಿನ್ನೆಲೆಯನ್ನು ಕಪಿವೀರರಿಗೆ ಪುಟ್ಟದಾಗಿ ಹೇಳಿದ.

"ಜಟಾಯುವು ನನ್ನ ತಮ್ಮ. ಯೌವನದ ಮದದಲ್ಲಿದ್ದ ನಾವು ನಮ್ಮಲ್ಲಿ ಯಾರು ಬಲಿಷ್ಠರೆಂದು ತಿಳಿಯಲು ಸೂರ್ಯಮಂಡಲದತ್ತ ಹಾರಿದೆವು. ಆಗ ಸೂರ್ಯನ ಕಿರಣಗಳಿಂದ  ಜಟಾಯುವು ಸುಡತೊಡಗಿದಾಗ ನಾನು ಅವನಿಗೆ ನನ್ನ ರೆಕ್ಕೆಗಳ ನೆರಳನ್ನಿತ್ತು ಕಾಪಾಡಿದೆ. ಆಗ ನನ್ನ ರೆಕ್ಕೆಗಳು ಸುಟ್ಟುಹೋಗಿ ವಿಂಧ್ಯಪರ್ವತದ ತಪ್ಪಲಿನಲ್ಲಿ  ಎಚ್ಚರ ತಪ್ಪಿ ಬಿದ್ದೆ. ಎಚ್ಚರವಾದಾಗ ಅಲ್ಲಿಯೇ ಸಮೀಪ ಇರುವ ಚಂದ್ರಮ ಮುನಿಗಳ ಆಶ್ರಮವು ಕಂಡಿತು. ತೆವಳುತ್ತಾ ಅವರಲ್ಲಿಗೆ ಹೋಗಿ ನಡೆದ ದುರ್ಘಟನೆಯನ್ನು ಹೇಳಿ ಪರಿಹಾರೋಪಾಯವನ್ನು ಸೂಚಿಸಲು ವಿನಂತಿಸಿದೆ. ಆಗ ಅವರು- "ತ್ರೇತಾಯುಗದಲ್ಲಿ ರಾಮನ ಪತ್ನಿಯನ್ನು ಹುಡುಕುತ್ತಾ ಕಪಿವೀರರು ಸಮುದ್ರದ ತೀರಕ್ಕೆ ಬರಲಿರುವರು. ಆಗ ನೀನು ಅವರನ್ನು ಭೇಟಿಯಾಗುವೆ. ಸೀತೆಯ ಬಗೆಗೆ ನಿನಗೆ ಗೊತ್ತಿರುವಷ್ಟನ್ನು ಅವರಿಗೆ ಹೇಳಿದಾಗ ನಿನಗೆ ರೆಕ್ಕೆಗಳು ಮರಳಿ ಹುಟ್ಟುತ್ತವೆ"- ಎಂದಿದ್ದರು. ಸಂಪಾತಿಯು "ದಾಟಲು ಅಸಾಧ್ಯವಾದ ಈ ಸಮುದ್ರವನ್ನು ದಾಟಿ ಲಂಕೆಗೆ ಹೋಗಿ. ಅಲ್ಲಿ ಸೀತೆಯಿರುವಳು" ಎಂದು ಹೇಳುವ ಹೊತ್ತಿಗೆ ಅವನಿಗೆ ಹೊಸ ರೆಕ್ಕೆಗಳು ಹುಟ್ಟಿದವು. ಕಪಿಗಳಿಗೆ ಶುಭವನ್ನು ಹಾರೈಸಿ ಅವನು ತನ್ನ ದಾರಿಯನ್ನು ಹಿಡಿದನು.


ಈಗ ಸಮುದ್ರವನ್ನು ದಾಟುವ ಬಗೆಗೆ ಚಿಂತೆ! ಯಾರು ದಾಟುವುದು? ಹತ್ತಾರು ಯೋಜನಗಳನ್ನು ಹಾರುವವರಿದ್ದಾರೆ. ಅದು ಸಾಲದು. ಅಂಗದನಿಗೆ ನೂರು ಯೋಜನಗಳನ್ನು ಹಾರಿ ದಾಟುವ ಸಾಮರ್ಥ್ಯವಿದೆ.  ಆದರೆ ಹಿಂದಿರುಗುವ ಸಾಮರ್ಥ್ಯದ ಬಗೆಗೆ ಖಚಿತವಾಗಿ ಹೇಳಲಾಗುವುದಿಲ್ಲ. ಅವನು ಯುವರಾಜನಾದ ಕಾರಣ ಅವನನ್ನು ಕಳುಹಿಸುವುದು ಸೂಕ್ತವಲ್ಲವೆಂದು ಜಾಂಬವಂತನು ಅಭಿಪ್ರಾಯ ಪಟ್ಟನು. 

ಇನ್ನು ಹನುಮನ ಸರದಿ.

ಚಿಂತಾಮಗ್ನನಾಗಿ ಕುಳಿತ ಹನುಮನಿಗೆ ಜಾಂಬವಂತನು- "ಹನುಮ, ಬಾಲ್ಯದಲ್ಲೇ ಹಣ್ಣಿಗಾಗಿ ಐನ್ನೂರು ಯೋಜನೆಯ ದೂರವನ್ನು ಹಾರಿದವನು ನೀನು! ಈಗ ಈ ರಾಮನ ಸೇವಾಕಾರ್ಯವನ್ನು ನೀನೇ ಮಾಡು" ಎಂದು ಹುರಿದುಂಬಿಸಿದನು. ಹನುಮಂತನಿಗೆ ಬ್ರಹ್ಮಾನಂದವಾಯಿತು. ಬ್ರಹ್ಮಾಂಡವೇ ಸಿಡಿಯುವಂತಹ ಸಿಂಹನಾದವನ್ನು ಮಾಡಿದ. "ವಾನರರೇ! ನಾನು ಸಮುದ್ರವನ್ನು ದಾಟಿ, ಲಂಕೆಯನ್ನು ಸುಟ್ಟು ಬೂದಿಮಾಡಿ, ರಾಕ್ಷಸಕುಲ ಸಹಿತ ರಾವಣನನ್ನು ಕೊಂದು ಸೀತೆಯನ್ನು ತಂದು ಬಿಡುವೆನು. ಅಥವಾ ರಾವಣನ ಕುತ್ತಿಗೆಗೆ ಹಗ್ಗ ಬಿಗಿದು ತ್ರಿಕೂಟ ಸಹಿತ ಲಂಕೆಯನ್ನು ಕಿತ್ತು ತಂದು ರಾಮನ ಎದುರಿಡುವೆನು. ಅಥವಾ ಶುಭದೆಯಾದ ಸೀತೆಯನ್ನು ಕಂಡೇ ಹಿಂದಿರುಗುವೆನು" ಎಂದು ಹನುಮನು ಗರ್ಜಿಸಿದನು. ಆಗ ಜಾಂಬವಂತನು "ನೀನು ಕೇವಲ ಶುಭದೆಯಾದ ಸೀತೆಯನ್ನು ಕಂಡು ಬಾ. ಅನಂತರ ರಾಮನೊಂದಿಗೆ ನಿನ್ನ ಸಾಹಸ ಕಾರ್ಯವನ್ನು ತೋರಿಸುವೆಯಂತೆ. ನಿನಗೆ ಶುಭವಾಗಲಿ. ಆಕಾಶಮಾರ್ಗದಲ್ಲಿ ಹೋಗುವ ನಿನ್ನನ್ನು ವಾಯುದೇವನು ಹಿಂಬಾಲಿಸಲಿ" ಎಂದನು.


ವಾನರರು ಹನುಮನನ್ನು ಹರಸಿ ಬೀಳ್ಕೊಟ್ಟರು. ಹನುಮನು ಮಹೇಂದ್ರಪರ್ವತವನ್ನೇರಿ ಪರ್ವತಾಕಾರದ ಅದ್ಭುತರೂಪವನ್ನು ಧರಿಸಿದನು. 


ಕಿಷ್ಕಿಂಧಾಕಾಂಡಕ್ಕೆ ಮಂಗಳ


ಮುಂದುವರಿಯುವುದು....

- ವಿಶ್ವೇಶ್ವರ ಭಟ್ಟ ಉಂಡೆಮನೆ, ಬೆಳ್ತಂಗಡಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top