ವ್ಯಕ್ತಿಯನ್ನು ನೋಡಿ ಮಾಡುವ ಸ್ನೇಹಕ್ಕಿಂತ, ವ್ಯಕ್ತಿತ್ವ ನೋಡಿ ಮಾಡುವ ಸ್ನೇಹ ಎಲ್ಲದಕ್ಕಿಂತಲೂ ಮಿಗಿಲು ಎಂಬ ಮಾತಿದೆ. ಅದೇ ರೀತಿ ಒಂದು ಅಪರಿಚಿತ ಸ್ನೇಹ ನನ್ನ ಬದುಕಿನ ಹಾದಿಯನ್ನು ಬದಲಿಸಿತು. ನಾನು ನನ್ನ ಪಾಡು ಆಯಿತು ಎಂದು ಇದ್ದವಳು, ಆಕೆಯ ಜೊತೆಗೆ ಒಂದು ಬಂಧ ಬಿಗಿಯಾಯಿತು. ಮುಂಚೆ ಯಾವತ್ತೂ ಆಕೆಯನ್ನು ನೋಡಿರಲಿಲ್ಲ, ಅವಳಿಗೂ ನನ್ನ ಪರಿಚಯವಿರಲಿಲ್ಲ. ಆದರೂ ಒಬ್ಬರಿಂದೊಬ್ಬರು ಸಹಜವಾಗಿ ಮಾತನಾಡುತ್ತಿದ್ದೆವು. ಯಾವಾಗ ನಮ್ಮ ಸ್ನೇಹ ಇಷ್ಟು ಬಿಗಿಯಾಯ್ತು ಎಂದು ತಿಳಿದಿಲ್ಲ. ಆದರೆ ಆಕೆ ನನಗೆ ಸಿಕ್ಕ ನಂತರದಿಂದ ಏನೋ ನನ್ನಲ್ಲೇ ನಾನು ಬದಲಾವಣೆಯ ಕಂಡೆನು.
ಯಾರೊಂದಿಗೂ ಹೆಚ್ಚಾಗಿ ಬೆರೆಯದ ನಾನು ಅವಳೊಂದಿಗೆ ತನ್ನ ನೋವನ್ನು ಹೇಳಿಕೊಂಡು ಸಮಾಧಾನ ಪಡುತ್ತಿದ್ದೆ. ತನಗೆ ಏನೇ ಕಷ್ಟ ಬಂದರೂ ಅವಳಲ್ಲಿ ಹಂಚಿಕೊಂಡರೆ ಏನೋ ಒಂದು ರೀತಿಯ ಸಮಾಧಾನ. ಎಂತದ್ದೇ ಕಷ್ಟ ಆದರೂ ಅದಕ್ಕೊಂದು ಸರಿಯಾದ ಪರಿಹಾರ ಅಥವಾ ಯಾವ ರೀತಿ ಎದುರಿಸಿ ನಿಲ್ಲಬೇಕು ಎನ್ನುವುದನ್ನು ನನಗೆ ಅರ್ಥ ಮಾಡಿಸುತ್ತಿದ್ದಳು.
ನಮ್ಮ ಸ್ನೇಹ ಎಷ್ಟರಮಟ್ಟಿಗೆ ಬೆಳೆಯಿತು ಎಂದರೆ ಒಬ್ಬರನ್ನೊಬ್ಬರು ಬಿಟ್ಟಿರದಷ್ಟು. ಇಬ್ಬರಲ್ಲಿ ಯಾರೇ ಒಬ್ಬರು ಬರದಿದ್ದರೂ ಕೇಳುವ ಒಂದು ಪ್ರಶ್ನೆ ನಿನ್ನ ಬಾಲ ಎಲ್ಲಿ ಇದೆ ಎಂದು, ಅಷ್ಟರವರೆಗೆ ನಾವು ಆಪ್ತರಾಗಿದ್ದೆವು. ಆಕೆ ಪ್ರತಿಯೊಂದು ವಿಚಾರವನ್ನೂ ನನ್ನೊಂದಿಗೆ ಹಂಚಿಕೊಳ್ಳುತ್ತಿದ್ದಳು. ಅವಳಿಗೆ ಏನೇ ಬೇಜಾರ್ ಆದ್ರೂ ನನ್ನಲ್ಲಿ ಹೇಳುತ್ತಿದ್ದಳು. ಖುಷಿಯಾಗಲಿ, ದುಃಖ ಆಗಲಿ ಪ್ರತಿಯೊಂದನ್ನು ಹಂಚಿಕೊಳ್ಳುತ್ತಿದ್ದೆವು.
ಅವಳು ನನ್ನೊಂದಿಗೆ ಇದ್ದರೆ ಏನೋ ಒಂದು ರೀತಿಯ ಧೈರ್ಯ. ಹಾಗೆಯೇ ಏನೇ ತೊಂದರೆಯಾದರೂ ಎದುರಿಸಿ ನಿಲ್ಲುತ್ತೇನೆ ಎಂಬ ಅವಳ ವಿಶ್ವಾಸ ನನ್ನನ್ನು ಇನ್ನಷ್ಟು ಅವಳೊಂದಿಗೆ ಬೆರೆತುಕೊಳ್ಳುವಂತೆ ಮಾಡಿತು.
ಅವಳ ವ್ಯಕ್ತಿತ್ವ ಹೇಗೆಂದರೆ, ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುವವಳು. ಆಕೆ ಎಷ್ಟೊಂದು ಚಾಲು ಎಂದರೆ ಯಾರನ್ನು ಬೇಕಾದರೂ ಮಾರಿ ಬರುವಳು ಎಂಬ ಮಾತಿನಂತೆ. ಅವಳು ಯಾವುದೇ ಕೆಲಸದಲ್ಲಿದ್ದರೂ ಅವಳೊಂದಿಗೆ ಜಗಳವಾಡದೇ ಇರಲು ನನ್ನಿಂದ ಆಗುತ್ತಿರಲಿಲ್ಲ. ಅವಳ ಬೈಗುಳ ಕೇಳುವುದೇ ಒಂದು ಖುಷಿ. ಅವಳೊಂದಿಗೆ ಮಾತಾಡುತ್ತಿದ್ದರೇ ಏನೋ ಒಂದು ತರಹದ ಸಂತೋಷ ಸಿಗುತ್ತಿತ್ತು. ನಾವಿಬ್ಬರು ಒಂದೇ ಕಡೆ ಸೇರಿದರೆ ಹೇಳುವುದೇ ಬೇಡ ಅಷ್ಟರ ಮಟ್ಟಿಗೆ ತರ್ಲೆ ಮಾಡುತ್ತೇವೆ. ನಾವು ಎಷ್ಟು ಸಲ ಶಿಕ್ಷಕರಿಂದ ಬಯಸಿಕೊಂಡದ್ದು ಎಂಬುದು ನಮಗೇ ತಿಳಿದಿಲ್ಲ. ನಮ್ಮಿಬ್ಬರ ಮಾತಲ್ಲೂ ಬರುವ ಒಂದೇ ಉತ್ತರ ಈಗ ಜಾಲಿ ಮಾಡಿದ್ರೆ ಆಯ್ತು, ಇನ್ಯಾವಾಗ ಮಾಡುವುದು ಎಂದು. ಯಾರು ಏನೇ ಹೇಳಿದರೂ ನಾವು ಮಾತ್ರ ಸದಾ ಜೊತೆಗೇ ಇರುತ್ತೇವೆ ಎಂಬ ಭರವಸೆ.
ಸ್ನೇಹ ಎಂಬುದು ಸುಖದಲ್ಲಿ ಜೊತೆಗಿದ್ದು, ದುಃಖದಲ್ಲಿ ಕೈ ಬಿಡುವುದಲ್ಲ. ಸಂತೋಷ ಆಗಲಿ ದುಃಖಾನೇ ಆಗಲಿ ಸದಾ ಜೊತೆಗಿರುವುದೇ ನಿಜವಾದ ಸ್ನೇಹ. ಸ್ನೇಹದಲ್ಲಿ ಯಾರು ಬಡವ ಶ್ರೀಮಂತ ಎಂದು ಬೇಧ-ಭಾವ ಮಾಡುತ್ತಾರೋ ಅಂತ ಸ್ನೇಹವನ್ನು ಯಾವತ್ತಿಗೂ ನಂಬಬಾರದು. ಕಾರಣ ಅವರು ನಮ್ಮ ಶ್ರೀಮಂತಿಕೆಯನ್ನು ಮಾತ್ರ ಮೆಚ್ಚಿಕೊಂಡಿರುತ್ತಾರೆ.
ಹಿರಿಯರು ಆಡುವ ಪ್ರತೀ ಮಾತಲ್ಲೂ ಒಂದೊಂದು ಅರ್ಥ ಇದ್ದೇ ಇರುತ್ತದೆ. ಅದೇ ರೀತಿ, ಗೆಳೆತನ ಮಾಡುವಾಗ ನೋಡಿಕೊಂಡು ಮಾಡು ಎಂಬ ಮಾತಿದೆ. ಏಕೆಂದರೆ ನಮ್ಮ ಜೀವನದಲ್ಲಿ ಬರುವ ಸ್ನೇಹಿತರೆಲ್ಲಾ ಒಳ್ಳೆಯವರು ಎಂದು ಭಾವಿಸುವುದು ನಮ್ಮ ಮೂರ್ಖತನ. ಸ್ನೇಹ ಆಗಲಿ ಏನೇ ಆಗಲಿ ಆ ವ್ಯಕ್ತಿಯ ವ್ಯಕ್ತಿತ್ವ ಏನು ಎಂಬುದನ್ನು ತಿಳಿದುಕೊಂಡಿರಬೇಕು.
ಸ್ನೇಹ ಎಂದ ಮೇಲೆ ಅದ್ರಲ್ಲಿ ಒಬ್ಬರಿಗೆ ತಾಳ್ಮೆ ಇರಲೇಬೇಕು. ಇಲ್ಲವಾದಲ್ಲಿ ಆ ಸ್ನೇಹ ತುಂಬ ದಿನ ಉಳಿಯುವುದಿಲ್ಲ. ಆದರೆ ನಮ್ಮಲ್ಲಿ ಅವಳಿಗೆ ತುಂಬಾನೇ ತಾಳ್ಮೆ. ಅದೇ ಕಾರಣಕ್ಕಾಗಿರಬೇಕು ನಮ್ಮ ಸ್ನೇಹ ಇಷ್ಟೊಂದು ಸ್ಟ್ರಾಂಗ್. ಅಕಸ್ಮಾತಾಗಿ ಸಿಕ್ಕಂತ ಈ ಸ್ನೇಹ ಊಹಿಸಿದಕ್ಕೂ ಹೆಚ್ಚಾಗಿಯೇ ಬಿಗಿಯಾಗಿದೆ. ಹಾಗಾಗಿ, ಯಾವತ್ತಿಗೂ ನಮ್ಮ ಸ್ನೇಹ ಇಷ್ಟೇ ಬಾಂಧವ್ಯದಿಂದಿರಲಿ ಎಂದೇ ಆಶಿಸುತ್ತೇನೆ.
-ಧನ್ಯಶ್ರೀ
ವಿವೇಕಾನಂದ ಕಾಲೇಜು ಪುತ್ತೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ