ಶಾಲೆಯಿಂದ ಓಡೋಡಿ ಬಂದ ಆ ಮಗು ತನ್ನ ತಾಯಿಯ ಕೈಯಲ್ಲಿ ಶಿಕ್ಷಕರು ನೀಡಿದ ಪತ್ರವನ್ನು ಕೊಟ್ಟನು. ಮಗನಿಗೆ ಕೈಕಾಲು ಮುಖ ತೊಳೆದುಕೊಳ್ಳಲು ಹೇಳಿದ ಆ ತಾಯಿ ಪತ್ರವನ್ನು ಓದಿ ಮುಗಿಸಿದಾಗ ಆಕೆಯ ಕಣ್ಣಲ್ಲಿ ನೀರು ತುಂಬಿತ್ತು. ಮಗುವಿನ ಶಿಕ್ಷಕಿ ನಿಮ್ಮ ಮಗುವಿನ ಬುದ್ಧಿ ಅತ್ಯಂತ ಮಂದವಾಗಿದ್ದು ಆತನನ್ನು ಜಗತ್ತಿನ ಯಾವುದೇ ಶಾಲೆಯು ಸುಧಾರಿಸಲು ಸಾಧ್ಯವಿಲ್ಲ, ಆದ್ದರಿಂದ . ಇನ್ನು ಮುಂದೆ ಆತನನ್ನು ನಮ್ಮ ಶಾಲೆಯಲ್ಲಿ ಇಟ್ಟುಕೊಳ್ಳಲಾಗುವುದಿಲ್ಲ ಎಂದು ಬರೆದಿದ್ದು ಸಹಜವಾಗಿಯೇ ತಾಯಿಯ ಮನಸ್ಸಿಗೆ ನೋವಾಯಿತು.
ಮುಖ ತೊಳೆದು ಬಂದ ಮಗು ತಾಯಿಯನ್ನು "ಅಮ್ಮ,,ಏಕೆ ಹೀಗೆ ಅಳುತ್ತಿರುವೆ, ಶಿಕ್ಷಕರು ಏನೆಂದು ಬರೆದಿದ್ದಾರೆ" ಎಂದು ಕೇಳಿದಾಗ ಆ ತಾಯಿ ತನ್ನ ಕಣ್ಣೀರನ್ನು ತೊಡೆದು "ಏನೂ ಇಲ್ಲ ಕಂದ, ನಿನ್ನನ್ನು ಹೊಗಳಿ ನಿನ್ನ ಶಿಕ್ಷಕರು ಪತ್ರ ಬರೆದಿದ್ದಾರೆ. ನಿನಗೆ ಕಲಿಸುವಷ್ಟು ಜಾಣ್ಮೆ ಆ ಶಾಲೆಯಲ್ಲಿ ಯಾರಿಗೂ ಇಲ್ಲ ಆದ್ದರಿಂದ ನಿನ್ನನ್ನು ಬೇರೊಂದು ಉತ್ತಮ ಶಾಲೆಗೆ ಕಳುಹಿಸು" ಎಂದು ಬರೆದಿದ್ದಾರೆ ಎಂದು ಹೇಳಿ "ಶೀಘ್ರವೇ ನಿನಗೊಂದು ಉತ್ತಮ ಶಾಲೆಯಲ್ಲಿ ದಾಖಲಾತಿ ಪಡೆಯೋಣ" ಎಂದು ಹುರಿದುಂಬಿಸಿ ಮಗನಿಗೆ ತಿಂಡಿ ಕೊಟ್ಟು ಆಟಕ್ಕೆ ಕಳುಹಿಸಿದಳು.
ಮುಂದೆ ಬಾಲಕನ ತಾಯಿ ತನ್ನ ಮಗನನ್ನು ದೂರದ ಬೇರೊಂದು ಶಹರಕ್ಕೆ ಕರೆದೊಯ್ದು ಆಕೆ ಆತನ ಶಿಕ್ಷಣ ಮತ್ತು ಸರ್ವತೋಮುಖ ಬೆಳವಣಿಗೆಯ ಕುರಿತು ಹೆಚ್ಚಿನ ಗಮನ ಹರಿಸಿ ಬೆಳೆಸಿದಳು. ತನ್ನಿಡೀ ಜೀವಿತವನ್ನು ಮಗನಿಗಾಗಿ ಮೀಸಲಿಟ್ಟಳು. ಮುಂದೆ ಆ ಮಗು ಬೆಳೆದು ದೊಡ್ಡವನಾಗಿ ಜಗತ್ಪ್ರಸಿದ್ಧ ವಿಜ್ಞಾನಿಯಾಗಿ ವಿದ್ಯುತ್ ದೀಪವನ್ನು ತಯಾರಿಸಿದ. ಆತನೇ ಥಾಮಸ್ ಅಲ್ವಾ ಎಡಿಸನ್.
ಜಗತ್ಪ್ರಸಿದ್ಧ ವಿಜ್ಞಾನಿಯಾಗಿದ್ದ ಥಾಮಸ್ ಅಲ್ವಾ ಎಡಿಸನ್ ಮುಂದೆ ತನ್ನ ತಾಯಿಯ ಮರಣ ನಂತರ ಆಕೆಯ ಪೆಟ್ಟಿಗೆಯನ್ನು ಶೋಧಿಸಿದಾಗ ಆತನ ಶಿಕ್ಷಕಿ ಬರೆದ ಈ ಪತ್ರ ದೊರೆಯಿತು. ಪತ್ರವನ್ನು ಓದಿದ ಥಾಮಸ್ ಅಲ್ವಾ ಎಡಿಸನ್.... ಒಬ್ಬ ತಾಯಿ ಮಾತ್ರ ತನ್ನ ಮಂದ ಬುದ್ಧಿಯ ಮಗನಲ್ಲೂ ಕೂಡ ಓರ್ವ ವಿಜ್ಞಾನಿಯನ್ನು ಪೋಷಿಸುವ ಧೀಮಂತಿಕೆಯನ್ನು ಹೊಂದಿರುತ್ತಾಳೆ ಎಂದು ಗದ್ದದಿತರಾಗಿ ಉದ್ದರಿಸಿದರು.
ನೋಡಿದಿರಾ ಸ್ನೇಹಿತರೆ, ಪ್ರೀತಿ ವಾತ್ಸಲ್ಯ ಮಮತೆಗೆ ಹೆಸರಾದ ತಾಯಿ ಮನಸ್ಸು ಮಾಡಿದರೆ ಅಜ್ಞಾನ, ಅಂಧಕಾರ ತುಂಬಿ ತುಳುಕುವಲ್ಲಿ ಕೂಡ ಜ್ಞಾನದ ಹಣತೆಯನ್ನು ಹಚ್ಚಬಲ್ಲಳು ಎಂಬುದಕ್ಕೆ ಮೇಲಿನ ಈ ಕಥೆಯೇ ಉದಾಹರಣೆ. ಇದುವೇ ತಾಯ್ತನಕ್ಕಿರುವ ತಾಕತ್ತು. ಏನಂತೀರಾ?
ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ