ಸೆಲ್ಕೋ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ಅನ್ನಪೂರ್ಣ ಛತ್ರ ಮತ್ತು ಕಾರ್ ಮ್ಯೂಸಿಯಂನಲ್ಲಿ ಸೌರಶಕ್ತಿ ಬಳಕೆಗೆ ಚಾಲನೆ:

Upayuktha
0


 ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ನಿತ್ಯವೂ ಸಾವಿರಾರು ಮಂದಿ ಭಕ್ತಾದಿಗಳಿಗೆ ನಡೆಯುತ್ತಿರುವ ಅನ್ನದಾನದ ಪುಣ್ಯಕಾರ್ಯಕ್ಕೆ ಸೆಲ್ಕೊ ಪ್ರತಿಷ್ಠಾನದ ಪ್ರಾಯೋಜಕತ್ವದಲ್ಲಿ ವಿದ್ಯುತ್ ಪೂರೈಕೆ ಅಳವಡಿಸಿರುವ ಸೆಲ್ಕೊ ಪ್ರತಿಷ್ಠಾನದ ಅಧಿಕಾರಿಗಳನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಭಿನಂದಿಸಿದರು.


ಅವರು ಸೋಮವಾರ ಧರ್ಮಸ್ಥಳದಲ್ಲಿ ಅನ್ನಪೂರ್ಣ ಛತ್ರದಲ್ಲಿ ಸೆಲ್ಕೊ ಪ್ರತಿಷ್ಠಾನದ ಸಹಯೋಗದಲ್ಲಿ ಸೌರಶಕ್ತಿ ಬಳಕೆಗೆ ಚಾಲನೆ ನೀಡಿ ಶುಭ ಹಾರೈಸಿದರು. ಇದೊಂದು ಮಾದರಿ ಕಾರ್ಯಕ್ರಮವಾಗಿದ್ದು, ಇತರ ಸಂಸ್ಥೆಗಳೂ ಇದನ್ನು ಅನುಸರಿಸಬಹುದು ಎಂದು ಹೆಗ್ಗಡೆಯವರು ಸಲಹೆ ನೀಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಸೌರಶಕ್ತಿ ಬಳಕೆ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ಅರಿವು, ಜಾಗೃತಿ ಮೂಡಿಸಿ ಸೌರಶಕ್ತಿಯನ್ನು ಬಳಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಲಂಡನ್‌ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಆಶ್ಡೆನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಧನ್ಯತೆಯಿಂದ ಸ್ಮರಿಸಿಕೊಂಡರು. ಸದ್ಯದಲ್ಲೆ ಧರ್ಮಸ್ಥಳದಿಂದ  ಕೆಲವು ಹಿರಿಯ ನೌಕರರು ಶಿರ್ಡಿಗೆ ಹೋಗಿ ಸೌರಶ್ತಿ ಬಳಕೆ ಬಗ್ಯೆ ಅಧ್ಯಯನ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕುವರು. ಮುಂದೆ ಇಲ್ಲಿನ ಎಲ್ಲಾ ವಸತಿಛತ್ರಗಳು ಹಾಗೂ ಕಚೇರಿಗಳಲ್ಲಿಯೂ ಸೌರಶಕ್ತಿಯ ಸದುಪಯೋಗ ಮಾಡಲಾಗುವುದು ಎಂದು ಹೆಗ್ಗಡೆಯವರು ಹೇಳಿದರು.


ಸೆಲ್ಕೊ ಪ್ರತಿಷ್ಠಾನದ ಸಿ.ಇ.ಒ. ಭಾಸ್ಕರಮೋಹನ ಹೆಗಡೆ ಮಾತನಾಡಿ ಹರೀಶ್ ಹಂದೆಯವರ ನೇತೃತ್ವ ಮತ್ತು ದೂರದೃಷ್ಟಿಯ ಯೋಜನೆಯಿಂದ ಸೌರಶಕ್ತಿಯ ಬಳಕೆ ಹೆಚ್ಚಾಗುತ್ತಿದೆ. ಸೆಲ್ಕೊ ಪ್ರತಿಷ್ಠಾನವು ಜನರ ಅವಶ್ಯಕತೆಯ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ ಹೊರತು ಲಾಭದ ದೃಷ್ಟಿಕೋನದಿಂದ ಅಲ್ಲ. ಪೂಜ್ಯ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ 2001 ರಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ 1500 ಸೌರಘಟಕಗಳನ್ನು ಪ್ರಾರಂಭಿಸಿದ್ದು ಈಗ ಮೂರು ಲಕ್ಷ ಫಲಾನುಭವಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು. ಅನೇಕ ಬ್ಯಾಂಕ್‌ಗಳು ಮತ್ತು ವಿದೇಶಿ ಕಂಪೆನಿಗಳು ಕೂಡಾ ಸೌರಶಕ್ತಿ ಬಳಕೆ ಬಗ್ಯೆ ಸೆಲ್ಕೊ ಪ್ರತಿಷ್ಠಾನದೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ. ಇದರಿಂದಾಗಿ ಜನರ ಬದುಕು ಮತ್ತು ಮನಸು ಹಸನಾಗಿದೆ ಎಂದರು.


ಅನೇಕ ಮಂದಿ ಸೌರಶಕ್ತಿ ಬಳಕೆಯಿಂದ ಸ್ವ-ಉದ್ಯೋಗವನ್ನೂ ಯಶಸ್ವಿಯಾಗಿ ಪ್ರಾರಂಭಿಸಿದ್ದಾರೆ ಎಂದರು. ಧಾರವಾಡದಲ್ಲಿರುವ ಧರ್ಮಸ್ಥಳದ ತರಬೇತಿ ಸಂಸ್ಥೆಯಲ್ಲಿ ವರ್ಷಕ್ಕೆ ಎರಡೂವರೆ ಸಾವಿರ ಯುವತಿಯರಿಗೆ ತರಬೇತಿ ನೀಡುತ್ತಿದ್ದು ಅವರು ಸ್ವ-ಉದ್ಯೋಗ ಪ್ರಾರಂಭಿಸಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ ಎಂದರು.ಪ್ರಧಾನಿ ನರೇಂದ್ರ ಮೋದಿಯವರ ಉಜ್ವಲ ಯೋಜನೆಯಂತೆ ಸೌರಶಕ್ತಿ ಬಳಸಿದಾಗ ಸರ್ಕಾರದಿಂದ ಸಹಾಯಧನವೂ ಸಿಗುತ್ತದೆ ಎಂದರು.


ಸೆಲ್ಕೊ ಪ್ರತಿಷ್ಠಾನಕ್ಕೆ ಆರಂಭದಿಂದಲೂ ಸೌರಶಕ್ತಿ ಬಳಕೆ ಬಗ್ಯೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ನಿರಂತರ ಮಾರ್ಗದರ್ಶನ, ಪ್ರೇರಣೆ ಮತ್ತು ಪ್ರೋತ್ಸಾಹವನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು. ಸೆಲ್ಕೋದ ಡಿ.ಜಿ.ಎಂ. ಗುರುಪ್ರಸಾದ್ ಉಪಸ್ಥಿತರಿದ್ದರು. ಅನ್ನಪೂರ್ಣ ಛತ್ರಕ್ಕೆ 320 ಕಿಲೊ ವಾಟ್ ಸಾಮರ್ಥ್ಯದ ಘಟಕ ಹಾಗೂ ಕಾರ್ ಮ್ಯೂಸಿಯಂ ಗೆ 5 ಕಿಲೊವಾಟ್ ಸಾಮರ್ಥ್ಯದ ಘಟಕ ಸೇರಿದಂತೆ ಒಟ್ಟು 37 ಕಿಲೊವಾಟ್ ಸಾಮರ್ಥ್ಯದ ಎರಡು ಘಟಕಗಳನ್ನು ಅಳವಡಿಸಿ ಸೌರಶಕ್ತಿ ಬಳಕೆಯೊಂದಿಗೆ ವಿದ್ಯುತ್ ದೀಪ ಮತ್ತು ಫ್ಯಾನುಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗಿದೆ. ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಅನ್ನಪೂರ್ಣ ಛತ್ರದ ಪ್ರಬಂಧಕ ಸುಬ್ರಹ್ಮಣ್ಯಪ್ರಸಾದ್ ಸ್ವಾಗತಿಸಿದರು. ನವೀನ್ ಬೆಳ್ತಂಗಡಿ ಧನ್ಯವಾದವಿತ್ತರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top