ಯಲಹಂಕ: ‘ನಮ್ಮ ದೇಶದ ಎಲ್ಲ ಸಮಸ್ಯೆಗಳಿಗೆ ಆಡಳಿತ ನಡೆಸುವ ಕೆಲವರ ಅತಿ ದುರಾಸೆ, ಅಧಿಕವಾಗಿ ಹಣ ಗಳಿಸುವ ಹಂಬಲ ಹಾಗೂ ಭ್ರಷ್ಟ ಮನಸ್ಸುಗಳು ಕಾರಣ. ಹೀಗೆ ಸಾರ್ವಜನಿಕ ಹಣ ಹಾಗೂ ಸಂಪತ್ತು ದುರ್ಬಳಕೆಯಾದರೆ, ಸಮಾಜದಲ್ಲಿ ಅಶಾಂತಿ ಮತ್ತು ಗೊಂದಲಗಳು ಹೆಚ್ಚಾಗುತ್ತವೆ. ನಮ್ಮ ದೇಶ ಸುಸ್ಥಿತಿಯಲ್ಲಿ ಉಳಿಯಬೇಕಾದರೆ ನಮ್ಮ ಯುವ ಜನಾಂಗ ದೃಢ ಮನಸ್ಸಿನಿಂದ ಭ್ರಷ್ಟಾಚಾರ ರಹಿತ ಸಮಾಜವನ್ನು ಮತ್ತು ಸುವ್ಯವಸ್ಥಿತ ಆಡಳಿತ ವ್ಯವಸ್ಥೆಯನ್ನು ನಿರ್ಮಾಣ ಮಾಡಲು ಬದ್ಧತೆಯಿಂದ ಮುಂದಾಗಬೇಕು. ನಮ್ಮ ಯುವಕರು ಈ ನಿಟ್ಟಿನಲ್ಲಿ ಬಹುಸಂಖ್ಯೆಯಲ್ಲಿ ದೇಶದ ಹಿತಕ್ಕಾಗಿ ಒಗ್ಗೂಡಬೇಕು’ ಎಂದು ಸರ್ವೊಚ್ಛ ನ್ಯಾಯಾಲಯದ ನಿಕಟಪೂರ್ವ ನ್ಯಾಯಮೂರ್ತಿ ಹಾಗೂ ಕರ್ನಾಟಕದ ನಿಕಟಪೂರ್ವ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ನುಡಿದರು.
"ಮೊದಲು ಮಾನವನಾಗು" ಎಂಬ ವೇದವಾಕ್ಯ ನಮ್ಮ ಯುವಜನರಿಗೆ ನಿತ್ಯಮಂತ್ರವಾಗಬೇಕು. ಹುಟ್ಟಿನ ತರುವಾಯ ಮಾನವೀಯತೆ ಅಳವಡಿಸಿಕೊಂಡು ನಮ್ಮ ವ್ಯಕ್ತಿತ್ವ ರೂಪಿಸಿಕೊಂಡರೆ, ಅದಕ್ಕಿಂತ ಶ್ರೇಷ್ಠವಾದ ದೈವಾರಾಧನೆ ಮತ್ತೊಂದಿಲ್ಲ. ಅಲ್ಲದೆ ನಾವು ನಮ್ಮ ಬದುಕಿನ ಕಾಲಘಟ್ಟವೊಂದರಲ್ಲಿ ನಮಗೆ ಲಭ್ಯವಾಗಿರುವ ಸವಲತ್ತುಗಳ ಬಗ್ಗೆ ಸಂತೃಪ್ತಿ ಪಡುವ ಧೋರಣೆಯನ್ನು ಬೆಳೆಸಿಕೊಳ್ಳಬೇಕು. ಇನ್ನೂ ಬೇಕು ಎನ್ನುವ ಅತೃಪ್ತಿ ನಮ್ಮ ನೆಮ್ಮದಿಯ ನಿದ್ರೆಯನ್ನು ಹಾಳುಮಾಡುತ್ತದೆ, ಸದಾ ಭಯ ಹಾಗೂ ಆತಂಕಗಳ ನೆರಳಿನಲ್ಲಿ ನರಳುವ ಹಾಗೆ ಮಾಡುತ್ತದೆ’ ಎಂದು ವಿಶ್ಲೇಷಿಸಿದರು.
1999ರಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅಡಿಪಾಯ ಹಾಕುವ ಮಹದೋದ್ದೇಶದಿಂದ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ ಈಗ ಇಪ್ಪತ್ತೈದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ರಜತ ಮಹೋತ್ಸವದ ಸಂಭ್ರಮಾಚರಣೆಯಲ್ಲಿ ತೊಡಗಿದೆ. ಸಮಾರಂಭದಲ್ಲಿ ಸಂಸ್ಥೆಯ ಸೂತ್ರವನ್ನು ಹಿಡಿದಿದ್ದ ನಿಕಟಪೂರ್ವ ಪ್ರಾಂಶುಪಾಲರುಗಳಾದ ಪ್ರೊ. ವಿಕ್ಟರ್, ಡಾ. ಮೀರಾ ಕೃಷ್ಣಪ್ಪ ಹಾಗೂ ಡಾ. ಶಾಂತಿ ಅಯ್ಯರ್ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಸಂಸ್ಥೆಗೆ ಅಪೂರ್ವ ಕಾಣಿಕೆ ನೀಡಿರುವ ನೀಡುತ್ತಿರುವ ಸೇವಾನಿರತ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯವರನ್ನೂ ಅಭಿನಂದಿಸಲಾಯಿತು.
ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ತಮ್ಮ ಭಾಷಣದಲ್ಲಿ, ಸಂಸ್ಥೆಯಿಂದ ಸುತ್ತಮುತ್ತಣ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳ ಕಲಿಕೆಯ ಕನಸು ನನಸಾಗಿದೆ ಹಾಗೂ ಸಂಸ್ಥೆ ಸಂಶೋಧನೆಗಳಿಗೆ ಸೂಕ್ತ ವೇದಿಕೆ ಕಲ್ಪಿಸಿದೆ ಎಂದರು.
ಅನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್, ನಿಟ್ಟೆ ಶಿಕ್ಷಣ ಸಂಸ್ಥೆಯ ಅಕೆಡಮಿಕ್ ನಿರ್ದೇಶಕ ಡಾ. ಸಂದೀಪ್ ಶಾಸ್ತ್ರೀ, ನಿಟ್ಟೆ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಡಾ. ಎಂ. ವೇಣುಗೋಪಾಲ್, ಡಾ|| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಆರ್. ರಾಘವೇಂದ್ರ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ