ಬೆಂಗಳೂರು: ರಾಜಧಾನಿ ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ನಟನ ತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆ - ಸಂಸ್ಥೆ 20 ನೇ ವರ್ಷದ ಸಂಭ್ರಮೋತ್ಸವದ ಅಂಗವಾಗಿ ಜುಲ6 ಮತ್ತು 7ರಂದು ‘ನಾದ ನೃತ್ಯಾನುಭವ’ ವಿಶೇಷ ಗಾಯನ, -ವಾದನ ಮತ್ತು ನೃತ್ಯ ಸಮಾರಾಧನೆ, ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಯನಗರ 8ನೇ ಬಡಾವಣೆಯ ಶ್ರೀ ಜಯರಾಮ ಸೇವಾ ಮಂಡಳಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ನಟನ ತರಂಗಿಣಿ ಅಕಾಡೆಮಿಯ 5ನೇ ವಾರ್ಷಿಕೋತ್ಸವವೂ ಸಂಪನ್ನಗೊಳ್ಳಲಿದೆ. ಜು. 6ರ ಶನಿವಾರ ಮಧ್ಯಾಹ್ನ 2.30ಕ್ಕೆ ನಟನ ತರಂಗಣಿ ಸಂಸ್ಥೆಯ ವಿದ್ಯಾರ್ಥಿಗಳಿಂದ ಗಾಯನ ಮತ್ತು ವಾದ್ಯ ಸಂಗೀತ ಕಾರ್ಯಕ್ರಮದ ಮೂಲಕ ವಾರ್ಷಿಕೋತ್ಸವ ಚಾಲನೆ ಪಡೆಯಲಿದೆ.
ಸಂಜೆ 5ಕ್ಕೆ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಸಂಗೀತ ತಜ್ಞ, ಸಂಯೋಜಕ ಮತ್ತು ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಪ್ರೊ. ಅರವಿಂದ ಹೆಬ್ಬಾರ್, ಶಿವಮೊಗ್ಗದ ಸಂಗೀತ ಕಾರ್ಯಕ್ರಮಗಳ ಸಂಘಟಕ, ಕಲಾ ಪೋಷಕ ಸುಬ್ರಹ್ಮಣ್ಯ ಶಾಸ್ತ್ರಿ, ಚೆನ್ನೈನ ಪ್ರತಿಷ್ಠಿತ ದಾಸಪ್ರಕಾಶ್ ಕುಟುಂಬದ ಕೆ. ಗಂಗಾ ಪ್ರಸಾದ್, ಪುತ್ತೂರಿನ ಕರ್ನಾಟಕ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಶ್ರೀಹರಿ ಭಾಗವಹಿಸಲಿದ್ದಾರೆ .
ಶ್ರೀನಿವಾಸ್‌ಗೆ ನಾದಶ್ರೀ ಪ್ರಶಸ್ತಿ ಪ್ರದಾನ: ಇದೇ ಸಂದರ್ಭದಲ್ಲಿ ಬೆಂಗಳೂರಿನ ಮೃದಂಗ ಮತ್ತು ತಬಲಾ ತಯಾರಕ ವಿದ್ವಾನ್ ಶ್ರೀನಿವಾಸ ಅನಂತ ರಾಮಯ್ಯ ಅವರಿಗೆ ‘ನಾದ ಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಸಂಜೆ 5:30ಕ್ಕೆ ನಟನ ತರಂಗಣಿ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿಶೇಷ ನೃತ್ಯ ಪ್ರದರ್ಶನ ನಡೆಯಲಿದೆ. ಮೃದಂಗ ಪಕ್ಕವಾದ್ಯದಲ್ಲಿ ವಿದ್ವಾನ್ ಕೆ. ಕೆ. ಭಾನುಪ್ರಕಾಶ್ ಸಹಕಾರ ನೀಡಲಿದ್ದಾರೆ. ಸಂಜೆ 7.30 ಕ್ಕೆ ವಿಶೇಷ ನೃತ್ಯಪ್ರಸ್ತುತಿಯಲ್ಲಿ ಚೆನ್ನೈನ ಖ್ಯಾತ ಕಲಾವಿದೆ ವಿದುಷಿ ದಿವ್ಯಾ ವೇಣುಗೋಪಾಲ್ ಭರತನಾಟ್ಯ ಪ್ರದರ್ಶನ ಆಯೋಜನೆಗೊಂಡಿದೆ.
ವಿದ್ಯಾರ್ಥಿಗಳಿಂದ ವಾದ್ಯ ವೈಭವ:
ಜುಲೈ 7 ರ ಮಧ್ಯಾಹ್ನ 2 ಗಂಟೆಗೆ ನಟನ ತರಂಗಿಣಿ ಸಂಸ್ಥೆ ವಿದ್ಯಾರ್ಥಿಗಳಿಂದ ಗಾಯನ ಮತ್ತು ವಾದ್ಯ ವೈಭವ ನೆರವೇರಲಿದೆ. ಸಂಜೆ 6ಕ್ಕೆ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಜ್ಯೋತಿಷ್ಯ ಶಾಸ್ತ್ರಜ್ಞ, ಬೇಕಲ್ ಗೋಕುಲಂ ಗೋಶಾಲೆ ಸಂಸ್ಥಾಪಕ ವಿಷ್ಣು ಪ್ರಸಾದ ಹೆಬ್ಬಾರ್ ಮತ್ತು ನಾಗರತ್ನಾ ಹೆಬ್ಬಾರ್, ಬೆಂಗಳೂರಿನ ರಾಮಸೇವಾ ಮಂಡಳಿ ಕಾರ್ಯನಿರ್ವಾಹಕ ಅಭಿಜಿತ್ ವಾದಿರಾಜ್, ಉಡುಪಿಯ ಹಿರಿಯ ಸಂಗೀತ ತಜ್ಞ , ಸಂಯೋಜಕ, ರಂಜನಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಅರವಿಂದ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಟನ ತರಂಗಿಣಿ ಸಂಸ್ಥಾಪಕ ಅಧ್ಯಕ್ಷೆ ಡಾ. ವೈ.ಜಿ. ಪರಿಮಳಾ, ಕಾರ್ಯ ದರ್ಶಿಗಳಾದ ವಿದ್ವಾನ್ ನಿಕ್ಷಿತ್ ಪುತ್ತೂರು ಮತ್ತು ವಿದುಷಿ ವೈ. ಜಿ. ಶ್ರೀ ಲತಾ ಉಪಸ್ಥಿತರಿರಲಿದ್ದಾರೆ.
ಸುಬ್ರಹ್ಮಣ್ಯ ಶಾಸ್ತ್ರಿಗೆ ಕಲಾಶ್ರಯ ಪ್ರಶಸ್ತಿ :
ಶಿವಮೊಗ್ಗದ ಹಿರಿಯ ಸಂಗೀತ ಸಂಘಟಕ, ಕಲಾ ಪ್ರೇಮಿ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ಇದೇ ವೇದಿಕೆಯಲ್ಲಿ ‘ಕಲಾಶ್ರಯ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ನಂತರ ನಡೆಯಲಿರುವ ದ್ವಂದ್ವ ಗಾಯನದಲ್ಲಿ ಲತಾಂಗಿ ಸಹೋದರಿಯರು ಎಂದೇ ಖ್ಯಾತರಾದ ಅರ್ಚನಾ ಮತ್ತು ಸಮನ್ವಿ ಕರ್ನಾಟಕ ಶಾಸ್ತ್ರೀಯ ಸಂಗೀತ ಸುಧೆ ಹರಿಸಲಿದ್ದಾರೆ. ಪಕ್ಕವಾದ್ಯದಲ್ಲಿ ವಿದುಷಿ ಸಿ.ವಿ. ಶ್ರುತಿ ( ಪಿಟೀಲು), ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ(ಮೃದಂಗ), ವಿದುಷಿ ಸುಕನ್ಯಾ ರಾಮಗೋಪಾಲ್ (ಘಟಂ) ಮತ್ತು ವಿದ್ವಾನ್ ಪಯ್ಯನೂರ್ ಗೋವಿಂದ ಪ್ರಸಾದ್ (ಮೋರ್ಸಿಂಗ್) ಸಾಥ್ ನೀಡಲಿರುವುದು ವಿಶೇಷ. ಕಲಾರಸಿಕರು ಭಾಗವಹಿಸುವಂತೆ ಸಂಗೀತ ಮತ್ತು ನೃತ್ಯ ‘ಉಭಯ ಕಲಾ ವಿದುಷಿ’ ವೈ.ಜಿ. ಶ್ರೀಲತಾ ವಿನಂತಿಸಿದ್ದಾರೆ.
"ಸಂಗೀತ ಶಿಕ್ಷಣ ವ್ಯಕ್ತಿತ್ವಕ್ಕೆ ಸಂಸ್ಕಾರ ರೂಢಿಸಿ ಬದುಕನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಮನಸ್ಸಿನ ಕಲಾತ್ಮಕ ಭಾಗವನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ. ವ್ಯಕ್ತಿಯ ಭಾವನಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದ ನಡುವೆ ಸಮತೋಲನವನ್ನು ತರುತ್ತದೆ . ಸಂಗೀತವು ಆತ್ಮಕ್ಕೆ ಲಯ, ಮಾಧುರ್ಯ ಮತ್ತು ಸಾಮರಸ್ಯವನ್ನು ತಂದುಕೊಡುವ ವಿಶೇಷ ಗುಣವನ್ನು ಹೊಂದಿದೆ. ಸಂಗೀತ ಕಲಿಕೆ ಒಂದು ಸೌಹಾರ್ದ ಮತ್ತು ಸುಂದರ ಸಮಾಜದ ಬೆಳವಣಿಗೆಗೆ ಅತ್ಯಗತ್ಯ . ನಾನು ನಟನ ತರಂಗಿಣಿ - ಕಲಾ ಶಾಲೆಯನ್ನು ಪ್ರಾರಂಭಿಸಲು ಇದೇ ಸ್ಫೂರ್ತಿ. 20 ವರ್ಷದಿಂದ ಭಗವಂತನ ಸೇವೆ ಎಂದೇ ಭಾವಿಸಿ ಸಾವಿರಾರು ಮಕ್ಕಳಿಗೆ ಬೋಧನೆ ಮಾಡಿದ್ದೇನೆ. ಈ ಕೈಂಕರ್ಯ ನನಗೆ ಧನ್ಯತೆ ನೀಡಿದೆ. ಪಾಲಕರ ಮತ್ತು ಕಲಾರಸಿಕರ ಸಹಕಾರ ದೊಡ್ಡದು."
ನಟನ ತರಂಗಿಣಿ ಸಂಸ್ಥೆ ಪರಿಚಯ:
ನಟನ ತರಂಗಿಣಿ ಸಂಗೀತ ಮತ್ತು ನೃತ್ಯ ಶಾಲೆಯನ್ನು 2004ರಲ್ಲಿ ಖ್ಯಾತ ವಿದುಷಿ ಡಾ. ವೈ.ಜಿ.ಪರಿಮಳ ಸ್ಥಾಪಿಸಿದರು. ಈ ಶಾಲೆಯು ಕಳೆದ 20 ವರ್ಷಗಳಿಂದ ಅನೇಕ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ, ವೀಣಾವಾದನ, ಕೀಬೋರ್ಡ್, , ಮೃದಂಗ ಹಾಗೂ ಭರತನಾಟ್ಯ ಕಲೆಯನ್ನು ಕರಗತ ಮಾಡಿಸಿದೆ. ಹಲವು ವಿದ್ಯಾರ್ಥಿಗಳು ವಿದ್ವಾಂಸರಾಗಿದ್ದಾರೆ. ಅವರು ಪ್ರದರ್ಶನ ಕಲೆಗಳಲ್ಲಿ ಸಾಧನೆ ತೋರಿ ಪ್ರಖ್ಯಾತರಾಗಿದ್ದಾರೆ. ಹಲವು ಪ್ರತಿಷ್ಠಿತ ವೇದಿಕೆಗಳಲ್ಲಿ ಕಛೇರಿಗಳನ್ನು ಮಾಡುತ್ತಿರುವುದು ಹೆಮ್ಮೆ ಮತ್ತು ಅಭಿಮಾನದ ಸಂಗತಿ. ಈ ಸಂಸ್ಥೆಯ ಅನೇಕ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಬಹುಮಾನ ಗಳಿಸಿದ್ದಾರೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಜೂನಿಯರ್, ಸೀನಿಯರ್ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆದಿರುವುದು ಉಲ್ಲೇಖನೀಯ. ಸಂಸ್ಥೆಯ ಅವಿಭಾಜ್ಯ ಅಂಗವೇ ಆಗಿರುವ ಕಲಾವಿದ ದಂಪತಿಗಳಾದ ವೈ.ಜಿ. ಶ್ರೀಲತಾ- ವಿದ್ವಾನ್ ನಿಕ್ಷಿತ್ ಪುತ್ತೂರು ಕಳೆದ 5 ವರ್ಷದ ಹಿಂದೆ ಪ್ರಾರಂಭಿಸಿರುವ ‘ ನಟನ ತರಂಗಿಣಿ ಅಕಾಡೆಮಿ’ ಅನೇಕ ಸಂಗೀತ ಕಛೇರಿ, ಭರತನಾಟ್ಯ ಪ್ರದರ್ಶನ, ಸಂಗೀತ ಕಾರ್ಯಾಗಾರ, ಪ್ರಾತ್ಯಕ್ಷಿಕೆ, ಕಲಾ ಪ್ರಸ್ತುತಿಗಳನ್ನು ಆಯೋಜಿಸಿದೆ. ನಾಡಿನ ಹಿರಿಯ- ಕಿರಿಯ ಕಲಾವಿದರು, ವಿದ್ವನ್ಮಣಿಗಳು, ತಜ್ಞರು ಈ ವೇದಿಕೆಯಲ್ಲಿ ತಮ್ಮ ಪ್ರೌಢಿಮೆ, ವಿದ್ವತ್ತು ಮತ್ತು ಮಹತ್ತುಗಳನ್ನು ಪಡಿಮೂಡಿಸಿರುವುದು ದಾಖಲಾರ್ಹವಾಗಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ