ಬಳ್ಳಾರಿ:ಸಾರ್ವಜನಿಕರು ವೈದ್ಯರ ಸಲಹೆ ಇಲ್ಲದೆ ಅನಗತ್ಯವಾಗಿ ಸ್ಕ್ಯಾನಿಂಗ್ ಮಾಡಿಸಬಾರದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ್‌ಬಾಬು ಸಲಹೆ ನೀಡಿದರು.
ಪ್ರಧಾನಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಡಿ ಜಿಲ್ಲೆಯಾದ್ಯಂತ ಗಂಡಾಂತರ ಗರ್ಭೀಣಿಯರ ಆರೋಗ್ಯ ತಪಾಸಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಬುಧವಾರದಂದು, ಸಿದ್ದಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಖುದ್ದು ಗರ್ಭಿಣಿಯರ ತಪಾಸಣೆ ಕೈಗೊಂಡು ಅವರು ಮಾತನಾಡಿದರು.
ಹೆಣ್ಣು ಮಕ್ಕಳಿಗೆ 18 ವರ್ಷ ತುಂಬಿದ ನಂತರವೇ ಮದುವೆ ಮಾಡಬೇಕು. ಗರ್ಭಿಣಿಯಂದು ಗೊತ್ತಾದ ಕೂಡಲೇ ಆರೋಗ್ಯ ಇಲಾಖೆಯಲ್ಲಿ ನೋಂದಣಿ ಮಾಡಿಸಿ, ತಾಯಿ ಕಾರ್ಡ್ ಪಡೆಯಬೇಕು. ವೈದ್ಯರ ಸಲಹೆ ಇಲ್ಲದೆ ಅನಗತ್ಯವಾಗಿ ಸ್ಕ್ಯಾನಿಂಗ್ ಮಾಡಿಸಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಹೆರಿಗೆಗೆ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.
ಪ್ರಸ್ತುತ ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ನುರಿತ ವೈದ್ಯರು ಮತ್ತು ಸಿಬ್ಬಂದಿಯವರಿಂದ ಉಚಿತ ಹೆರಿಗೆ ಸೇವೆ ನೀಡಲಾಗುತ್ತಿದೆ. ಜೊತೆಗೆ ಮಗುವನ್ನು ಬೆಚ್ಚಗಿನ ವಾತಾವರಣ ಕಲ್ಪಿಸಲು ಆಸ್ಪತ್ರೆಗಳಲ್ಲಿ ‘ಬೇಬಿ ವಾರ್ಮರ್’ ಸೌಲಭ್ಯ ಸಹಿತ ಇದ್ದು, ಮಗುವಿನ ಅಗತ್ಯ ಕಾಳಜಿ ವಹಿಸಲಾಗುತ್ತಿದೆ ಎಂದು ಹೇಳಿದರು.
ಗರ್ಭೀಣಿಯರು ಪ್ರತಿದಿನ ಸ್ಥಳೀಯವಾಗಿ ದೊರಕುವ ತರಕಾರಿ, ಹಸಿರು ತಪ್ಪಲು ಪಲ್ಯ, ಬೇಳೆಕಾಳು, ಮೊಳಕೆ ಕಾಳು, ಹಾಗೂ ಇಲಾಖೆಯಿಂದ ನೀಡುವ ಕಬ್ಬಿಣಾಂಶ ಮಾತ್ರೆ ಸೇವಿಸಬೇಕು. ತಾಯಿಯ ಆರೋಗ್ಯದ ಪರೀಕ್ಷೆಗಳನ್ನು ಕೈಗೊಂಡಾಗ ಕಂಡುಬರುವ ಆರೋಗ್ಯದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಪಡೆಯಬೇಕು ಎಂದು ವಿನಂತಿಸಿದರು.
ಗರ್ಭಿಣಿಯರ ಸ್ಕ್ಯಾನಿಂಗ್:
ಗರ್ಭಿಣಿಯೆಂದು ತಿಳಿದ ನಂತರ ವೈದ್ಯರ ಸಲಹೆಯಂತೆ, ಎರಡುವರೆ ತಿಂಗಳಿನಿಂದ ಮೂರುವರೆ ತಿಂಗಳು ಅವಧಿಯಲ್ಲಿ ಸಹಜವಾಗಿ ಮೊದಲ ಬಾರಿ, ನಾಲ್ಕುವರೆ ತಿಂಗಳಿನಿಂದ ಐದುವರೆ ತಿಂಗಳಿನಲ್ಲಿ ಎರಡನೇ ಬಾರಿ, ಎಂಟು ವರೆ ತಿಂಗಳಿನಿಂದ ಒಂಭತ್ತನೇಯ ತಿಂಗಳಿನಲ್ಲಿ ಮೂರನೆಯ ಬಾರಿ ಸ್ಕಾö್ಯನಿಂಗ್ ಮಾಡಿಸಬೇಕು. ಒಂದು ವೇಳೆ ತೀರ ಅಗತ್ಯವೆನಿಸಿದಲ್ಲಿ ಮಾತ್ರ ತಜ್ಞರ ಸಲಹೆಯಂತೆ ಹೆಚ್ವುವರಿಯಾಗಿ ಸ್ಕಾö್ಯನಿಂಗ್ ಮಾಡಿಸಬೇಕು. ಅನಗತ್ಯವಾಗಿ ಸ್ಕ್ಯಾನಿಂಗ್ ಮಾಡಿಸಬಾರದು ಎಂದು ತಿಳಿಸಿದರು.
ಗಂಡಾಂತರ ಗರ್ಭಿಣಿಯರು ಯಾರು?:
ಗಂಡಾಂತರ ಗರ್ಭಿಣಿಯೆಂದು ನಿರ್ಧರಿಸುವ ಅಂಶಗಳಾದ 18 ವರ್ಷಕ್ಕಿಂತ ಮೊದಲು ಅಥವಾ ೩೦ ವರ್ಷ ವಯಸ್ಸಿನ ನಂತರ ಗರ್ಭಿಣಿಯಾದರೆ, ರಕ್ತದಲ್ಲಿ ಕಬ್ಬಿಣಾಂಶ ೯ ಕ್ಕಿಂತ ಕಡಿಮೆ, ಎತ್ತರ142 ಸೆಂ.ಮೀ ಗಿಂತ ಕಡಿಮೆ, ರಕ್ತದೊತ್ತಡ 140/90 ಗಿಂತ ಹೆಚ್ಚು, ಅವಳಿ-ಜವಳಿ ಗರ್ಭಿಣಿ, ಮೊದಲ ಹೆರಿಗೆ ಶಸ್ತ್ರಚಿಕಿತ್ಸೆ ಮೂಲಕವಾದಲ್ಲಿ, ಹೆಚ್‌ಐವಿ, ಹೆಚ್‌ಬಿಎಸ್‌ಎಸಿಜಿ, ಮುರ್ಛೆರೋಗ, ಥೈರಾಯ್ಡ್, ಹೈಪೊಥೈರಾಯ್ಡ್, ರಕ್ತ ಸಂಬಂಧಿತ ಖಾಯಿಲೆಗಳಿದ್ದಲ್ಲಿ, ಗರ್ಭಕೋಶದ ಬೆಳವಣಿಯ ತೊಂದರೆ, ಸ್ಕ್ಯಾನಿಂಗ್ ನಲ್ಲಿ ಮಗು ಅಡ್ಡಲಾಗಿ ಇರುವುದು ಕಂಡುಬಂದಲ್ಲಿ, ಮಾಸದ ಸ್ಥಳದ ಅಡಚಣೆ (ಪ್ಲಸೇಂಟಾ ಪ್ರಿವಿಯಾ) ಮುಂತಾದ ತೊಂದರೆಗಳು ಇರುವವರು ವೈದ್ಯರ ನಿರ್ದೇಶನ ಮೇರೆಗೆ ಸ್ಥಳಿಯ ವೈದ್ಯಕೀಯ ಸಿಬ್ಬಂದಿಯವರ ಸಲಹೆಯಂತೆ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಬೇಕು ಎಂದು ತಿಳಿಸಿದರು.
ಈ ವೇಳೆ ಸಿದ್ದಮ್ಮನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಿವ್ಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಔಷಧಾಧಿಕಾರಿ ವೀಣಾ, ಶುಶ್ರೂಷಣಾಧಿಕಾರಿ ಸುನೀತಾ, ವೈದ್ಯಕೀಯ ಪ್ರಯೋಗ ಶಾಲಾ ತಂತ್ರಜ್ಞೆ ಶ್ವೇತಾ ಸೇರಿದಂತೆ ಆಶಾ, ತಾಯಂದಿರು ಹಾಗೂ ಇತರರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ