ಬಳ್ಳಾರಿ: ಸಿಎಂ ವಿರುದ್ಧ ಬಿಜೆಪಿ ಆರೋಪಗಳಿಗೆ ಅಹಿಂದ ನಾಯಕ ಕಿಡಿ

Upayuktha
0




ಬಳ್ಳಾರಿ: 
ಅಹಿಂದ ನಾಯಕ, ರಾಜ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ದ ವಿನಾಕಾರಣ ಆರೋಪಿಸಿ ಹೋರಾಟ ಮಾಡುವುನ್ನು ಕೈ ಬಿಡಬೇಕೆಂದು ಬಿಜೆಪಿಗೆ ಅಹಿಂದ ಮುಖಂಡ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಕಲ್ಲುಕಂಬ  ಪಂಪಾಪತಿ ಎಚ್ಚರಿಕೆ ನೀಡಿದ್ದಾರೆ.


ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮಾಜಿ ಪ್ರಧಾನಿ ದೇವೆಗೌಡರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಳೆದ 40 ವರ್ಷಗಳ ರಾಜಕೀಯದಲ್ಲಿ ಕಪ್ಪು ಚುಕ್ಕೆ ಇಲ್ಲದಂತೆ ಜೀವನ ನಡೆಸಿದ್ದಾರೆ. ಅಂತಹವರ ವಿರುದ್ದ ವಿನಾ ಕಾರಣ ಮುಡಾ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರವಾಗಿದೆಂದು ಆರೋಪ ಮಾಡುವುದು ಸರಿಯಲ್ಲ. ಮುಡಾದಲ್ಲಿ ಹಗರಣ ನಡೆದಿದ್ದರೆ ತನಿಖೆ ನಡೆಯುತ್ತಿದೆ. ಅಲ್ಲಿಯವರೆಗೆ ವಿರೋಧ ಪಕ್ಷ ಸುಮ್ಮನಿರು ವುದು ಒಳಿತು. ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರು ಅಬ್ಬರಿಸುವುದು ಬೇಡ. ವಿನಾಕಾರಣ ಸಿದ್ದರಾಮಯ್ಯ ಅವರ ಮೇಲೆ ಆರೋಪ ಮಾಡಿ ವಿಜಯೇಂದ್ರ ಪ್ರತಿಭಟಿಸುವುದಾದರೆ ನಮ್ಮ ಅಹಿಂದ ವರ್ಗ ಒಗ್ಗಟ್ಟಾಗಿ ಸಿದ್ದರಾಮಯ್ಯ ಪರ ಹೋರಾಟ ಮಾಡಲಿದೆಂದು ಎಚ್ಚರಿಕೆ ನೀಡಿದರು.


ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ ಕೇಂದ್ರದಲ್ಲಿನ ಬಿಜೆಪಿ ಇಡಿಯಿಂದ ಮಾಡುತ್ತಿದೆ ಇದು ಸಹ ಸರಿಯಲ್ಲ. ವಾಲ್ಮೀಕಿ ನಿಗಮದ ಹಗರಣದ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷಿಯಾಗಲಿ ಎಂದರು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಲ್ಲಿ ಮಹಾಶಕ್ತಿಯಾಗಿದ್ದಾರೆ. ಹಾಗಾಗಿ ಅವರು ಎರಡನೇ ಬಾರಿಗೆ ಸಿಎಂ ಆಗಿದ್ದಾರೆ. ಅದರ ಹಿಂದೆ ಅವರ ಹೋರಾಟವಿದೆ. ಕಾಂಗ್ರೆಸ್ ನಲ್ಲಿ ಇನ್ನಿತರ ನಾಯಕರಿಗೆ ಆ ಸ್ಥಾನ ಸಿಗದೇ ಇರುವುದು ಮುಂದೆ ಸಿಗಬಹುದು ಎಂದರು. ತಮಗೂ ಪಕ್ಷದಿಂದ ಈ ವರೆಗೆ ಆಡಳಿತದ ಯಾವುದೇ ಸ್ಥಾನಮಾನ ದೊರೆಯದೇ ಇರುವ ಬಗ್ಗೆ ಕೇಳಲಾದ ಪ್ರಶ್ನೆಗೆ ನಕ್ಕು ಸುಮ್ಮನಾದರು.


ಸುದ್ದಿಗೋಷ್ಟಿಯಲ್ಲಿ ಬುಡಾ ಮಾಜಿ ಅಧ್ಯಕ್ಷ ಎನ್.ಪ್ರತಾಪ್ ರೆಡ್ಡಿ, ಪಕ್ಷದ ಮುಖಂಡ ಎಲ್. ಮಾರೆಣ್ಣ, ಪಾಸ್ ಪೋರ್ಟ್ ಮಹಮ್ಮದ್ ಗೌಸ್, ಡಾ.ಪಿ.ಎಸ್. ಗಾದಿಲಿಂಗನಗೌಡ ಉಪಸ್ಥಿತರಿದ್ದರು. 


Post a Comment

0 Comments
Post a Comment (0)
To Top