ಭಾರತ ದೇಶವು ಜಗತ್ತಿನ ಅತ್ಯಂತ ಪುರಾತನವಾದ ಕೃಷಿ ಸಂಸ್ಕೃತಿ ಹೊಂದಿರುವುದಕ್ಕೆ ಮೂಲ ಕಾರಣ ಕೃಷಿ ಕ್ಷೇತ್ರಕ್ಕೆ ಬುನಾದಿಯಾಗಿ ನಿಂತ ಜೋಡೆತ್ತಿನ ಕೃಷಿಯಾಗಿದೆ. ಹಾಗಾಗಿ, ಇಂದಿನ ಕೃಷಿ ವಿಶ್ವವಿದ್ಯಾಲಯಗಳ ಬುನಾದಿಯೂ ಕೂಡ ಜೋಡೆತ್ತಿನ ಕೃಷಿಯಾಗಿದೆ. ದೇಶದ ಹಲವು ಕೃಷಿ ವಿಶ್ವವಿಶ್ವವಿದ್ಯಾಲಗಳ ಲಾಂಛದಲ್ಲಿರುವ ನಂದಿ ಚಿತ್ರವು ಇದಕ್ಕೆ ಸಾಕ್ಷಿಯಾಗಿದೆ. ಬುನಾದಿಯನ್ನು ಮರೆತು ಕಟ್ಟಿದ ಕಟ್ಟಡ ಬೇಗನೆ ನೆಲಸಮವಾಗುವಂತೆ, ಜೋಡೆತ್ತಿನ ಕೃಷಿ ಮರೆತು ಮುನ್ನೆಲೆಗೆ ತರುತ್ತಿರುವ ಎಲ್ಲ ತಂತ್ರಜ್ಞಾನಗಳೂ ಕೂಡ ತಾತ್ಕಾಲಿಕ ಪರಿಹಾರ ನೀಡಿ ಅವನತಿ ಹೊಂದುವವು ಎಂಬುದು ಹಲವು ನಿದರ್ಶನಗಳಿಂದ ಸ್ಪಷ್ಟವಾಗುತ್ತಿದೆ. ಜೋಡೆತ್ತಿನ ಕೃಷಿಯನ್ನು ಮರೆತು ಮುನ್ನೆಲೆಗೆ ತಂದ ಹಸಿರು ಕ್ರಾಂತಿಯು ಇಂದು ರಾಸಾಯನಿಕಗಳ ಕ್ರಾಂತಿಗೆ ಕಾರಣವಾಗಿದೆ. ಜೋಡೆತ್ತಿನ ಕೃಷಿಯನ್ನು ಮರೆತು ಮುನ್ನೆಲೆಗೆ ತಂದ ಕ್ಷೀರ ಕ್ರಾಂತಿಯು ಇಂದು ದೇಸಿ ಹಸುಗಳ ಸಂತತಿ ನಾಶಕ್ಕೆ ಕಾರಣವಾಗಿದೆ. ಇಂದು ಮಣ್ಣು ಹಾಗೂ ಮನುಷ್ಯರು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದಕ್ಕೆ ಮೂಲ ಕಾರಣ ಜೋಡೆತ್ತಿನ ಕೃಷಿಯನ್ನು ಮರೆತು ಮುನ್ನೆಲೆಗೆ ತಂದ ಹಸಿರು ಕ್ರಾಂತಿ ಹಾಗೂ ಕ್ಷೀರ ಕ್ರಾಂತಿಯಾಗಿವೆ. ರಾಸಾಯನಿಕಗಳಿಲ್ಲದೆ ಬೆಳೆ ಬೆಳೆಯಲಾಗುವುದಿಲ್ಲ ಹಾಗೂ ಔಷಧಿಗಳಿಲ್ಲದೆ ಮನುಷ್ಯರು ಜೀವನ ನಡೆಸಲು ಆಗುವುದಿಲ್ಲ ಎಂಬ ಪರಿಸ್ಥಿತಿ ಇಂದು ನಿರ್ಮಾಣವಾಗುತ್ತಿದೆ. ಬಹುಸಂಖ್ಯೆಯಲ್ಲಿ ತಲೆ ಎತ್ತುತ್ತಿರುವ ರಾಸಾಯನಿಕ ಅಂಗಡಿಗಳು ಹಾಗೂ ಆಸ್ಪತ್ರೆಗಳು ವಾಸ್ತವಿಕ ಸಮಸ್ಯೆಗೆ ಹಿಡಿದ ಕನ್ನಡಿಯಾಗಿದೆ.
ಕಳೆದ ಎರಡು ದಶಕಗಳಿಂದ ಮುನ್ನೆಲೆಗೆ ತರಲು ಪ್ರಯತ್ನಿಸುತ್ತಿರುವ ಸಾವಯವ ಕೃಷಿ, ನೈಸರ್ಗಿಕ ಕೃಷಿ, ಶೂನ್ಯ ಬಂಡವಾಳ ಕೃಷಿ ಹಾಗೂ ಇತರ ಕೃಷಿ ಪದ್ಧತಿಗಳು ಕೆಲವು ರೈತರಿಗೆ ಮಾತ್ರ ಸೀಮಿತವಾಗಿ ವಿಸ್ತರಣೆಯಾಗದಿರುವುದನ್ನು ಕಾಣುತ್ತಿದ್ದೇವೆ. ಏಕೆಂದರೆ, ಈ ಕೃಷಿ ಪದ್ಧತಿಗಳಿಗೆ ಶಾಲಾ ಶಿಕ್ಷಣ ಹಾಗೂ ತರಬೇತಿಗಳು ಅತ್ಯವಶ್ಯಕವಾಗಿ ಬೇಕಾಗುವುದು. ಜೋಡೆತ್ತಿನ ಕೃಷಿ ಎಂಬುದು ನಮ್ಮ ಹಿಂದಿನ ಹಲವು ತಲೆಮಾರುಗಳಿಂದ ನಮ್ಮ ರಕ್ತದಲ್ಲಿ ಬೆರೆತು ಬಂದ ಕೃಷಿಯಾಗಿದೆ. ಸೂಕ್ತ ಪ್ರೋತ್ಸಾಹ ನೀಡಿದರೆ, ಖಂಡಿತ ಜೋಡೆತ್ತಿನ ಕೃಷಿಯನ್ನು ಬಹು ಬೇಗನೆ ಪುನಶ್ಚೇತನ ಗೊಳಿಸಲು ಸಾಧ್ಯವಿದೆ. ಬಯಲು ಸೀಮೆಯಲ್ಲಿ ಜೋಡೆತ್ತಿನ ಕೃಷಿ ಪದ್ಧತಿಯನ್ನು ಹೊರತುಪಡಿಸಿ ಇನ್ನಾವುದೇ ಕೃಷಿ ಪದ್ಧತಿಯ ಮೂಲಕ ಬಹುಜನ ರೈತರು ಸ್ವಾವಲಂಬಿ ಹಾಗೂ ಸುಸ್ಥಿರ ಜೀವನ ಕಟ್ಟಿಕೊಳ್ಳಬಲ್ಲರೇ? ಒಮ್ಮೆ ನಾವೆಲ್ಲರೂ ಯೋಚಿಸಬೇಕಾದ ಸಂಗತಿ ಇದಾಗಿದೆ. ಕಳೆದ 20-30 ವರ್ಷಗಳಿಂದ ಜೋಡೆತ್ತಿನಿಂದ ಉಳುಮೆ ಮಾಡಿದ ಜಮೀನು ಹಾಗೂ ಕೇವಲ ಯಾಂತ್ರಿಕ ಕೃಷಿ ಪದ್ಧತಿ ಅನುಸರಿಸಿದ ಜಮೀನಿನ ನಡುವಿನ ವ್ಯತ್ಯಾಸವನ್ನು ಸಾಮಾನ್ಯ ವ್ಯಕ್ತಿಯೂ ಕೂಡ ಗುರುತಿಸಬಹುದು. ಈ ಕುರಿತು ವೈಜ್ಞಾನಿಕ ಅಂಕಿ ಅಂಶಗಳನ್ನು ಮುನ್ನೆಲೆಗೆ ತಂದು ಜೊಡೆತ್ತಿನ ಕೃಷಿ ಪುನಶ್ಚೇತನಕ್ಕೆ ಪೂರಕವಾದ ಯೋಜನೆ, ಕಾನೂನು ಹಾಗೂ ಶಿಕ್ಷಣ ಜಾರಿಗಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಆಗ್ರಹಿಸಬೇಕಾಗಿದೆ.
ಹಸಿರು ಕ್ರಾಂತಿ ಹಾಗೂ ಕ್ಷೀರ ಕ್ರಾಂತಿಗಳು ಸಾಧ್ಯವಾದಷ್ಟು ತಮ್ಮ ಕೊಡುಗೆಯನ್ನು ನೀಡಿ ಇಂದು ಅವುಗಳಿಗೆ ಮುದಿತನ ಆವರಿಸಿದೆ. ಜೋಡೆತ್ತಿನ ಕೃಷಿಗೆ ಪೂರಕವಾದ ಯಾಂತ್ರಿಕತೆ ಅಭಿವೃದ್ಧಿ ಪಡಿಸಿ ಜೋಡೆತ್ತಿನ ಕೃಷಿ ಕ್ರಾಂತಿಗೆ ಮುನ್ನುಡಿ ಬರೆಯಬೇಕಾದ ಅವಶ್ಯಕತೆ ಬಂದೊದಗಿದೆ. ಇದು ಖಂಡಿತ ಶಾಶ್ವತ ಹಸಿರು ಕ್ರಾಂತಿಗೆ ನಾಂದಿಯಾಗುವುದು.
ಆಯಾ ಕ್ಷೇತ್ರದ ಸಫಲತೆ ಹಾಗೂ ವಿಫಲತೆಯ ಜವಾಬ್ದಾರಿಯನ್ನು ಆಯಾ ಕ್ಷೇತ್ರದ ವಿದ್ಯಾ ಸಂಸ್ಥೆಗಳು ಹೊರಬೇಕಾಗುವುದು. ಇಂದು ಜೋಡೆತ್ತಿನ ಕೃಷಿ ನಾಶವಾಗುತ್ತಿರುವುದು ಕೃಷಿ ವಿಶ್ವವಿದ್ಯಾಲಯಗಳ ಬುನಾದಿಗೆ ಪೆಟ್ಟು ಬೀಳುತ್ತಿರುವುದರ ಸ್ಪಷ್ಟ ಸಂದೇಶವಾಗಿದೆ. ಅದಕ್ಕಾಗಿ, ಜೋಡೆತ್ತಿನ ಕೃಷಿ ಪುನಶ್ಚೇತನದ ಜವಾಬ್ದಾರಿಯನ್ನು ಮೊದಲು ಕೃಷಿ ವಿಶ್ವವಿದ್ಯಾಲಯಗಳು ಹೊರಬೇಕಾಗಿದೆ. ಮಣ್ಣಿನ ಫಲವತ್ತತೆ ನಾಶ, ಇಳುವರಿ ಕುಂಠಿತತೆ, ಹೆಚ್ಚಾಗುತ್ತಿರುವ ರೈತರ ಸಾಲ, ಗುಣಮಟ್ಟದ ಆಹಾರ ಕೊರತೆ ಹಾಗೂ ಇತರ ಅನೇಕ ಸಮಸ್ಯೆಗಳಿಗೆ ಪರಿಹಾರದ ಮೂಲ ಜೋಡೆತ್ತಿನ ಕೃಷಿಯಲ್ಲಿದೆ. ಅದಕ್ಕಾಗಿ, ಮೊದಲು ಕೃಷಿ ವಿಶ್ವವಿದ್ಯಾಲಯಗಳು ಜೋಡೆತ್ತಿನ ಕೃಷಿ ಪುನಶ್ಚೇತನ ವಿಚಾರವನ್ನು ಮುನ್ನೆಲೆಗೆ ತರಬೇಕಾಗಿದೆ. ಇದರೊಂದಿಗೆ ಕೃಷಿ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ಕೃಷಿ ಪದವೀಧರರು ತಮ್ಮ ವಿದ್ಯಾ ಸಂಸ್ಥೆಗೆ ಬರುತ್ತಿರುವ ಆಪತ್ತನ್ನು ತಡೆಯಲು ಕಂಕಣಬದ್ಧರಾಗಿ ನಿಲ್ಲಬೇಕಾಗಿದೆ. ಇಂದಿನ ಕೃಷಿ ವಿಶ್ವವಿದ್ಯಾಲಯಗಳ ಕುಲಪತಿಗಳು, ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ತಮ್ಮ ಸ್ಥಾನಕ್ಕೆ ತಕ್ಕಂತೆ ಹೆಚ್ಚಿನ ಜವಾಬ್ದಾರಿಯನ್ನು ಹೊರಬೇಕಾದ ಅವಶ್ಯಕತೆ ಬಂದೊದಗಿದೆ...ಯೋಚಿಸಿ!
...........................................
ಪೂಜ್ಯ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಆಶಯದಂತೆ ಪ್ರಾರಂಭವಾದ ಜೋಡೆತ್ತಿನ ಕೃಷಿ ಪುನಶ್ಚೇತನದ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿಂದ ಪಡೆಯಬಹುದು: missionsavesoil.com/LetterMovement
...........................................
- ಬಸವರಾಜ ಬಿರಾದಾರ
ಋಷಿ-ಕೃಷಿ ಸಂಸ್ಕೃತಿ ಪುನಶ್ಚೇತನ
9449303880
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ