ಶ್ರೀ ಮಧ್ವಾಚಾರ್ಯರ ಪ್ರಥಮ ಶಿಷ್ಯರಾದ ಶ್ರೀ ಪದ್ಮನಾಭ ತೀರ್ಥರು ಶ್ರೀ ಲಕ್ಷ್ಮೀ ಧರತೀರ್ಥ ರೆಂಬುವವರಿಗೆ ಸನ್ಯಾಸಾಶ್ರಮ ಕೊಟ್ಟು ದ್ವೈತ ವೇದಾಂತ ತತ್ವಗಳನ್ನು ಪ್ರಚುರಪಡಿಸಲು ಆಜ್ಞಾಪಿಸಿದ ಪರಂಪರೆಯೇ ಶ್ರೀಪಾದರಾಜ ಮಠವೆಂದು ಖ್ಯಾತಿಯಾಗಿದೆ.
ಲೋಕ ವಿಖ್ಯಾತರಾದ ಸ್ವರ್ಣವರ್ಣತೀರ್ಥರಿಂದ ಆಶ್ರಮ ಸ್ವೀಕರಿಸಿ ಲಕ್ಷ್ಮೀನಾರಾಯಣ ತೀರ್ಥರೆಂದು ನಾಮಾಂಕಿತಗೊಂಡ ಶ್ರೀಪಾದರಾಜರು ತಮ್ಮ ಘನತೆಗೆ ತಕ್ಕಂತೆ ಖ್ಯಾತವೆತ್ತರಾದರು. ಶ್ರೀಮದ್ ಜಯತೀರ್ಥರ ಪ್ರಶಿಷ್ಯರಾದ ವಿದ್ವತ್ ಚಕ್ರವರ್ತಿಗಳಾದ ರಾಜೇಂದ್ರ ತೀರ್ಥರಲ್ಲಿ ಒಂಬತ್ತು ಬಾರಿ ಶ್ರೀಮನ್ ನ್ಯಾಯ ಸುಧಾದಿ ಗ್ರಂಥಗಳನ್ನು ಅಧ್ಯಯನ ಮಾಡಿದ ವಿದ್ವತ್ ಶಿರೋಮಣಿ ಶ್ರೀ ವಿಭುದೇಂದ್ರ ದೇಶಿಕರಲ್ಲಿ ಅಭ್ಯಸಿಸಿ ಅಸದೃಶ ಪಾಂಡಿತ್ಯ ಪಡೆದ ವಾಗ್ವಜ್ರವೆಂಬ ಪ್ರೌಢ ಗ್ರಂಥಕಾರರು ಆಗಿದ್ದಾರೆ. ಶ್ರೀ ವ್ಯಾಸರಾಜ ಗುರುಸಾರ್ವಭೌಮರಿಗೆ ವಿದ್ಯಾ ಗುರುಗಳೆಂದು ಖ್ಯಾತರಾದ ಶ್ರೀಪಾದರಾಜರ ಸ್ಥಾನಮಾನಗಳ ಬಗ್ಗೆ ಅಳೆಯಲು ಯಾರಿಗೆ ತಾನೇ ಸಾಧ್ಯ.
ದ್ವೈತ ಸಿದ್ದಾಂತದ ಎಲ್ಲ ಪ್ರಮೇಯಗಳು ಸಂಸ್ಕೃತದಲ್ಲಿಯೇ ಅಡಗಿ ಶ್ರೀಸಾಮಾನ್ಯನು ಅದನ್ನು ಅರ್ಥಮಾಡಿಕೊಳ್ಳುವುದು ದುಸ್ತರವಾಗಿತ್ತು. ಆ ಸಂದರ್ಭದಲ್ಲಿ ವೇದೋಪನಿಷತ್ತುಗಳ ಹರಿಭಕ್ತಿ ಗಂಗೆಯನ್ನು ಹರಿಸಿದವರಲ್ಲಿ ಶ್ರೀರಂಗವಿಠ್ಠಲ ಅಂಕಿತದಿಂದ ಪ್ರಸಿದ್ಧರಾದ ಶ್ರೀಪಾದರಾಜರು ಅಗ್ರಗಣ್ಯರು.
ಉದ್ದಾಮ ವಿದ್ವಾಂಸರು ಕನ್ನಡವನ್ನು ತುಚ್ಛವಾಗಿ ಕಾಣುತ್ತಿದ್ದ ಕಾಲದಲ್ಲಿಯೇ ಕನ್ನಡದಲ್ಲಿ ಹರಿಪರ ಕೀರ್ತನೆಗೈದದು ಶ್ರೀಪಾದರಾಜರ ಒಂದು ದೊಡ್ಡ ಹಿರಿಮೆಯೇ ಸರಿ. ಮಾತ್ರವಲ್ಲದೆ ಕೀರ್ತನಕಾರರ ತಂಡವನ್ನೇ ಸಂಘಟಿಸಿ, ಮುಂದೆ ವಿದ್ಯಾಶಿಷ್ಯರಾದ ಶ್ರೀ ವ್ಯಾಸರಾಜ ನೇತೃತ್ವದಲ್ಲಿ ರೂಪಗೊಂಡ ದಾಸಕೂಟವು ಈ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು ಐತಿಹಾಸಿಕವಾದದ್ದು. ಪುರಂದರ ಕನಕದಾಸರಂಥವರು ತಮ್ಮ ಸಮಸ್ತ ಬದುಕನ್ನೇ ಈ ಆಂದೋಲನಕ್ಕೆ ಸಮರ್ಪಿಸಿ ಸವೆಸಿದರು.
ಸಿದ್ಧಾಂತದ ಕಟುಸತ್ಯವನ್ನು ತತ್ವರೂಪದಲ್ಲಿ ಹಾಗೂ ಕಥಾ ರೂಪದಲ್ಲಿ ಇಡಿಯಾಗಿ,ಅನುವಾದವಾಗಿ,ಸೂತ್ರಪ್ರಾಯವಾಗಿ ವಿವರವಾಗಿ ಹತ್ತು ಹಲವಾರು ರೂಪದಲ್ಲಿ ಮೈದಳೆದು ವೈವಿಧ್ಯಮಯ ಲಲಿತ ಸಾಹಿತ್ಯವಾಗಿ ದ್ವೈತ ಸಿದ್ದಾಂತದ ಪ್ರತಿಬಿಂಬದ ನಿಲುವುಗನ್ನಡಿಯಂತೆ ಶೋಭಿಸಿದೆ.
ತಿಳಿಹಾಸ್ಯ, ಲೋಕ ನೀತಿ, ವಿಡಂಬನೆಯ ಹೊನಲಿನಿಂದ ಕೂಡಿ ಸ್ವಾರಸ್ಯಪೂರ್ಣವಾಗಿ ಶ್ರೀಸಾಮಾನ್ಯರಿಗೂ ಅರ್ಥವಾಗುವ ಅಡಿಯಲ್ಲಿ ರಚಿಸಲ್ಪಟ್ಟಿದೆ. ಸಾಹಿತ್ಯಕ ದೃಷ್ಟಿಯಿಂದ ಈ ಕನ್ನಡ ದಾಸಸಾಹಿತ್ಯದ ಸುವರ್ಣ ಯುಗ ಎನಿಸಿದ ಶ್ರೀಪಾದರಾಜರ ಯುಗ ಪ್ರಥಮ ಘಟ್ಟ. ಈ ದೃಷ್ಟಿಯಿಂದ ಇವರನ್ನು ದಾಸಸಾಹಿತ್ಯದ ಯುಗಪುರುಷರೆಂದು ಕರೆಯಲಾಗಿದೆ.
ಶ್ರೀಸಾಮಾನ್ಯನಿಗೂ ತತ್ವ ಜ್ಞಾನದ ಮಹತ್ವ ತಲುಪಬೇಕೆಂಬ ಇವರ ಸಾಮಾಜಿಕ ತೀವ್ರ ಕಳಕಳಿಗೆ ನಿದರ್ಶನವಾಗಿದೆ ಭಕ್ತಿ ಬೇಕು, ವಿರಕ್ತಿ ಬೇಕು,ಮುಂದೆ ಮುಕ್ತಿಯ ಬಯಸುವವರಿಗೆ ಇದು ಗೀತೋಕ್ತಿಯಂತೆ ವಿಚಾರ ಮಾಡಿದಾಗ ಕರ್ಮ, ಜ್ಞಾನ,ಭಕ್ತಿ ಇವು ಮುಕ್ತಿಗೆ ಸಾಧನ ಎನ್ನುವಲ್ಲಿಯೂ ಹಾಗೆಯೇ ಪ್ರತ್ಯೇಕವಾಗಿ ಒಂದೊಂದರಿಂದಲೇ ಮುಕ್ತಿ ದೊರೆಯುವುದೆಂಬ ಅಭಿಪ್ರಾಯವೂ ಕಂಡುಬರುತ್ತದೆ.
ಇಂತಹ ರಚನೆಗಳನ್ನು ನೀಡಿದ ಶ್ರೀಪಾದರಾಜರ ಜೀವನಾನುಭವಾಮೃತ ಗ್ರಹಿಸಲು ಜೀವನದಲ್ಲಿ ಅಳವಡಿಸಿಕೊಳ್ಳಲು ಮನುಷ್ಯನ ಜೀವಿತಾವಧಿಯ ಹತ್ತಾರು ಜನ್ಮಗಳ ಸಮಯವೇ ಬೇಕಾದೀತು. ಶ್ರೀಪಾದರಾಜರ ಕೀರ್ತನೆಗಳಲ್ಲಿನ ಅಷ್ಟು ಅನುಭವವನ್ನು ವಿವಿಧ ಲೇಖಕರ ಮೂಲಕ ಅವುಗಳ ಅನುಸಂಧಾನವನ್ನು ಒಟ್ಟಿಗೆ ರೂಪಿಸಿಕೊಡುವ ಉದ್ದೇಶದಿಂದ ಪ್ರಾಜ್ಞ ಲೇಖಕರುಗಳಿಗೆ ಶ್ರೀಪಾದರಾಜರ ಕೀರ್ತನೆಗಳ ಅಂತರಾರ್ಥವನ್ನು ತಿಳಿಯಲು ಒಬ್ಬೊಬ್ಬರಿಗೆ ಒಂದೊಂದು ಕೀರ್ತನೆಗಳನ್ನು ನೀಡಿ ಅವರು ವಿಶ್ಲೇಷಿಸಿ ನೀಡಿದ ಲೇಖನಗಳನ್ನು ಸಂಗ್ರಹಿಸಿ ಈ ಪುಸ್ತಕ ಪ್ರಕಟಿಸಲಾಗಿದೆ.
ಶ್ರೀಪಾದರಾಜರ ಒಂದೊಂದು ಹಾಡಿನ ಅಣಿಮುತ್ತುಗಳ ಸೂಕ್ಷ್ಮ ಸಂವೇದನೆಗಳನ್ನು ಓದುಗ ಭಕ್ತರ ಹೃದಯದಲ್ಲಿ ಭಕ್ತಿಯನ್ನು ಉದ್ದೀಪನ ಮಾಡುವಲ್ಲಿ ಸಫಲವಾಗಿದೆ. ಶ್ರೀಪಾದರಾಜರ ಶಾಸ್ತ್ರೀಯ ಸಿದ್ದಿ ಸಾಧನೆಗಳ ಕನ್ನಡ ಅವತರಣಿಕೆ ಅವರ ಅನುಭವ- ಅನುಭಾವ, ತತ್ವನಿಷ್ಠೆ ಜನಹಿತವೆನಿಸುವ ನುಡಿಗಟ್ಟುಗಳ ಪರಿಣಾಮ ವಿಶ್ಲೇಷಿಸಿರುವ ಪರಿ ಅನನ್ಯ.
ಪ್ರಸ್ತುತ ಮೈಸೂರು ವಿಶ್ವವಿದ್ಯಾಲಯದ ಪ್ರಸಾರಂಗದ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ಬಿ. ಎಸ್. ಅನಿಲ್ ಕುಮಾರ್ ಬೊಮ್ಮಘಟ್ಟ ಇವರು 'ಹರಿದಾಸರ ಲೋಕ ನೀತಿ ಅನುಸಂಧಾನದ ಆಧುನಿಕ ಮಾದರಿಗಳು' ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿ ಪಿಎಚ್ ಡಿ ಪದವಿಗೆ ಭಾಜನರಾಗಿದ್ದಾರೆ. ಅಲ್ಲದೆ ಹರಿದಾಸ ಸಾಹಿತ್ಯದ ಸಂಶೋಧಕರಾಗಿ ಹತ್ತು ಹಲವು ಕೃತಿಗಳನ್ನು ಕೊಡುಗೆಗಾಗಿ ಕೊಟ್ಟಿರುವ ಶ್ರೀಯುತರು ಮುಳಬಾಗಿಲಿನ ಶ್ರೀಪಾದರಾಜ ಮಠದ ಭಕ್ತಾಭಿಮಾನಿಗಳಾಗಿದ್ದು ಶ್ರೀಮಠದ ಅಂಗ ಸಂಸ್ಥೆ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್ (ರಿ)ನ ಹರಿದಾಸ ಸಾಹಿತ್ಯ ವಿಭಾಗದ ವಿದ್ಯಾರ್ಥಿಗಳ -ಸಂಶೋಧಕರ ಗೌರವ ಮಾರ್ಗದರ್ಶಕರಾಗಿದ್ದಾರೆ.
ಶ್ರೀಮಠದಿಂದ ಪ್ರಕಟವಾಗುವ ರಂಗವಿಠಲ ಮಾಸಪತ್ರಿಕೆಯು ಹರಿದಾಸ ಸಾಹಿತ್ಯದ ವಿಶೇಷವಾಗಿ ಶ್ರೀಪಾದರಾಜರ ಕೃತಿ ಸಂಪದವನ್ನು ವೈವಿಧ್ಯಪೂರ್ಣ ಹಾಗೂ ವಿಶಿಷ್ಟ ಓದುಗರಿಗೆ ಪರಿಚಯಿಸುವಲ್ಲಿ ಯಶಸ್ವಿಯಾಗಿದೆ. ವಿದ್ವಾನ್ ಹೆಚ್ ಬಿ ಲಕ್ಷ್ಮೀನಾರಾಯಣ ಆಚಾರ್ಯರು ಈ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಮಾಡುತ್ತಿರುವ ಕೆಲಸ ಮಹತ್ತರವಾದದ್ದು,ಎನ್ಐವಿಎಸ್ ಮೂಲಕ ಪ್ರಕಟವಾಗಿರುವ ಗ್ರಂಥಗಳ ಸಂಖ್ಯೆ ನೂರರ ಗಡಿ ದಾಟಿದೆ. ಅವೆಲ್ಲಕ್ಕೂ ಕಳಶಪ್ರಾಯವಾಗಿ ಈ ಸಂಪುಟಗಳ ಮೂಲಕ ನಾಡಿನ ಹಿರಿಯ ವಿದ್ವಾಂಸರುಗಳಿಂದ ಅರ್ಥಪೂರ್ಣ ವ್ಯಾಖ್ಯಾನವನ್ನು ಬರೆಸಿ ದಾಸ ಸಾಹಿತ್ಯದಲ್ಲಿ ಚಿರಕಾಲ ಉಳಿಯಬಹುದಾದ ಆಕರ ಗ್ರಂಥವಾಗಿ ಹೊರಹೊಮ್ಮಿದೆ. 'ನಾ ನಿನಗೇನು ಬೇಡುವುದಿಲ್ಲ' ಎಂಬ ಶೀರ್ಷಿಕೆಯಲ್ಲಿ 34 ಕೀರ್ತನೆಗಳನ್ನು ಮತ್ತು 'ರಂಗನಾಥನ ನೋಡುವ ಬನ್ನಿ' ಎನ್ನುವ ಶೀರ್ಷಿಕೆಯಲ್ಲಿ 27 ಕೀರ್ತನೆಗಳನ್ನು ವಿಶ್ಲೇಷಣೆ ಮಾಡಿರುವ ಈ ಪ್ರಯತ್ನ ಹರಿದಾಸ ಸಾಹಿತ್ಯದ ಅನುಸಂಧಾನದ ವಿಭಾಗದಲ್ಲಿ ಪ್ರಪ್ರಥಮವಾಗಿದೆ.
ಕೃತಿಯ ಹೆಸರು: ಶ್ರೀಪಾದರಾಯರ ಕೃತಿಗಳ ಚಿಂತನ- ಮಂಥನ
'ನಾ ನಿನಗೇನು ಬೇಡುವುದಿಲ್ಲ'
ಶ್ರೀಪಾದರಾಜರ ಕೃತಿಗಳ ವಿಮರ್ಶೆ ಭಾಗ -1
ಶ್ರೀಪಾದರಾಯರ ಕೃತಿಗಳಲ್ಲಿನ ಕೃಷ್ಣಾವತಾರದ ನೆನಹು
'ರಂಗನಾಥನ ನೋಡುವ ಬನ್ನಿ '
ಶ್ರೀಪಾದರಾಜರ ಕೃತಿಗಳ ವಿಮರ್ಶೆ ಭಾಗ-2
ಆಯ್ಕೆ, ಸಂಪಾದನೆ: ಡಾ.ಬಿ. ಎಸ್.ಅನಿಲ ಕುಮಾರ ಬೊಮ್ಮಘಟ್ಟ
ಪ್ರಕಾಶಕರು: ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆ ಟ್ರಸ್ಟ್( ರಿ )
ಮುಳಬಾಗಿಲು ಶ್ರೀಪಾದರಾಜ ಮಠ, ರಾಘವೇಂದ್ರ ಕಾಲೋನಿ, ಚಾಮರಾಜಪೇಟೆ, ಬೆಂಗಳೂರು 18
ದೂ: 080 - 2691 4637
ಪುಟಗಳು : 406 ಮತ್ತು 325
ಬೆಲೆ: ಕ್ರಮವಾಗಿ ರೂ. 270/- & 220 /-
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ