ಅಯೋಧ್ಯೆ: ಅಯೋಧ್ಯೆ ರಾಮಮಂದಿರದ ವಿಶ್ವಸ್ಥರೂ ಆಗಿರುವ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಗುರುವಾರದಂದು ಅಯೋಧ್ಯೆಯಲ್ಲಿ 25 ಬ್ರಾಹ್ಮಣ ಬಾಲಕರಿಗೆ ಸಾಮೂಹಿಕ ಬ್ರಹ್ಮೋದೇಶ ಕಾರ್ಯಕ್ರಮ ನೆರವೇರಿತು.
ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿನ ಕಡುಬಡತನದಲ್ಲಿರುವ ಕುಟುಂಬಗಳ 80ಕ್ಕೂ ಅಧಿಕ ಬ್ರಾಹ್ಮಣ ಬಾಲಕರನ್ನು ಶ್ರೀಗಳು ಕಳೆದ ಆರೇಳು ವರ್ಷಗಳಿಂದ ನವದೆಹಲಿಯಲ್ಲಿರುವ ಶ್ರೀಮಠದ ಶಾಖೆಗೆ ಕರೆತಂದು ಅಲ್ಲಿನ ಶ್ರೀ ವೇದವ್ಯಾಸ ಗುರುಕುಲದಲ್ಲಿ ಸಂಪೂರ್ಣ ಉಚಿತ ಶಿಕ್ಷಣ ನೀಡುತ್ತಾ ಅವರ ಯೋಗಕ್ಷೇಮವನ್ನು ಮಠದ ವತಿಯಿಂದಲೇ ನೋಡಿಕೊಳ್ಳುತ್ತಿದ್ದಾರೆ.
ಆ ಪೈಕಿ 25 ಬಾಲಕರಿಗೆ ಅಯೋಧ್ಯಾರಾಮನ ದಿವ್ಯ ಕ್ಷೇತ್ರದಲ್ಲಿ ವಿಧ್ಯುಕ್ತವಾಗಿ ಉಪನಯನ ವಿಧಿಗಳನ್ನು ನೆರವೇರಿಸಿದರು. ಅಯೋಧ್ಯೆಯ ಜಾನಕೀ ಘಾಟ್ ಬಳಿ ಇರುವ ಶ್ರೀ ರಾಮವಲ್ಲಭ ಕುಂಜ ಎಂಬ ಭವನದಲ್ಲಿ ಬೆಳಿಗ್ಗೆ 9.10 ರ ಸಿಂಹಲಗ್ನ ಸುಮುಹೂರ್ತದಲ್ಲಿ ವೈದಿಕರ ವಿಧಿವಿಧಾನಪೂರ್ವಕ ಉಪನಯನ ನೆರವೇರಿತು.
ಎಲ್ಲ ವಟುಗಳಿಗೆ ಮಧುಪರ್ಕ ಸಾಹಿತ್ಯ ವಸ್ತ್ರ ಅವರ ಹೆತ್ತವರೂ ವಸ್ತ್ರ ಹಾಗೂ ಊಟೋಪಚಾರ ಸಹಿತ ಎಲ್ಲ ವೆಚ್ಚಗಳನ್ನೂ ಮಠದಿಂದಲೇ ಭರಿಸಿ ಈ ಕಾರ್ಯಕ್ರಮ ನಡೆಸಲಾಯಿತು. ಶ್ರೀಗಳು ಎಲ್ಲ ವಟುಗಳಿಗೂ ಕೃಷ್ಣಮಂತ್ರೋಪದೇಶ ನೀಡಿ ಬ್ರಾಹ್ಮಣ್ಯದ ಕರ್ತವ್ಯಗಳನ್ನು ಜೀವನ ಪರ್ಯಂತ ಪಾಲಿಸುವಂತೆ ಸಂದೇಶ ನೀಡಿ ಹರಸಿದರು.
ಸಮಾರಂಭದಲ್ಲಿ ವಿಶ್ವಹಿಂದು ಪರಿಷತ್ತಿನ ಪ್ರಮುಖರಾದ ರಾಜ್ ಕುಮಾರ್ ದಾಸ್ ಜೀ, ಅಶೋಕ್ ತಿವಾರಿ, ಗೋಪಾಲ್ ಜೀ ಉಪಸ್ಥಿತರಿದ್ದು ಶ್ರೀಗಳ ಕಾರ್ಯವನ್ನು ಪ್ರಶಂಸಿಸಿ ನೂತನ ವಟುಗಳಿಗೆ ಶುಭಾಶೀರ್ವಾದಗೈದರು.
ನವದೆಹಲಿಯ ಪೇಜಾವರ ಮಠದ ವ್ಯವಸ್ಥಾಪಕರೂ ವೇದವ್ಯಾಸ ಗುರುಕುಲದ ಪ್ರಾಚಾರ್ಯರೂ ಆಗಿರುವ ವಿದ್ವಾನ್ ವಿಠೋಬಾಚಾರ್ಯರು ಪೂರ್ಣ ಕಾರ್ಯಕ್ರಮದ ಮೇಲ್ವಿಚಾರಣೆ ಹಾಗೂ ವ್ಯವಸ್ಥೆಗೈದರು. ಪ್ರಾಧ್ಯಾಪಕ ಶ್ರೀನಿಧಿ, ಶ್ರೀಗಳ ಆಪ್ತರಾದ ವಿಷ್ಣುಮೂರ್ತಿ ಆಚಾರ್ಯ, ಕೃಷ್ಣಮೂರ್ತಿ ಭಟ್ ಅಯೋಧ್ಯೆ ಪೇಜಾವರ ಮಠದ ವ್ಯವಸ್ಥಾಪಕ ಮಹೇಂದ್ರ ದುಬೆ ಸಹಕರಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ