ಗೆಳತಿ ನೀನು ಸೂರ್ಯನ
ಅಂಶ ಹೊತ್ತವಳೇನೆ..?!
ತುಂಬಿಕೊಂಡಿದ್ದರೂ ಒಳಗೆ
ಸಾವಿರ-ಸಾವಿರ ಸ್ಪೋಟ-ಧಗೆ!!
ಸುತ್ತಲೆಲ್ಲ ಹಂಚಿದೆಯಲ್ಲೆ..
ದಿನವು ದಿವ್ಯ-ಬೆಳಕಿನ ನಗೆ!!
ಗೆಳತಿ ನೀನು ಚಂದ್ರನ
ಗುಣ ಸಂಭೂತಳೇನೆ..?!
ನಿನ್ನೊಳಗೆ ಇಲ್ಲದಿದ್ದರೂ..
ಸುಖ ಸಂತಸದ ಬೆಳಕು!
ಸದಾ ನಗುತ ಬೆಳಗಿದೆಯಲ್ಲೆ
ಸುತ್ತ-ಮುತ್ತಲಿನ ಬದುಕು!!
ನಿನ್ನಯ ಒಡಲೊಳಗಿದ್ದರೂ
ಕಡಲಿನಷ್ಟು ನೋವು ಅಳು
ಚೆಲ್ಲಿದೆಯಲ್ಲೆ ನಿತ್ಯ ಎಲ್ಲೆಲ್ಲು
ನಗೆಯ ಭವ್ಯ ಬೆಳದಿಂಗಳು!!
ಉಸಿರುಸಿರಲೂ ಅನುಕ್ಷಣವು
ಸಹಿಸುತ ಕ್ಯಾನ್ಸರಿನ ಕಹಿ
ಹರಿಸಿದೆಯಲ್ಲೆ ಕರುನಾಡಿನ
ಮನೆ-ಮನದಿ ಕನ್ನಡದ ಸಿಹಿ.!
ಮುಗ್ಧ-ಸ್ನಿಗ್ಧ ನಗುವಿನಿಂದ
ಶುದ್ದ ಮುದ್ದು ನುಡಿಗಳಿಂದ
ದಿಗ್ಧಿಗಂತಗಳ ಬೆಳಗಿದ ಅಪರ್ಣ
ನಿನಗಿದೋ ಕೋಟಿ ಕೋಟಿ
ಕನ್ನಡದ ಹೃನ್ಮನಗಳ ಭಾವಪೂರ್ಣ
ಬಾಷ್ಪಾಂಜಲಿಗಳ ಅಶ್ರುತರ್ಪಣ.!
ಮತ್ತೆ ಹುಟ್ಟಿ ಬನ್ನಿ ಅಪರ್ಣ
ಬಯಸಿದೆ ನಾಡಿನ ಅಂತಃಕರಣ.!
ಎ.ಎನ್.ರಮೇಶ್. ಗುಬ್ಬಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ