ಎಲ್ಲವೂ ಅತ್ಯಲ್ಪ ಸಮಯದಲ್ಲಿ ನಡೆದು, ಯಶಸ್ಸನ್ನು ಕಂಡು ಇಂದು ಅಂಕದ ಪರದೆ ಎಳೆದು ಇತಿಹಾಸವನ್ನು ಬರೆದು ಸ್ಥಾಯಿಯಾಗಿ ಉಳಿದಿದೆ- ಚರಿತ್ರಾರ್ಹ ಹವ್ಯಾಸಿ ತಂಡಗಳ ಯಕ್ಷಗಾನ ರಂಗಪ್ರದರ್ಶನ. ಎಲ್ಲಾ ತಂಡಗಳೂ ಸಾಕಷ್ಟು ರಂಗತಾಲೀಮು ನಡೆಸಿ 4ರ ಮಗುವಿನಿಂದ ಹಿಡಿದು 75ರ ಪ್ರೌಢರ ವರೆಗಿನ ವಯೋಮಾನದ ಕಲಾವಿದರು ಭಾಗವಹಿಸಿದ್ದೂ ನ ಭೂತವೇ ಸರಿ. ಓರ್ವ ಕಲಾವಿದನಾಗಿ, ಸಂಘಟಕನಾಗಿ ರಾಮಣ್ಣ ಬಹಳ ಶ್ರಮಿಸಿದ್ದಾರೆ ಅಹರ್ನಿಶಿಗಳ ಬೇಧವೆಣಿಸದೆ. ಕಲಾವಿದನಾಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಇಲ್ಲಿನ ಯಕ್ಷವೈಭವನನ್ನು ಮೆರೆಸುವ ಬಗೆಯನ್ನು ಚಿಂತಿಸುತ್ತಾ ದುಡಿದು ಸಂತೃಪ್ತ ಭಾವನೆಯಲ್ಲಿ ರಾಮಣ್ಣ ಪುಳಕಿತರಾಗಿ ಮುಳುಗೇಳುತ್ತಿದ್ದಾರೆ ಪುನರ್ವಸು- ಪುಷ್ಯದ ಜಡಿಮಳೆಯ ಮಧ್ಯೆ ಸಾಕಷ್ಟು ಅನನುಕೂಲತೆಯ ನಡುವೆಯೂ ಆಹ್ಯಾನಿತರಿಗೆ ಎಲ್ಲೆಲ್ಲೂ ಊನವಾಗದಂತೆ ನೋಡಿಕೊಂಡಿದ್ದಾರೆ. ದಿನದಿಂದ ದಿನಕ್ಕೆ ಪ್ರಾಯೋಗಿಕವಾಗಿ ತೊರಿದರೆ ಗಳು ಧುತ್ತೆಂದು ಎದುರು ನಿಂತಾಗ ಅದಕ್ಕೆ ಪೂರಕವಾಗಿ ಸ್ವಂದಿಸಿದ್ದಾರೆ. ಜ್ಞಾನದಾಹಿಗಳಿಗೆ ಅವಕಾಶವಿತ್ತಿದ್ದಾರೆ. ವಿಶೇಷವಾಗಿ ಅವಕಾಶಗಳು ಕೊರತೆಯಿರುವ ಕಿಶೋರ / ಕಿಶೋರಿಯರು ಸಂಭ್ರಮಿಸಿದ್ದಾರೆ. ಸಂಗ್ರಹಾಲಯ ಕಂಡು ನಿಬ್ಬೆರಗಾಗಿದ್ದಾರೆ.
ಪ್ರಾಯಶಃ ಭಾಗವತ ಮಯ್ಯರು ಸ್ಪಾರ್ಥಕ್ಕಾಗಿಯೇ ಚಿಂತಿಸುತ್ತಿದ್ದರೆ ಪಾರ್ತಿಸುಬ್ಬನ ನಾಡಿನ ಸೊಗಡನ್ನು ನೋಡುವ; ಪ್ರಕೃತಿಯ ಐಸಿರಿಯನ್ನು ಈಂಟುವ ಅವಕಾಶ ಸರಿಸುಮಾರು 1000 ಕಲಾವಿದ ಹವ್ಯಾಸಿ ಬಂಧುಗಳಿಗೆ ಅಪಾರ ನಷ್ಟವಾಗುತ್ತಿತ್ತು. ತ್ರಿವಳಿ ಜಿಲ್ಲೆಯ ಮೂಲೆ ಮೂಲೆಗಳಿಂದ ಕಲಾವಿದರು ಬಂದು ಗೆಜ್ಜೆ ಕಟ್ಟಿ ಕುಣಿದು ಹೆಮ್ಮೆಪಟ್ಟರು. ಕಲಾಕರ್ಷಣೆಗೆ ಮನಸೋತು ಧನಾಕರ್ಷಣೆ ಮರೆತರು. ಯಕ್ಷಗಾನದ ಖಚಿತತೆ ಕಂಡುಕೊಂಡರು. ಅಚ್ಚುಕಟ್ಟಾದ ವೇಷಭೂಷಣದ ವ್ಯವಸ್ಥೆ ದೇವಕಾನದ ಕಲೆಯ ಆರಾಧಿಸುವಿಕೆಯನ್ನು ತೋರಿಸುತ್ತದೆ. ಅವರ ಸಹಕಾರೀ ಬಂಧುಗಳೂ ಶ್ಲಾಘನೀಯರು. ಇದಕ್ಕಾಗಿ ದುಡಿದ ಎಲ್ಲರನ್ನೂ ಗುರುತಿಸಿ, ಗೌರವಿಸಿದುದು ಕಲೆಗೆ ಸಂದ ಗೌರವ. ತೆಂಕು-ಬಡಗಿನ ತರತಮತೆ ಇಲ್ಲವಾಯಿತು, ಎಲ್ಲರನ್ನೂ, ಎಲ್ಲವನ್ನು ಏಕ ಸೂತ್ರದಲ್ಲಿ ಬಂಧಿಸಿದರು ಶ್ರೀ ಧರ್ಮಸ್ಥಳ ಮೇಳದ ಪ್ರಧಾನ ಭಾಗವತರು.
ಗುರುಕಾರುಣ್ಯ
ಎಡನೀರು ಶ್ರೀಗಳ ಆಶೀರ್ವಚನ ಸಮಾರಂಭದ ಆದಿಗೂ, ಮುಕ್ತಾಯಕ್ಕೂ ದೊರಕಿದುದು ಅಲಭ್ಯ ಲಾಭ. ಮುಂದೆ ಗುರಿ ಇದ್ದು ಹಿಂಬಲಕೆ ಗುರು ಇದ್ದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಯಕ್ಷವೈಭವವೇ ಸಾಕ್ಷಿ. ನಡೆ-ನುಡಿಗಳು ನೇರವಾಗಿದ್ದಾಗಿ ಕಲ್ಮಷಕೆ ಎಡೆಯಿಲ್ಲ ಎಂಬುದೂ ನಿರ್ಧರಿತವಾಯಿತಲ್ಲಿ.
ಅನ್ನದಾಸೋಹ: ಮಾನವನನ್ನು ತೃಪ್ತಿಪಡಿಸುವ ಸುಲಭ ದಾರಿ ಆಹಾರ. ಇದು ಎಲ್ಲರಿಗೂ, ಎಲ್ಲಾ ಸಮಯದಲ್ಲೂ ದೊರಕಿದ್ದು, ಸಂತೃಪ್ತಿಯ ತೇಗು ಎಲ್ಲರಲ್ಲೂ ಕಾಣುತ್ತಿತ್ತು. ಲಭ್ಯ ಸ್ಥಳಾವಕಾಶವನ್ನು ಸುಲಲಿತವಾಗಿ ಬಳಸಿಕೊಂಡದ್ದು ರಾಮಣ್ಣ ಹಾಗೂ ಮಕ್ಕಳು ಮತ್ತು ಸಹಕಾರಿಗಳ ಜಾಣ್ಮೆ.
ಮೂವತ್ತಕ್ಕೂ ಮೀರಿ ತಂಡಗಳು ಅವಕಾಶವನ್ನು ಪಡೆದರೂ ಅನ್ಯಾನ್ಯ ಕಾರಣಗಳಿಂದ ಕೆಲವರಿಗೆ ಅವಕಾಶ ಮುಂದೂಡಲ್ಪಟಿತ್ತು. ಅವರಿಗೆ ಮುಂದಿನ ಬಾರಿ ಪ್ರಥಮಾದ್ಯತೆ ಇರಲಿ. ದ್ವಿತೀಯ ಬಾರಿ ಭಾಗವಹಿಸಿದ ನಮ್ಮ ಬಹಳ ಹೆಮ್ಮೆಪಟ್ಟಿತ್ತು. ಬೇರೆ ಬೇರೆ ತಂಡಗಳ 2- 3 ಆಟಗಳನ್ನು ಪ್ರತ್ಯಕ್ಷವಾಗಿಯೂ ಉಳಿದವುಗಳನ್ನು ನೇರ ಪ್ರಸಾರದಲ್ಲಿಯೂ ನೋಡಿ ಹಿತಪಟ್ಟೆವು, ಅವಕಾಶಕ್ಕಾಗಿ ಧನ್ಯವಾದಗಳು. ಮುಂದಿನ ದಿನಗಳಲ್ಲಿ ಕೂಡಾ ರಾಮಣ್ಣನ ಯಾವುದೇ ಪ್ರಯತ್ನಕ್ಕೆ ನಮ್ಮ ಬೆಂಬಲ ಸದಾ ಇದೆ ಎಂದು ಈ ಮೂಲಕ ಭರವಸೆ ನೀಡುತ್ತೇವೆ. ಅಚ್ಚುಕಟ್ಟಾದ ವ್ಯವಸ್ಥೆ ನಮಗೆ ದಿಗ್ಬ್ರಮೆ ನೀಡಿದೆ. ನಾವು ಸಂತೃಪ್ತರು.
ಹೆಚ್ಚಿನ ಪ್ರಸಂಗಗಳು, ಕಲಾವಿದರು ಮತ್ತೆ ಮತ್ತೆ ಕಾಣಿಸಿಕೊಳ್ಳಲಿಲ್ಲ, ಕೆಲವರನ್ನು ಬಿಟ್ಟರೆ. ಮುಂದೆ ಈ ಬಗ್ಗೆ Table ವರ್ಕ್ ಮಾಡಿದರೆ ಇದನ್ನೂ ನಿಲ್ಲಿಸಬಹುದು. ಆಗ ಇನ್ನೂ ಒಂದಷ್ಟು ಹೊಸ ಹೊಸ ಹವ್ಯಾಸಿಗಳಿಗೆ ವೇದಿಕೆ ದೊರಕಬಹುದೆಂದು ನನ್ನ ಆಶಯ.
ಹವ್ಯಾಸಿಗಳ ಕೈಯಲ್ಲೂ ಕೆಲವು ಕ್ಲಿಷ್ಟ ಪ್ರಸಂಗಗಳೂ ಯಶಸ್ಸನ್ನು ಕಂಡಿದೆ. ಸಂಘಟಕರು ಹೇಳಿಕೊಂಡಂತೆ ರಾಜ್ಯದ ಬೇರೆ ಬೇರೆ ಕಡೆಗಳಿಂದ ಬಂದ ಯಕ್ಷ ಪ್ರೇಮಿಗಳಿಗೆ ಅಭಿನಂದನೆಗಳು. ಅವರಿಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸಿ, ಕರಾವಳಿಯವರ ಅತಿಥಿಸತ್ಕಾರದ ರುಚಿಯನ್ನು ಉಣಿಸಿದರು. ಶ್ರೀರಾಮಣ್ಣ ಮುಂದೆ ಒಂದು ಸುಸಜ್ಜಿತ ರಂಗ ವೇದಿಕೆ (ಪ್ರಕೃತಿ ವಿಕೋಪವನ್ನ ಎದುರಿಸುವರೇ) ರೂಪುಗೊಳ್ಳಲಿ ಎಂಬುದು ನನ್ನ ಆಶಯ. ಒಬ್ಬ ಸಂಘಟಕ - ಕಲಾವಿದನಾಗಿ ಸಿರಿಬಾಗಿಲು ಯಕ್ಷವೈಭವಕ್ಕೆ ಸಹಾಯವಿತ್ತಿದ್ದೇನೆ. ಹೀಗೆ ಮುಂದೆಯೂ ಹೀಗೆ ಹೆಗಲು ಹೆಗಲು ಜೋಡಿಸಿ, ಹೆಜ್ಜೆ ಹಾಕುತ್ತಾ ಅಭಿವೃದ್ಧಿಯ ಕಡೆ ಭರದಿಂದ ಸಾಗೋಣ.
- ರವಿ ಅಲೆವೂರಾಯ, ವರ್ಕಾಡಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ