ಮಂಗಳೂರು: ದೇಶದ ಗಡಿಗಳನ್ನು ಕಾಯುವ ಯೋಧರು ದೇವರ ಸಮಾನ. ಎಂತಹ ಕಠಿಣ ಪರಿಸ್ಥಿತಿಯಲ್ಲೂ ಹಗಲಿರುಳೆನ್ನದೆ ಸದಾ ಸನ್ನದ್ಧವಾಗಿ ಅವರು ಗಡಿಗಳನ್ನು ಭದ್ರವಾಗಿಸಿರುವುದರಿಂದ ಭಾರತೀಯರಾದ ನಾವು ನಮ್ಮ ನಮ್ಮ ವ್ಯವಹಾರಗಳನ್ನು ನೆಮ್ಮದಿಯಿಂದ ಮಾಡಿಕೊಂಡು ಸುರಕ್ಷಿತವಾಗಿ ಜೀವನ ನಡೆಸಲು ಸಾಧ್ಯವಾಗಿದೆ. ಇಂತಹ ಯೋಧರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ ಅವರು ಹೇಳಿದರು.
ಕಾರ್ಗಿಲ್ ವಿಜಯ ದಿವಸದ 25ನೆ ವರ್ಷಾಚರಣೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ಯುವಮೋರ್ಚಾ ವತಿಯಿಂದ ಆಯೋಜಿಸಿದ್ದ ತಿರಂಗಾ ಯಾತ್ರೆ ಮತ್ತು ಕಾರ್ಗಿಲ್ ಯೋಧರ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ಅವರು ಮಾತನಾಡಿ, 'ದೇಶಕ್ಕಾಗಿ ಪರಮೋಚ್ಚ ಬಲಿದಾನ ಮಾಡುವ ವೀರ ಯೋಧರನ್ನು ಗೌರವಿಸುವುದು ನಮ್ಮ ಆದ್ಯ ಕರ್ತವ್ಯ. ಅಂದು ಕಾರ್ಗಿಲ್ ಯುದ್ಧ ನಡೆದ ಸಂದರ್ಭದಲ್ಲಿ ಪ್ರಧಾನ ಮಂತ್ರಿಯಾಗಿ ದೇಶವನ್ನು ಮುನ್ನಡೆಸಿದ್ದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಹಾಗೂ ಅಂದಿನ ರಕ್ಷಣಾ ಸಚಿವರಾಗಿ ಜಾರ್ಜ್ ಫೆರ್ನಾಂಡಿಸ್ ಅವರು ಸಕಾಲದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಂಡಿದ್ದರಿಂದ ಕಾರ್ಗಿಲ್ ಮೂಲಕ ಅತಿಕ್ರಮಣ ನಡೆಸಿದ್ದ ಪಾಕ್ ಸೈನಿಕರನ್ನು ಹೊಡೆದೋಡಿಸಲು ಸಾಧ್ಯವಾಯಿತು' ಎಂದು ನೆನಪಿಸಿಕೊಂಡರು.
ಇಂದು ಕಾರ್ಗಿಲ್ ವಿಜಯದ ರಜತ ವರ್ಷದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಮುನ್ನಡೆಸುತ್ತಿದ್ದು, ವಿಶ್ವದಲ್ಲೇ ಅತ್ಯಂತ ಬಲಿಷ್ಠ ದೇಶವನ್ನಾಗಿ ಭಾರತವನ್ನು ಬೆಳೆಸಲು ಶ್ರಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ವತಿಯಿಂದ ಕಾರ್ಗಿಲ್ ಯೋಧರನ್ನು ಗೌರವಿಸಲು ನಮಗೆ ಹೆಮ್ಮೆಯೆನಿಸುತ್ತದೆ ಎಂದು ನುಡಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಈ ಸಭಾ ಕಾರ್ಯಕ್ರಮ ನಡೆಯಿತು. ಅದಕ್ಕೆ ಮುನ್ನ ಬಂಟ್ಸ್ ಹಾಸ್ಟೆಲ್ ವೃತ್ತದಿಂದ ಪಿವಿಎಸ್ ನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿ ವರೆಗೆ ತಿರಂಗಾ ಯಾತ್ರೆ ನಡೆಯಿತು. ನೂರಾರು ಮಂದಿ ಈ ಯಾತ್ರೆಯಲ್ಲಿ ಭಾಗವಹಿಸಿ ದೇಶಪ್ರೇಮ ಮೆರೆದರು.
ಈ ಸಂದರ್ಭದಲ್ಲಿ ಕಾರ್ಗಿಲ್ ಯುದ್ಧ ಸಂದರ್ಭದಲ್ಲಿ ಹೋರಾಡಿದ ಮೂವರು ಯೋಧರನ್ನು ಗೌರವಿಸಲಾಯಿತು. ಅವರು ಕಾರ್ಗಿಲ್ ಹೋರಾಟದ ಅನುಭವಗಳನ್ನು ಹಂಚಿಕೊಂಡರು.
ಯುವಮೋರ್ಚಾ ಅಧ್ಯಕ್ಷ ನಂದನ್ ಮಲ್ಯ ಅವರು ಮತ್ತು ಅವರ ಬಳಗ ಈ ಕಾರ್ಯಕ್ರಮದ ಉಸ್ತುವಾರಿ ಹೊತ್ತಿದ್ದರು. ವೇದಿಕೆಯಲ್ಲಿ ಮಹಾನಗರಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಉಪ ಮೇಯರ್ ಸುನೀತಾ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನೋಹರ್ ಕದ್ರಿ, ಪಕ್ಷದ ಅನೇಕ ಹಿರಿಯ ಮುಖಂಡರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ