ಹಾಸನ: ಭಾರತ ದೇಶದಲ್ಲಿ ರಾಜಮಹಾರಾಜರ ಕಾಲದಿಂದಲೂ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಭಾರತದ ಸಾಂಸ್ಕೃತಿಕ ಜಗತ್ತನ್ನು ಶ್ರೀಮಂತಗೊಳಿಸಿದ್ದು ಇಂದಿನ ಜನಪ್ರತಿನಿಧಿಗಳು ಕೂಡ ಅದನ್ನು ಪೋಷಿಸುವುದು ಅಗತ್ಯವಿದೆ ಎಂದು ಸಾಹಿತಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಸಿ. ಸುವರ್ಣ ಹೇಳಿದರು.
ನಗರದಲ್ಲಿ ಚಿತ್ರಕಲಾವಿದ ವಸಂತಕುಮಾರ್ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲೆ ಮನುಷ್ಯನ ಸೌಂದರ್ಯಪ್ರಜ್ಞೆಯನ್ನು ಹೆಚ್ಚಿಸುವುದರ ಜೊತೆಗೆ ಪಂಚೇಂದ್ರಿಯಗಳ ಬೆಳವಣಿಗೆಯ ಜೊತೆಗೆ ಹೊಸ ಹೊಸ ಯೋಚನೆಗಳು, ಚಿಂತನೆಗಳು ಬೆಳೆಯಲು ಇದು ಪ್ರೇರಣೆಯಾಗಿದೆ. ಅಲ್ಲದೆ ಮನುಷ್ಯನ ಬದುಕನ್ನು ರೂಪಿಸಲು ಕೂಡ ಇದು ಸಹಕಾರಿಯಾಗಿದೆ ಎಂದರು.
ಹಾಸನದಲ್ಲಿ ಕಳೆದ ಇಪ್ಪತ್ತೈದು ವರ್ಷದಿಂದಲೂ ಕಲಾಗ್ಯಾಲರಿಯನ್ನು ನಿರ್ಮಿಸಿ ಕಲೆಗೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡುವಂತೆ ಜನರು ಬೇಡಿಕೆ ಇಟ್ಟಿದ್ದರೂ ಕೂಡ ಕಲಾವಿದರ ಹಾಗೂ ನಾಗರಿಕರ ಕನಸು ಕನಸಾಗಿಯೇ ಉಳಿದಿರುವುದು ನೋವಿನ ಸಂಗತಿ. ಹಾಸನಜಿಲ್ಲೆ ಕಲೆಗಳ ತವರೂರು ಇಲ್ಲಿಯ ಕಲೆಗಳು ಜಗತ್ ವಿಖ್ಯಾತಿಯನ್ನು ಪಡೆದಿದೆ. ಜೊತೆಗೆ ಕಲಾವಿದರು ಕೂಡ ಕಲೆಯನ್ನು ಜಾಗತಿಕಮಟ್ಟಕ್ಕೆ ಕೊಂಡೊಯುತ್ತಿರುವುದು ಹೆಮ್ಮೆಯ ಸಂಗತಿ. ಪ್ರವಾಸೋದ್ಯಮ ಬೆಳೆಯಬೇಕಾದರೆ ಕಲೆಯನ್ನು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ತಮ್ಮ ದೂರದೃಷ್ಟಿಯನ್ನಿಟ್ಟುಕೊಂಡು ಕಲಾವಿದರ ನಾಗರಿಕರ ಕನಸನ್ನು ನನಸು ಮಾಡಿ ಕೇವಲ ರಸ್ತೆ, ಕಟ್ಟಡಗಳು ನಿರ್ಮಾಣ ಮಾಡಿದರಷ್ಟೇ ಅಲ್ಲ ಅಭಿವೃದ್ಧಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.
ವಸಂತಕುಮಾರ್ ಅವರು ವಾಟರ್ ಕಲ್ಲರ್ , ಆಯಿಲ್ ಕಲ್ಲರ್ ಆಕ್ರಾಲಿಕ್ ಗಳಲ್ಲಿ ಲ್ಯಾಂಡ್ ಸ್ಕೇಫ್ , ಪೋಟ್‌ರೆಟ್ . ಸ್ಟಿಲ್‌ಲೈಪ್ ಚಿತ್ರಗಳನ್ನು ತಮ್ಮ ಕ್ಯಾನ್ವಾಸನಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಾ ನೋಡುಗರ ಮನಸೆಳೆಯುವುದರ ಜೊತೆಗೆ ಮಕ್ಕಳಲ್ಲಿ ಯುವ ಕಲಾವಿದರಲ್ಲಿ ಚಿತ್ರಕಲೆಯ ಅಭಿರುಚಿಯನ್ನು ಮೂಡಿಸುವುದರ ಜೊತೆಗೆ ಹೊಸ ಲೋಕವನ್ನು ಸೃಷ್ಟಿಸುತ್ತಿರುವುದು ಶ್ಲಾಘನೀಯವಾದುದು ಎಂದರು.
ಕವಿ ಗೊರೂರು ಅನಂತರಾಜು ಮಾತನಾಡಿ, ಹಾಸನ ಜಿಲ್ಲೆ ಕಲೆ ಸಾಹಿತ್ಯದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದು ಇದನ್ನು ಪೋಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ನಾನು ಈಗಾಗಲೇ ಜಿಲ್ಲೆಯ ಯುವಕಲಾವಿದರನ್ನು ಪ್ರೋತ್ಸಾಹಿಸಲು ಅವರ ಕಲೆಯ ಅಭಿವ್ಯಕ್ತಿಯನ್ನು ಪರಿಚಯಿಸುವ ಸಲುವಾಗಿ ಕೃತಿಯನ್ನು ರಚಿಸಿದ್ದು ನನಗೆ ತುಂಬಾ ಸಂತಸವನ್ನು ತಂದಿದೆ ಯಾವುದೇ ದೇಶ ಅಭಿವೃದ್ಧಿಯಾಗ ಬೇಕಾದರೆ ಅಲ್ಲಿ ಕಲೆ ಸಾಹಿತ್ಯ ಬೆಳೆಯಬೇಕು ಎಂದರು.
ಅಂತರಾಷ್ಟ್ರೀಯ ಚಿತ್ರಕಲಾವಿದರಾದ ಕೆ.ಟಿ.ಶಿವಪ್ರಸಾದ್ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು. ಗಾಯಕಿ ಸುನಂದಕೃಷ್ಣ ತಮ್ಮ ಕಂಠದಿಂದ ಸುಶ್ರಾವ್ಯವಾಗಿ ಜಾನಪದಗೀತೆಗಳನ್ನು ಹಾಡಿ ಪ್ರೇಕ್ಷಕರ ಮನಸೆಳೆದರು. ಕಲಾವಿದ ವಸಂತ ಕುಮಾರ್ ಸ್ವಾಗತಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ