ಅಂಧಕಾರವ ದೂರವಾಗಿಸಿ ಬಾಳನ್ನು ಬೆಳಗಿಸುವ ಮುತ್ತು ರತ್ನಗಳು

Upayuktha
0


"ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ:

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ"


ನಮ್ಮ ಭಾರತೀಯ ಪರಂಪರೆಯಲ್ಲಿ ಈ ಶ್ಲೋಕವು ಅತ್ಯಂತ ಪವಿತ್ರವಾದ ಸ್ಥಾನವನ್ನು ಹೊಂದಿದೆ. ಒಂದೇ ಸಾಲಿನಲ್ಲಿ ಶ್ಲೋಕದ ಅರ್ಥ ಹೇಳುವುದಾದರೆ ಗುರು ದೇವರಿಗಿಂತಲೂ ಶ್ರೇಷ್ಠರಾದವರು. ತಂದೆ, ತಾಯಿಯಂತೆ ನಮ್ಮನ್ನು ಸಲಹುವ ಮತ್ತೊಬ್ಬ ಬಂಧುವೆಂದರೆ ಅವರೇ ಗುರು ಎನ್ನುವುದರಲ್ಲಿ ಎರಡು ಮಾತಿಲ್ಲ. ಇವರು ನಮ್ಮ ತಪ್ಪನ್ನು ತಿದ್ದಿ ನಮಗೆ ಬುದ್ದಿ ಹೇಳಿ ಬದುಕಿಗೆ ಪೂರಕವಾದ ಸರಿ ಹಾದಿಯನ್ನು ತೋರಿಸುವವರು. "ಅಂಧಕಾರವನ್ನು ದೂರಗೊಳಿಸಿ ತನ್ನ ಶಿಷ್ಯರಿಗೆ ವಿದ್ಯೆ ಎಂಬ ಬೆಳಕು ಚೆಲ್ಲುವ ದಾರಿದೀಪವೇ ಗುರು" ಇಂತಹ ಗುರುವನ್ನು ಸ್ಮರಿಸಿ ಗೌರವಿಸುವ ದಿನವೇ ಗುರು ಪೂರ್ಣಿಮೆ. 


ಗುರು ಪೂರ್ಣಿಮೆಯು ಚಾಂದ್ರಮಾನದ ಆಷಾಢ ಮಾಸದ ಪೌರ್ಣಿಮೆಯ ದಿನದಂದು ಬರುತ್ತದೆ. ಈ ದಿನವು ಬಹಳ ಮಹತ್ವದ ದಿನವಾಗಿದ್ದು, ಇದು ತನ್ನದೇ ಆದಂತಹ ವಿಶಿಷ್ಟವಾದ ಇತಿಹಾಸ, ಪ್ರಾಮುಖ್ಯತೆಯನ್ನು ಹೊಂದಿದೆ. ನಮ್ಮ ವೇದ, ಪುರಾಣ, ಧರ್ಮಗ್ರಂಥಗಳಲ್ಲೂ ನಾವು ಗುರು ಪೂರ್ಣಿಮೆ ಕುರಿತು ಉಲ್ಲೇಖವನ್ನು ಕಾಣಬಹುದು. ನಮ್ಮ ಭಾರತದ ಹಲವಾರು ರಾಜ್ಯಗಳಲ್ಲಿ ಗುರು ಪೂರ್ಣಿಮೆಯನ್ನು ಹಬ್ಬವನ್ನಾಗಿ ಆಚರಿಸುತ್ತಾರೆ. ಈ ದಿನದಂದು ಜನರು ತಮ್ಮ ಗುರುಗಳನ್ನು ಸ್ಮರಿಸಿ ಪ್ರೀತಿಪೂರ್ವಕವಾದ ಕೃತಜ್ಞತೆಯನ್ನು ಸಲ್ಲಿಸುತ್ತಾರೆ. ನಮ್ಮ ದೇಶದ ಜನರು ಗುರುವನ್ನು ಪೂಜ್ಯನೀಯ ಸ್ಥಾನದಲ್ಲಿರಿಸಿ ಕಾಣುತ್ತಾರೆ ಎಂಬುದಕ್ಕೆ ಇದು ಉತ್ತಮವಾದ ಉದಾಹರಣೆಯಾಗಿದೆ.



ಗುರು ಪೂರ್ಣಿಮೆಯ ಹಿನ್ನೆಲೆ:

ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಗಳು ತನ್ನದೇ ಆದಂತಹ ಪಾವಿತ್ರ್ಯತೆಯನ್ನು ಹೊಂದಿರುತ್ತವೆ. ಅದರಂತೆಯೇ ಗುರು ಪೂರ್ಣಿಮೆಯು ಕೂಡಾ ಒಂದು. ಪುರಾಣಗಳ ಪ್ರಕಾರ ಗುರು ಪೂರ್ಣಿಮೆಯನ್ನು ಗುರು ವೇದವ್ಯಾಸರ ಜನ್ಮದಿನದ ಪ್ರಯುಕ್ತವಾಗಿ ಆಚರಿಸಲಾಗುತ್ತದೆ ಎಂಬ ಉಲ್ಲೇಖವಿದೆ. ವೇದವ್ಯಾಸರು ಋಷಿವರ್ಯರಲ್ಲಿ ಅತ್ಯುತ್ಕೃಷ್ಟ ಋಷಿಗಳೆಂದು ಎನಿಸಿಕೊಂಡವರು, ಮಹಾಭಾರತವನ್ನು ಬರೆದವರು. ಇವರು ವೇದಗ್ರಂಥಗಳನ್ನು ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದ ಎಂದು ನಾಲ್ಕು ಭಾಗಗಳಾಗಿ ಪ್ರತ್ಯೇಕಿಸುವುದರ ಮೂಲಕ ವೇದವ್ಯಾಸರೆಂಬ ಹೆಸರಿನಲ್ಲಿ ಪ್ರಸಿದ್ಧರಾದರು. ಇವರು ಬ್ರಹ್ಮಸೂತ್ರವನ್ನು ಇದೇ ಪೂರ್ಣಿಮೆಯಂದು ಪ್ರಾರಂಭಿಸಿದರು. ಆದ್ದರಿಂದ ಇವರನ್ನು ಜಗತ್ತಿನಲ್ಲಿರುವ ಅತ್ಯುತ್ತಮ ಸ್ಥಾನವಾದ ಗುರುವಿನ ಸ್ಥಾನಕ್ಕೆ ಹೋಲಿಸುತ್ತಾರೆ. ಗುರು ಪೂರ್ಣಿಮೆಯಂದು ಪೂಜೆ ಮಾಡುವುದರ ಮೂಲಕ ಋಷಿ ವೇದವ್ಯಾಸರನ್ನು ಗೌರವಿಸುತ್ತಾರೆ. ಗುರು ಪೂರ್ಣಿಮೆಯ ಮತ್ತೊಂದು ಹೆಸರೇ ವ್ಯಾಸ ಪೌರ್ಣಮಿ. 



ಮತ್ತೊಂದು ಪುರಾಣದ ಉಲ್ಲೇಖದ ಪ್ರಕಾರ ದೇವಾದಿ ದೇವತೆಗಳ ಮಹಾದೇವನಾದ ಶಿವನು ಸಪ್ತ ಋಷಿಗಳಿಗೆ ಯೋಗಜ್ಞಾನವನ್ನು ಜ್ಞಾನೋದಯಿಸಿ, ಗುರುವಿನ ಸ್ಥಾನವನ್ನು ಪಡೆದಿದ್ದು ಇದೇ ದಿನದಂದು ಎಂಬ ನಂಬಿಕೆಯಿದೆ. ಆದ್ದರಿಂದ ಶಿವನನ್ನು ಈ ದಿನದಂದು ಗುರುವಿನ ಸಾಲಿನಲ್ಲಿರಿಸಿ ಭಕ್ತಿಯಿಂದ ಪೂಜಿಸುತ್ತಾರೆ. 



ಬೌದ್ಧ ಧರ್ಮದ ಪುರಾಣದ ಅನುಸಾರ ಬೌದ್ಧ ಧರ್ಮದವರಿಗೆ ಈ ಗುರು ಪೌರ್ಣಿಮೆಯು ಬಹಳ ಮಹತ್ವವಾದುದು. ಗೌತಮ ಬುದ್ಧರು ತಮ್ಮ ಜ್ಞಾನೋದಯದ ನಂತರ ತಾವು ಸಾರಾನಾಥದಲ್ಲಿ ಇದೇ ಪೂರ್ಣಿಮೆಯ ದಿನದಂದು ಮೊದಲ ಉಪದೇಶ ನೀಡಿದರು. ಆದ್ದರಿಂದ ಇಂದಿಗೂ ಗುರು ಪೂರ್ಣಿಮೆಯನ್ನು ಬೌದ್ಧ ಧರ್ಮದವರು ಬಹಳ ಭಕ್ತಿಯಿಂದ ಆಚರಿಸುತ್ತಾರೆ. 



ಗುರು ಪೂರ್ಣಿಮೆಯನ್ನು ಹಿಂದೂ ಧರ್ಮದವರು, ಬೌದ್ಧ ಧರ್ಮದವರು ಮಾತ್ರವಲ್ಲದೆ, ಜೈನ ಧರ್ಮದವರು ಆಚರಿಸುತ್ತಾರೆ. ಜೈನ ಧರ್ಮದ 24ನೇ ತೀರ್ಥಂಕರಾದ ಮಹಾವೀರರು ಕೈವಲ್ಯ ಪಡೆದ ನಂತರ ಇಂದ್ರಭೂತಿ ಗೌತಮ ಎಂಬ ಗಣಧರರನ್ನು ಶಿಷ್ಯರನ್ನಾಗಿ ಸ್ವೀಕರಿಸಿದ್ದು ಇದೇ ಪೂರ್ಣಿಮೆಯ ದಿನದಂದು. ಆದ್ದರಿಂದ ಜೈನ ಧರ್ಮದವರು ಗುರು ಪೂರ್ಣಿಮೆಯನ್ನು ಆಚರಿಸುತ್ತಾರೆ. 



ಗುರು ಎಂದರೆ ಕತ್ತಲು ಅಥವಾ ಅಜ್ಞಾನವನ್ನು ದೂರಮಾಡುವವರು. ನಮ್ಮ ಜೀವನದಲ್ಲಿ ತಂದೆ, ತಾಯಿ ಮತ್ತು ಗುರು ನಮ್ಮ ಬದುಕಿನ ರಚನಕಾರರು. ಈ ಮೂವರು ನಮ್ಮ ಜೀವನದಲ್ಲಿನ ಪ್ರತಿ ಸೋಲು- ಗೆಲುವಿನಲ್ಲೂ ಜೊತೆಯಾಗಿ ನಿಂತು ಭರವಸೆಯನ್ನು ತುಂಬುತ್ತಾ ಹರಸುತ್ತಿರುತ್ತಾರೆ. ತಂದೆ ತಾಯಿ ನಮ್ಮ ಅಗತ್ಯತೆಗಳನ್ನು ಪೂರೈಸುವುದರ ಜೊತೆಗೆ ನಮ್ಮ ಜೀವನಕ್ಕೆ ಬೇಕಾದಂತಹ ಮೌಲ್ಯ, ಸಂಸ್ಕಾರವನ್ನು ನಮ್ಮಲ್ಲಿ ಬೆಳೆಸುತ್ತಾರೆ. ಅದೇ ರೀತಿ ಗುರು ನಮಗೆ ಶಿಕ್ಷಣದ ಪಾಠವನ್ನು ಬೋಧಿಸುವುದರ ಜೊತೆಗೆ ಜೀವನಕ್ಕೆ ಅವಶ್ಯಕವಾದ ನೀತಿ ಪಾಠವನ್ನು ಬೋಧಿಸುತ್ತಾರೆ. 



ನಾವು ಇಂದು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ಅದರಲ್ಲಿ ಗುರುಗಳ ಪಾತ್ರ ಇದ್ದೇ ಇರುತ್ತದೆ. ನಾವು ಎಂದಿಗೂ ಗುರುಗಳನ್ನು ಮರೆಯಬಾರದು. ಅವರನ್ನು ಮೊದಲು ಗೌರವಿಸಿ, ಅವರಿಗೆ ಮೊದಲ ಆದ್ಯತೆಯನ್ನು ನೀಡಬೇಕಾದುದು ನಮ್ಮ ಕರ್ತವ್ಯ. 


 "ಹಿಂದೆ ಗುರು ಮುಂದೆ ಗುರಿ" ಎಂಬ ಮಾತಿಗೆ ಬದ್ಧರಾಗಿ ಇಂದಿಗೂ ನನ್ನ ಜೀವನದಲ್ಲಿ ನನ್ನ ಗುರಿಯನ್ನು ತಲುಪಲು ಸಹಕರಿಸುತ್ತಿರುವಂತಹ ಪ್ರತಿಯೊಬ್ಬ ಗುರುವಿಗೂ ಗುರು ಪೂರ್ಣಿಮೆಯ ಶುಭಾಶಯಗಳು. 


- ವಿದ್ಯಾಪ್ರಸಾದ್

ಪತ್ರಿಕೋದ್ಯಮ ವಿದ್ಯಾರ್ಥಿನಿ

ವಿವೇಕಾನಂದ ಕಾಲೇಜು (ಸ್ವಾಯತ್ತ) ಪುತ್ತೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top