- ಡಾ. ಸದಾನಂದ ಪೆರ್ಲ
ಪಡುವಣ ಕಡಲಿನ ಹೊನ್ನಿನ ಕಿರೀಟ/
ತೆರೆದಲಿ ಹೊಳೆಯುವ ಕುಂಬಳೆಲಿ/
ಶ್ರೀಧರನೆನ್ನುವ ನಾಮಾಂಕಿತದಲಿ/
ಮೆರೆದಿಹ ನಿಸ್ಪೃಹ ಮಾನವನು//
ಕೆದರಿದ ಕೇಶದ ಮಧ್ಯದಿ ಹೊಳೆಯುವ/
ಸುಂದರ ಮುಖದಲ್ಲಿ ಏನು ಪ್ರಭೆ//
ಎಲ್ಲರ ಮನವನು ಗೆಲ್ಲುತ ಯಕ್ಷರ/
ಗಾನ ಲೀನನು ಶ್ರೀಧರನು//
ಕಾಯವು ಅಲ್ಪವು ಕಾರ್ಯವು ಶಾಶ್ವತ/
ಎನ್ನುತ ರಂಗಸ್ಥಳದಲಿ ನೀ/ಜೀವನದುದ್ದಕು ಸಾಧಿಸಿ ತೋರಿದೆ/
ಪ್ರೀತಿಯ ಮಹಿಮೆಯ ಸರ್ವರಿಗೆ//
ಯಕ್ಷಗಾನದ ಈ ಪದ್ಯವು ನೇತ್ರಾವತಿ- ಕುಮಾರಧಾರಾ ಸಂಗಮದ ನದಿ ತಟದಲ್ಲಿ ಸುಶ್ರಾವ್ಯ ಕಂಠದಲ್ಲಿ ಮೂಡಿ ಬಂದಾಗ ಸೇರಿದ ನೂರಾರು ಯಕ್ಷಗಾನ ಕಲಾವಿದರ ಮತ್ತು ಅಭಿಮಾನಗಳ ಕಣ್ಣಾಲಿಗಳಲ್ಲಿ ಭಾಷ್ಪಾಂಜಲಿ ಹರಿದು ಬಂತು. ಇತ್ತೀಚೆಗೆ ನಮ್ಮನ್ನಗಲಿದ ಯಕ್ಷಗಾನ ಕಲಾವಿದ ಕುಂಬಳೆ ಶ್ರೀಧರ ರಾಯರಿಗೆ ಅದುವೇ ಅಭಿಮಾನಿ ಬಳಗದ ಅಶ್ರುತರ್ಪಣವಾಯಿತು.
ಜುಲೈ 15ರಂದು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಾಲಯದ ಮುಂಭಾಗದ "ಶಕ್ತಿ ಸದನ"ದಲ್ಲಿ ಅವರಿಗಾಗಿ ಏರ್ಪಡಿಸಿದ ನುಡಿನಮನ ಕಾರ್ಯಕ್ರಮದಲ್ಲಿ ಭಾಗವತರಾದ ಡಾ. ಸತೀಶ್ ಪುಣಿಂಚಿತ್ತಾಯರು ರಚಿಸಿದ ಹಾಡಿನೊಂದಿಗೆ ಗಾನ ನಮನ ಸಲ್ಲಿಸಿದಾಗ ಸಭಾಂಗಣದಲ್ಲಿ ನೀರವ ಮೌನ ಆವರಿಸಿತ್ತು.
ತನ್ನ ಬದುಕಿನ 77 ವರ್ಷಗಳಲ್ಲಿ 62 ವರ್ಷಗಳನ್ನು ಕಲೆಗಾಗಿಯೆ ಮುಡಿಪಾಗಿದಟ್ಟ ಕುಂಬಳೆ ಶ್ರೀಧರ ರಾವ್ ಯಕ್ಷಗಾನ ರಂಗದ ಎಲ್ಲ ಕಲಾವಿದರಿಗೆ ಆದರ್ಶ ಮತ್ತು ರೋಲ್ ಮಾಡೆಲ್. ತೆಂಕುತಿಟ್ಟು ಕಲಾತಿಲಕನಾಗಿ ಮೆರೆದು ಜೀವನದುದ್ದಕ್ಕೂ ಕಪ್ಪು ಚುಕ್ಕೆ ಇಲ್ಲದೆ ಬಾಳ್ವೆ ನಡೆಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ ಹಿರಿಯ ಕಲಾವಿದರು. ಹುಟ್ಟಿದ ಊರು ಕುಂಬಳೆಗೂ ತನ್ನ ವ್ಯಕ್ತಿತ್ವಕ್ಕೂ ಗೌರವವನ್ನು ತಂದುಕೊಟ್ಟ ಮಹಾನ್ ಕಲಾವಿದ ಅವರು. ಕಲಾ ಪಯಣದಲ್ಲಿ ಅವರು ನಿರ್ವಹಿಸಿದ ಪಾತ್ರ, ಅರ್ಥಗಾರಿಕೆ ಒಂದು ವಿಶ್ವವಿದ್ಯಾಲಯದ ಬೋಧನೆಗೆ ಸಮನಾದುದು. ನಾಲ್ಕನೇ ತರಗತಿಯವರೆಗೆ ಓದು ಆಗಿದ್ದರೂ ರಂಗದಲ್ಲಿ ನಿಂತಾಗ ಹಿತಮಿತ ಮೃದು ವಚನಂಗಳ ಅಸ್ಖಲಿತ ಪಾಂಡಿತ್ಯ ಬೆರಗು ಹುಟ್ಟಿಸುವಂತದ್ದು. ಕಲಾವಿದನೊಬ್ಬ ಚಪ್ಪಾಳೆ, ಶಿಳ್ಳೆಗಾಗಿ ಕಾಯದೆ ಪಾತ್ರದ ಪರಕಾಯ ಪ್ರವೇಶ ಮಾಡಿ ನ್ಯಾಯ ಸಲ್ಲಿಸುವ ಅವರ ಮಾತಿನ ಶೈಲಿಯು ಯಕ್ಷ ರಸಿಕರನ್ನು ಹುಬ್ಬೇರಿಸುವಂತೆ ಮಾಡಿತ್ತು.
ಇಂತಹ ಮೇರು ಕಲಾವಿದ ವಿಷ್ಣು ಸಾಯುಜ್ಯ ಹೊಂದಿ ಕಲಾರಸಿಕರಿಗೆ, ಸಹಕಲಾವಿದರಿಗೆ, ಆಪ್ತೇಷ್ಟರಿಗೆ ದೊಡ್ಡ ಶೂನ್ಯವನ್ನು ಸೃಷ್ಟಿಸಿ ಹೋದರು. ಅಂತಹ ಮನ ಮಿಡಿಯುವ ಮಾತುಗಳು ನುಡಿನಮನದಲ್ಲಿ ವ್ಯಕ್ತವಾದಾಗ ಸಭಾಂಗಣದಲ್ಲಿದ್ದಲ್ಲಿದ್ದವರ ಕಣ್ಣುಗಳು ತೇವಗೊಂಡುವು. ಹೌದಲ್ಲ, ಹೀಗಿದ್ದವರು ಭೌತಿಕವಾಗಿ ನಮ್ಮೊಡನೆ ಇಲ್ಲವಲ್ಲ ಎಂಬ ದುಃಖ ಮಡುಗಟ್ಟಿತ್ತು.
"ಜಾತಸ್ಯಂ ಧ್ರುವ ಮರಣಂ" ಎಂಬಂತೆ ಹುಟ್ಟಿದ ಮನುಷ್ಯ ಸಾಯುವುದು ಖಚಿತ. ಆದರೆ ಹುಟ್ಟು- ಸಾವಿನ ನಡುವಿನ ಬದುಕನ್ನು ಪ್ರದರ್ಶನ ಮಾಡದೆ ದರ್ಶನ ಮಾಡಿಸಿದ ಯಕ್ಷಸಿರಿ ಎಂಬ ಶ್ರೀಧರರಾವ್ ಅಗಲಿದಾಗ ಆದ ನೋವನ್ನು ನುಡಿ ನಮನದಲ್ಲಿ ಎಲ್ಲರೂ ಹೃದಯಾಂತರಾಳದ ಭಾಷೆಯಲ್ಲಿ ಹೊರಗೆಡಹಿದರು.
ಶ್ರೀಧರ ರಾವ್ ಅವರ ಯಕ್ಷ ಮುಖ ಹಾಗೂ ವೈಯಕ್ತಿಕ ಮುಖ ಎರಡರಲ್ಲೂ ಸಮತೆಯನ್ನು ಕಾಯ್ದುಕೊಂಡವರು. ರಂಗದಲ್ಲೊಂದು ಬಗೆ, ನಿಜ ಜೀವನದಲ್ಲಿ ಇನ್ನೊಂದು ಬಗೆ ಹೀಗೆ ವೈರುಧ್ಯದ ವ್ಯಕ್ತಿತ್ವಗಳನ್ನು ನೋಡಿದ ನಮಗೆ ನಿಜಾರ್ಥದಲ್ಲಿ ಗುಣ ಸಂಪನ್ನತೆಯ ಸಿರಿಯನ್ನು ಧರಿಸಿದವ ನೆಂದರೆ ಅವನೇ ನಿಜವಾದ "ಶ್ರೀಧರ". ಹಿರಿಯರು ಸಲ್ಲಿಸಿದ ನುಡಿ ನಮನದ ಅಂತರಂಗದ ಮಾತು ಇದೇ ಆಗಿತ್ತು. ಸತ್ಯ- ಶುದ್ಧ- ಕಾಯಕ -ದಾಸೋಹ ಮೂರ್ತಿಯಾಗಿದ್ದವರು.
ಹಿರಿಯ ಕಲಾವಿದರಾದ ಉಜಿರೆ ಅಶೋಕ್ ಭಟ್ ತಮ್ಮ ಮಾತುಗಳಲ್ಲಿ "ಕಲಾವಿದ ಹೇಗಿರಬೇಕು, ಎಂಬುದಕ್ಕೆ ಸಾಕ್ಷಿ ತೋರಿಸಬೇಕಾದರೆ ಅದು ಶ್ರೀಧರಾಯರಲ್ಲದೆ ಬೇರೆ ಯಾರೂ ಇಲ್ಲ. ವೃತ್ತಿ ಬದುಕು ಮತ್ತು ಖಾಸಗಿ ಬದುಕಿನ ತಾಳಮೇಳಗಳೊಂದಿಗೆ ಯಕ್ಷ ಪಯಣ ಮುಗಿಸಿದವರು. ಮಾತ್ರವಲ್ಲ ಧರ್ಮಸ್ಥಳ ಕ್ಷೇತ್ರ ಮಹಾತ್ಮೆಯ ಅಮ್ಮು ದೇವಿ ಪಾತ್ರ ಅವರ ಮಾಸ್ಟರ್ ಪೀಸ್. ಅದನ್ನು ಸರಿದೂಗಿಸಲು ಈವರೆಗೂ ಯಾರಿಗೂ ಸಾಧ್ಯವಾಗಿಲ್ಲ. ಜೈನ ಪರಂಪರೆಯ ನೋಂಪಿ, ವೃತಾಚರಣೆಯ ವಿಧಿ ವಿಧಾನಗಳನ್ನು ಎಳೆಎಳೆಯಾಗಿ ತಿಳಿಸಿ ಹೇಳುವಾಗ ಯಕ್ಷಾಭಿಮಾನಿಗಳಾದ ಜೈನ ತಾಯಂದಿರು ಕೂಡ ಹುಬ್ಬೇರಿಸುವಂತೆ ಮಾಡಿದ ಕೀರ್ತಿ ಶ್ರೀಧರಣ್ಣನಿಗೆ ಸಲ್ಲುತ್ತದೆ ಎಂದಾಗ ಸಭಿಕರು ತಲೆದೂಗಿದರು. ಭಾಗವತರಾದ ದಿನೇಶ್ ಅಮಣ್ಣಾಯರು ತಮ್ಮ ಮಾತಿನಲ್ಲಿ ಶ್ರೀಧರ ರಾವ್ ವ್ಯಕ್ತಿತ್ವವನ್ನು ಅನಾವರಣಗೊಳಿಸುತ್ತಾ ನಿಗರ್ವಿ, ಸ್ನೇಹಜೀವಿ, ಕಲಾ ಶ್ರೀಮಂತಿಕೆಯ ಶ್ರೀಧರ ರಾವ್ ಇಡೀ ಜೀವನದಲ್ಲಿ ಅಜಾತಶತ್ರುವಾಗಿ ಬೆಳೆದು ಕಲೆಯನ್ನು ಕಲಾವಿದರನ್ನು ಪ್ರೀತಿಯಿಂದ ನೋಡಿದವರು.
ಇಂತಹ ಮಹಾನ್ ಕಲಾವಿದ ಪ್ರಚಾರದ ಗೀಳು ಇಟ್ಟುಕೊಳ್ಳದೆ ಮೇಲ್ಪಂಕ್ತಿಯ ಕಲಾವಿದರಾಗಿ ಮೆರೆದವರು. ಕಾಯವಳಿದರೂ ಕಾಯಕ ಉಳಿಸಿದವರು ಎಂದು ಬಣ್ಣಿಸಿದರು. ಹಿರಿಯ ಕಲಾವಿದರಾದ ನಿಡ್ಲೆ ಗೋವಿಂದ ಭಟ್ ಶ್ರೀಧರಾವ್ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕುತ್ತಾ ನನಗಿಂತ ಹಿರಿಯರಾಗಿ ಮೇಳದಲ್ಲಿದ್ದುಕೊಂಡು ನಮಗೆಲ್ಲ ಮಾರ್ಗದರ್ಶನ ಕೊಟ್ಟ ಮತ್ತು ಅಣ್ಣನ ಸ್ಥಾನದಲ್ಲಿ, ಗುರು ಸ್ಥಾನದಲ್ಲಿ ನಿಂತವರು, ಎಂದೂ ಕೂಡ ಎದುರಾಡದೆ ಜೀವನ ಪರ್ಯಂತ ಸ್ನೇಹ ಸಾಮ್ರಾಜ್ಯ ವಿಸ್ತರಿಸುತ್ತ ಅಸ್ತಂಗತನಾದ ಅವರು ನನ್ನ ಕುಟುಂಬದ ಜೊತೆಗೂ ಅವಿನಾಭಾವ ಸಂಬಂಧ ಇಟ್ಟುಕೊಂಡವರು. ನನ್ನ ಮದುವೆಗೂ ಸಂಧಾನಕಾರರಾಗಿದ್ದವರು ಎಂದು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮೋಹನ್ ಕುಂಟಾರು ಮಾತನಾಡಿ, ಶ್ರೀಧರರಾವ್ ಎಂಬ ಅಸೀಮಾ ಕಲಾವಿದ ತನ್ನ ಗುಣ ಸಂಪನ್ನತೆಯಿಂದ ಭಾಗವತ, ಮಹಾಭಾರತ, ರಾಮಾಯಣದ ಪಾಂಡಿತ್ಯವನ್ನು ಗಳಿಸಿ ನಮ್ಮೆಲ್ಲರ ನಡುವಿನ "ಶ್ರೀಧರಣ್ಣ" ನಾಗಿ ಕಲಾ ಬದುಕು ಮಾಡಿದವರು. ಅವರು ಕಡಿಮೆ ಶಿಕ್ಷಣವನ್ನು ಪಡೆದರೂ ಯಕ್ಷಗಾನ ಕ್ಷೇತ್ರದಲ್ಲಿ ಮೇರು ವಿದ್ವಾಂಸನಂತೆ ಪಾತ್ರನಿರ್ವಹಿಸಿದರೂ. ಸ್ತ್ರೀ ವೇಷ- ಪುರುಷ ವೇಷ ಕಲಾವಿದನಾಗಿ ರಂಗದಲ್ಲಿ ಮೆರೆದವರು. ಅವರ ಅದ್ಭುತ ವಾಗ್ವೈಖರಿ ಎಲ್ಲೂ ದಾಖಲಾಗದೆ ಹೋದದ್ದು ಮಾತ್ರ ನೋವಿನ ಸಂಗತಿ ಎಂದರು. ಕೊಲ್ಲಿ ರಾಷ್ಟ್ರದಲ್ಲಿರುವ ರಮೇಶ್ ಮಂಜೇಶ್ವರ ಮಾತನಾಡಿ ಮುಂಬೈಯಲ್ಲಿ ಯಕ್ಷ ರಂಗ ಪ್ರಶಸ್ತಿ ನೀಡಿ ಶ್ರೀಧರ ರಾವ್ ಅವರನ್ನು ಗೌರವಿಸಲಾಗಿದ್ದು ಆ ವೇಳೆ ಅವರ ಕುರಿತ ರುಜು ಸಹಿತ ವಿಸ್ತೃತ ಲೇಖನವೊಂದು ಅಭಿನಂದನ ಸಂಚಿಕೆಯಲ್ಲಿ ಪ್ರಕಟಗೊಂಡಿದ್ದು ಮಾತ್ರ ಒಂದು ದಾಖಲೆಯಾಗಿ ಉಳಿದುಕೊಂಡಿದೆ ಎಂದರು.
ಧರ್ಮಸ್ಥಳ ಮೇಳದ ಹಿರಿಯ ಭಾಗವತರೂ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರು ಮಾತನಾಡಿ ಶ್ರೀಧರಣ್ಣ ಸಹಕಲಾವಿದರ ಹಿತ ಬಯಸಿದವರು. ಎಲ್ಲರೊಡನೆ ಬೆರೆತು ಭೇದವಿಲ್ಲದೆ ಯಕ್ಷರಂಗದಲ್ಲಿ ಬೆಳೆದರು ಮತ್ತು ಇತರರನ್ನು ಬೆಳೆಸಿದರು. ಅಪ್ರತಿಮ ಸಾಧನೆ ಮಾಡಿದ ಅಸೀಮಾ ಪುರುಷ ಎಂದರು. ನುಡಿ ನಮನಕ್ಕೆ ಎಂ.ನಾ. ಚಂಬಲ್ತಿಮಾರ್ ಸಂದರ್ಭೋಚಿತ ಮಾತುಗಳ ನುಡಿ ಅಕ್ಷತೆಯನ್ನು ಹಾಕಿದರು. ನುಡಿ ನಮನದಲ್ಲಿ ಶ್ರೀಧರ ರಾವ್ ಎಂಬ ಯಕ್ಷ ದಿಗ್ಗಜನನ್ನು ನುಡಿ ತರ್ಪಣದೊಂದಿಗೆ ಅನಾವರಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ಕೆ.ಎಚ್ ದಾಸಪ್ಪ ರೈ, ಪೆರುವೋಡಿ ಸುಬ್ರಹ್ಮಣ್ಯ ಭಟ್, ಮುರಳಿಧರ ಕನ್ನಡಿ ಕಟ್ಟೆ, ಶರತ್ ಕದ್ರಿ, ಜಯಪ್ರಕಾಶ್ ವಳಕುಂಜ, ವಸಂತಗೌಡ ಕಾಯರ್ತಡ್ಕ, ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ದ .ಕ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಕಾರ್ಯದರ್ಶಿ ಐತ್ತಪ್ಪ ನಾಯ್ಕ, ಗಿರೀಶ್ ಹೆಗ್ಡೆ, ದೇವರಾಜ ಹೆಗ್ಡೆ, ನಿಡ್ಲೆ ಈಶ್ವರ ಚಂದ್ರ, ಕುಂಬಳೆ ಶ್ರೀಧರ್ ರಾವ್ ಅವರ ಸಹೋದರ ಗೋಪಾಲ ಕುಂಬಳೆ ಹಾಗೂ ಮಕ್ಕಳಾದ ಗಣೇಶ್ ಪ್ರಸಾದ್, ಕೃಷ್ಣಪ್ರಸಾದ್, ದೇವಿಪ್ರಸಾದ್ ಮತ್ತಿತರರು ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ