ಧರ್ಮಸ್ಥಳದಲ್ಲಿ 53ನೇ ವರ್ಷದ ಪುರಾಣ ಕಾವ್ಯ ವಾಚನ - ಪ್ರವಚನ ಉದ್ಘಾಟನೆ
ಧರ್ಮಸ್ಥಳದಲ್ಲಿ 53ನೇ ವರ್ಷದ ಪುರಾಣ ಕಾವ್ಯ ವಾಚನ - ಪ್ರವಚನ ಕಾರ್ಯಕ್ರಮವನ್ನು ಹಿರಿಯ ವಿದ್ವಾಂಸ ಪ್ರೊ. ಎಮ್. ಪ್ರಭಾಕರ ಜೋಶಿ ಉದ್ಘಾಟಿಸಿದರು.
ಉಜಿರೆ: ಪುರಾಣಕ್ಕೆ ಹಲವಾರು ಅರ್ಥಗಳಿವೆ. ಭಾರತ ಮತ್ತು ಚೀನಾ ದೇಶದಲ್ಲಿ ಅತೀ ಹೆಚ್ಚು ಪುರಾಣಗಳಿದ್ದು ನೈತಿಕ ಮತ್ತು ಧಾರ್ಮಿಕ ಮೌಲ್ಯಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವುದೇ ಪುರಾಣಗಳ ಉದ್ದೇಶವಾಗಿದೆ. ಪುರಾಣ ವಾಚನ - ಪ್ರವಚನದಿಂದ ಪ್ರತಿ ಕಲೆಯೂ, ಕಲಾವಿದರೂ ಬೆಳೆಯಬೇಕು ಎಂದು ಹಿರಿಯ ವಿದ್ವಾಂಸ ಪ್ರೊ. ಎಮ್. ಪ್ರಭಾಕರ ಜೋಶಿ ಹೇಳಿದರು.
ಅವರು ಮಂಗಳವಾರ ಧರ್ಮಸ್ಥಳದಲ್ಲಿ ಜು. 16 ರಿಂದ ಆಗೋಸ್ಟ್ 17 ರ ವರೆಗೆ ಪ್ರತಿ ದಿನ ಸಂಜೆ ಗಂಟೆ 6.30 ರಿಂದ 8.00 ರ ವರೆಗೆ ನಡೆಯಲಿರುವ 53ನೇ ವರ್ಷದ “ಜೈಮಿನಿ ಭಾರತ” ಮತ್ತು “ತುರಂಗ ಭಾರತ” ಪುರಾಣ ಕಾವ್ಯ ವಾಚನ - ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇವರ ಕಲ್ಪನೆಯನ್ನು ಜನಮನಕ್ಕೆ ತಲುಪಿಸುವುದೇ ಪುರಾಣಗಳ ಉದ್ದೇಶವಾಗಿದೆ. ವಿಷ್ಣುಪುರಾಣ, ಭಾಗವತ, ರಾಮಾಯಣ, ಮಹಾಭಾರತ ಮೊದಲಾದ ಅನೇಕ ಪುರಾಣಗಳಿವೆ. ರಾಮಾಯಣದಲ್ಲಿಯೂ ಬೇರೆ ಬೇರೆ ಭಾಷೆಗಳಲ್ಲಿ ಹಲವು ರೀತಿಯ ರಾಮಾಯಣಗಳು ರಚನೆಯಾಗಿವೆ. ನಮ್ಮ ಸನಾತನ ಧಾರ್ಮಿಕ ಪರಂಪರೆಯನ್ನು ವಿಸ್ತರಿಸಿ ಸೃಜನಶೀಲತೆಯೊಂದಿಗೆ ಜನರಿಗೆ ತಲುಪಿಸುವ ಕಾಯಕವನ್ನು ಪುರಾಣಗಳು ಮಾಡುತ್ತವೆ. ಪುರಾಣಗಳಲ್ಲಿ ಜ್ಞಾನ, ವಿಜ್ಞಾನ, ಸಾಹಿತ್ಯ, ಕಲೆ, ಸಂಗೀತ, ಮಾನವೀಯ ಮೌಲ್ಯಗಳು – ಎಲ್ಲವೂ ಅಡಕವಾಗಿವೆ ಎಂದು ಪ್ರೊ. ಎಮ್. ಪ್ರಭಾಕರ ಜೋಶಿ ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಪುರಾಣ ವಾಚನ - ಪ್ರವಚನದಿಂದ ಸಮಯದ ಸದುಪಯೋಗದೊಂದಿಗೆ ವಿಶಿಷ್ಟ ಮಾಹಿತಿ, ಮಾರ್ಗದರ್ಶನ ದೊರಕುತ್ತದೆ.
ನಮ್ಮ ಜ್ಞಾನ ಕ್ಷಿತಿಜ ವಿಸ್ತರಣೆಯಾಗುತ್ತದೆ ಎಂದು ಹೇಳಿದರು.
ಪ್ರಸ್ತುತ ಜನರಲ್ಲಿ ಮಾತನಾಡುವ ಚಟ ಹೆಚ್ಚಾಗಿದೆ. ಕೇಳುವ ವ್ಯವಧಾನ ಯಾರಲ್ಲೂ ಇರುವುದಿಲ್ಲ. ಎಲ್ಲರೂ ಉತ್ತಮ ಶ್ರೋತೃಗಳಾಗಿ ಜೀವನಶೈಲಿ ಸುಧಾರಣೆ ಮಾಡಿಕೊಳ್ಳಬೇಕು ಎಂದು ಹೆಗ್ಗಡೆಯವರು ಸಲಹೆ ನೀಡಿದರು.
ಹೇಮಾವತಿ ವಿ. ಹೆಗ್ಗಡೆಯವರು ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಮಾತುಗಳೊಂದಿಗೆ ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ್ ಭಟ್ ಸ್ವಾಗತಿಸಿದರು. ಕಾರ್ಯಕ್ರಮ ನಿರ್ವಹಿಸಿದ ಶ್ರೀನಿವಾಸ ರಾವ್ ಧರ್ಮಸ್ಥಳ ಕೊನೆಯಲ್ಲಿ ಧನ್ಯವಾದವಿತ್ತರು.
• ಪ್ರಸ್ತುತ ಜನರಲ್ಲಿ ಮಾತನಾಡುವ ಚಟ ಹೆಚ್ಚಾಗಿದೆ. ಕೇಳುವ ವ್ಯವಧಾನ ಯಾರಲ್ಲೂ ಇರುವುದಿಲ್ಲ.
• ಪ್ರೊ. ಪ್ರಭಾಕರ ಜೋಶಿ ಅವರ ಭಾಷಣ ಚಾಟಿ ಏಟಿನಂತೆ ಶ್ರೋತೃಗಳಲ್ಲಿ ಅರಿವು, ಜಾಗೃತಿ ಮೂಡಿಸುತ್ತದೆ.
- ಡಿ. ವೀರೇಂದ್ರ ಹೆಗ್ಗಡೆಯವರು
• ನಾವು ಎಲ್ಲರೂ ಮಾಡಬಹುದಾದ ಸರಳ ಸೇವೆ: ಇತರರಿಗೆ ತೊಂದರೆ ಕೊಡದಿರುವುದು.
• ಭಾಷಣ ಬೇಗ ಮುಗಿಸುವುದು.
-ಪ್ರೊ. ಎಂ. ಪ್ರಭಾಕರ ಜೋಶಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ