ವಿದ್ಯೆಯ ಅನಾವರಣ ಸಮಾಜಕ್ಕೆ ಪ್ರೇರಣೆ: ರಾಘವೇಶ್ವರ ಶ್ರೀ ಆಶಯ

Upayuktha
0


ಗೋಕರ್ಣ: ನಮ್ಮ ಪರಂಪರೆಯ 35ನೇ ಪೀಠಾಧಿಪತಿಗಳಾಗಿದ್ದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಂದ್ರಭಾರತೀ ಮಹಾಸ್ವಾಮಿಗಳ ವಿದ್ಯಾಸಂಪನ್ನತೆ ಅದ್ಭುತ. ಅವರ ವಿದ್ವತ್ತಿನ, ವಿದ್ಯೆಯ ಅನಾವರಣ ಇಡೀ ಸಮಾಜಕ್ಕೆ ಪ್ರೇರಣೆಯಾಗಲಿ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಆಶೀಸಿದರು.


ಅಶೋಕೆಯ ವಿವಿವಿ ಆವರಣದಲ್ಲಿ ಅನಾವರಣ ಚಾತುಮಾಸ್ಯದ ಎರಡನೇ ದಿನ ಗುರುಗ್ರಂಥ ಮಾಲಿಕೆಯ ಅನಾವರಣ ಸಂದರ್ಭದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು. "ಇಂದು ಅವರ ಖಾಸಗಿ ಗ್ರಂಥ ಭಂಡಾರ ಅನಾವರಣಗೊಂಡಿದೆ. ಇದು ಸರಸ್ವತಿಯ ಅನಾವರಣ. ಬದುಕನ್ನು ಬೆಳಗುವ ಬೆಳಕಿನ ಅನಾವರಣ" ಎಂದು ಬಣ್ಣಿಸಿದರು.


ವಿರಾಟ್ ವಿಶ್ವವಿದ್ಯಾಪೀಠದ ಮೂಲ ಆಶಯವೇ ಇಂಥ ಅಮೂಲ್ಯ ಗ್ರಂಥಗಳನ್ನು ಉಳಿಸುವುದು. ನಮ್ಮ ಬದುಕಿಗೆ ದಾರಿದೀಪವಾಗಬಲ್ಲ ಇಂಥ ಗ್ರಂಥಗಳ ಅನಾವರಣ ಅರ್ಥಪೂರ್ಣ ಎಂದು ಅಭಿಪ್ರಾಯಪಟ್ಟರು.


ಇಂದು ಶ್ರೀಪರಿವಾರದ ಗುರುಭಿಕ್ಷಾಸೇವೆ ನಡೆದಿದೆ. ಇದು ಪ್ರತಿ ಚಾತುರ್ಮಾಸ್ಯದ ಎರಡನೇ ದಿನದ ವಿಶೇಷ. ಗುರುಸೇವೆಗೆ ಜೀವನವನ್ನೇ ಮುಡಿಪಾಗಿಟ್ಟ ಶ್ರೀಪರಿವಾರದ ಸೇವೆ ಶ್ಲಾಘನೀಯ ಎಂದು ಬಣ್ಣಿಸಿದರು.


'ಕಾಲ' ಎಂಬ ವಿಷಯದ ಬಗ್ಗೆ ಪ್ರವಚನ ನೀಡಿದ ಸ್ವಾಮೀಜಿ, ಕಾಲಕ್ಕೆ ಇರುವ ಶಕ್ತಿ ಬೇರಾರಿಗೂ ಇರಲಾರದು. ಸುಖ ಹಾಗೂ ದುಃಖ ಚಕ್ರವಿದ್ದಂತೆ ಎಂದು ಹೇಳಿದರು.


ಮಹಾಭಾರತ ಯುದ್ಧದಲ್ಲಿ ಎರಡೂ ಕಡೆಗಳ ಅಸಂಖ್ಯಾತ ಮಂದಿ ಸಾವನ್ನಪ್ಪಿದ ಘಟನೆಯನ್ನು ನೆನೆದು ಧರ್ಮರಾಯ ಪಶ್ಚಾತ್ತಾಪ ಪಡುತ್ತಾನೆ. ಮಕ್ಕಳು, ಮೊಮ್ಮಕ್ಕಳು, ಸೋದರರು, ಚಿಕ್ಕಪ್ಪ-ದೊಡ್ಡಪ್ಪಂದಿರು, ಹೆಣ್ಣು ಕೊಟ್ಟ ಮಾವಂದಿರು, ಸೋದರಮಾವ, ಗುರುಗಳು, ಅಜ್ಜಂದಿರು ಎಲ್ಲರನ್ನೂ ಸಿಂಹಾಸನಕ್ಕಾಗಿ ಸಾಯಿಸಿದೆ ಎಂದು ದುಃಖಿಸುತ್ತಾನೆ. ದೇಹ ಅಳಿದುಹೋಗುವಂಥ ತಪಸ್ಸು ಮಾಡುತ್ತೇನೆ ಎಂಬ ನಿರ್ಧಾರಕ್ಕೆ ಬಂದ. ಅದರೆ ವಾಸ್ತವವಾಗಿ ಕಾಲ ಧರ್ಮರಾಜನಿಂದ ಎಲ್ಲವನ್ನೂ ಮಾಡಿಸಿರುತ್ತಾನೆ. ಪಾಪದ ಲವಲೇಶವೂ ಆತನಿಗೆ ತಟ್ಟುವುದಿಲ್ಲ ಎಂದರು.


ಪ್ರಜೆಗಳ ಬಗ್ಗೆ, ಶತ್ರುಗಳ ಬಗ್ಗೆಯೂ ಕನಿಕರ ಇರುವ, ಜನಸಾಮಾನ್ಯರ ಕಷ್ಟ ಸುಖಗಳ ಪರಿಜ್ಞಾನ ಇರುವ ಇಂಥವರು ರಾಜರಾದಾಗ ಮಾತ್ರ ರಾಜ್ಯ ಸುಭಿಕ್ಷವಾಗುತ್ತದೆ ಎಂದು ವಿಶ್ಲೇಷಿಸಿದರು.


ಇದಕ್ಕೂ ಮುನ್ನ ಗುರುಗ್ರಂಥ ಮಾಲಿಕೆಯ ಅನಾವರಣವನ್ನು ವಿದ್ವಾನ್ ಸತ್ಯನಾರಾಯಣ ಶರ್ಮಾ ನೆರವೇರಿಸಿದರು. ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ವಿವಿವಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಕೋಶಾಧ್ಯಕ್ಷ ಸುಧಾಕರ್, ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿವಿವಿ ಆಡಳಿತಾಧಿಕಾರಿ ಡಾ.ಪ್ರಸನ್ನ ಕುಮಾರ್, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಹರಿಪ್ರಸಾದ್ ಪೆರಿಯಾಪು, ಶ್ರೀಕಾರ್ಯದರ್ಶಿ ಮಧು ಜಿ.ಕೆ, ವ್ಯವಸ್ಥಾಪಕ ಪ್ರಮೋದ್ ಮುಡಾರೆ, ಮಹಾಮಂಡಲ ಪದಾಧಿಕಾರಿಗಳಾದ ಪ್ರಸನ್ನ ಉಡುಚೆ, ರುಕ್ಮಾವತಿ ಸಾಗರ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top