ಕಲ್ಬುರ್ಗಿ: ಸಂತ ಜೋಸೆಫ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ
ಕಲ್ಬುರ್ಗಿ: ಶಿಕ್ಷಣವು ಕೇವಲ ಪರೀಕ್ಷೆಗೆ ಸೀಮಿತವಾಗದೆ ಜೀವನ ಕೌಶಲ್ಯ ವೃದ್ಧಿಸಲು ಪೂರಕವಾದರೆ ಸಾರ್ಥಕತೆ ಹೊಂದುತ್ತದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಕಲಬುರ್ಗಿ ಜಿಲ್ಲೆ ಉಪನಿರ್ದೇಶಕ ಶಿವಶರಣಪ್ಪ ಮುಳೇಗಾಂವ ಹೇಳಿದರು.
ಕಲ್ಬುರ್ಗಿಯ ಸಂತ ಜೋಸೆಫ್ ಪಿಯು ಕಾಲೇಜಿನ ಪ್ರಥಮ ವರ್ಷ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ವನ್ನು ಜುಲೈ 20ರಂದು ದೀಪ ಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡುತ್ತಾ, ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳಿಸಿ ಗುರಿ ಮುಟ್ಟಬೇಕು. ಜೊತೆಗೆ ಜೀವನ ಕೌಶಲ ರೂಪಿಸಿ ಯಶಸ್ವಿ ಜೀವನ ನಿರ್ವಹಣಾ ಕಲೆಯನ್ನು ರೂಡಿಸಿಕೊಳ್ಳಬೇಕು ಮೂಢನಂಬಿಕೆಯನ್ನು ತೊರೆದು ವೈಜ್ಞಾನಿಕ ದೃಷ್ಟಿಯಿಂದ ಜೀವನ ಸಾಗಿಸಲು ಮುಂದಾಗಬೇಕು. ಅವಕಾಶ ಸಿಕ್ಕರೆ ಸಾಧನೆ ಸಾಧ್ಯ. ನಮ್ಮ ನಾಡಿನಲ್ಲಿ ಅಂತಹ ಅವಕಾಶಗಳನ್ನು ಕ್ರೈಸ್ತ ಶಿಕ್ಷಣ ಸಂಸ್ಥೆಗಳು ನೀಡಿ ಶಿಕ್ಷಣ ರಂಗಕ್ಕೆ ದೊಡ್ಡ ಕೊಡುಗೆಯನ್ನು ನೀಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಕಾಶವಾಣಿಯ ನಿವೃತ್ತ ಹಿರಿಯ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಮಾತನಾಡಿ ಸಂತ ಜೋಸೆಫ್ ಪಿಯು ಕಾಲೇಜ್ ವಿದ್ಯಾರ್ಥಿಗಳ ಹಿಂದಿನ ಸಾಧನೆಗಳು ಈಗ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ. ಈ ಹಿಂದಿನ ಫಲಿತಾಂಶ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸಾಧನೆ ಇವಕ್ಕೆಲ್ಲ ಸಾಕ್ಷಿಯಾಗಿದೆ. ಕ್ರೈಸ್ತ ಮಿಷನರಿಗಳ ಸೇವೆಯಿಂದ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಶಿಕ್ಷಣ ರಂಗ ಮುಂಚೂಣಿಯಲ್ಲಿದ್ದು ಎಸ್ ಎಸ್ ಎಲ್ ಸಿ, ಪಿಯುಸಿ ಫಲಿತಾಂಶ ಸಂದರ್ಭದಲ್ಲಿ ಮೊದಲನೆಯ ಮತ್ತು ಎರಡನೆಯ ಸ್ಥಾನದಲ್ಲಿ ಕರಾವಳಿ ಜಿಲ್ಲೆಗಳು ಸ್ಥಾನ ಪಡೆಯುತ್ತಿವೆ. ಶಿಕ್ಷಣ, ಸಾಹಿತ್ಯ ಪತ್ರಿಕೋದ್ಯಮಕ್ಕೆ ಬಾಸೆಲ್ ಮಿಷನ್ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ ಹಿಡಿದು ಅದರ ದಾಸರಾಗುವ ಬದಲು ಜೀವನದಲ್ಲಿ ಇನ್ನಷ್ಟು ಸ್ಮಾರ್ಟ್ ಆಗಲು ಮೊಬೈಲ್‌ಗಳನ್ನು ಬಳಕೆ ಮಾಡಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅತಿಥಿಗಳು ಗೌರವಿಸಿದರು. ಸಂಸ್ಥೆಯ ವ್ಯವಸ್ಥಾಪಕರಾದ ಸಿಸ್ಟರ್ ಸಜನಾ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತಾಧಿಕಾರಿ ಸಿಸ್ಟರ್ ಫ್ರಾನ್ಸಿಸ್ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಡಾ. ಚಿ.ಸಿ ನಿಂಗಣ್ಣ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು ಉಪನ್ಯಾಸಕರಾದ ಜೇಬಾ ಕೆ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಯನ್ನು ಹಾಡಿದರು. ಶೈಲಜಾ ಎಸ್ ವಂದನಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತಪಡಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ