ಇದೊಂದು ಅಪರೂಪದ ದೃಶ್ಯ. ಮೂರು ಹುಲಿಗಳು ಒಂದು ನಾಯಿಯ ಜತೆಗೆ ಅತ್ಯಂತ ಸ್ನೇಹಭಾವದಿಂದ ನಡೆದುಕೊಳ್ಳುತ್ತಿವೆ. ಸಾಮಾನ್ಯವಾಗಿ ಹುಲಿಯನ್ನು ಕಂಡರೆ ನಾಯಿಗಳು ಓಡಿ ಹೋಗುತ್ತವೆ. ಅಥವಾ ಹುಲಿಗಳು ನಾಯಿಯನ್ನು ಬೇಟೆಯಾಡುತ್ತವೆ. ಆದರೆ ಇಲ್ಲಿ ಅಂತಹ ಸಾಮಾನ್ಯ ವರ್ತನೆಯನ್ನು ಮೀರಿ ಶ್ವಾನದ ಜತೆಗೆ ಹುಲಿಗಳು ಸ್ನೇಹ ಭಾವದಿಂದ ನಡೆದುಕೊಳ್ಳುತ್ತಿವೆ.
ಮನುಷ್ಯರೇ ಸಂಬಂಧಗಳನ್ನು ಮರೆತು ಅಮಾನವೀಯವಾಗಿ ವರ್ತಿಸುವ ಈ ಕಾಲದಲ್ಲಿ ಪ್ರಾಣಿ ಜಗತ್ತಿನಲ್ಲಿ ಇಂತಹ ಬಾಂಧವ್ಯಗಳು ಕಂಡುಬರುತ್ತಿರುವುದು ಅಚ್ಚರಿಯೇ ಸರಿ. ಅದಕ್ಕೇ ಇರಬೇಕು, ಪ್ರಾಣಿಗಳೇ ಗುಣದಲಿ ಮೇಲು, ಮಾನವನದಕ್ಕಿಂತ ಕೀಳು ಎಂದು ನಮ್ಮ ಅಣ್ಣಾವ್ರು ಹಾಡಿದ್ದು....
ಈ ವೀಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದಿದೆ.
ಇದರ ಹಿನ್ನೆಲೆ ಹೀಗಿದೆ:
ಈ ಮೂರು ಹುಲಿಗಳು ಪುಟ್ಟ ಮರಿಗಳಾಗಿದ್ದಾಗ ತಾಯಿ ಹುಲಿ ಯಾವುದೋ ಕಾರಣದಿಂದ ಮರಿಗಳನ್ನು ತ್ಯಜಿಸಿ ಹೊರಟು ಹೋಯಿತು. ಮರಿ ಹುಲಿಗಳು ತಬ್ಬಲಿಗಳಾದವು. ಬಳಿಕ ಈ ಹುಲಿ ಮರಿಗಳನ್ನು ತನ್ನದೇ ಮರಿಗಳಂತೆ ಮೊಲೆ ಹಾಲುಣಿಸಿ ಬೆಳೆಸಿದ್ದು ಈ ನಾಯಮ್ಮ. ನಾಯಿಯ ಹಾಲು ಕುಡಿದು ಬೆಳೆದ ಹುಲಿ ಮರಿಗಳು ಈಗ ಪ್ರೌಢ ಹುಲಿಗಳಾಗಿದ್ದರೂ ಹಾಲುಣಿಸಿದ ನಾಯಮ್ಮನನ್ನು ಮರೆತಿಲ್ಲ.
ಕ್ಸಿ ಲಿಂಗ್ (ಜಿಮ್) ಎಂಬ ವನ್ಯಜೀವಿಗಳ ಪ್ರೇಮಿ ಈ ಬಗ್ಗೆ ಸಾಕಷ್ಟು ಕೆಲಸ ಮಾಡಿದ್ದಾನೆ. ಈತನೇ ಸಾಕಿ ಬೆಳೆಸಿದ ಒಂದು ಲ್ಯಾಬ್ರಡಾರ್ ತಳಿಯ ಶ್ವಾನದ ಹೆಸರು ಲೂ. ಚೀನಾದ ಒಂದು ಮೃಗಾಲಯದಲ್ಲಿ ಜನಿಸಿದ ಮೂರು ಹುಲಿಮರಿಗಳನ್ನು ತಾಯಿ ಹುಲಿ ಅನಾಥವಾಗಿ ಬಿಟ್ಟು ತೆರಳಿದಾಗ ಈತ ತನ್ನ ಶ್ವಾನದ ಜತೆಗೆ ಈ ಹುಲಿಮರಿಗಳನ್ನು ಬಿಟ್ಟ.
ಕೆಲ ದಿನಗಳ ಹಿಂದೆಷ್ಟೇ ಮರಿ ಹಾಕಿದ್ದ ಆ ನಾಯಿ, ಈ ಹುಲಿಮರಿಗಳನ್ನೂ ತನ್ನ ಮರಿಗಳೆಂದೇ ಭಾವಿಸಿ ಹಾಲುಣಿಸಿ ಬೆಳೆಸಿತು. ಹುಲಿಮರಿಗಳು ಬೆಳೆದು ದೊಡ್ಡವಾದ ಬಳಿಕ ಅವುಗಳನ್ನು ಮತ್ತೆ ಮೃಗಾಲಯಕ್ಕೆ ಕಳುಹಿಸಲಾಯಿತು. ಆಗ ಸ್ವಲ್ಪ ದಿನಗಳ ಕಾಲ ತನ್ನ ಮರಿಗಳನ್ನು ಕಳೆದುಕೊಂಡ ದುಃಖದಲ್ಲಿ ನಾಯಮ್ಮ ಕಳೆಗುಂದಿತು. ಕಾಲಕ್ರಮೇಣ ಆ ದುಃಖವನ್ನು ಮರೆಯಿತು.
ಆದಾಗಿ ಎರಡು ವರ್ಷಗಳ ಬಳಿಕ ಅನಿರೀಕ್ಷಿತವಾಗಿ ನಾಯಮ್ಮ ಮತ್ತು ಹುಲಿಮರಿಗಳು ಮತ್ತೆ ಸಂಧಿಸುವ ಸಂದರ್ಭ ಒದಗಿಬಂತು. ನಾಯಮ್ಮನಿದ್ದ ಪ್ರದೇಶದಲ್ಲಿ ಭಾರೀ ಬಿರುಗಾಳಿ ಮಳೆ ಬಂದು ಪ್ರಾಣ ಉಳಿಸಿಕೊಳ್ಳಲು ದಿಕ್ಕು ದೆಸೆಯಿಲ್ಲದೆ ಅಲೆದಾಡಲಾರಂಭಿಸಿತು. ಹಾಗೇ ಅಲೆದಾಡುತ್ತ ಮೃಗಾಲಯದೊಳಕ್ಕೂ ಬಂತು. ಹುಲಿಗಳನ್ನು ಕೂಡಿಟ್ಟ ಬೋನಿನ ಸಮೀಪವೇ ಬಂತು.
ಆಗ ಅಲ್ಲಿ 6 ಹುಲಿಗಳಿದ್ದವು. ಅವುಗಳ ಪೈಕಿ ಮೂರು ಹುಲಿಗಳು ಈ ನಾಯಮ್ಮನ ಹಾಲು ಕುಡಿದು ಬೆಳೆದ ಮರಿಗಳೇ ಆಗಿದ್ದವು. ಆದರೆ ಮತ್ತೆ ಮೂರು ಹುಲಿಗಳು ಅಪರಿಚಿತ ಹುಲಿಗಳಾಗಿದ್ದು, ನಾಯಮ್ಮನ ಮೇಲೆ ಎರಗಲು ಬಂದವು. ತಕ್ಷಣವೇ ತಮ್ಮನ್ನು ಸಾಕಿ ಬೆಳೆಸಿದ ಅಮ್ಮನ ಗುರುತು ಹಿಡಿದ ಹುಲಿಗಳು ನಾಯಮ್ಮನ ಸುತ್ತಲೂ ನಿಂತು ರಕ್ಷಣೆ ಒದಗಿಸಿದವು. ಮಾತ್ರವಲ್ಲ, ಪುಟ್ಟ ಮರಿಗಳಂತೆ ಅಮ್ಮನ ಜತೆಗೆ ಆಟವನ್ನೂ ಆಡಲಾರಂಭಿಸಿದವು. ಈ ದೃಶ್ಯ ಕಂಡ ಮೃಗಾಲಯದ ಸಿಬ್ಬಂದಿಗೆ ಅಚ್ಚರಿಯೋ ಅಚ್ಚರಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ