ಈ ಕೆಲಸ 30 ವರ್ಷ ಹಿಂದೆಯೇ ನಡೆಯಬೇಕಿತ್ತು
“ಬಿಡ್ರೀ ಸರ್, ಮೂರು ದಶಕ ಮೊದಲು, ನಾನು ಯುವಕನಾಗಿದ್ದಾಗಲೇ ಈ ಥರದ ಹಲಸಿನ ನೇರ ಮರಾಟ ನಡೆಯಬೇಕಿತ್ತು” ತಿಮ್ಲಾಪುರದ 63 ವರ್ಷದ ಕೃಷಿಕ ಟಿ.ಕೆ. ಕುಮಾರಸ್ವಾಮಿ ಪರಿತಪಿಸುತ್ತಾರೆ.
ಇಂದು ಮತ್ತೆ ಶಿವಮೊಗ್ಗ– ಬೆಂಗಳೂರು ಹೆದ್ದಾರಿಯ ಬಿದರೆಗುಡಿಯಲ್ಲಿ ರೈತರಿಂದಲೇ ಹಲಸಿನ ಹಣ್ಣಿನ ನೇರ ಮಾರಾಟ. ಇದು ಎರಡನೆಯ ವಾರ. ಕಳೆದ ಶುಕ್ರವಾರದ ಪ್ರಪ್ರಥಮ ಪ್ರಯೋಗ ಯಶಸ್ಸಾಗಿತ್ತು. ಕುಮಾರಸ್ವಾಮಿ ಕಳೆದ ವಾರದಿಂದ ತನ್ನ ಮರದ ಹಲಸು ತಂದು, ಬಿಡಿಸಿ ಮಾರುತ್ತಿದ್ದಾರೆ.
ಈ ರೈತಪರ ಕಾರ್ಯಕ್ರಮ ಹಮ್ಮಿಕೊಂಡದ್ದು ತಿಪಟೂರು ಕೇವೀಕೆ (ಕೃಷಿ ವಿಜ್ಞಾನ ಕೇಂದ್ರ). ಈ ಬಾರಿ ಹೆದ್ದಾರಿಯ ಇಕ್ಕೆಲಗಳಲ್ಲೂ ಡೇರೆಯಡಿ ಹಲಸಿನಂಗಡಿ ತೆರೆದಿದ್ದರು.
ಭಾಗವಹಿಸಿದ ಇನ್ನೊಬ್ಬ ಕೃಷಿಕ ಯೋಗಾನಂದ ಮೂರ್ತಿ ಟಿ.ಎನ್. ಪತ್ರೆಹಳ್ಳಿಯ ಯುವ ಕೃಷಿಕ ಭರತ್ (34) ಹಣ್ಣು ತಂದು ಮಾರಿದ ಇನ್ನೊಬ್ಬರು ಕೃಷಿಕರು. ಇವರದು ಚಂದ್ರ ಹಲಸು. ಇವರ ಬಳಿ ಹಲಸಿನ ಎರಡು ಮರಗಳಿವೆ. ಎರಡೂ ಸೇರಿ 300 ಹಣ್ಣು ಕೊಡುತ್ತಿವೆ. “ಬಂಧುಮಿತ್ರರಿಗೆ ಕೊಟ್ಟದ್ದು ಬಿಟ್ಟರೆ ಮಾರಿದ್ದು ಬೆರಳಎಣಿಕೆಯ ಹಣ್ಣು. ಅದಕ್ಕೇನು ಸಾರ್, ಹಣ್ಣೊಂದಕ್ಕೆ ಜುಜುಬಿ 30- 40 ರೂಪಾಯಿ ಸಿಕ್ಕಿದೆ” ಎನ್ನುತ್ತಾರೆ.
ತೆಂಗು ಕೃಷಿ – ಅಡಿಕೆ ಹುಚ್ಚಿನಲ್ಲಿ ತಮ್ಮ ತಾಲೂಕಲ್ಲಿ ಕಡಿದುರುಳಿಸಿದ ಹಲಸಿನ ಮರಗಳು ಕಡಿಮೆಯಲ್ಲ. ತಿಮ್ಲಾಪುರದ 15 ಮನೆಗಳಲ್ಲಿ ಕಾಲು ಶತಮಾನದ ಹಿಂದೆ ಇದ್ದ 40 ಮರ ಈಗ 15ಕ್ಕಿಳಿದಿದೆ ಎಂದು ಬೇಸರಿಸುತ್ತಾರೆ.
ಮುಂದಿನ ವಾರಗಳಲ್ಲಿ ಅಲ್ಲಿಲ್ಲಿಂದ ಹಣ್ಣು ಸಂಗ್ರಹಿಸಿ ತಂದಾದರೂ ನೇರ ಮಾರಾಟ “ಮುಂದುವರಿಸಲೇ ಬೇಕು” ಎನ್ನುತ್ತಿದ್ದಾರೆ ಈ ರೈತರು.
“ಮೂರೇ ಗಂಟೆಯಲ್ಲಿ ಹಣ್ಣೆಲ್ಲಾ ಖಾಲಿ. ನಾವು ಈ ಕೆಲಸಕ್ಕೆ ಹೊರಟಿದ್ದು ಲೇಟಾಯಿತು. ಹಣ್ಣು ಸಿಕ್ಕಿದಷ್ಟು ಕಾಲ ’ಹೆದ್ದಾರಿ ಬದಿಯ ಈ ಹಲಸಿನಂಗಡಿ’ ಮುಂದುವರಿಸುತ್ತೇವೆ. ರೈತರಿಗೆ ಒಳ್ಳೆ ಆತ್ಮವಿಶ್ವಾಸ ಮೂಡುತ್ತಿದೆ. ಪಯಣಿಗರು ಕಾರು ನಿಲ್ಲಿಸಿ ಹಣ್ಣು ಕೊಂಡು ಖುಷಿಪಟ್ಟು ಹೋಗುತ್ತಿದ್ದಾರೆ, ಇನ್ನೇನು ಬೇಕು?” ಎಂದು ಕೇಳುತ್ತಿದ್ದಾರೆ.
ಮಾಹಿತಿ: ಶ್ರೀಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ