ಕಲಬುರಗಿ: ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಹಿಂದುಗಳು ಹಿಂಸಾವಾದಿಗಳು ಎಂದು ಹೇಳಿಕೆ ನೀಡಿರುವುದನ್ನು ಬಿಜೆಪಿ ತೀಕ್ಷ್ಣವಾಗಿ ಖಂಡಿಸಿದೆ. ಹಿಂದುತ್ವ ಸುಳ್ಳು, ಹಿಂದುತ್ವವಾದಿಗಳು ಅಸತ್ಯ ನುಡಿಯುವವರು, ದ್ವೇಷದಿಂದ ಹಿಂಸಾಚಾರ ಮಾಡುವವರು ಎಂದೆಲ್ಲ ಪ್ರತಿಪಕ್ಷ ಕಾಂಗ್ರೆಸ್ ನ ನಾಯಕ ರಾಹುಲ್ ಗಾಂಧಿ ಹಿಂದುತ್ವದ ಬಗ್ಗೆ ಅಪ ಪ್ರಚಾರ ಮಾಡಿದ್ದಾರೆ. ಈ ಮಾತುಗಳನ್ನು ಅವರು ಕೂಡಲೇ ಹಿಂಪಡೆದುಕೊಂಡು ಹಿಂದೂಗಳ ಕ್ಷಮೆ ಯಾಚಿಸಬೇಕು ಎಂದು ಭಾರತೀಯ ಜನತಾ ಪಕ್ಷದ ವಕ್ತಾರರಾದ ಡಾ. ಸುಧಾ ಹಲ್ಕಾಯಿ ಅವರು ಆಗ್ರಹಿಸಿದರು.
ಕಲಬುರಗಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ದ್ವೇಷದಿಂದ ಬಿಜೆಪಿಗೆ ಅಥವಾ ಆರೆಸ್ಸೆಸ್‌ಗೆ ಏನಾದರೂ ಆರೋಪ ಮಾಡಿದರೆ ಅದನ್ನು ಎದುರಿಸಬಹುದು. ಆದರೆ ಹಿಂದುಗಳೆಲ್ಲರನ್ನೂ ಉದ್ದೇಶಿಸಿ ನೀವು ಹಿಂಸಾವಾದಿಗಳು, ಅಸತ್ಯವಾದಿಗಳು ಎಂದು ರಾಹುಲ್ ಹೇಳುತ್ತಾರೆ. ಯಾರೆಲ್ಲ ಹಿಂದುಗಳು ಅನಿಸಿಕೊಂಡಿದ್ದಾರೋ ಅವರೆಲ್ಲ ಹಿಂಸಾವಾದಿಗಳು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಈ ರೀತಿ ಯಾವ ಆಧಾರದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಈ ರೀತಿ ಸಾರ್ವತ್ರೀಕರಣಗೊಳಿಸಿದ ಹೇಳಿಕೆ ಏಕೆ? ಇಲ್ಲಿಯ ವರೆಗೆ ನಡೆದಿರುವ ಯಾವುದೇ ಭಯೋತ್ಪಾದಕ ಕೃತ್ಯಗಳಲ್ಲಿ ಹಿಂದುಗಳ ಕೈವಾಡವಿದೆಯೇ...? ಎಂದು ಪ್ರಶ್ನಿಸಿದರು.
'ಮುಂಬಯಿ ಸರಣಿ ಸ್ಫೋಟ, ಸಂಸತ್ ಭವನದ ಮೇಲೆ ದಾಳಿ, ಮೊನ್ನೆ ಮೊನ್ನೆ ಜಮ್ಮುವಿನಲ್ಲಿ ವೈಷ್ಣೋದೇವಿ ಯಾತ್ರೆಗೆ ಹೊರಟಿದ್ದ ಹಿಂದುಗಳ ಮೇಲೆ ದಾಳಿ ನಡೆಯಿತು. ಇವನ್ನೆಲ್ಲ ಯಾರು ಮಾಡಿದ್ದು...? ಹಿಂದುಗಳಾ? ಹಿಂದುಗಳೆಲ್ಲರೂ ಹಿಂಸಾವಾದಿಗಳು ಎಂದರೆ ಅರ್ಥವೇನು?'
'ಸಂವಿಧಾನದ ಬಗ್ಗೆ ಮಾತಾಡ್ತಾರೆ. 1975ರಲ್ಲಿ ಸಂವಿಧಾನವನ್ನು ಉಚ್ಚಾಟಿಸಿದವರು ಯಾರು? ತುರ್ತು ಪರಿಸ್ಥಿತಿ ಹೇರಿ ದೇಶದ ಸಾಂವಿಧಾನಿಕ ಆಡಳಿತ ವ್ಯವಸ್ಥೆಯನ್ನು ನಾಶಗೊಳಿಸಿದವರು ಯಾರು? ಸರ್ವಾಧಿಕಾರವನ್ನು ಜಾರಿಗೊಳಿಸಿದವರು ಯಾರು? ಇವರಿಗೆ ಸಂವಿಧಾನದ ಬಗ್ಗೆ ಮಾತನಾಡಲು ಏನು ಅರ್ಹತೆಯಿದೆ? ರಾಹುಲ್ ಗಾಂಧಿ ಒಮ್ಮೆ ಇತಿಹಾಸವನ್ನು ನೆನಪಿಸಿಕೊಳ್ಳಲಿ' ಎಂದು ಡಾ. ಸುಧಾ ಹೇಳಿದರು.
ಮುಖ್ಯಾಂಶಗಳು:
* 1984ರಲ್ಲಿ ಸಿಖ್ ದಂಗೆಯಾಗುತ್ತದೆ. 3000ಕ್ಕಿಂತಲೂ ಹೆಚ್ಚು ಸಿಖ್ಖರ ಮಾರಣ ಹೋಮವಾಗುತ್ತದೆ. ಇದು ಅಧಿಕೃತ ದಾಖಲೆಯಲ್ಲಿರುವ ಅಂಕಿ ಅಂಶ. ಆದರೆ 18,000ಕ್ಕೂ ಹೆಚ್ಚು ಸಿಖ್ಖರು ನಾಪತ್ತೆಯಾಗುತ್ತಾರೆ. ಅವರು ಏನಾದರೂ ಎಂಬುದೇ ಗೊತ್ತಾಗುವುದಿಲ್ಲ. ಇದರ ಬಗ್ಗೆ ರಾಹುಲ್ ಗಾಂಧಿ ಮಾತಾಡಿದ್ರಾ...?
* 1990ರಲ್ಲಿ ಕಾಶ್ಮೀರದಲ್ಲಿ ಸಾವಿರಾರು ಕಾಶ್ಮೀರಿ ಪಂಡಿತರನ್ನು ಬರ್ಬರ ಹತ್ಯೆ ಮಾಡಿದರು. ಇವನ್ನೆಲ್ಲ ಯಾರು ಮಾಡಿದ್ದು?
* ತಮಿಳುನಾಡಿನಲ್ಲಿ ಇದೇ ಕಾಂಗ್ರೆಸ್‌ನ ಮಿತ್ರಪಕ್ಷ ಡಿಎಂಕೆಯ ನಾಯಕರು ಸನಾತನ ಧರ್ಮವನ್ನು ನಾವು ಸರ್ವನಾಶ ಮಾಡ್ತೇವೆ ಅಂತ ಹೇಳಿದ್ದಾರೆ. ಆಗ ರಾಹುಲ್ ಗಾಂಧಿ ತುಟಿ ಬಿಚ್ಚಿದ್ದರೇ?
* ಕೇರಳದಲ್ಲಿ ಮುಸ್ಲಿಂ ಲೀಗ್‌ನವರು ಹಿಂದೂಗಳ ರುಂಡ ಕತ್ತರಿಸಿ ಹಾಕ್ತೇವೆ ಎಂದು ಬೆದರಿಕೆ ಹಾಕಿದರು. ಆಗ ರಾಹುಲ್ ಗಾಂಧಿ ಅದನ್ನು ಖಂಡಿಸಿ ಏನಾದರೂ ಹೇಳಿಕೆ ಕೊಟ್ಟಿದ್ದರೇ...?
* ಸಂವಿಧಾನ ರಚನೆ ಮಾಡುವಾಗ ಡಾ ಬಾಬಾ ಸಾಹೇಬ್ ಅಂಬೇಡ್ಕರರು ಸೆಕ್ಯುಲರ್ ಪದ ಬಳಕೆ ಮಾಡಿಲ್ಲ. ಹಿಂದೂಸ್ಥಾನ ಅತ್ಯಂತ ಹೆಚ್ಚು ಸಹನಾಶೀಲವಾದ ರಾಷ್ಟ್ರ. ಹಿಂದೂಗಳ ರಕ್ತದ ಕಣ ಕಣದಲ್ಲೂ ಸಹನೆ, ಸಹಬಾಳ್ವೆಯ ತತ್ವ ಅಂತರ್ಗತವಾಗಿದೆ ಎಂದು ಅಂಬೇಡ್ಕರ್ ಹೇಳಿದ್ದರು. ಸಂವಿಧಾನದ ಮುನ್ನುಡಿಯನ್ನು ಮನಬಂದಂತೆ ಬದಲಾಯಿಸಿದವರು ಯಾರು? ಸೊವರಿನ್ ಸೋಶಿಯಲಿಸ್ಟ್ ಡೆಮಾಕ್ರಟಿಕ್ ರಿಪಬ್ಲಿಕ್ ಅಂತ ಬದಲಿಸಿದವರು ಯಾರು? ಇಂದಿರಾ ಗಾಂಧಿಯವರು ಮಾಡಿದರು.
* ರಾಹುಲ್ ಗಾಂಧಿಯ ಅಜ್ಜಿ ಈ ದೇಶದ ಸಂವಿಧಾನವನ್ನು ಬುಡಮೇಲುಗೊಳಿಸಿದರು. ಅವರು ಮಾಡದಿರುವ ಕೃತ್ಯ ಏನು ಎಂದು ಕೇಳಿ... ಲಕ್ಷಕ್ಕೂ ಅಧಿಕ ಮಂದಿಯನ್ನು ಜೈಲಿಗಟ್ಟಿದರು. 624 ಮಂದಿ ವಿರೋಧ ಪಕ್ಷದ ಸದಸ್ಯರನ್ನು ಒಂದೇ ದಿನದಲ್ಲಿ ಜೈಲಿಗೆ ತಳ್ಳಿದರು. ಅಂತಹ ರಾಹುಲ್ ಗಾಂಧಿ ಇವತ್ತು ತಮ್ಮ ಮೇಲೆ ಕೇಸ್ ಹಾಕಿ ಜೈಲಿಗೆ ತಳ್ಳಬಹುದು ಎಂದು ಹೇಳುತ್ತಾರೆ.
ಕಾಂಗ್ರೆಸ್ ನಡೆದುಕೊಂಡ ರೀತಿಗೆ ಬಿಜೆಪಿ ಪ್ರತೀಕಾರ ಮಾಡುತ್ತಿದೆಯೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಬಿಜೆಪಿ ಈಗ ಯಾವ ರೀತಿ ದ್ವೇಷ ಸಾಧನೆ ಮಾಡಿದೆ ನೀವೇ ಹೇಳಿ...? ನಾವೇನಾದರೂ ತುರ್ತು ಪರಿಸ್ಥಿತಿ ಹೇರಿದ್ದೇವಾ...? ಚುನಾಯಿತ ರಾಜ್ಯ ಸರಕಾರಗಳನ್ನು ವಜಾ ಮಾಡಿದ್ದೇವಾ...? ಎಂದು ಡಾ. ಸುಧಾ ಮರು ಪ್ರಶ್ನೆ ಹಾಕಿದರು.
* ಹಿಂದೂಗಳು ಹಿಂಸಾವಾದಿಗಳು ಎಂದು ಸಾರ್ವತ್ರೀಕರಣಗೊಳಿಸಿ ಹೇಳಿಕೆ ನೀಡಲು ರಾಹುಲ್ ಗಾಂಧಿಗೆ ಅಧಿಕಾರ ಕೊಟ್ಟವರು ಯಾರು? ಯಾರೋ ಭಾಷಣ ಬರೆದು ಕೊಟ್ಟಿರಬಹುದು. ಆದರೆ ಮಾತನಾಡುವಾಗ ಇವರಿಗೆ ವಿವೇಚನೆ ಬೇಡವೆ?
* ಸಂಸತ್ತಿನಲ್ಲಿ ಪ್ಲಕಾರ್ಡ್‌ಗಳನ್ನು ಪ್ರದರ್ಶಿಸಬಾರದು ಎಂದು ಸ್ಪೀಕರ್ ಅವರು ನಿಯಮಗಳನ್ನು ಉಲ್ಲೇಖಿಸಿ ಹೇಳುತ್ತಾರೆ. ಆದರೆ ರಾಹುಲ್ ಅದ್ಯಾವುದನ್ನೂ ಲೆಕ್ಕಿಸದೆ ನಿಯಮ ಉಲ್ಲಂಘಿಸಿ ಹಿಂದೂಗಳ ಆರಾಧ್ಯ ಮೂರ್ತಿಗಳ ಚಿತ್ರಗಳನ್ನು ಪ್ರದರ್ಶಿಸಿ ಹಿಂಸಾವಾದಿಗಳು ಎನ್ನುತ್ತಾರೆ.
* ಸಂಸತ್ತಿನಲ್ಲೇ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡ ರಾಹುಲ್ ಗಾಂಧಿ ಸಂವಿಧಾನದ ರಕ್ಷಣೆಯ ಮಾತಾಡುತ್ತಾರೆ...? ಎಂತಹ ವಿಚಿತ್ರ ನಡವಳಿಕೆ ಇದು...?
* ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠರ ಹತ್ಯೆಯಾಗುತ್ತದೆ. ಅಲ್ಲಿ ಹಿಂದುಗಳು ಹಿಂಸಾವಾದಿಗಳಾಗಿದ್ದರಾ?
* ಪ್ರತಿಪಕ್ಷದ ನಾಯಕನಾಗಿ ಜವಾಬ್ದಾರಿಯುತ ಮಾತುಗಳನ್ನಾಡಬೇಕೇ ಹೊರತು, ಈ ರೀತಿ ಬೇಜವಾಬ್ದಾರಿಯಿಂದ ಬಾಯಿಗೆ ಬಂದಂತೆ ಗಳಹುವುದಲ್ಲ.
* ರಾಹುಲ್ ಗಾಂಧಿ ತಮ್ಮ ಈ ಹೇಳಿಕೆಗೆ ಹಿಂದೂಗಳ ಕ್ಷಮಾಪಣೆ ಕೇಳಬೇಕು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಾಜು ಗೌಡ ನಾಗನಹಳ್ಳಿ, ಡಾ. ಗಿರಿರಾಜ್, ಸ್ವಪ್ನ ಮಂಗಲಗಿ, ಡಾ. ಪುಷ್ಪ ಲತಾ ಎಚ್.ಎಂ ಹಾಗೂ ಅನಿಲಕುಮಾರ್ ಸಿನ್ನರುಕರ್ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ