ದಿನಪತ್ರಿಕೆಗಳಿಗೆ ಭವಿಷ್ಯವಿದೆ ಆದರೆ ಹೊಸತನ ಅಗತ್ಯ: ಪಿ. ಬಿ. ಹರೀಶ್ ರೈ
ಉಜಿರೆ: ಮುಂದಿನ ಎರಡು ದಶಕಗಳ ಕಾಲ ಕನ್ನಡ ದಿನಪತ್ರಿಕೆಗಳು ಜೀವಂತವಾಗಿರುತ್ತವೆ ಎಂಬುದಕ್ಕೆ ಸಂಶಯ ಬೇಡ. ಆದರೆ ಅವುಗಳನ್ನು ಉಳಿಸಲು ಹೊಸತನ ಅಗತ್ಯ ಎಂದು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ. ಬಿ. ಹರೀಶ್ ರೈ ಅಭಿಪ್ರಾಯಪಟ್ಟರು. ಉಜಿರೆಯ ಶ್ರೀ ಧ. ಮಂ. ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಜು.1 ರಂದು ಆಯೋಜಿಸಲಾದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣಗಳ ಮೂಲಕ ವೇಗವಾಗಿ ಸುದ್ದಿ ಪ್ರಸಾರವಾಗುವ ಪ್ರಸ್ತುತ ಕಾಲದಲ್ಲಿ ಪತ್ರಿಕೆಗಳಿಗೆ ಭವಿಷ್ಯವಿಲ್ಲ ಎಂಬುದಾಗಿ ಹೇಳಲಾಗುತ್ತಿದೆ. ಆದರೆ ವಸ್ತುಸ್ಥಿತಿ ಹಾಗಿಲ್ಲ. ಪತ್ರಿಕೆ ಓದಿ ವಿಚಾರ ತಿಳಿದುಕೊಳ್ಳುವ ಅನುಭವವೇ ಭಿನ್ನ. ನಿಖರತೆ, ನೈಜತೆಗಾಗಿ ಪತ್ರಿಕೆ ಓದುವ ಪ್ರವೃತ್ತಿಯನ್ನು ಮುಂದಿನ ಎರಡು ದಶಕಗಳ ಕಾಲದವರೆಗೂ ಕಾಣಬಹುದು ಎಂದು ಅವರು ತರ್ಕಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಅತ್ಯಂತ ವೇಗವಾಗಿ ಪ್ರಸಾರವಾಗುವುದರಿಂದ ಹೊಸ ರೀತಿಯಲ್ಲಿ ಸುದ್ದಿ ಕೊಡುವುದೇ ಪತ್ರಿಕೆಗಳಿಗೆ ಇರುವ ಸವಾಲು. ಸುದ್ದಿಯೊಂದಕ್ಕೆ ಸಂಬಂಧಿಸಿದಂತೆ ಅಲ್ಲಿ ಲಭ್ಯವಾಗದ ಹೊಸ ವಿಚಾರ, ವಾಸ್ತವಗಳನ್ನು ಓದುಗರಿಗೆ ತಲುಪಿಸುವ ಮೂಲಕ ಪತ್ರಿಕೆಗಳು ಅಸ್ತಿತ್ವ ಉಳಿಸಿಕೊಳ್ಳಬಹುದು ಎಂದು ಅವರು ಹೇಳಿದರು.
ಪತ್ರಿಕೆ ಪರಿಪೂರ್ಣ ಜ್ಞಾನ ಕೊಡುತ್ತದೆ. ಪತ್ರಿಕೋದ್ಯಮವು ಏಕತಾನತೆ ಇಲ್ಲದ ವೃತ್ತಿ. ನಿತ್ಯ ಹೊಸತನ, ಹೊಸ ಸವಾಲು ಇರುವ ಈ ವೃತ್ತಿಗೆ ಬರುವವರು ಬದುಕಿನ ಸುಂದರ ಸಂಜೆಗಳನ್ನು ಕಳೆದುಕೊಳ್ಳಲು ತಯಾರಿರಬೇಕು. ಸಾಮಾನ್ಯ ಎಲ್ಲ ವೃತ್ತಿಗಳು ವಿಶ್ರಮಿಸುವ ಹೊತ್ತಿನಲ್ಲಿ ಪತ್ರಿಕೋದ್ಯಮದ ವೃತ್ತಿ ವೇಗ ಪಡೆದುಕೊಳ್ಳುತ್ತದೆ. ಆಸಕ್ತಿ, ಅಧ್ಯಯನ ಇಲ್ಲದೆ ಇಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಅವರು ಕಿವಿಮಾತು ಹೇಳಿದರು. “ಸುಮಾರು 183 ವರ್ಷಗಳ ಹಿಂದೆ ಜರ್ಮನಿಯಿಂದ ಬಂದ ಮಿಶನರಿ ಹರ್ಮನ್ ಮೊಗ್ಲಿಂಗ್ ಆರಂಭಿಸಿದ ಪತ್ರಿಕೆ ಮಂಗಳೂರ ಸಮಾಚಾರ. ಪತ್ರಿಕೆ ಇಲ್ಲದ ಸಮಾಜ ಬೆಳಕಿಲ್ಲದ ಕೊಠಡಿಯಂತೆ. ಬೆಳಕು ಬರಲಿ ಎಂಬ ಉದ್ದೇಶದಿಂದ ಪತ್ರಿಕೆ ಆರಂಭ ಮಾಡುತ್ತಿದ್ದೇವೆ. ಪತ್ರಿಕೆಯ ಸುದ್ದಿಗಳಿಂದ ಜನರಿಗೆ ಜ್ಞಾನ, ಮನೋರಂಜನೆ ವಿಚಾರಗಳು ಜನರಿಗೆ ತಲುಪಬೇಕು, ಸರಕಾರದ ವಿಚಾರಗಳು ತಲುಪಬೇಕು ಎಂಬ ಉದ್ದೇಶ ನಮ್ಮದು ಎಂದು ಮೊಗ್ಲಿಂಗ್ ಉಲ್ಲೇಖ ಮಾಡುತ್ತಾರೆ. ಧರ್ಮ ಪ್ರಸರಣಕ್ಕಾಗಿ ಆ ಪತ್ರಿಕೆ ಆರಂಭಿಸಲಾಯಿತು ಎಂದು ಹೇಳಲಾದರೂ ಅದರಲ್ಲಿ ದಾಸರ ಪದ ಇತ್ಯಾದಿ ಹಿಂದೂ ಸಂಸ್ಕೃತಿಯ ವಿಚಾರಗಳನ್ನು ಕೂಡ ಉಲ್ಲೇಖ ಮಾಡಿದ ಕಾರಣ ಆ ರೀತಿ ಅನ್ನಿಸುವುದಿಲ್ಲ” ಎಂದರು.
ಪತ್ರಿಕಾಧರ್ಮ ಪಾಲನೆಯಾಗುತ್ತಿಲ್ಲ ಎಂಬ ಕಳಂಕದ ಬಗ್ಗೆ ಉಲ್ಲೇಖಿಸಿದ ಅವರು, “ಪತ್ರಿಕೆಗಳು ಶಾಸಕಾಂಗ ಮತ್ತು ಕಾರ್ಯಾಂಗದ ಬಗ್ಗೆ ಪ್ರಾಮಾಣಿಕವಾದ, ಸತ್ಯವಾದ ವಿಚಾರಗಳನ್ನು ಜನತೆಯ ಮುಂದೆ ಇಟ್ಟಿದ್ದಿದ್ದಲ್ಲಿ ಪ್ರಾಯಶಃ ಎರಡೂ ವ್ಯವಸ್ಥೆಗಳು ಇದಕ್ಕಿಂತ ಇನ್ನೂ ಉತ್ತಮ ಸ್ಥಿತಿಯಲ್ಲಿ ಇರುತ್ತಿದ್ದವು. ಪತ್ರಿಕೋದ್ಯಮ ಕೂಡ ನಂಬಿಕೆ, ವಿಶ್ವಾಸ, ಭರವಸೆ ಕಳೆದುಕೊಂಡ ಕಾರಣ ನಾವು ಈ ರೀತಿಯ ವರ್ತಮಾನ ಕಾಲವನ್ನು ಕಾಣುವ ಸ್ಥಿತಿ ನಿರ್ಮಾಣ ಆಯಿತು. ಉತ್ಪಾದನಾ ವೆಚ್ಚಕ್ಕಿಂತ ಅತ್ಯಂತ ಕಡಿಮೆ ಬೆಲೆಯಲ್ಲಿ ದೊರೆಯುವ ಉತ್ಪನ್ನ ಪತ್ರಿಕೆ. ಜಾಹೀರಾತು ನೆಚ್ಚಿಕೊಂಡೇ ಪತ್ರಿಕೆ ನಡೆಸಬೇಕಾದ ಅನಿವಾರ್ಯ ಇತ್ಯಾದಿ ಸವಾಲುಗಳ ಎದುರು ಪತ್ರಿಕಾಧರ್ಮ ಪಾಲನೆಯೂ ಸವಾಲಿನದ್ದೇ ಎಂದು ಅವರು ವಿಮರ್ಶಿಸಿದರು. ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ, ಪತ್ರಿಕೆಗಳಲ್ಲಿ ಸಕಾರಾತ್ಮಕ ವಿಷಯಗಳನ್ನು ಹೇಳುವುದು ಅಗತ್ಯ. ಎಲ್ಲ ಕ್ಷೇತ್ರಗಳಂತೆಯೇ ಪತ್ರಿಕಾ ಕ್ಷೇತ್ರದಲ್ಲಿಯೂ ಸಮಸ್ಯೆಗಳಿದ್ದರೂ, ಇರುವ ನ್ಯೂನ್ಯತೆಗಳ ಮಧ್ಯೆ ಪತ್ರಿಕಾ ಧರ್ಮ ಕಾಯ್ದುಕೊಳ್ಳುವುದು ಮುಖ್ಯ. ಪ್ರಸ್ತುತ ಪತ್ರಿಕೋದ್ಯಮ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಆ ನ್ಯೂನ್ಯತೆಗಳನ್ನು ಸರಿಪಡಿಸುವ ಬಗ್ಗೆ ಆಲೋಚಿಸಬೇಕು ಎಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ, ಪತ್ರಿಕೋದ್ಯಮ ವಿಭಾಗದ ಪ್ರಥಮ, ದ್ವಿತೀಯ ಹಾಗೂ ತೃತೀಯ ವರ್ಷದ ತರಗತಿ ಪ್ರತಿನಿಧಿಗಳಾದ ವಿಷ್ಣು, ಕನ್ನಿಕಾ ಹಾಗೂ ಮದನ್ ಎಂ. ಅವರಿಗೆ ಹೂ ನೀಡಿ ಅಭಿನಂದಿಸುವ ಮೂಲಕ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆ ನೀಡಲಾಯಿತು. ಪತ್ರಿಕೋದ್ಯಮ (ಸ್ನಾತಕೋತ್ತರ) ವಿದ್ಯಾರ್ಥಿಗಳ ಪ್ರಕಟಿತ ಬರಹಗಳ ಸಂಚಿಕೆ ‘ಹೊಂಗಿರಣ’ ಬಿಡುಗಡೆಗೊಳಿಸಲಾಯಿತು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಪ್ರಸ್ತಾವಿಸಿ, ಸ್ವಾಗತಿಸಿದರು. ಪೂರ್ಣಿಮಾ, ಚರಿಷ್ಮಾ ಪ್ರಾರ್ಥಿಸಿದರು. ಶರಣ್ಯಾ ಜೈನ್ ಅತಿಥಿ ಪರಿಚಯ ನೀಡಿದರು. ಮಾನಸ ಅಗ್ನಿಹೋತ್ರಿ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ