ಅಧ್ಯಾತ್ಮ ರಾಮಾಯಣ: 1- ರಾಮನ ಅವತಾರ

Upayuktha
0

ಕರ್ಕಟಕ ರಾಮಾಯಣ ಮಾಸಾಚರಣೆಯ ಅಂಗವಾಗಿ ಲೇಖನ ಸರಣಿ



ಹರೇ ರಾಮ  ಶ್ರೀಗುರುಭ್ಯೋ ನಮಃ 

ಮಾರಮಣ (ಮಹಾವಿಷ್ಣು)ನ ಶ್ರೀರಾಮಾವತಾರದ ಕಥೆಯನ್ನು ಉಮಾರಮಣ (ಶಿವ) ತನ್ನ ಪ್ರಿಯಸತಿ ಉಮೆಗೆ ಒಲವಿನಿಂದ ಉಲಿದ ಕಥೆಯೇ ಅಧ್ಯಾತ್ಮ ರಾಮಾಯಣ.


ದಶಕಂಠನೇ ಮೊದಲಾದ ರಾಕ್ಷಸರು ತಮ್ಮ ಉಪಟಳದಿಂದ ಭೂಭಾರರಾಗಿದ್ದರು. ಇದನ್ನು ಸಹಿಸಲಾರದ ಭೂದೇವಿಯು ಗೋವಿನ ರೂಪದಲ್ಲಿ ಮುನಿಜನರೊಂದಿಗೆ ಬ್ರಹ್ಮಲೋಕಕ್ಕೆ ಹೋಗಿ ತನ್ನ ಸಂಕಟವನ್ನು ಬ್ರಹ್ಮನಲ್ಲಿ ತೋಡಿಕೊಂಡಳು. ಅವರೆಲ್ಲರನ್ನು ಕರೆದುಕೊಂಡು ಬ್ರಹ್ಮನು ಕ್ಷೀರಸಾಗರದ ತೀರಕ್ಕೆ ಬಂದನು. ಅಲ್ಲಿ ಕ್ಷೀರಸಾಗರಶಯನನಾದ ಮಹಾವಿಷ್ಣುವನ್ನು ಸ್ತುತಿಸಿದನು. ಬ್ರಹ್ಮನ ಮೊರೆಗೆ ಓಗೊಟ್ಟು ಮಹಾವಿಷ್ಣುವು ಪ್ರತ್ಯಕ್ಷನಾದನು. ಬ್ರಹ್ಮನು ಅವನಲ್ಲಿ ತಾನು ರಾವಣನಿಗೆ ವರಕೊಟ್ಟದ್ದು, ಮಾನವಮಾತ್ರನಿಂದ ಅವನಿಗೆ ಸಾವು ಬರಲಿ ಎಂದದ್ದು, ಅದರಿಂದ ಅವನು ಕೊಬ್ಬಿ ಮೂರುಲೋಕಗಳಿಗೂ ಕಂಟಕನಾಗಿದ್ದದ್ದು,ಇದೀಗ ಅವನಿಂದ ಲೋಕರಕ್ಷಣೆ ಮಾಡಬೇಕಾದ ಅನಿವಾರ್ಯತೆ ಬಂದದ್ದು- ಇವುಗಳನ್ನೆಲ್ಲ ಹೇಳಿ; ನೀನೀಗ ಮಾನವಾವತಾರದಲ್ಲಿ ಹುಟ್ಟಿ ರಾವಣನಿಂದ ಲೋಕಗಳನ್ನು ರಕ್ಷಿಸಬೇಕೆಂದು ಕೋರಿದನು. ಆಗ ಮಹಾವಿಷ್ಣುವು ತಾನು ಕಶ್ಯಪರಿಗೆ ಅವರ ಮಗನಾಗಿ ಹುಟ್ಟುತ್ತೇನೆಂಬ ವರವನ್ನು ಕೊಟ್ಟಿದ್ದೆ. ಅವರೀಗ ಭೂಲೋಕದಲ್ಲಿ ರಾಜಾ ದಶರಥನಾಗಿ ಖ್ಯಾತಜೀವನವನ್ನು ನಡೆಸುತ್ತಿದ್ದಾರೆ. ನಾನು ಅವರಿಗೆ ಮಗನಾಗಿ ಅವತರಿಸುತ್ತೇನೆ. ನನ್ನ ಯೋಗಮಾಯೆಯು ಜನಕರಾಜನ ಮಗಳು ಸೀತೆಯಾಗಿ ಅವತರಿಸುವಳು. ಅವಳನ್ನು ಕೂಡಿಕೊಂಡ ನಾನು ನಿಮ್ಮ ಪ್ರಾರ್ಥನೆಯನ್ನು ಈಡೇರಿಸುತ್ತೇನೆ- ಎಂದು ಬ್ರಹ್ಮನೇ ಮೊದಲಾದವರಿಗೆ ಖಚಿತ ಭರವಸೆಯನ್ನು ನೀಡಿ ಅಂತರ್ಧಾನನಾದನು. ಬ್ರಹ್ಮನು ತನ್ನೊಂದಿಗೆ ಬಂದ ದೇವತೆಗಳಲ್ಲಿ ನೀವೆಲ್ಲರು ನಿಮ್ಮ ನಿಮ್ಮ ಅಂಶದಿಂದ ವಾನರವಂಶದಲ್ಲಿ ಹುಟ್ಟಿ ಭಗವಂತನು ಭೂಲೋಕದಲ್ಲಿರುವವರೆಗೆ ಅವನೊಂದಿಗಿದ್ದು ಅವನ ಕಲ್ಯಾಣಕಾರ್ಯಗಳಲ್ಲಿ ಸಹಾಯಕರಾಗಿರಿ- ಎಂದು ಆದೇಶಿಸಿ ಅದೃಶ್ಯನಾದನು. ಭೂದೇವಿಯು ಭೂಲೋಕಕ್ಕೆ ಹಿಂದಿರುಗಿ ರಾಮಾವತಾರವನ್ನು ಕಾಯತೊಡಗಿದಳು. ದೇವತೆಗಳೂ ವಾನರರಾಗಿ ಅಲ್ಲಲ್ಲಿ ಹುಟ್ಟಿ  ರಾಮನಿಗಾಗಿ ಬಾಳತೊಡಗಿದರು.


ರಾಜಾ ದಶರಥನು ಸಂತಾನಕ್ಕಾಗಿ ಪರಿತಪಿಸತೊಡಗಿದ್ದನು. ಬೇರೆ ದಾರಿಗಾಣದೆ ಮಾರ್ಗದರ್ಶನಕ್ಕಾಗಿ ಗುರುವಸಿಷ್ಠರ ಮೊರೆಹೊಕ್ಕನು. ಆಗ ವಸಿಷ್ಠರು ತಪೋಧನರಾದ ಋಷ್ಯಶೃಂಗರನ್ನು ಕರೆಸಿ ತಮ್ಮೊಂದಿಗೆ ಅವರಿಂದ ಪುತ್ರಕಾಮೇಷ್ಟಿಯಾಗವನ್ನು ಮಾಡಿಸಲು ಹೇಳಿದರು. ಇದರಿಂದ ನಿನಗೆ ನಾಲ್ವರು ಪುತ್ರರು ಜನಿಸುವರೆಂದೂ ಹೇಳಿದರು.



ದಶರಥನನು ವಸಿಷ್ಠರ ಮಾತಿಗೆ ಮನ್ನಣೆಯಿತ್ತು ಋಷ್ಯಶೃಂಗರನ್ನು ಕರೆಸಿ ಗುರುವಸಿಷ್ಠರೊಡಗೂಡಿ ಯಾಗವನ್ನು ಅತಿಯಾದ ಶ್ರದ್ಧೆಯಿಂದ ಮಾಡಿದನು. ಯಾಗದಿಂದ ಸಂತುಷ್ಟನಾದ ಅಗ್ನಿಯು ಯಜ್ಞಪುರುಷನಾಗಿ ಕಾಣಿಸಿದನು. ಅವನು ಕೈಯಲ್ಲಿ ಪಾಯಸದಿಂದ ತುಂಬಿದ ಸ್ವರ್ಣಪಾತ್ರೆಯನ್ನು ಹಿಡಿದಿದ್ದನು. ದಶರಥನಿಗೆ ಅದನ್ನು ಕೊಟ್ಟು- ಹೇ ರಾಜಾ, ದೇವತೆಗಳಿಂದ ಸಿದ್ಧಗೊಳಿಸಲ್ಪಟ್ಟ ಈ ಪಾಯಸವನ್ನು ತೆಗೆದುಕೋ. ಇದರಿಂದ ನೀನು ಸಾಕ್ಷಾತ್ ಪರಮಾತ್ಮನನ್ನೇ ಪುತ್ರರೂಪದಿಂದ ಪಡೆಯುವೆ-ಎಂದು ಹೇಳಿ ಪಾಯಸವನ್ನಿತ್ತು ಅದೃಶ್ಯನಾದನು. ದಶರಥನು ಋಷ್ಯಶೃಂಗ-ವಸಿಷ್ಠರಿಗೆ ಮಣಿದು ಪಾಯಸವನ್ನು ಸ್ವೀಕರಿಸಿದನು. ಯಜ್ಞಪರಿಸಮಾಪ್ತಿಯಾದ ಬಳಿಕ ಪಾಯಸವನ್ನು ಕೌಸಲ್ಯೆ ಮತ್ತು ಕೈಕೇಯಿಗೆ ಎರಡು ಸಮಾನ ಪಾಲನ್ನು ಮಾಡಿ ಹಂಚಿದನು. ಆಗ ಪುತ್ರಾಕಾಂಕ್ಷಿಯಾಗಿ ಸಮಿತ್ರೆಯೂ ಅಲ್ಲಿಗೆ ಬಂದಳು. ಕೌಸಲ್ಯೆ-ಕೈಕೇಯಿಯರು ತಮ್ಮ ತಮ್ಮ ಪಾಲಿನ ಪಾಯಸದಿಂದ ಅರ್ಧಾಂಶವನ್ನು ಅವಳಿಗೆ ನೀಡಿದರು. ಯಜ್ಞದ ಫಲವಾಗಿ ಮೂವರು ರಾಣಿಯರೂ ಗರ್ಭಧರಿಸಿದರು.


ಹತ್ತನೆಯ ತಿಂಗಳು ತುಂಬಿತು. ಕೌಸಲ್ಯೆಯು ಚೈತ್ರಮಾಸದ ಶುಕ್ಲಪಕ್ಷದ ನವಮಿಯ ಮಧ್ಯಾಹ್ನಕಾಲದಲ್ಲಿ ಒಬ್ಬ ಅದ್ಭುತ ಬಾಲಕನಿಗೆ ಜನ್ಮ ನೀಡಿದಳು. ಅಂದು ಪುನರ್ವಸು ನಕ್ಷತ್ರವಾಗಿತ್ತು. ಜನಿಸುವಾಗಲೇ  ಪರಮಾತ್ಮನ ರೂಪದಿಂದ ಕೌಸಲ್ಯೆಗೆ ಕಾಣಿಸಿಕೊಂಡನು. ಹೆತ್ತ ಮಗನನ್ನು ಮಗನಾಗಿ ನೋಡದೆ ಭಗವಂತನಾಗಿ ನೋಡಿದ ಕೌಸಲ್ಯೆಯು ಅವನನ್ನು ಕೈಜೋಡಿಸಿ ಸ್ತುತಿಸಿದಳು. ಆಗ ಭಗವಂತನು ತಾನು ಮಾನವಾವತಾರವನ್ನು ತಾಳಿದ ಉದ್ದೇಶವನ್ನು ಅವಳಿಗೆ ತಿಳಿಸಿ ಮರಳಿ ಮಾನವ ಶಿಶುವಾಗಿ ಅಳತೊಡಗಿದನು. ರಾಮನ ಬಳಿಕ ಕೈಕೇಯಿಯು ಭರತನಿಗೆ ಜನ್ಮ ನೀಡಿದಳು. ಸುಮಿತ್ರೆಯು ಅವಳಿಮಕ್ಕಳಾದ ಲಕ್ಷ್ಮಣ-ಶತ್ರುಘ್ನರನ್ನು ಹೆತ್ತಳು. ರಾಜಾ ದಶರಥನು ಈ ನಾಲ್ಕು ಮಂದಿ ಬಾಲಕರಿಗೆ ಜಾತಕರ್ಮಾದಿ ಅವಶ್ಯಕ ಸಂಸ್ಕಾರಗಳನ್ನು ಮಾಡಿದನು. ಯಾರು ತನ್ನ ಸೌಂದರ್ಯದಿಂದ ಭಕ್ತರ ಚಿತ್ತವನ್ನು ರಮಿಸುವನೋ; ಮೊದಲನೆಯವನಾದ ಅವನ ಹೆಸರನ್ನು 'ರಾಮ' ಎಂದು ವಸಿಷ್ಠರು ಹೆಸರಿಸಿದರು. ಪ್ರಪಂಚವನ್ನು ಪೋಷಣೆ ಮಾಡುವವನಾದ ಎರಡನೆಯವನನ್ನು 'ಭರತ'ನೆಂದು ಹೆಸರಿಸಿದರು. ಎಲ್ಲ ಸುಲಕ್ಷಣಗಳಿಂದ ಕೂಡಿದ ಮೂರನೆಯವನನ್ನು 'ಲಕ್ಷ್ಮಣ'ನೆಂದು ಕರೆದರೆ, ನಾಲ್ಕನೆಯವನಾದ; ಶತ್ರುಗಳ ಘಾತಕನನ್ನು 'ಶತ್ರುಘ್ನ' ನೆಂದು ಕರೆದರು. ಮಕ್ಕಳಿಂದ  ಅರಮನೆಯೂ, ಅಯೋಧ್ಯೆಯೂ ಆನಂದಿಂದ ತುಂಬಿತು. 


ಮಕ್ಕಳು ಬೆಳೆದು ಕೌಮಾರಾವಸ್ಥೆಯನ್ನು ತಲುಪಿದಾಗ ವಿದ್ಯಾರ್ಜನೆಯ ಪೂರ್ವಭಾವಿಯಾಗಿ ಉಪನಯನ ಸಂಸ್ಕಾರವನ್ನು ವಸಿಷ್ಠರು ನೆರವೇರಿಸಿದರು. ನಾಲ್ವರೂ ವೇದ-ವೇದಾಂಗ-ಧನುರ್ವೇದ ಪಾರಂಗತರಾದರು.ರಾಮ- ಲಕ್ಷ್ಮಣ, ಭರತ- ಶತ್ರುಘ್ನರು ಜೊತೆಜೊತೆಯಲ್ಲಿ ಕೆಲಸ- ಕಾರ್ಯಗಳನ್ನು, ಸಾಧನೆಗಳನ್ನು ಮಾಡತೊಡಗಿದರು.


(ಸಶೇಷ...)


- ಉಂಡೆಮನೆ ವಿಶ್ವೇಶ್ವರ ಭಟ್ಟ, ಬೆಳ್ತಂಗಡಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top