ಮುಳಿಯಾರು: ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನ (ರಿ) ಇದರ ಒಂಭತ್ತನೇ ವಾರ್ಷಿಕೋತ್ಸವವು ಮುಳಿಯಾರು ಶ್ರೀ ಸುಬ್ರಹ್ಮಣ್ಯಸ್ವಾಮೀ ಕ್ಷೇತ್ರ ಸಭಾಂಗಣದಲ್ಲಿ ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನವಾಯಿತು.
ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ಜ್ಯೋತಿ ಜ್ವಲನ ಮಾಡಿ ಆಶೀರ್ವಚನವಿತ್ತು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸುಬ್ರಹ್ಮಣ್ಯ ಭಟ್ ಅಡ್ಕ ಅಧ್ಯಕ್ಷಸ್ಥಾನ ವಹಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಬೆಂಗಳೂರಿನ ಮನೋವಿಜ್ಞಾನಿಗಳಾದ ನವೀನ ಎಲ್ಲಂಗಳ ಇವರು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಪ್ರಸಿದ್ಧ ಭಾಗವತರಾದ ಶಿವಶಂಕರ ಭಟ್ ತಲ್ಪನಾಜೆ ಇವರಿಗೆ ಪೆರಡಂಜಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರತಿಷ್ಠಾನದ ವತಿಯಿಂದ ಸೀತಾರಾಮ ಬಳ್ಳುಳ್ಳಾಯ ಮತ್ತು ಕೃಷ್ಣ ಭಟ್ ಅಡ್ಕ ಇವರನ್ನು ಶಾಲು ಹೊದೆಸಿ ಫಲ, ಸ್ಮರಣಿಕೆ ಮತ್ತು ಸನ್ಮಾನಪತ್ರಗಳನ್ನಿತ್ತು ಗೌರವಿಸಲಾಯಿತು.
ಕೈಗಾರಿಕಾ ರಂಗದಲ್ಲಿ ಜಿಲ್ಲೆಯ ಅತ್ಯುತ್ತಮ ಉತ್ಪಾದನಾ ಉದ್ಯಮ ಪ್ರಶಸ್ತಿ ಲಭಿಸಿದ ಮುರಳಿಕೃಷ್ಣ ಮತ್ತು ಈ ಸಾಧನೆಯಲ್ಲಿ ಜೊತೆಗಿದ್ದು ಸಹಕರಿಸಿದ ಹರಿಕೃಷ್ಣ ಸ್ಕಂದ ಇವರನ್ನು ಅಭಿನಂದಿಸಲಾಯಿತು.
ಎಸ್‌ಎಸ್‌ಎಲ್‌ಸಿ ಮತ್ತು +2 ತರಗತಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಗೋವಿಂದ ಬಳ್ಳಮೂಲೆ ಅಭಿನಂದನಾ ಭಾಷಣ ಮಾಡಿದರು. ಪಲ್ಲವಿ ಹರಿಕೃಷ್ಣ ಪೆರಡಂಜಿ, ಹರಿಕೃಷ್ಣ ಪೆರಡಂಜಿ, ಮಧುರಕಾನನ ಗಣಪತಿ ಭಟ್ ಇವರು ಪ್ರಶಸ್ತಿ ಪತ್ರವನ್ನು ವಾಚಿಸಿದರು.
ವರ್ಣಪ್ರಸಾದ್ ವಯನಾಡು ಪ್ರಾರ್ಥನೆ ಹಾಡಿ ಕಾರ್ಯದರ್ಶಿ ಮುರಳೀಕೃಷ್ಣಸ್ಕಂದ ಪ್ರಸ್ತಾವನೆ ಮಾಡಿ ಸ್ವಾಗತಿಸಿದರು. ಶಿವಕುಮಾರ್ ಅಡ್ಕ ಕಾರ್ಯಕ್ರಮ ನಿರೂಪಣೆ ಮಾಡಿ ಅನುಪಮಾರಾಘವೇಂದ್ರ ಉಡುಪುಮೂಲೆ ಧನ್ಯವಾದವಿತ್ತರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಶರಸೇತುಬಂಧನ ತಾಳಮದ್ದಳೆ ಜರಗಿತು. ಸಾಧ್ವಿಕೃಷ್ಣ ವಯನಾಡು ಇವಳಿಂದ ನೃತ್ಯಾರ್ಪಣ ಕಾರ್ಯಕ್ರಮ ಜರಗಿತು. ಬಳಿಕ ನರಕಾಸುರ ಮೋಕ್ಷ ಯಕ್ಷಗಾನ ಬಯಲಾಟವು ಸಂಪನ್ನವಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ