ಬಿಎಸ್‍ವೈ ಕೇಸಿಗೆ ಪರಕಾಯ ಪ್ರವೇಶ ಮಾಡಿ ಜೀವ ಕೊಟ್ಟವರು ಯಾರು?: ಸಿ.ಟಿ. ರವಿ

Upayuktha
0


ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧದ ಪ್ರಕರಣದಲ್ಲಿ ಆ ಥರ ಏನೂ ನಡೆದಿಲ್ಲ ಎಂದು ಪೊಲೀಸರು ತಿಳಿಸಿ, ಬಿ ರಿಪೋರ್ಟ್ ಹಾಕುವ ಹಂತದಲ್ಲಿರುವಾಗ ಏಕಾಏಕಿ ಈ ಕೇಸಿಗೆ ಪರಕಾಯ ಪ್ರವೇಶ ಮಾಡಿ ಜೀವ ಕೊಟ್ಟವರು ಯಾರು? ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಪ್ರಶ್ನಿಸಿದರು.


ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕಾರಣಕ್ಕೆ ಈ ಕೇಸÀನ್ನು ಬಳಸುವ ಅನುಮಾನ ವ್ಯಕ್ತವಾಗಿದೆ. ಹಾಗಿಲ್ಲದೆ ಇದ್ದರೆ 3 ತಿಂಗಳ ಕಾಲ ಇಲ್ಲದ ಜೀವ ಈಗ ಯಾಕೆ ಬಂತು? ಈ ಕೇಸಿನ ಮೇಲೆ ಪರಕಾಯ ಪ್ರವೇಶ ಮಾಡಿದವರು ಯಾರು? ದೂರುದಾರೆಯು ಈ ಥರ 50ಕ್ಕೂ ಹೆಚ್ಚು ಗಣ್ಯರ ಮೇಲೆ ದೂರು ನೀಡಿದ್ದರು ಎಂದು ಮಾನ್ಯ ಗೃಹ ಸಚಿವರು ಸಾರ್ವಜನಿಕವಾಗಿ ಹೇಳಿದ್ದರು ಎಂದು ಗಮನ ಸೆಳೆದರು. ‘ಮಾನಸಿಕವಾಗಿ ಸ್ವಲ್ಪ..’ ಎಂದು ಹೇಳಿಕೆ ನೀಡಿದ್ದರು ಎಂದರು.


ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ದಾಖಲಾಗಿರುವ ದೂರಿಗೆ ಸಂಬಂಧಿಸಿ ಸರಕಾರದ ನಡೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ವಿವರಿಸಿದರು. ಮಾರ್ಚ್ 14ರಂದು ಅವರ ಮೇಲೆ ದೂರು ದಾಖಲಾಗಿತ್ತು. ಫೆಬ್ರವರಿ 2ರಂದು ಈ ಪ್ರಕರಣ ನಡೆದುದಾಗಿ ಆರೋಪಿಸಲಾಗಿದೆ. ಯಡಿಯೂರಪ್ಪ ಅವರು ಸಿಐಡಿ ಮುಂದೆ ಏಪ್ರಿಲ್ 12ರಂದು ಹಾಜರಾಗಿ ಹೇಳಿಕೆಯನ್ನೂ ನೀಡಿದ್ದರು ಎಂದು ತಿಳಿಸಿದರು.


ಇದೀಗ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿದೆ. ಇವತ್ತು ಹೈಕೋರ್ಟ್ ಮುಂದೆ ಮೊಕದ್ದಮೆ ಬರಲಿದ್ದು, ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸುತ್ತೇವೆ ಎಂದು ಹೇಳಿದರು. ಯಡಿಯೂರಪ್ಪ ಅವರ ಮೇಲಿನ ಮೊಕದ್ದಮೆಯನ್ನು ರಾಜ್ಯದ ಕಾಂಗ್ರೆಸ್ ಸರಕಾರವು ರಾಜಕೀಯದ ದೃಷ್ಟಿಯಿಂದ ನೋಡುತ್ತಿದೆ ಎಂದು ಆರೋಪಿಸಿದರು.


ಸರಕಾರದ ನಿಲುವು ಬದಲಾಗಲು ಕಾರಣ ಏನು?..

ಗೃಹ ಸಚಿವರ ಅಂದಿನ ಹೇಳಿಕೆಗೂ ಇಂದಿನ ಹೇಳಿಕೆಗೂ ಬಹಳಷ್ಟು ವ್ಯತ್ಯಾಸ ಇದೆ. ಅವತ್ತು ಅವರು ದೂರುದಾರರ ವ್ಯಕ್ತಿತ್ವವನ್ನೇ ಅನಾವರಣಗೊಳಿಸಿದ್ದರು. ಇವತ್ತು ಅವರು, ಅಗತ್ಯ ಇದ್ದರೆ ಬಂಧಿಸುತ್ತೇವೆ ಎಂದಿದ್ದಾರೆ. ಸರಕಾರದ ನಿಲುವು ಬದಲಾಗಲು ಕಾರಣ ಏನು? ಲೋಕಸಭಾ ಚುನಾವಣೆಯ ಸೋಲು ಕಾರಣವೇ? ಮಾನ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯವರ ತವರು ಜಿಲ್ಲೆಯಲ್ಲೇ ಸೋತಿದ್ದು ಒಂದು ಕಾರಣ ಇರಬಹುದೇ? ಉಪ ಮುಖ್ಯಮಂತ್ರಿಯವರ ಸೋದರನ ಸೋಲಿನ ಆಘಾತ ಈ ರೀತಿ ನಿಲುವು ಬದಲಾಗಲು ಕಾರಣವೇ? ಎಂದು ಸಿ.ಟಿ.ರವಿ ಅವರು ಪ್ರಶ್ನಿಸಿದರು.

ಕೈಕೊಟ್ಟ ಗ್ಯಾರಂಟಿ ಇದಕ್ಕೆ ಕಾರಣವಾಯಿತೇ? ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿಯ ಹಗರಣ, ಅದರಿಂದ ಆಗಿರುವ ಮುಖಭಂಗ, ಆ ಲೂಟಿಯನ್ನು ಮುಚ್ಚಿ ಹಾಕಲು ಸಂಚು ನಡೆದಿದ್ದು, ಬಿಜೆಪಿ ಅದನ್ನು ಬಯಲಿಗೆ ಎಳೆದುದು, ಅದರಿಂದ ಸಚಿವ ರಾಜೀನಾಮೆ ಕೊಡಲು ಕಾರಣವಾದುದು- ಈ ಹತಾಶೆಯಿಂದ ಹೀಗೆ ಮಾಡುತ್ತಿರಬಹುದೇ? ರಾಹುಲ್ ಗಾಂಧಿ, ಸುರ್ಜೇವಾಲಾ ಒತ್ತಡ ಇದರ ಹಿಂದೆ ಇದೆಯೇ ಎಂದು ಅವರು ಕೇಳಿದರು.


ನಮ್ಮ ಮೇಲಿನ ಒಂದು ಸುಳ್ಳು ಆರೋಪ ಸಂಬಂಧಿತ ಕೇಸಿಗೆ ಸಿಎಂ, ಡಿಸಿಎಂ, ರಾಹುಲ್ ಗಾಂಧಿಯವರು ನ್ಯಾಯಾಲಯದ ಕಟಕಟೆಗೆ ಬಂದು ನಿಲ್ಲಬೇಕಾಯಿತು. ಶೇ 40 ಆರೋಪ ಸಾಬೀತು ಮಾಡಲು ಅವರಿಂದ ಅಸಾಧ್ಯ. ಅವರಿಗೆ ಶಿಕ್ಷೆ ಆಗುವ ಸಾಧ್ಯತೆಯೂ ಇದೆ. ಬಹುಶಃ ಆ ಕಾರಣಕ್ಕಾಗಿ ಹತಾಶೆಯಿಂದ ಯಡಿಯೂರಪ್ಪನವರ ಮೇಲೆ ರಾಜಕೀಯ ದುರುದ್ದೇಶದಿಂದ ಸೇಡು ತೀರಿಸಿಕೊಳ್ಳಬೇಕು ಅಥವಾ ಮಾನಸಿಕವಾಗಿ ಕುಗ್ಗಿಸಬೇಕೆಂದು ಈ ಸಂಚು ಮಾಡಿದ್ದಾರೇನೋ ಎಂದು ಅನಿಸಿಕೆ ವ್ಯಕ್ತಪಡಿಸಿದರು.


ಒಬ್ಬ ಪ್ರಭಾವಿ ಸಚಿವರು ಈ ಪ್ರಕರಣ ಜೀವ ಪಡೆಯಲು ಕಾರಣರಾಗಿದ್ದಾರೆ ಎಂಬ ಮಾಹಿತಿ ಕೂಡ ಅಧಿಕಾರಿಗಳ ಮೂಲಕ ಬಂದಿದೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಲು ನಮ್ಮ ಅಡ್ಡಿ ಇಲ್ಲ ಎಂದು ಸ್ಪಷ್ಟಪಡಿಸಿದರು. ರಾಜಕೀಯ ದುರುದ್ದೇಶದಿಂದ ಹೀಗೆ ಮಾಡಿದರೆ ಅದರ ಪರಿಣಾಮ ನಿಮಗೆ ತಿರುಗುಬಾಣ ಆಗಲಿದೆ ಎಂದು ಎಚ್ಚರಿಸಿದರು. ಇದರ ಪರಿಣಾಮವಾಗಿ ರಾಜಕೀಯ ಲಾಭ ಆಗದು; ರಾಜಕೀಯ ನಷ್ಟ ಆಗಲಿದೆ ಎಂದೂ ತಿಳಿಸಿದರು. ತಪ್ಪು ಮಾಡಿದರೆ ಭಯಪಡಬೇಕು. ತಪ್ಪೇ ಇಲ್ಲದಿದ್ದರೆ ಭಯ ಯಾಕೆ? ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು.


ದರ್ಶನ್ ಪ್ರಕರಣದಲ್ಲಿ ಪೊಲೀಸ್ ಠಾಣೆ ಸುತ್ತ ಶಾಮಿಯಾನ ಹಾಕಿ, 144ನೇ ಸೆಕ್ಷನ್ ವಿಧಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇದು ಪೊಲೀಸ್ ಇಲಾಖೆ ಮೇಲಿನ ಸಾರ್ವಜನಿಕರ ನಂಬಿಕೆಗೆ ಚ್ಯುತಿ ತರುವಂತಿದೆ. ದರ್ಶನ್ ಪ್ರಕರಣ, ರೇಣುಕಸ್ವಾಮಿ ಹತ್ಯೆ ಗಮನಿಸಿದರೆ, ಇಂಥ ಕಾಮೆಂಟ್‍ಗಳಿಗೆ ಹತ್ಯೆ ಮಾಡುವುದಾದರೆ ರಾಜಕಾರಣಿಗಳು ದಿನಕ್ಕೊಂದು ಹತ್ಯೆ ಮಾಡಬೇಕಾದೀತು ಎಂದು ಉತ್ತರ ಕೊಟ್ಟರು. ಇಂಥ ಕಾಮೆಂಟ್ ದಿನವೂ ಬರುತ್ತದೆ. ಸೋಷಿಯಲ್ ಮೀಡಿಯದಲ್ಲಿ ಅವ್ವ, ಹೆಂಡತಿ, ಅಜ್ಜಿ, ಮುತ್ತಜ್ಜಿ ವರೆಗೂ ಮಾತನಾಡಿದವರಿದ್ದಾರೆ. ಈ ಹತ್ಯೆ ಮನುಕುಲ ತಲೆ ತಗ್ಗಿಸುವ ವಿಚಾರ ಎಂದು ನುಡಿದರು.


ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ, ಪಕ್ಷದ ರಾಜ್ಯ ವಕ್ತಾರ ಡಾ. ನರೇಂದ್ರ ರಂಗಪ್ಪ ಅವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top