ದಶಾವತಾರದ 8ನೇ ಅವತಾರ ಕೃಷ್ಣನ ಹೆತ್ತ ತಾಯಿ ದೇವಕಿ. ದೇವಕಿ ಯಾದವ ಕುಲದ ದೇವಕನ ಮಗಳು ಯದುವಂಶದ ನಾಲ್ವರು ರಾಜರಲ್ಲಿ ದೇವಕನೂ ಒಬ್ಬ, ದೇವಕಿ ದೇವಿಗೆ 7 ಜನ ಸಹೋದರಿಯರು ಧೃತದೇವಾ, ಶಾಂತಿದೇವಾ, ಉಪದೇವಾ, ಶ್ರೀದೇವಾ, ದೇವರಕ್ಷಿತಾ ಮತ್ತು ಸಹದೇವಾ ಇವರುಗಳು ಸಹೋದರಿಯರು, ದೇವಸೇನ, ಉಪದೇವ, ಸುದೇವ, ದೇವವರ್ಧನ ಇವರುಗಳು ಸಹೋದರರು ಹಾಗೂ ಒಬ್ಬಳು ಮಲ ಸಹೋದರಿ ಸುಬಲ ಇರುತ್ತಾರೆ.
ಭಾಗವತ ಪುರಾಣದಲ್ಲಿ ದೇವಕಿಯ ಉಲ್ಲೇಖ ಬರುತ್ತದೆ. ಮೂಲರೂಪದಲ್ಲಿ ದೇವಕಿಯು ದಕ್ಷ ಪ್ರಜಾಪತಿಯ ಮಗಳು ಅದಿತಿಯಾಗಿರುತ್ತಾಳೆ. ಕಶ್ಯಪರ ಪತ್ನಿ. ಭಗವಂತನ ಪ್ರತಿ ಅವತಾರಗಳಲ್ಲೂ ಬೇರೆ ಬೇರೆ ರೂಪದಲ್ಲಿ ಜನ್ಮವೆತ್ತು ಅದಿತಿ ದೇವಿಯು ಭಗವಂತನ ತಾಯಿಯಗುವ ಭಾಗ್ಯವನ್ನು ಪಡೆದಿರುತ್ತಾಳೆ. ಅದೇ ರೀತಿ ಎಂಟನೆಯ ಅವತಾರವಾದ ಶ್ರೀ ಕೃಷ್ಣನಿಗೆ ಜನ್ಮ ನೀಡಿದ ತಾಯಿಯಾಗಿ, ಮುಂದೆ ಅವನ ಪ್ರೌಢ ಅವಸ್ಥೆಯಲ್ಲಿ ಮದುವೆಯನ್ನು ನೋಡುತ್ತಾಳೆ ಆದರೆ ಲಾಲನೆ ಪಾಲನೆಯನ್ನು ಯಶೋದೆಯು ಮಾಡುತ್ತಾಳೆ.
ದೇವಕಿ ದೇವಿ ಶ್ರೀಕೃಷ್ಣ ಪರಮಾತ್ಮನ ತಾಯಿಯಾಗಲು ಜೀವನದ ಅತ್ಯಮೂಲ್ಯವಾದ ಸಮಯವನ್ನು ಸೆರರೆಮನೆಯಲ್ಲಿ ನೆಲೆಸಿ ಲೋಕ ಕಲ್ಯಾಣಕ್ಕೆ ಮಗನ ಲಾಲನೆ ಪಾಲನೆಯ ಸುಖವನ್ನು ತ್ಯಜಿಸಿದ ಮಹಾನ್ ತಾಯಿಯಾಗಿದ್ದಾಳೆ. ಯದುವಂಶದಲ್ಲಿ ಹುಟ್ಟಿದ ದೇವಕಿಗೆ ಉಗ್ರಸೇನ ಮಹಾರಾಜನ ಮಗ ಕಂಸನು ವಾವೆಯಲ್ಲಿ ಅಣ್ಣನಾಗುತ್ತಾನೆ. ಕಂಸನಿಗೆ ದೇವಕಿಯ ಮೇಲೆ ಬಹಳ ವಾತ್ಯಲ್ಯ ಸ್ನೇಹಿತನಾದ ವಸುದೇವನೊಡನೆ ವಿವಾಹವಾಗಿ ಸಂತಸದಿಂದ ವಸುದೇವನ ಮನೆಯನ್ನು ಸೇರುತ್ತಿರುವಾಗ ಆಕಾಶವಾಣಿಯ ಮೂಲಕ ಕಂಸನಿಗೆ ಅವನ ಮೃತ್ಯು ದೇವಕಿಯ ಎಂಟನೇ ಗರ್ಭದಲ್ಲಿ ಜನಿಸುತ್ತಾನೆ ಎಂಬ ವಿಷಯ ತಿಳಿದಾಗ ಪ್ರೀತಿಯ ತಂಗಿ ಹಾಗೂ ಸ್ನೇಹಿತನಾದ ವಸುದೇವನನ್ನು ಕಂಸನು ಸೆರೆಮನೆಯಲ್ಲಿಡುತ್ತಾನೆ.
ಒಬ್ಬ ತಾಯಿಗೆ ತನ್ನ ಮುಂದೆ ಹುಟ್ಟಿದ ಹಸುಳೆಯನ್ನು ಕೊಲ್ಲುವ ಶಿಕ್ಷೆಯನ್ನು ಕಂಸ ಕೊಡುತ್ತಾನೆ. 7 ಜನರನ್ನು ಕೊಂದ ನಂತರ ಶ್ರೀ ಕೃಷ್ಣನನ್ನು ತಂದೆ ವಸುದೇವನು ಸ್ನೇಹಿತನಾದ ನಂದಗೋಪನ ಮನೆಯಲ್ಲಿ ಬಿಟ್ಟು ಬರುತ್ತಾನೆ. ಕೃಷ್ಣನು ಬಾಲ್ಯಾವಸ್ಥೆಯಲ್ಲಿ ತಾಯಿಯ ಬಳಿ ಬೆಳೆಯಲೇ ಇಲ್ಲ. ಪ್ರೌಢಾವಸ್ಥೆಗೆ ಬಂದಾಗ ತಾಯಿಯ ಬಳಿ ಬರುತ್ತಾನೆ. ಕೃಷ್ಣ ತಾಯಿ ದೇವಕಿಯೊಡನೆ ಹೆಚ್ಚು ಸಮಯವನ್ನು ಕಳೆದ ಉಲ್ಲೇಖಗಳು ಬಹಳ ಕಡಿಮೆಯೇ ಸಿಗುತ್ತದೆ ಏಕೆಂದರೆ ಕಂಸನ ವಧೆಯ ನಂತರ ಕೃಷ್ಣನು ವಿದ್ಯಾಭ್ಯಾಸಕ್ಕಾಗಿ ಸಾಂದೀಪನಿ ಋಷಿಗಳ ಆಶ್ರಮಕ್ಕೆ ಹೋಗುತ್ತಾನೆ. ಹಿಂತಿರುಗಿದ ನಂತರ ಮತ್ತೆ ರಾಜಕೀಯ ಪಾಂಡವರು ಎಂದು ತಾಯಿಯೊಂದಿಗೆ ಕಳೆದ ಸಮಯದ ವರ್ಣನೆ ಯಾವುದೇ ಗ್ರಂಥಗಳಲ್ಲಿ ದೊರೆಯುವುದಿಲ್ಲ. ಹೀಗಾಗಿ ತ್ಯಾಗಮಯೀ ದೇವಕಿ ದೇವಿಯು ಕೃಷ್ಣನ ಬಾಲಲೀಲೆಗಳನ್ನು ನೋಡಿರುವುದಿಲ್ಲ.
ಮಹಾಭಾರತದ ಯುದ್ಧದ ನಂತರ ಗಾಂಧಾರಿಯ ಶಾಪಕ್ಕೆ ಅನುಸಾರವಾಗಿ ಯಾದವ ಕಲಹದಲ್ಲಿ ವಸುದೇವನ ಮರಣದ ನಂತರ ದೇವಕಿಯು ಸಹಗಮನ ಹೊಂದುತ್ತಾಳೆ ಎಂದು ಭಾಗವತದಲ್ಲಿ ಉಲ್ಲೇಖವಿದೆ. ಹರಿವಂಶ ಪುರಾಣ, ಭಾಗವತ ಪುರಾಣ ಮಹಾಭಾರತಗಳಲ್ಲಿ ದೇವಕಿಯ ಬಗೆಗೆ ನಮಗೆ ಮಾಹಿತಿಗಳು ದೊರೆಯುತ್ತವೆ. ಇಸ್ಕಾನ್ ದೇವಾಲಯಗಳಲ್ಲಿ ದೇವಕಿಯ ಜೊತೆಗೆ ಕೃಷ್ಣನ ವಿಗ್ರಹಗಳು ದೊರೆಯುತ್ತವೆ. ಭಾರತದಲ್ಲಿ ದೇವಕಿ ದೇವಿಯೊಡನೆ ಕೃಷ್ಣನ ಪೂಜೆಯನ್ನು ಗೋವಾದ ಬಳಿಯಲ್ಲಿ ಕಾಣಬಹುದಾಗಿದೆ. ಆ ದ್ವೀಪವನ್ನು ಚೂಡಾಮಣಿ ದ್ವೀಪ ಅಥವಾ ಚೋರಾವೋ ದ್ವೀಪ ಎಂದು ಕರೆಯಲಾಗುತ್ತದೆ.
ಒಬ್ಬ ತಾಯಿ ತನ್ನ ಮಗುವಿನ ಏಳಿಗೆಗಾಗಿ ಬದುಕುಳಿದ ಮಗ ಉಳಿಯಬೇಕೆಂದು ಸೆರೆವಾಸ ಅನುಭವಿಸಿ ಅವನ ಏಳಿಗೆಗೆ ಕಾಯುವ ತಾಯಿ ನಮಗೆ ಅದ್ಭುತವಾದ ಪಾಠವನ್ನು ಕಲಿಸುವ ತಾಯಿ ದೇವಕಿ ದೇವಿಯಾಗಿದ್ದಾಳೆ. ರಾಜಕುಮಾರಿಯಾಗಿ ಸುಖವಾಗಿ ಬೆಳೆದರೂ ಪ್ರೀತಿಯ ಅಣ್ಣನಿಂದ ಸೆರೆವಾಸಕ್ಕೆ ಗುರಿಯಾಗುತ್ತಾಳೆ. ಲೌಕಿಕವಾದ ಮೋಹಗಳನ್ನು ತಾಪತ್ರಯಗಳೆಂಬ ಸೆರೆವಾಸವನ್ನು ಕಂಡಾಗಲೇ ಕೃಷ್ಣನೆಂಬ ಭಗವಂತನ ಅನುಗ್ರಹ ದೊರೆಯುತ್ತದೆ ಎಂಬುದು ದೇವಕಿಯ ಜೀವನದಿಂದ ನಾವು ತಿಳಿಯಬೇಕಾದ ಮಹತ್ವದ ವಿಚಾರವಾಗಿದೆ.
- ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ