ಪರಮಾತ್ಮನಾದ ಮರ್ಯಾದಾ ಪುರುಷೋತ್ತಮನಾದ ಶ್ರೀ ರಾಮಚಂದ್ರನ ತಾಯಿಯಾದವಳು ಕೌಸಲ್ಯೆ. ದಕ್ಷಿಣ ಕೋಸಲದೇಶದ ರಾಜನಾಗಿದ್ದ ಸುಕೌಶಲ ಮತ್ತು ತಾಯಿ ಅಮೃತ ಪ್ರಭೆಯರ ಮಗಳ ಕೌಸಲ್ಯೆ ಎಂದು ಹೇಳಲಾಗುತ್ತದೆ. ಕೋಸಲ ದೇಶದ ರಾಜಕುಮಾರಿಯಾದ ಕಾರಣ ಅವಳಿಗೆ ಕೌಸಲ್ಯೆಯೆಂಬ ಹೆಸರು ಇರುತ್ತದೆ. ಕೌಸಲ್ಯೆ ಅಯೋಧ್ಯೆಯ ಮಹಾರಾಜ ದಶರಥ ರಾಜನ ಮೊದಲ ಪತ್ನಿ, ವಿಷ್ಣುವಿನ ಅವತಾರ ಶ್ರೀರಾಮಚಂದ್ರನ ತಾಯಿ. ಮೂಲ ವಾಲ್ಮೀಕಿ ರಾಮಾಯಣದಲ್ಲಿ ಕೌಸಲ್ಯೆಯನ್ನು ವರ್ಣಿಸಿರುವುದನ್ನು ಗಮನಿಸಿದರೆ ಕೌಸಲ್ಯೆ ಶಾಂತ ಸ್ವಭಾವದ ಸಾತ್ವಿಕ ಹೆಣ್ಣುಮಗಳಾಗಿದ್ದಳು. ಅತ್ಯುತ್ತಮ ಸ್ತ್ರೀ ರತ್ನವಾಗಿದ್ದಳು ಎಂದು ವರ್ಣಿಸಿದ್ದಾರೆ. ಶ್ರೀರಾಮಚಂದ್ರನ ಗಾಂಭೀರ್ಯ ಶಾಂತಚಿತ್ತ ಹಾಗೂ ಉತ್ತಮ ಗುಣಗಳು ಎಲ್ಲವೂ ಕೂಡ ತಾಯಿಯಿಂದ ಬಂದ ಗುಣಗಳೇ ಆಗಿವೆ.
ಪುರಾಣಗಳಲ್ಲಿ ಹೇಳಿರುವಂತೆ ಕೂಡ ಮಹಾರಾಜ ದಶರಥ ಮಹಾರಾಜ ಕಶ್ಯಪರ ಅಂಶವಾದರೆ ಕೌಸಲ್ಯೆಯು ಅದಿತಿ ದೇವಿಯ ಅಂಶ ಎಂಬ ನಂಬಿಕೆ ಇದೆ. ಕೌಸಲ್ಯೆಯು ಸಮಾಧಾನ ಚಿತ್ತೆ ಗಂಭೀರೆ ಮತ್ತು ಆದರ್ಶ ಸ್ತ್ರೀ ಆಗಿದ್ದರೂ ಕೂಡ ದಶರಥ ಮಹಾರಾಜನಿಗೆ ಮೂವರು ರಾಣಿಯರು ಇದ್ದರು. ಅದರಲ್ಲೂ ಕೂಡ ಮೂರನೇ ಹೆಂಡತಿಯಾದ ಕೈಕೇಯಿಯ ಮೋಹ ದಶರಥ ರಾಜನಿಗೆ ಬಹಳವೇ ಇತ್ತು. ತನ್ನ ಜೀವನದುದ್ದಕ್ಕೂ ಪತಿಯ ನಿರ್ಲಕ್ಷ್ಯ ಮತ್ತು ಸವತಿಯ ದರ್ಪಗಳ ನಡುವೆಯೂ ವಿಷ್ಣುವಿನ ಪರಮ ಭಕ್ತಳಾಗಿ ತನ್ನ ಜೀವನವನ್ನು ತಪಸ್ಸಿನಂತೆಯೇ ನಡೆಸಿಕೊಂಡು ಬಂದ ಕೌಸಲ್ಯೆಯು ರಾಮನನ್ನು ದಶರಥ ರಾಜ ವನವಾಸಕ್ಕೆ ಕಳುಹಿಸಲು ಮುಂದಾದಾಗ ತಾನು ಕೂಡ ಅವನೊಂದಿಗೆ ಕಾಡಿಗೆ ಬರುವೆನೆಂದು ಕೇಳುತ್ತಾಳೆ. ಆಗ ರಾಮನು ತಾಯಿಗೆ ತನ್ನ ಪತ್ನಿ ಧರ್ಮವನ್ನು ನೆನಪಿಸಿ ತಂದೆಯನ್ನು ಸರಿಯಾಗಿ ನೋಡಿಕೊಳ್ಳಲು ಅರಮನೆಯಲ್ಲಿಯೇ ಇರಬೇಕಂದು ತಾಯಿಯನ್ನು ರಾಮಚಂದ್ರನು ಒಪ್ಪಿಸುತ್ತಾನೆ.
ಮರ್ಯಾದಾ ಪುರುಷೋತ್ತಮನ ತಾಯಿಯಾದ ಕೌಸಲ್ಯೆಯು ಮಗನಿಗೆ ಎಲ್ಲ ಸದ್ಗುಣಗಳನ್ನು ಕಲಿಸಿದ್ದರೂ ಅವಳ ಸ್ವಭಾವವನ್ನೇ ಅಳವಡಿಸಿಕೊಂಡು ಬೆಳೆದ ರಾಮನು ತಾಯಿಗೆ ಧರ್ಮದ ಬಗೆಗೆ ಹೇಳಿದನು. ಇಲ್ಲಿ ರಾಮನ ಧರ್ಮಪರತೆ ಮತ್ತು ಕೌಸಲ್ಯೆಯ ಮಾತೃ ವಾತ್ಸಲ್ಯವು ಎದ್ದು ಕಾಣುತ್ತದೆ.
ರಾಮಾಯಣದಲ್ಲಿ ಕೆಲವೇ ಘಟನೆಗಳಲ್ಲಿ ಮಾತ್ರ ಕೌಸಲ್ಯೆಯ ವರ್ಣನೆ ಇರುತ್ತದೆ. ಮೊದಲಿಗೆ ಪುತ್ರಕಾಮೇಷ್ಠಿ ಯಾಗ ನಂತರ ರಾಮನ ರಾಜ್ಯಾಭಿಷೇಕದ ಘೋಷಣೆಯ ಸಮಯ ನಂತರ ರಾಮನ ವನಗಮನ ಹಾಗೂ ದಶರಥನ ಮೃತ್ಯುವಿನ ನಂತರ ಕೊನೆಗೆ ರಾಮ ಹಿಂತಿರುಗಿ ಬಂದ ಮೇಲೆ ಅಶ್ವಮೇಧಯಾಗ ಮುಗಿಯುವವರೆಗೂ ದೀರ್ಘಾವಧಿಯವೆರಗೂ ಬದುಕಿ ಬಾಳುವ ತುಂಬು ಜೀವನದ ಮಮತಾಮಯಿ ತಾಯಿಯಾದ ಕೌಸಲ್ಯೆಗೆ ಕೂಡ ಪಕ್ಷಪಾತ, ಹೀಯಾಳಿಕೆಯ ಮಾತು ಮತ್ತು ನಿರ್ಲಕ್ಷ್ಯದ ನೋವು ಅನುಭವಿಸಬೇಕಾಗಿ ಬಂದಿತ್ತು.
ಕೌಸಲ್ಯೆಯನ್ನು ನೋಡಿ ಬೆಳೆದ ರಾಮನು ಏಕ ಪತ್ನಿ ವ್ರತಸ್ಥನಾಗಿ ಹೆಂಡತಿಯ ಬಗೆಗೆ ಅಪಾರ ಪ್ರೀತಿ ಬೆಳೆಯಲು ದಶರಥ ಕೈಕೇಯಿಯನ್ನು ಅಧಿಕ ಪ್ರೀತಿ ಮಾಡಿದ್ದು ಕೂಡ ಒಂದು ಕಾರಣವೇ ಎಂಬುದು ತಿಳಿಯುತ್ತದೆ.
ಕೌಸಲ್ಯೆಯ ಪಾತ್ರದಿಂದ ಇಂದಿನ ಜನರು ಕಲಿಯುವುದು ಬಹಳವೇ ಇದೆ. ಮೊದಲಿಗೆ ರಾಜಕುಮಾರಿಯಾಗಿ, ರಾಣಿಯಾಗಿ ಬೆಳೆದ ನಂತರವೂ ಕೂಡ ಉತ್ತಮ ನಡೆ ಸೌಮ್ಯ ಸ್ವಭಾವ ಇದ್ದೂ ಕೆಲವೊಮ್ಮೆ ಕಡೆಗಣಿಸಲ್ಪಡುವ ಸಂದರ್ಭ ಬಂದರೂ ಕೂಡ ಜೀವನದ ಪರಿಸ್ಥಿತಿಗಳನ್ನು ಶಾಂತ ಚಿತ್ತರಾಗಿ ಎದುರಿಸಬೇಕೆಂದು ಕಲಿಯಬಹುದಾಗಿದೆ. ಮಮತಾಮಯಿ ತಾಯಿಯಾದ ಕೌಸಲ್ಯೆ ಇಂದಿನ ತಾಯಂದಿರಿಗೆ ಮಕ್ಕಳೇ ಪ್ರಪಂಚ ಎಂದು ಭಾವಿಸಿ ಅವರ ಲಾಲನೆ ಪೋಷಣೆಯಲ್ಲಿ ತೊಡಗಿಸಿಕೊಂಡು ಎದುರಿಸುತ್ತಿರುವ ಹಾಗೂ ಮುಂಬರುವ ಸಮಸ್ಯೆಗಳನ್ನು ಎದುರಿಸಲು ಸ್ಪೂರ್ತಿಯನ್ನು ನೀಡುತ್ತಾಳೆ. ಮಕ್ಕಳ ಜೊತೆಗೆ ಬದುಕಿರುವವರೆಗೂ ಇದ್ದು ಅವರ ಏಳಿಗೆಗೆ ತನ್ನ ದುಃಖಗಳನ್ನು ಮರೆತು ಅವರಿಗೆ ಒತ್ತಾಸೆಯಾಗಿ ನಿಲ್ಲುವ ಪ್ರೇರಣೆ ನೀಡುತ್ತಾಳೆ.
ರಾಮಾಯಣದ ಬಾಲಕಾಂಡ, ಅಯೋಧ್ಯಾಕಾಂಡ ಮತ್ತು ಉತ್ತರಕಾಂಡ ಮೂರು ಅಧ್ಯಾಯಗಳಲ್ಲಿ ವರ್ಣಿಸಲ್ಪಡುವ ತಾಯಿ ಕೌಸಲು ವಾತ್ಸಲ್ಯಮಯಿ ತಾಯಿಯಾಗಿದ್ದಾಳೆ.
- ಮಾಧುರಿ ದೇಶಪಾಂಡೆ, ಬೆಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ