ಸಗ್ರಿ ರಾಘವೇಂದ್ರ ಉಪಾಧ್ಯಾಯರಿಗೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ಶ್ರದ್ಧಾಂಜಲಿ, ನುಡಿನಮನ
ಉಡುಪಿ: ಇತ್ತೀಚೆಗೆ ನಿಧನರಾದ ಹಿರಿಯ ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯಾಯರಿಗೆ ಇಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಶ್ರದ್ಧಾಂಜಲಿ, ನುಡಿನಮನ ಸಲ್ಲಿಸಲಾಯಿತು. ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸಗ್ರಿ ಉಪಾಧ್ಯಾಯರ ಸೇವೆಯನ್ನು ಸ್ಮರಿಸಿ, ಅವರ ಸದ್ಗತಿ ಪ್ರಾರ್ಥನೆ ಸಲ್ಲಿಸಿದರು.
ಸಗ್ರಿ ಆಚಾರ್ಯರ ವ್ಯಕ್ತಿತ್ವ ಅತ್ಯಂತ ಪರಿಪಕ್ವವಾದದ್ದು. ಒಂದು ಅಪೂರ್ವ ಸನ್ನಿವೇಶದಲ್ಲಿ ಪೂಜ್ಯ ಶ್ರೀವಿದ್ಯಾಮಾನ್ಯರು ಪೂಜ್ಯ ಶ್ರೀವಿಶ್ವೇಶತೀರ್ಥರಿಗೆ ಸಗ್ರಿ ಆಚಾರ್ಯರ ಆದರ್ಶ ವ್ಯಕ್ತಿತ್ವವನ್ನು ಪ್ರಶಂಸಿಸಿದ್ದನ್ನು ಮೆಲುಕು ಹಾಕಿದರು. ಸಂಗ್ರಹ ಸಗ್ರಿ ಎಂದೇ ಪ್ರಸಿದ್ಧರಾದ ಸಗ್ರಿಯವರು ತಮ್ಮ ಉತ್ತಮ ವ್ಯಕ್ತಿತ್ವದಿಂದ ಸಂಗ್ರಾಹ್ಯರಾಗಿದ್ದಾರೆ. ಅವರು ರಚಿಸಿದ ಒಂದೊಂದು ಗ್ರಂಥಗಳೂ ಸಂಗ್ರಾಹ್ಯವಾಗಿದೆ. ಮಧ್ವ ಸಿದ್ಧಾಂತದಲ್ಲಿ ಅಚಲವಾದ ನಂಬಿಕೆ ಇದ್ದ ಆಚಾರ್ಯರು ತಮ್ಮ ಮಗನನ್ನೂ ವಿದ್ಯಾಪೀಠಕ್ಕೆ ಸೇರಿಸಿ ಪಂಡಿತನನ್ನಾಗಿಸಿದರು. ಇದು ಆದರ್ಶ. ಪ್ರತಿಯೊಂದನ್ನೂ ವಿಮರ್ಶಿಸಿ ಸ್ವೀಕರಿಸುವ ನಿರ್ಣಯಿಸುವ ಪ್ರವೃತ್ತಿ ಅವರದ್ದು. ನಮ್ಮ ಪರ್ಯಾಯದ ಆಸ್ಥಾನ ವಿದ್ವಾಂಸರಾಗಿ ನಮ್ಮ ಮಠದ ಅನೇಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ನಮಗೆ ಅತ್ಯಂತ ಪ್ರೀತಿಪಾತ್ರರೂ ಆಗಿದ್ದ ಆಚಾರ್ಯರ ಆದರ್ಶ ವ್ಯಕ್ತಿತ್ವ ಎಲ್ಲರಿಗೂ ಸ್ಫೂರ್ತಿದಾಯಕವಾಗಲಿ ಎಂದು ತಿಳಿಸಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಪೂಜ್ಯ ಶ್ರೀಪಾದರು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣ ಮಠ ಹಾಗೂ ಎಸ್ ಎಮ್ ಎಸ್ ಪಿ ಸಂಸ್ಕೃತ ಮಹಾವಿದ್ಯಾಲಯದ ಸಹ ಭಾಗಿತ್ವದಲ್ಲಿ ನಡೆದ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅನುಗ್ರಹ ಸಂದೇಶ ನೀಡಿದರು.
ಕಿರಿಯ ಪಟ್ಟದ ಪರಮಪೂಜ್ಯ ಶ್ರೀ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಸಗ್ರಿ ಆಚಾರ್ಯರ ಅನುಸಂಧಾನದ ಮಹತ್ವವನ್ನು ತಿಳಿಸಿದರು. ಆಚಾರ್ಯರು ಪ್ರತಿ ದಿನವೂ ಶ್ರೀಕೃಷ್ಣ ಮಠಕ್ಕೆ ಬಂದು ಮಹಾಪೂಜಾ ಸಮಯದಲ್ಲಿ ನಡೆಸುತ್ತಿದ್ದ ಉಪಾಸನೆಯ ಕ್ರಮಗಳು ಅದ್ಭುತವಾದದ್ದು. ಹಾಗೂ ಅನುಕರಣೀಯವಾದದ್ದು. ಅತ್ಯಂತ ಶ್ರೇಷ್ಠ ಮಟ್ಟದ ಸಾಧನೆಯನ್ನು ಮಾಡಿದ ಆಚಾರ್ಯರಿಗೆ ಭಗವಂತನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು.
ಪೂರ್ಣಪ್ರಜ್ಞ ವಿದ್ಯಾಪೀಠದ ವಿದ್ವಾಂಸರಾದ ರಘುಪತಿ ಉಪಾಧ್ಯಾಯರು ಸಗ್ರಿ ಆಚಾರ್ಯರು ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಅಧ್ಯಯನವನ್ನು ನಡೆಸುತ್ತಿದ್ದ ಸಮಯವನ್ನು ಸ್ಮರಿಸಿದರು.
ಬಾಲ್ಯದಲ್ಲಿಯೇ ಶ್ರದ್ಧೆಯಿಂದ ಅಧ್ಯಯನ. ಆದರ್ಶ ವಿದ್ಯಾರ್ಥಿಯಾಗಿ ಗುರುಗಳ ಪ್ರಸನ್ನತೆಯನ್ನು ಸಂಪಾದಿಸಿದರು. ಎಂದಿಗೂ ಸಮಯವನ್ನು ವ್ಯರ್ಥಗೊಳಿಸುತ್ತಿರಲಿಲ್ಲ. ಆಚಾರ್ಯರು ಉತ್ತಮ ವಿದ್ಯಾರ್ಥಿಯಾಗಿ, ಉತ್ತಮ ಪಂಡಿತರಾಗಿ ಅಪಾರ ಶಿಷ್ಯರಿಗೆ ಮಾರ್ಗದರ್ಶನವನ್ನು ಮಾಡಿ ಧನ್ಯರಾದರು.
ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಆಚಾರ್ಯರ ಸಹಪಾಠಿಗಳಾದ ಹಿರಿಯ ವಿದ್ವಾಂಸರಾದ ಗುರುಪ್ರಸಾದಾಚಾರ್ಯರು ವಿದ್ಯಾರ್ಥಿ ಜೀವನದಲ್ಲಿ ನಡೆದ ತಮ್ಮಿಬ್ಬರ ಒಡನಾಟವನ್ನು ಸ್ಮರಿಸಿದರು. ಆಚಾರ್ಯರ ಬದುಕು ಸಂತೃಪ್ತಿಯ ಬದುಕಾಗಿತ್ತು. ಅತ್ಯುತ್ತಮವಾದ ಅಧ್ಯಯನವನ್ನು ಪೂರೈಸಿ ವೇದಾಂತದ ಅಧ್ಯಾಪಕರಾದರು. ಆಚಾರ್ಯರು ಅನೇಕ ಅಪೂರ್ವ ವಿಚಾರಗಳನ್ನು ಸಂಗ್ರಹಿಸುವ ಉತ್ತಮ ಕೌಶಲ್ಯವನ್ನು ಹೊಂದಿದ್ದರು. ವಿಷ್ಣುಸಹಸ್ರನಾಮ ವ್ಯಾಖ್ಯಾನ ಮುಂತಾದ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಅನೇಕ ಪೀಠಾಧಿಪತಿಗಳ ಪರಮಾನುಗ್ರಹವನ್ನು ಸಂಪಾದಿಸಿದ ಹಿರಿದಾದ ವ್ಯಕ್ತಿತ್ವ ಅವರದಾಗಿತ್ತು.
ಸಂಸ್ಕೃತ ಮಹಾವಿದ್ಯಾಲಯದ ಜ್ಯೋತಿಷ್ಯ ಶಾಸ್ತ್ರದ ಉಪನ್ಯಾಸಕರಾದ ವಿದ್ವಾನ್ ಶಿವಪ್ರಸಾದ ತಂತ್ರಿಯವರು ನುಡಿ ನಮನವನ್ನು ಸಲ್ಲಿಸುತ್ತಾ ಸಗ್ರಿ ಆಚಾರ್ಯರು ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸಂಶೋಧನಾ ಕಾರ್ಯದಲ್ಲಿ ವಿಶೇಷ ಪ್ರೋತ್ಸಾಹಿಸುತ್ತಿದ್ದರು. ಅಪಾರ ಶಿಷ್ಯವಾತ್ಸಲ್ಯ ಅವರಿಗೆ ಇತ್ತು. ಉಡುಪಿಯ ಸಂಸ್ಕೃತ ವಿದ್ಯಾಲಯದಲ್ಲಿ ಉತ್ತಮ ಉಪನ್ಯಾಸಕರಾಗಿ ಉತ್ತಮ ಸೇವೆಯನ್ನು ಸಲ್ಲಿಸಿದವರು. ಅವರ ಜೀವನ ಶೈಲಿ ನಮ್ಮ ಬದುಕಿಗೆ ಆದರ್ಶವಾದದ್ದು ಎಂದು ತಿಳಿಸಿದರು.
ಪರ್ಯಾಯ ಶ್ರೀಪುತ್ತಿಗೆ ಮಠದ ದಿವಾನರಾದ ವಿದ್ವಾನ್ ಪ್ರಸನ್ನ ಆಚಾರ್ಯರು ಸಗ್ರಿ ಆಚಾರ್ಯರ ಪಾಠದ ಪದ್ಧತಿಯನ್ನು ಸ್ಮರಿಸಿದರು. ಆಚಾರ್ಯರು ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ಪ್ರವಚನವನ್ನು ತಾವೇ ಸಿದ್ಧಪಡಿಸಿ ಅಭ್ಯಾಸ ಮಾಡಿಸುತ್ತಿದ್ದರು. ವಿಷ್ಣುಸಹಸ್ರನಾಮವನ್ನು ಸಿದ್ಧಿಪಡಿಸಿಕೊಂಡಿದ್ದ ಅವರ ಅನುಸಂಧಾನದ ಕ್ರಮ ಅದ್ಭುತವಾದದ್ದು ಎಂದು ಸ್ಮರಿಸಿದರು.
ಉಡುಪಿ ಸಂಸ್ಕೃತ ಮಹಾವಿದ್ಯಾಲಯದ ವೇದಾಂತ ಉಪನ್ಯಾಸಕರು ಹಾಗೂ ಆಚಾರ್ಯರ ಶಿಷ್ಯರಾದ ವಿದ್ವಾನ್ ಷಣ್ಮುಖ ಹೆಬ್ಬಾರ್ ಇವರು ಆಚಾರ್ಯರ ಆದರ್ಶ ಗುಣಗಳನ್ನು ಸ್ಮರಿಸಿದರು.
ಉಡುಪಿಯ ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯರಾದ ವಿದ್ವಾನ್ ಸತ್ಯನಾರಾಯಣ ಆಚಾರ್ಯರು ಪೂಜ್ಯ ಆಚಾರ್ಯರು ಸಂಸ್ಕೃತ ಮಹಾವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ದಿನಗಳನ್ನು ಮೆಲುಕು ಹಾಕಿದರು. ಒಂದು ಕ್ಷಣವೂ ವ್ಯರ್ಥ ಮಾಡದೆ ಕಾರ್ಯನಿರ್ವಹಿಸುವ ಜೀವನಶೈಲಿ ಅವರದಾಗಿತ್ತು. ಅಂತಹ ಗುರುಗಳನ್ನು ಕಳೆದುಕೊಂಡು ವಿದ್ವತ್ ಪ್ರಪಂಚ ದು:ಖದಲ್ಲಿ ಮುಳುಗಿದೆ ಎಂದು ನುಡಿ ನಮನವನ್ನು ಸಲ್ಲಿಸಿದರು.
ಆಚಾರ್ಯರ ಸುಪುತ್ರರಾದ ವಿದ್ವಾನ್ ಸಗ್ರಿ ಆನಂದತೀರ್ಥ ಉಪಾಧ್ಯಾಯರು ತಂದೆಯ ಜೊತೆಗಿನ ಸುಂದರ ಕ್ಷಣಗಳನ್ನು ಮೆಲುಕು ಹಾಕಿದರು.
ಈ ಸಂದರ್ಭದಲ್ಲಿ ಹಿರಿಯ ವಿದ್ವಾಂಸರಾದ ಮಂಜಿತ್ತಾಯರು, ರಂಗಾಚಾರ್ಯರು, ಶತಾವಧಾನಿ ರಾಮನಾಥ ಆಚಾರ್ಯರು, ಡಾ.ಬಿ. ಗೋಪಾಲಾಚಾರ್ಯರು, ಕಾರ್ಯಕ್ರಮ ಸಂಘಟಕರಾದ ಗೋಪಾಲಕೃಷ್ಣ ಜೋಯಿಸರು, ಪ್ರದೀಪ ಕಲ್ಕೂರ ಮಂಗಳೂರು, ಸಂಸ್ಕೃತ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಚಂದ್ರಶೇಖರ ಆಚಾರ್ಯರು, ಹೆರ್ಗ ಹರಿಪ್ರಸಾದ್ ಭಟ್, ಹಾಗೂ ಸಗ್ರಿ ಆಚಾರ್ಯರ ಶಿಷ್ಯರು ಮತ್ತು ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಸಂಸ್ಕೃತ ಮಹಾವಿದ್ಯಾಲಯದ ಉಪನ್ಯಾಸಕರಾದ ವಿದ್ವಾನ್ ಮಹೇಂದ್ರ ಸೋಮಯಾಜಿ ಅವರು ನಿರ್ವಹಿಸಿದರು. ಮಹಿತೋಷ ಆಚಾರ್ಯರು ವಂದನಾರ್ಪಣೆ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ