ಅದೊಂದು ಮಳೆಗಾಲದ ಮುಂಜಾವು. ಧೋ-ಧೋ ಎಂದು ಮಳೆ ಸುರಿಯುತ್ತಿದ್ದರೂ, ನಿತ್ಯದ ದಿನಚರಿಯಂತೆ ವೇಗವಾಗಿ ಹೊರಟು, ಗೆಳತಿಯ ಜೊತೆಗೆ ಕಾಲೇಜಿಗೆ ಹೊರಟೆ. ನಡೆದ ದಾರಿಯುದ್ದಕ್ಕೂ ಮಳೆ ನೀರೇ ಹರಿಯುತ್ತಿದ್ದರೂ, ಮೈಯೆಲ್ಲಾ ಒದ್ದೆ-ಮುದ್ದೆಯಾಗುತ್ತಿದ್ದರೂ ಸರಸರನೆ ದಾರಿಯ ಸವೆಸಿದ ನನಗೆ, ಮನಸಲ್ಲೇನೋ ಅರಿಯದ ಸಂಕಟ. ಜೊತೆಗೆ, ಹೇಳದೆ ಕೇಳದೆ ಕಣ್ಣಿನಿಂದ ಹರಿಯುತ್ತಿರುವ ಕಂಬನಿಗೆ ಉತ್ತರ ಸಿಗದೆ ಗೊಂದಲದಿಂದಲೇ ಹೆಜ್ಜೆ ಮುಂದಿಟ್ಟೆನು. ಜೊತೆಗಿದ್ದ ಗೆಳತಿಯೋ, ನನಗೂ ನಿನಗೂ ಸಂಬಂಧವೇ ಇಲ್ಲವೆಂಬಂತೆ ನನ್ನೆಡೆಗೆ ಸ್ವಲ್ಪವೂ ಚಿತ್ತವಿರದೆ ನನ್ನೊಂದಿಗೆ ನಡೆಯುತ್ತಿದ್ದಾಳೆ. ಇದೆಲ್ಲಾ ನನ್ನ ಹಣೆಬರಹ ಯಾರಿಗೂ ನನ್ನ ಕಣ್ಣೀರು ಕಾಣುವುದೇ ಇಲ್ಲ ಎಂಬ ಬೇಸರದ ನಿಟ್ಟುಸಿರೊಂದನ್ನು ಬಿಟ್ಟು, ಕಾಲೇಜಿಗೆ ತಲುಪಿ ಒದ್ದೆಯಾದ ಸಮವಸ್ತ್ರವನ್ನು ಹಿಂಡಿಕೊಂಡು ತರಗತಿಗೆ ಹೆಜ್ಜೆಯಿಟ್ಟಾಗ, ನನ್ನ ಇನ್ನೊಬ್ಬ ಸ್ನೇಹಿತೆಯು ನನ್ನನ್ನು ನೋಡಿ ತುಸು ಗಾಬರಿಯಾದಂತೆನಿಸಿತು.
ನನ್ನದೇ ನನಗಾಗಿರುವಾಗ ಇವಳದ್ದೇನು ಕೇಳಲಿ ಎಂಬ ಭಾವದೊಂದಿಗೆ, ತರಗತಿಗೆ ಹಾಜರಾದೆ. ಯಾವ ಕರ್ಮವೋ ಏನೋ ತರಗತಿಯೆಡೆಗೆ ಗಮನ ಕೊಡಲು ಸಾಧ್ಯವಾಗದೆ, ಉಪನ್ಯಾಸಕಿಯಲ್ಲಿ ತಲೆನೋವು ಎಂಬ ಸುಳ್ಳು ಕಾರಣವ ನೀಡಿ ಗ್ರಂಥಾಲಯಕ್ಕೆ ತೆರಳಿ, ಮೌನವಾಗಿ ಒಂದೆಡೆ ಕುಳಿತುಬಿಟ್ಟೆ. ಅಷ್ಟರಲ್ಲಿ ನನ್ನ ಸ್ನೇಹಿತೆ ಓಡೋಡಿ ಬಂದಳು. ತಲೆಯೆತ್ತಿ ಅವಳನ್ನು ಒಮ್ಮೆ ನೋಡಿದ ನನಗೆ, ಏನೋ ಹೇಳಲು ಚಡಪಡಿಸುತ್ತಿದ್ದಾಳೆ ಎಂದೆನಿಸಿ, ಏನು ಎಂಬ ಪ್ರಶ್ನೆಯ ಮುಖಭಾವವೊಂದನ್ನು ಅವಳತ್ತ ಹೊರಳಿಸಿ, ಮತ್ತೆ ತಲೆಬಗ್ಗಿಸಿ ಕುಳಿತುಕೊಂಡೆ. ನನ್ನ ಮೊಗವನ್ನು ಒಂದು ನಿಮಿಷ ಗಮನಿಸಿದ ಆಕೆ ಹೇಳಿದ್ದಿಷ್ಟೇ, "ಅದು, ನೆನ್ನೆ ಕಾಲೇಜಿನಿಂದ ಹೊರಟಾಗ ತುಂಬ ಮಳೆ ಇತ್ತು ಅಲ್ವಾ, ದಾರಿ ಸರಿಯಾಗಿ ಕಾಣದೇ, ಮುಂದೆ ಬರ್ತೀರೋ ಲಾರಿಗೆ ಡಿಕ್ಕಿ ಹೊಡೆದು ತುಂಬಾ ಪೆಟ್ಟಾಗಿ, ಅವನನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾರಂತೆ, ಡಾಕ್ಟರ್ ನೋಡಿದ್ರೆ ಉಳಿಯೋದು ಅನುಮಾನ ಅಂತಿದರಂತೆ ಪಾಪ ಕಣೆ, ಎಂಥ ಮಾಡೋದು ನೋಡ್ಕೊಂಡು ಬರೋಣ" ಅಂದ್ಲು. "ಅವನಿಗೆ" ಎಂಬ ವಿಷಯ ಕೇಳಿ ನನಿಗೋ ಒಂದು ನಿಮಿಷ ಉಸಿರೇ ನಿಂತೋಯ್ತು, ಜೊತೆಗೆ ಬೆಳಗ್ಗೆಯಿಂದ ನನಗಾದ ತಳಮಳಕ್ಕೆ, ನಾನಿಟ್ಟ ಕಣ್ಣೀರಿಗೆ ಉತ್ತರವು ಸಿಕ್ಕೇಬಿಟ್ಟಿತು.
ಅಯ್ಯೋ, ಈಗೆಂಥ ಮಾಡೋದು ನಾನು, ಅಪ್ಪ- ಅಮ್ಮನಿಗೂ ನಾನು ಬೇಡ, ಇನ್ನು ಇರೋ ಸ್ನೇಹಿತರಿಗೆ ನಾನಂದ್ರೆ ಅಸಡ್ಡೆ, ಅದಿಕ್ಕೇ ಅಲ್ವಾ ನೀನು, ಹೆಜ್ಜೆ- ಹೆಜ್ಜೆಗೂ ನನ್ನ ನೆರಳಂತೆ ಕಾದಿದ್ದು, ಆದ್ರೆ ಈಗ ನನ್ನ ಮಾತ್ರ ಇಲ್ಲೇ ಬಿಟ್ಟು ಹೋಗ್ಬೇಕು ಅನ್ಕೊಂಡಿದ್ಯಾ, ಇಲ್ಲ ಇದೆಲ್ಲಾ ಆಗೊಲ್ಲ ನಂಗೆ ನೀನು ಬೇಕೇ ಬೇಕು" ಎಂದು ಜೋರಾಗಿ ಕೂಗಿಕೊಂಡೆನಷ್ಟೇ, ಅಷ್ಟರಲ್ಲಿ ಯಾರೋ ಬಂದು ಕೈ ಹಿಡಿದೆಳೆದಂತೆನಿಸಿತು ಕಣ್ಣುಬಿಟ್ಟು ನೋಡಿದರೆ ಅಮ್ಮ, "ಎದ್ದೇಳು ಮೇಲೆ, ಯಾಕೀತರ ಕಿರುಚಿಕೊಂಡೆ" ಎಂದು ಆಕೆ ಕೇಳುತ್ತಿದ್ದರೂ ಏನನ್ನು ಉತ್ತರಿಸದೆ, ನನ್ನಷ್ಟಕ್ಕೆ ನಾನೇ ಪೇಚಾಡಿಕೊಳ್ಳುತ್ತಾ, ದಡ-ಬಡನೆ ಎದ್ದು ಯಾರೊಂದಿಗೂ ಮಾತಿಗಿಳಿಯದೇ, ಬೇಗನೆ ಹೊರಟು, ಮಳೆಯ ಪರಿವೆಯಿಲ್ಲದೆ ನೆನೆಯುತ್ತಲೇ ಕಾಲೇಜಿನತ್ತ ಓಡಿದೆ.
ಮನದಲ್ಲಿ ಹೇಳಲಾಗದಷ್ಟು ಭಯವಿದ್ದರೂ ಕೂಡ, ಕಂಬನಿಯ ತೊಡೆದುಕೊಂಡು ಅದೆಲ್ಲಾ ನನ್ನ ಕನಸ್ಸಷ್ಟೇ ಎಂದುಕೊಳ್ಳುತ್ತಾ, ಯಾವಾಗ ಅವನನ್ನು ಕಾಣುವೆನು ಎಂಬ ಧಾವಂತದೊಂದಿಗೆ ವೇಗವಾಗಿ ಹೆಜ್ಜೆಯಿರಿಸಿದೆ. ಇನ್ನೇನು ಕಾಲೇಜಿಗೆ ತಲುಪಿದೆನು ಅನುವಷ್ಟರಲ್ಲಿ, ನೆನೆಯದಂತೆ ಕೊಡೆ ಹಿಡಿದುದರ ಜೊತೆಗೆ ಕೈಯೊಂದು ನನ್ನ ಭುಜ ಬಳಸಿತ್ತು. ಇಷ್ಟೆಲ್ಲಾ ಆದರೂ ಯಾರೆಂದು ನೋಡಬೇಕೆಂಬ ಪ್ರಶ್ನೆಯು ನನಗೆ ಬರಲೇ ಇಲ್ಲ, ಏಕೆಂದರೆ ನನಗಾಗಲೇ ಅರಿವಾಗಿತ್ತು ಇದು ನನ್ನವನೆಂದು, ಜೊತೆಗೆ ಅವನ ಹೊರತಾಗಿ ಬೇರ್ಯಾರಿಗೂ ಧೈರ್ಯವಿರಲಿಲ್ಲವಲ್ಲ ನನ್ನೊಂದಿಗೆ ಅಷ್ಟೊಂದು ಸಲುಗೆಯಿಂದಿರಲು, ಹಾಗಾಗಿ ಯಾರೆಂದು ನೋಡ ಬೇಕೆನಿಸಲಿಲ್ಲ.
ಕಂಡ ಕೆಟ್ಟ ಕನಸಿಗೆ ವಿಧಾಯ ಹೇಳುತ್ತಾ, ಅಬ್ಬಾ, ಕೊನೆಗೂ ಬಂದನಲ್ಲಾ ಎಂಬ ನಿರಾಳತೆಯೊಂದಿಗೆ, ತುಂಬು ಪ್ರೀತಿಯಿಂದ ಆತನನ್ನು ನೋಡಿದಾಗ "ಸದಾ ಜೊತೆಗಿರುವೆನೆಂಬ ಭರವಸೆ"ಯು ಆತನ ಮುಗುಳ್ನಗೆಯೊಂದಿಗೆ ಸಿಕ್ಕಂತಾಯಿತು. ಅದೇ ನೆಮ್ಮದಿಯೆನಗೆ ಎಂಬಂತೆ, ಆತನ ಕೈಗಳೊಂದಿಗೆ ಕೈಗಳ ಬೆಸೆದು, ಹೆಜ್ಜೆಯೊಂದಿಗೆ ಹೆಜ್ಜೆ ಹಾಕುತ್ತಾ, ತರಲೆ - ತುಂಟಾಟಗಳ ಜೊತೆಗೆ, ಈತ ನನ್ನವನೆಂಬ ಗರ್ವದಿಂದ, ಮಾಸದ ಮುಗುಳ್ನಗೆಯನ್ನೊತ್ತು ಚಂದಿರನ ಇಣುಕುವಿಕೆಯ ಗಮನಿಸುತ್ತಾ, ನನ್ನವನೊಂದಿಗೆ ನನ್ನ ಗಮ್ಯದತ್ತ ಹೆಜ್ಜೆಯಿರಿಸಿದೆನು.
ಇಂತೀ,
Jeevasthi❤
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ