ವಾಗ್ಬಾಣ: 'ಪೆನ್‌ಡ್ರೈವ್' ಸಿನಿಮಾ ಮಾಡುವುದಾದರೆ.....

Upayuktha
0

(ಗಂಭೀರ U ಸರ್ಟಿಫಿಕೇಟ್ ಲಘು ಬರಹ!!)






ಪೂರ್ವ ಮುಂಗಾರಿನ ಗುಡುಗು ಸಿಡಿಲಿನ ಆರ್ಭಟಕ್ಕಿಂತ ಎರಡು ಡೆಸಿಬಲ್ ಹೆಚ್ಚೇ ಸೌಂಡ್ ಮಾಡುತ್ತಿರುವ 'ಪೆನ್‌ಡ್ರೈವ್' ಸುದ್ದಿಯನ್ನೇ ಇಟ್ಟುಕೊಂಡು, ಗಾಂಧಿನಗರದ ಯಾರೋ ಅದೇ ಹೆಸರಿನಲ್ಲಿ 'ಮಾಸ್' ಸಿನಿಮಾ ಮಾಡಲು ಸಜ್ಜಾಗುತ್ತಿದ್ದಾರಂತೆ!!  


ಮಾಡಲಿ. ಹಾಗೆ ಸಿನಿಮಾ ಮಾಡುವ ಟೀಮ್, ಸ್ಟಾರ್ಟ್, ಆ್ಯಕ್ಷನ್, ಕಟಾಕಟ್ ಹೇಳುವ ಮೊದಲಿಗೆ ಕೆಲವು ಪೂರ್ವ ಸೂಚನೆಗಳು, ಮಾಹಿತಿಗಳು, ಸಲಹೆಗಳು!!:


1) ಪೆನ್‌ಡ್ರೈವ್ CDಯ ಮೊದಲ ಮಗ!!! (ಎರಡನೆಯದು ಮೆಮೋರಿ ಕಾರ್ಡ್!!) ಪೆನ್‌ಡ್ರೈವ್ ಹುಟ್ಟಿ ಇನ್ನೂ ಜಾಸ್ತಿ ವರ್ಷಗಳು ಆಗಿಲ್ಲ!!? 

ಹಾಗಾಗಿ, ಪೆನ್‌ಡ್ರೈವ್ ಸಿನಿಮಾವನ್ನು ಮಕ್ಕಳ ಸಿನಿಮಾ ಕೆಟಗರಿಗೆ ಸೇರಿಸಿ, ಮಕ್ಕಳ ಸಿನಿಮಾದ ಸೌಲಭ್ಯಗಳಾದ ರಿಯಾಯ್ತಿ, ಸಬ್ಸಿಡಿ, ಬಹುಮಾನ, ಅನುದಾನ, ರಾಜ್ಯ/ರಾಷ್ಟ ಪ್ರಶಸ್ತಿ ಪಡೆಯಬಹುದು ಅಂತ ಭಾವಿಸುವ ಹಾಗಿಲ್ಲ. ನಿರ್ದೇಶಕರ ಪ್ರಕಾರ ಸಿನಿಮಾದ 2976 ಸೀನ್‌ಗಳೂ 'ವಯಸ್ಕರಿಗೆ ಮಾತ್ರ' ಅಂತ ಇರುವ ಸಾಧ್ಯತೆ ಇದೆಯಂತೆ!!? ಅದು ಹೌದಾಗಿದ್ದರೆ, ಸೆನ್ಸಾರ್ ಬೋರ್ಡ್‌ಗೆ ಮೊದಲೇ ಪೂರ್ಣ ಮಾಹಿತಿ ಕೊಟ್ಟು A ಯಿಂದ Z ವರೆಗೆ ಯಾವ ಸರ್ಟಿಫಿಕೇಟ್ ಸಿಗುತ್ತೆ ಅಂತ ಪರಿಶೀಲಿಸಿಕೊಳ್ಳುವುದು ಒಳ್ಳೆಯದು.


2) ಸದರಿ ಪೆನ್‌ಡ್ರೈವ್ ಸಿನಿಮಾದ ಕಂಟೆಂಟನ್ನು ನ್ಯೂಸ್ ಮಾಧ್ಯಮದವರು ಈಗಾಗಲೆ 36 ದಿನಗಳವರೆಗೆ ಎಳೆದೂ ಎಳೆದೂ ವಿಸ್ತರಿಸಿರುವುದರಿಂದ  ಪೆನ್‌ಡ್ರೈವ್ ಎಂಬ ಪ್ಯಾ.ನ್. ಇಂ.ಡಿ.ಯಾ. ಸಿನಿಮಾ ಮಾಡುವ ಬದಲು ಪೆನ್‌ಡ್ರೈವ್ ನ್ನು ಪ್ಯಾ.ನ್. ಇಂ.ಡಿ.ಯಾ. ಧಾರವಾಹಿ ಮಾಡಬಹುದು.


3) ಕನ್ನಡದ ಬಹುತೇಕ ಟಿವಿ ನ್ಯೂಸ್ ಚಾನಲ್‌ನವರು ಪೆನ್‌ಡ್ರೈವ್ ಸುದ್ದಿಯನ್ನು ಎಡಬಿಡದೆ ಅಮೋಘ ನಾಲ್ಕು ವಾರಗಳು ಓಡಿಸಿದ್ದು, ಅಮೋಘ 100 ಡೇಸ್ ಓಡಿಸುವ ಸಾಧ್ಯತೆ ಇದೆ. ಒಂದೇ ವಿಷಯವನ್ನು ತಿಂಗಳುಗಟ್ಟಳೆ ತೋರಿಸಿದ ಈ ಪೆನ್‌ಡ್ರೈವ್ ವಿಚಾರ ನಾಳೆ ಸಿನಿಮಾ ಮಾಡಿದರೆ, ವರ್ಷಗಟ್ಟಳೆ ಓಡಬಹುದು!! (ಕನ್ನಡದ ನ್ಯೂಸ್ ಚಾನಲ್‌ಗಳಲ್ಲಿ ಒಂದೇ ವಿಷಯ 36 ದಿನಗಳು ಪ್ರೈಮ್ ನ್ಯೂಸ್ ಆಗಿ ಮತ್ತೂ ಮುಂದುವರೆಯುತ್ತಿರುವುದು ಬಹುಶಃ ಇದೇ ಮೊದಲ ಬಾರಿ!!?)


4) ಸಿನಿಮಾವನ್ನು ಜರ್ಮನಿಯಲ್ಲಿ ಶೂಟಿಂಗ್ ಮಾಡಿ, ಮೊದಲು ಅಲ್ಲೇ ಬಿಡುಗಡೆ ಮಾಡಬಹುದು. ಭಾರತಕ್ಕೆ ಆ ಸಿನಿಮಾ ತರುವಾಗ, ಅದನ್ನು ಪೆನ್‌ಡ್ರೈವ್‌ನಲ್ಲೇ ರೆಕಾರ್ಡ್ ಮಾಡಿ, ಸಿನಿಮಾವನ್ನು ಭಾರತಕ್ಕೆ ಲುಫ್ತನ್ಸಾ ವಿಮಾನದಲ್ಲಿ ತಂದು, ಇಲ್ಲಿ ಬೆಳ್ಳಿ ತೆರೆಯಲ್ಲಿ ಪ್ರದರ್ಶಿಸಬಹುದು.


5) ಡಕೋಟ ಎಕ್ಸ್‌ಪ್ರೆಸ್ ಸಿನಿಮಾ ರಿಲೀಸ್ ಸಂದರ್ಭದಲ್ಲಿ ಬಸ್‌ನ ಚಿತ್ರವನ್ನೇ ಕಟೌಟ್ ಮಾಡಿ ಸಿನಿಮಾ ಮಂದಿರದಲ್ಲಿ ಇರಿಸಲಾಗಿತ್ತು. ಪೆನ್‌ಡ್ರೈವ್‌ಗೆ ಪೆನ್‌ಡ್ರೈವ್‌ನ್ನು ಕಟೌಟ್ ಮಾಡಬಹುದು. 


6) ಉಪೇಂದ್ರರವರು ಒಂದು ಸಿನಿಮಾ ಮಾಡುವಾಗ ನಿಜವಾದ ಅಂಡರ್‌ವರ್ಲ್ಡ್ ಡಾನ್‌ಗಳಿಂದ ಆ್ಯಕ್ಟಿಂಗ್ ಮಾಡಿಸಿದ್ದರು. ಈಗ ಅದೇ ರೀತಿ, ಸಂಬಂಧಿಸಿದವರನ್ನೇ ನಾಯಕ ನಟ, ಪೋಷಕ ನಟ, ಪೋಷಕ ನಟಿಯರಾಗಿ ತಾರಾಗಣದಲ್ಲಿ ಬಳಸಿಕೊಳ್ಳಬಹುದು.  


Interval


7) ಒಂದು ವೇಳೆ ಸಂಬಂಧಿಸಿದವರನ್ನೇ ನಾಯಕ ನಟ, ಪೋಷಕ ನಟ, ಪೋಷಕ ನಟಿಯರಾಗಿ ತಾರಾಗಣದಲ್ಲಿ ಬಳಸಿಕೊಳ್ಳುವ ತೀರ್ಮಾನ ಮಾಡಿ, ಅವರುಗಳ ಕಾಲ್‌ಶೀಟ್ ಪಡೆದಾಗ, ಸದರಿ ನಾಯಕ ನಟ, ಪೋಷಕ ನಟ, ಪೋಷಕ ನಟಿಯರು ಬಂಧನದಲ್ಲಿದ್ದರೆ, ಜೈಲಿನಲ್ಲೇ ಶೂಟಿಂಗ್ ಮಾಡಬಹುದು. (ಜೈಲಿನಲ್ಲಿದ್ದಾಗ ಚುನಾವಣೆಯಲ್ಲಿ ಸ್ಪರ್ಧಿಸಬಹುದು, ಜೈಲಿನಿಂದಲೇ ಮುಖ್ಯ ಮಂತ್ರಿ ಜವಾಬ್ದಾರಿ ನಿರ್ವಹಿಸಬಹುದು ಅಂತಾದರೆ, ಸಿನಿಮಾ/ಧಾರವಾಹಿ ನಟನೆಗೆ ಅವಕಾಶ ಇರುವುದಿಲ್ವಾ!!? ಇದ್ದೇ ಇರುತ್ತೆ. ಪ್ರಚಾರಕ್ಕೂ ಅನುಕೂಲವಾದೀತು)


8) ಸಿನಿಮಾ ಹಂಚಿಕೆ ಮೊದಲು (ಶೂಟಿಂಗ್‌ಗೆ ಮೊದಲು!!?) ಹಂಚಿಕೆದಾರರು 'ಆಂಟಿ'ಸಿಪೇಟರಿ ಬೇಯಿಲ್ ತೆಗೆದುಕೊಳ್ಳುವುದು ಕ್ಷೇಮ!!! ಹಂಚಿಕೆದಾರರನ್ನೂ ವಿಚಾರಣೆಗೆ ಕರೆಯುವ ಸಾಧ್ಯತೆ ಇದೆ, ಬಂಧನ ಸಾಧ್ಯತೆಯೂ ಇದೆ!!


9) ಸಿನಿಮಾವನ್ನು ಬೆಳ್ಳಿ ಪರದೆ, OTT ನಂತರ ಮರು ಕಾಪಿ ಮಾಡಲಾಗದಂತೆ ಪೆನ್‌ಡ್ರೈವ್‌ನಲ್ಲೇ ಮಾಡಿ ವೀಕ್ಷಕರಿಗೆ ಹಂಚುವ ಯೋಚನೆ ಮಾಡಬಹುದು.


10) 'ಲಿಂಬೇ ಹಣ್ಣಿನಂತ ಹುಡುಗ ಬಂದ ನೋಡು....' ರೀತಿಯ ಹಾಡನ್ನು ಸಿನಿಮಾದಲ್ಲಿ ಅಳವಡಿಸಿದರೆ, ಆ ಹಾಡನ್ನು ಏರ್‌ಪೋರ್ಟ್‌ನಲ್ಲಿ ಮಧ್ಯ ರಾತ್ರಿ 12.20ಕ್ಕೆ ಶೂಟ್ ಮಾಡಿ, ಅದನ್ನೇ ಟೀಸರ್‌ಗೂ ಬಳಸಿಕೊಳ್ಳಬಹುದು!!  


11) ಸಿನಿಮಾದಲ್ಲಿ ಹಾಡುಗಳು ಇಲ್ಲದೇ ಇದ್ರೂ ಪರವಾಗಿಲ್ಲ. ಆದರೆ, ದೇವಸ್ಥಾನ, ಹೋಮ-ಹವನ, ಕೇರಳ ವಾಮಾಚಾರದ ಮೇಕೆ ಬಲಿ ಪೂಜೆ ದೃಶ್ಯಗಳು ಇರುವುದು ಒಳ್ಳೆಯದು. ಇದರಿಂದ ಸ್ಟಾರ್ ರೇಟಿಂಗ್ ಹೆಚ್ಚು ಸಿಗುವಂತಾಗಬಹುದು. ಹೋಮದ ದೃಶ್ಯದಲ್ಲಿ  ಹೋಮ ಕುಂಡಕ್ಕೆ ಗಂಧ, ಘೃತದ ಜೊತೆ ರಿಯಲ್ ಪೆನ್‌ಡ್ರೈವ್ ಹಾಕಿ ಎಫೆಕ್ಟ್ ಜಾಸ್ತಿ ಮಾಡಬಹುದು.


12) 'ಪೆನ್‌ಡ್ರೈವ್' ಸಿನಿಮಾಕ್ಕೆ ಸಬ್ ಕ್ಯಾಪ್ಷನ್ ಬೇಕಾದರೆ "ಒಂದು ಅತಿ ರೋಚಕ ಕಹಾನಿ" ಅಂತ ಕೊಡಬಹುದು.


ಸಧ್ಯಕ್ಕೆ ಇಷ್ಟು. ಉಳಿದಿದ್ದನ್ನು 'ಪೆನ್‌ಡ್ರೈವ್' ಚಾಪ್ಟರ್ ಟು ಸಂದರ್ಭದಲ್ಲಿ, ಅವತ್ತಿನ ರಾಜಕೀಯ, ಸಾಮಾಜಿಕ, ಕೌಟುಂಬಿಕ ಪರಿಸ್ಥಿತಿಗಳನ್ನು ಗಮನಿಸಿ ಚರ್ಚಿಸಬಹುದು!!


ಶುಭಂ.


-ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top