ವಿಡಂಬನೆ: ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾಯಿತ್ತು ಕಾಣಾ ರಾಮನಾಥ

Upayuktha
0

(ಕಡ್ಡಾಯವಾಗಿ ಇದು ಕೇವಲ ಒಂದು ವಿಡಂಬನೆ ಅಂತ ಭಾವಿಸುವುದು)



ಜೇಡರ ದಾಸಿಮಯ್ಯ ಈಗಿದ್ದಿದ್ದರೆ... "ಜಾತಿ' ಮಠದೊಳಗಣ ಬೆಕ್ಕು ಜಾತಿ 'ಹೆಗ್ಗಣಗಳ' ಕಂಡು ಪುಟನೆಗೆದಂತಾಯಿತ್ತು ಕಾಣಾ ರಾಮನಾಥ" ಎಂದು ಉದ್ಗಾರ ತೆಗೆಯುತ್ತಿದ್ದರೇನೋ!!!


***

ಎಲ್ಲವನ್ನು ತ್ಯಜಿಸಿ, ಕಾವಿ ಧರಿಸಿ ಮಠಾಧಿಪತಿಗಳಾದವರು, ಜಾತಿ ಮಠಗಳ, ಜಾತಿ ಬೆಂಬಲಕ್ಕೆ ಸೀಮಿತರಾಗಿ, ಜಾತಿ ರಾಜಕಾರಣಕ್ಕಿಳಿದಿರುವ ಜಾತಿ ಜಗದ್ಗುರು ಶ್ರೀ ಶ್ರೀ ಶ್ರೀಗಳವರ ಸನ್ನಿಧಾನಕ್ಕೆ ಭಕ್ತಿ ಪೂರ್ವಕ ವಂದನೆಗಳೊಂದಿಗೆ ಹೀಗೊಂದು ಪತ್ರ....


ಸಾಮಾನ್ಯ ಪ್ರಜೆಗಳಾದ ನಾವು ಕೂಡ ಹೆಚ್ಚು 'ಜಾತಿ' ಜಾಗೃತಿ ಹೊಂದಿರಬೇಕು ಎಂಬುವುದನ್ನು ಜಾತಿ ಸನ್ನಿಧಾನಗಳಿಂದ ಪರೋಕ್ಷವಾಗಿ ನಮಗೆ ಆಶೀರ್ವಾದ ಪೂರ್ವಕವಾಗಿ ತಿಳಿಸುತ್ತಿದ್ದೀರಿ. ನಮಗೆ ಶಾಲಾ-ಕಾಲೇಜುಗಳಲ್ಲಿ ಕಲಿಸದ ಜಾತಿ ವಿಚಾರಗಳನ್ನು ಶ್ರೀಮಠಗಳ ಮೂಲಕ ಮತ್ತು ತಮ್ಮಗಳ ಆಶೀರ್ವಾದದ ಆಶಿರ್ವಚನ ಉಪನ್ಯಾಸಗಳಲ್ಲಿ ತಿಳಿಸುತ್ತ, ನಮ್ಮಲ್ಲಿ ಜಾತಿ ಜಾಗೃತಿ ಮೂಡಿಸುತ್ತಿದ್ದೀರಿ.  


ಸಂಗೊಳ್ಳಿ ರಾಯಣ್ಣ, ಕೃಷ್ಣ ದೇವರಾಯ, ಪಂಪ, ರನ್ನ, ಕ್ರಿಕೇಟ್ ದೇವರು ತಂಡೂಲ್ಕರ್, ನಾವು ಅಭಿಮಾನಿಸುವ ಚಿತ್ರ ನಟರುಗಳು, ವೈದ್ಯರುಗಳು, ಇಂಜನಿಯರ್‌ಗಳು, ಪಾಠ ಮಾಡಿದ ಗುರುಗಳು, ಕೊನೆಗೆ ಪುರಾಣದ ದಾರ್ಶನಿಕರನ್ನೂ, ದೇವರುಗಳನ್ನೂ ಜಾತಿ ದೃಷ್ಟಿಯಿಂದ, ಉಪ ಜಾತಿ ದೃಷ್ಟಿಯಿಂದ, ಉಪ-ಉಪ-ಉಪ ಜಾತಿ ದೃಷ್ಟಿಯಿಂದ ಗಮನಿಸುವ ವಿಶೇಷ ದೃಷ್ಟಿ ಕೋನವನ್ನು ನಮ್ಮ ಜ್ಞಾನ ಚಕ್ಷುವಿಗೆ ಗೋಚರವಾಗುವಂತೆ ಆಶೀರ್ವಚನ ನೀಡಿ ಕಣ್ ತೆರೆಸುತ್ತಿದ್ದೀರಿ!!


'ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ?' ಎಂದ ದಾಸರ, 

'ಜಾತಿ ವ್ಯವಸ್ಥೆ ಸಮಾಜದ ಒಂದು ಪಿಡುಗು ಅದನ್ನು ನಿರ್ಮೂಲನ ಮಾಡಬೇಕು' ಎಂದ ಶರಣರ,  

"ಜಾತಿ ಹೀನನ ಮನೆಯ ಜ್ಯೋತಿತಾ ಹೀನವೇ ಜಾತಿ-ವಿಜಾತಿ ಎನಬೇಡ, ದೇವನೊಲಿ ದಾತನೇ ಜಾತ" ಎಂದ ಸರ್ವಜ್ಞರಂತಹ ದಾರ್ಶನಿಕರ ಜಾತಿ ಯಾವುದೆಂದು ತೀಳಿಸುತ್ತ... ನಮ್ಮ ಜಾತಿ ಜ್ಞಾನವನ್ನು ಹೆಚ್ಚಿಸಿ, 'ನಹಿ ಜಾತಿ ಜ್ಞಾನೇನ ಸದೃಶಂ' ಎಂದು ಆಚರಣೆಯಿಂದ ತೋರಿಸಿ ಕೊಟ್ಟಿದ್ದೀರಿ.


ಯಾವ ಜಾತಿಯವನು ಮಂತ್ರಿ ಆಗಬೇಕು, ಯಾವ ಜಾತಿಯವನಿಗೆ ಕ್ಯಾಬಿನೆಟ್ಟು? ಯಾವ  ಕುಲಕ್ಕೆ ಯಾವ ನಿಗಮ? ಪಕ್ಷಾಧ್ಯಕ್ಷನಿಗೆ ಅರ್ಹತೆಯ ಜಾತಿ ಯಾವುದು? ಎಂದು ರಾಜವೀಧಿಗೆ ಬಂದು, ರಾಜಾಶ್ರಯದಲ್ಲಿ ಮಠಗಳಲ್ಲ, ಮಠಾಶ್ರಯದಲ್ಲಿ ಮಂತ್ರಿಗಳು ಎಂಬಂತೆ ಜಾತಿ ರಾಜಧರ್ಮಗಳನ್ನು ಪಾಲಿಸುವ ಮಠ-ರಾಜಕಾರಣದ ಸಂಬಂಧಕ್ಕೆ ಭಾಷ್ಯ ಬರೆಯುತ್ತಿದ್ದೀರಿ.  


ಪ್ರಜಾಪ್ರಭುತ್ವ ಅಂದರೆ ಪ್ರಜೆಗಳೆಲ್ಲ ನೆಡೆದುಕೊಳ್ಳುವ ಜಾತಿ ಮಠಾಧೀಶರು ಪ್ರಭುಗಳನ್ನು, ಮಂತ್ರಿ ಮಹೋದಯರನ್ನು ಆಯ್ಕೆ ಮಾಡುವ ಹಕ್ಕು ಮತ್ತು ಕರ್ತವ್ಯದ ಹೊಣೆ ಹೊತ್ತವರು ಎಂದು ರಾಜನೀತಿ-ಪೌರನೀತಿ- ಮಂತ್ರಿನೀತಿಗಳನ್ನು ಜಾತಿ ಸಮಾವೇಶದ ಆಶೀರ್ವಚನದಲ್ಲಿ ಆದೇಶ ನೀಡುತ್ತಿದ್ದೀರಿ.


ಕೋಠ್ಯಾಂತರ ಖರ್ಚು ಮಾಡಿ ನೆಡೆಸುವ ಚುನಾವಣೆಗಳನ್ನೂ ಮುಂದಿನ ದಿನಗಳಲ್ಲಿ ನಿಲ್ಲಿಸುವ ವ್ಯವಸ್ಥೆಗೆ ತಾವುಗಳು ಸೂಚನೆ ಕೊಟ್ಟು, ಜಾತಿ ಮಠದ ಪೀಠದಿಂದಲೇ ಮಂತ್ರಿ ಪೀಠಕ್ಕೆ, ಮಹೋದಯ ಪೀಠಕ್ಕೆ ಆಯ್ಕೆಗಳನ್ನು ಮಾಡಬಹುದು ಎಂದು ಚಿಂತಿಸುತ್ತಿರಬಹುದು!!?


'ಮಂತ್ರಿಮಂಡಲ ರಚನೆ' ಬದಲಿಗೆ 'ಮಂತ್ರಿಕಮಂಡಲ ರಚನೆ' ಅಂತ ಹೆಸರಿಸಬಹುದು.  ಆಯಾ ಜಾತಿ ಮಠದೊಳಗೆ, ಆಯಾ ಜಾತಿ ಮಂತ್ರಿಗಳ ಪ್ರಮಾಣ 'ವಚನ' ಸಾಹಿತ್ಯ ಬೋಧನೆ ಬೋಧಿಸಬಹುದು ಅಂತ ನೀವು ಯೋಚಿಸುತ್ತಿರಬಹುದು!!?


ಬಜೆಟ್ ಮಂಡನೆ, ಬಿಲ್ ಮೇಲಿನ ಚರ್ಚೆ, ಅಭಿವೃದ್ದಿಗೆ ಅನುದಾನ ಬಿಡುಗಡೆ, ಉಚಿತಗಳ ಹಂಚಿಕೆ ಪ್ರಸ್ತಾವನೆ, ಲಿಕ್ಕರ್‌ಗೆ ತೆರಿಗೆಗಳನ್ನು ಜಾತಿ ಪೀಠಾಧಿಪತಿಗಳ ಸಭೆಯಲ್ಲಿ, ಮಂತ್ರಿಗಳು 'ಕೈ'ಕಟ್ಟಿ ನಿಂತು ಚರ್ಚಿಸಿ, ಜಾತಿ ಮಠದ ಲೆಟರ್ ಹೆಡ್‌ನಲ್ಲಿ ಅನುಮೋದನೆ ಪಡೆಯುವಂತೆ ಶಾಸನ ಮಾಡುವುದರ ಬಗ್ಗೆ ತಾವುಗಳು ಗಂಭೀರ ಆಲೋಚನೆ ಮಾಡುತ್ತಿರಬಹುದು!!?

ನಿಮ್ಮ ಚಿಂತನೆ, ಯೋಚನೆ, ಆಲೋಚನೆಗಳೆಲ್ಲ ಆದಷ್ಟು ಬೇಗ ಅನುಷ್ಠಾನಕ್ಕೆ ಬರಲಿ ಎಂದು ಎಲ್ಲ ಬಹು ಜಾತಿ ಭಕ್ತರ ಆಶಯ.


ಇತಿ

ಎಲ್ಲ ಜಾತಿ ಭಕ್ತರ ಪರವಾಗಿ,  ಸಮಸ್ತ ಜಾತಿ ಮಠಗಳ ಸನ್ನಿದಾನದ ಚರಣ ಅರವಿಂದಗಳಿಗೆ ಭಕ್ತಿ ಪೂರ್ವಕ ಪ್ರಣಾಮಗಳನ್ನು ಅರ್ಪಿಸುವ ಜಾತಿ ಭಕ್ತಾಗ್ರೇಸರ!!!

***

ಯಾರು ಏನೇ ಹೇಳ್ಳಿ, ಜೇಡರ ದಾಸಿಮಯ್ಯ, ಬಸವಣ್ಣ, ಕನಕದಾಸರು, ಸರ್ವಜ್ಞರೆಲ್ಲ ಈಗ ಇರಬೇಕಿತ್ತು!!! 

ಅಲ್ವರಾ?!!


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top