ಪರಪ್ಪನ ಅಗ್ರಹಾರ ಕ್ಷೇತ್ರ ಮಹಾತ್ಮೆ

Upayuktha
0

(ಹಾಟ್ ಸ್ಪಾಟ್ ಬಗ್ಗೆ ಒಂದು ಲೈಟ್ ಬರಹ)






ಅಗ್ರಹಾರ

ಅಗ್ರಹಾರ ಶಬ್ದಕ್ಕೆ ಇರುವ ಅರ್ಥ 'ದೇವಸ್ಥಾನ ಇರುವ ಮತ್ತು ನಿತ್ಯ ಹೋಮ ಹವನ ಪೂಜೆ ನೆಡೆಯುವ ಸ್ಥಳ' ಎಂದು.  ಪೂಜೆ, ಹೋಮಾದಿಗಳ ಕೆಲಸ ಮಾಡುವವರಿಗೆ ರಾಜರಿಂದ ದಾನವಾಗಿ ಕೊಡಲಾದ ಹಳ್ಳಿ ಅಥವಾ ಹಳ್ಳಿಯ ಭಾಗ. ಅಲ್ಲಿಯ ಸಕಲ ಸ್ವಾಮ್ಯವೂ ಅಲ್ಲಿ ವಾಸಿಸುವ ಪೂಜಾದಿ ಕೈಂಕರ್ಯ ಮಾಡುವವರಿಗೆ ಸೇರಿದುದು ಎಂದು ವ್ಯಾಖ್ಯಾನವಿದೆ.


**

ಪರಪ್ಪ

ಪರಪ್ಪನ ಶಬ್ದದಲ್ಲಿ ಪಾರುಗಾಣಿಸುವ ಅಪ್ಪ= ಪರಪ್ಪ ಅಂತ ಯಾರೋ ಗೂಗಲ್‌ನಲ್ಲಿ ಬರೆದಿದ್ದಾರೆ!! ಪಾರುಗಾಣಿಸುವ ಅಂದರೆ ದಾಟಿಸುವ, ರಕ್ಷಿಸುವ ಎನ್ನುವ ಅರ್ಥ ಇದೆ. 


(ಪಾರು ಅನ್ನೋದಕ್ಕೆ ನೋಡು ಅನ್ನುವ ಅರ್ಥವಿದೆಯಂತೆ. ನೋಡು ಅಂದರೆ... ಪೆನ್‌ಡ್ರೈವ್ ನೋಡು, CC ಕ್ಯಾಮರದ ವೀಡಿಯೋ ನೋಡು, CD ನೋಡು, TRP ನ್ಯೂಸ್ ಚಾನಲ್ ನೋಡು, ಜಾಲತಾಣದಲ್ಲಿ ಅಶ್ಲೀಲ ಸಂದೇಶ ನೋಡು, ಶೆಡ್‌ನಲ್ಲಿ ಬಡಿದು ನೋಡು.... ಅಂತಲೂ ಪರಿಭಾವಿಸಬಹುದು!)


ಇನ್ನು ಪರಪ್ಪ ಅಂದರೆ ಪರ ಲೋಕದಲ್ಲಿರುವ ತಂದೆ- ದೇವರು ಅಂತಾಗಬಹುದು! "ಪರಲೋಕದಲ್ಲಿರುವ ತಂದೆಯೇ..ನಮ್ಮ ತಪ್ಪುಗಳನ್ನು ಕ್ಷಮಿಸು" ಅಂತ ಚರ್ಚ್‌ನಲ್ಲಿ ಪ್ರಾರಂಭದಲ್ಲಿ ಪ್ರಾರ್ಥಿಸುವ ಸಂಕಲ್ಪ ಮಂತ್ರ ಗಮನಿಸಬಹುದು! 


ಪರಪ್ಪ ಅಂದರೆ ಪರ ನಾರಿಯ ಪಾಲಾಗಿರುವ ತಂದೆ ಅಂತ ಪರಪ್ಪನ ಅಗ್ರಹಾರಕ್ಕೆ ಆಗಾಗ ಹೋಗಿಬರುವ ತಂದೆ ಮತ್ತು ನಾರಿಯ ಬಗ್ಗೆ ಮಗ ಬರೆದ ಸ್ಕ್ರಿಪ್ಟ್‌ನ ನಾಯಕ ನಟನ ರಿಯಲ್ ಸ್ಟೋರಿಯ ಅನ್ವರ್ಥವೂ ಆಗಬಹುದು!?


ಪರಪ್ಪನ ಅಗ್ರಹಾರದಲ್ಲಿ ಸೆರಮನೆ

ಅಗ್ರಹಾರ ದಲ್ಲೇ ಕೃಷ್ಣ ಜನ್ಮಸ್ಥಾನ ಮಾಡಿ, ರಾಕ್ಷಸರನ್ನು, ವಿಕೃತ ಕಾಮಿಗಳನ್ನು, ದುಷ್ಟ ರಾಜಕಾರಣಿಗಳನ್ನು, ಕೊಲೆಗಾರರನ್ನು ಮತ್ತು ಎಲ್ಲ ಅಪರಾಧಿಗಳನ್ನು ಹಾಗು ಆರೋಪಿಗಳನ್ನು ಕಲೆ ಹಾಕಿ, ಅಗ್ನಿ ಪರೀಕ್ಷೆಯ ಶಿಕ್ಷೆಗೆ ಒಳ ಪಡಿಸಿ, ಅವರನ್ನು ಸಾದು ಸಂತರನ್ನಾಗಿ ಪರಿವರ್ತಿಸುವ ಮಹಾಯಾಗ ಮಾಡುವ ಕಾರಣದಿಂದ ಅಗ್ರಹಾರದಲ್ಲಿ ಕೃಷ್ಣ ಜನ್ಮಸ್ಥಾನ ಮಾಡಿರಬಹುದು!?


ಪರಪ್ಪನ ಅಗ್ರಹಾರದಲ್ಲಿರುವ  ಪಾರುಪತ್ತೇದಾರ (ದೇವರು) ಎಲ್ಲರ ಅಪರಾಧ ಮತ್ತು ಆಪಾದಿತರ ಘೋರ ತಪ್ಪುಗಳನ್ನು ಪತ್ತೇಮಾಡಿ ಪಶ್ಚಾತ್ತಾಪಗೊಳ್ಳುವಂತೆ ಮನ ಪರಿವರ್ತನೆ ಮಾಡಿ, ಬದುಕಿನ ಸತ್ಯ ದರ್ಶನಗಳನ್ನು ಕಾಣಿಸಿ, "ಎಲವೋ" ಎನ್ನುವವನ ಬಾಯಲ್ಲಿ ಅಯ್ಯ ಅನ್ನುವ ಧ್ವನಿ ಬರುವಂತೆ ಮಾಡಿ, ಮದ ಗಜ ಗಳ ಮದ ಇಳಿಸಿ, ವ್ಯಸನಗಳಿಗೆ ದಾಸ ರಾದವರನ್ನು ಪವಿತ್ರಗೊಳಿಸಿ,  ಅಪರಾಧಿ ವ್ಯಕ್ತಿಗಳನ್ನು ಸಾದು, ಸ್ವಾಮಿ ಗಳನ್ನಾಗಿಸುವ ಧರ್ಮ ಕ್ಷೇತ್ರವೇ ಪರಪ್ಪನ ಅಗ್ರಹಾರ ಇರಬಹುದಾ!!? ಸೆರಮನೆ ಯಲ್ಲಿ ಜನಿಸಿದ ಪಾರ್ಥ ಸಾರಥಿ ಯಾದ, ಬೃಂದಾವನ ನಿವಾಸಿ ಭಗವಾನ್ ಕೃಷ್ಣನೇ ಹೇಳಬೇಕು!


**

ಆದರೂ ಪರಪ್ಪನ ಅಗ್ರಹಾರಕ್ಕೆ ಯಾತ್ರೆ ಹೋಗುವವರ ಸರದಿಸಾಲು ದೊಡ್ಡದಾಗುತ್ತಿದೆ.  ಪುಣ್ಯ ಸ್ಥಳವೇ ಇರಬೇಕು.  ಸೆಲಬ್ರಟಿಗಳೇ ಹೋಗ್ತಾ ಇರೋದು ನೋಡಿದರೆ, ಸಧ್ಯದಲ್ಲೇ ಅದನ್ನು ದೊಡ್ಡ ತೀರ್ಥಕ್ಷೇತ್ರ ವಾಗಿ ಬದಲಾಯಿಸಬಹುದು!?


**

ಪರಪ್ಪನ ಅಗ್ರಹಾರ ಸಿನಿಮಾ ಆಗ್ತಾ ಇದೆ!

ಹಾಗೆ ಸಿನಿಮಾ ಮಾಡುವುದಾದರೆ...

ಕಾಸ್ಟೂಮ್ಸ್ ಖರ್ಚಿಲ್ಲ (ಪರಪ್ಪನ ಅಗ್ರಹಾರದವರೇ ಯುನಿಫಾರಂ ಕೊಡ್ತಾರೆ) ಪಲಾವ್ ಊಟದ ಖರ್ಚಿಲ್ಲ (ಅಗ್ರಹಾರದಲ್ಲಿ ಬರಿ ಮುದ್ದೆ ಸಾರು ಊಟ ಮಾತ್ರವಂತೆ)  ಸಿಗರೇಟ್-ಮದ್ಯ-ಗಾಂಜಾಗಳ ಖರ್ಚಿಲ್ಲ (ಎಲ್ಲ ಅಲ್ಲೇ ದೊರೆಯುತ್ತಂತೆ!?) ಲೊಕೇಷನ್‌ಗೆ ಶಾಮಿಯಾನದ ಖರ್ಚನ್ನು ಸಿನಿಮಾ ತಂಡವೇ ಹಾಕುವುದು ಬೇಡ (ಪೋಲಿಸ್‌ನವರು ಹಾಕಿ ಕೊಡ್ತಾರೆ!?) ಪ್ರಚಾರದ ಸಂಪೂರ್ಣ ಜವಾಬ್ದಾರಿಯನ್ನು ಮೀಡಿಯಾದವರು ಉಚಿತವಾಗಿ ಮಾಡ್ತಾರೆ!


ಗೆಸ್ಟ್ ಅಪಿಯರೆನ್ಸ್‌ನಲ್ಲಿ ತಮಿಳು ನಾಡಿನ ಹಿರಿಯ ಕಲಾವಿದೆಯನ್ನು ಪೋಷಕ ಪಾತ್ರದಲ್ಲಿ, ದೆಹಲಿಯ ಮದ್ಯ ಭಯಂಕರ ಕಲಾವಿದನನ್ನು ಪೊರಕೆ ಹಿಡಿದು ಗುಡಿಸುವ ಕ್ರೇಜಿ ಪಾತ್ರಕ್ಕೆ ಬಳಸಿಕೊಂಡರೆ, ಪ್ಯಾನ್ ಇಂಡಿಯ ಸಿನಿಮವೂ ಆಗುತ್ತದೆ.


**

ಆಪ್ತಮಿತ್ರವನ್ನು ಯಕ್ಷಗಾನ ಪ್ರಸಂಗ ಮಾಡಿದಂತೆ, ಸಾಮಾಜಿಕ ಕತೆಯನ್ನು ಒಳಗೊಂಡ ಒಂದು ಯಕ್ಷಗಾನವಾಗಿ ಪರಪ್ಪನ ಅಗ್ರಹಾರದ ಕತೆಯನ್ನು ಆಧರಿಸಿ ಒಂದು ರೋಚಕ ಯಕ್ಷಗಾನ ಪ್ರಸಂಗ ಮಾಡಬಹುದು!!  


ಹಾಗೆ ಯಕ್ಷಗಾನ ಮಾಡುವುದಾದರೆ, ಪ್ರಸಂಗದ ಹೆಸರು ಪರಪ್ಪನ ಅಗ್ರಹಾರ ಕ್ಷೇತ್ರ ಮಹಾತ್ಮೆ!!


- ಅರವಿಂದ ಸಿಗದಾಳ್, ಮೇಲುಕೊಪ್ಪ

9449631248


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top